ಮೈಸೂರು: ಮೈಸೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಒಟ್ಟು 91 ಅಂಕ ಪಡೆದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಮಗ್ರ ಚಾಂಪಿಯನ್‌ಶಿಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಕ್ರೀಡಾಕೂಟದಲ್ಲಿ ಉತ್ತಮ ಪುರುಷ ಕ್ರೀಡಾಪಟು ಪ್ರಶಸ್ತಿಯನ್ನು ಮೈಸೂರಿನ ಜಿಲ್ಲಾ ಪೊಲೀಸ್ ಪಡೆಯ ಜಿ.ಜಿ.ರಘನಂದನ ಗಳಿಸಿದರೆ, ವರುಣಾ ಪೊಲೀಸ್ ಠಾಣೆಯ ಎಸ್.ಸುಮಾ ಅವರು ಉತ್ತಮ ಮಹಿಳಾ ಕ್ರೀಡಾಪಟು ಪ್ರಶಸ್ತಿ ಗಿಟ್ಟಿಸಿಕೊಂಡರು.
ಮೋಗ್ ಗಾಲ್ಫ್ ಆಟದಲ್ಲಿ ಎಎಸ್‌ಪಿ ಪಿ.ವಿ.ಸ್ನೇಹಾ ಪ್ರಥಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ದ್ವಿತೀಯ ಸ್ಥಾನ ಪಡೆದುಕೊಂಡರು.
ಬಹುಮಾನ ವಿತರಿಸಿದ ಸಿ.ಬಿ.ರಿಷ್ಯಂತ್ ಮಾತನಾಡಿ, ದಿನನಿತ್ಯ ಕರ್ತವ್ಯದಲ್ಲಿ ನಿರತರಾಗುವ ಸಿಬ್ಬಂದಿ ಮನಸ್ಸು ಉಲ್ಲಾಸಿತವಾಗಲು ವಾರ್ಷಿಕ ಕ್ರೀಡಾಕೂಟ ಆಯೋಜಿಸಲಾಗಿದ್ದು, ಪ್ರತಿಯೊಬ್ಬ ಸಿಬ್ಬಂದಿಯೂ ಉತ್ಸಾಹದಿಂದ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ಭಾಗವಹಿಸಬೇಕು ಎಂದರು.
ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಎನ್.ಸಂಜಯ್ ಗಾಂಧಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪಿ.ವಿ.ಸ್ನೇಹಾ ಇತರರು ಹಾಜರಿದ್ದರು.