ಮತ ಎಣಿಕೆಗೆ ಜಿಲ್ಲಾಡಳಿತ ಸಜ್ಜು

ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮೇ 23ರಂದು ನಡೆಯುವ ಮತ ಎಣಿಕೆಗೆ ಜಿಲ್ಲಾಡಳಿತ ಸಜ್ಜುಗೊಂಡಿದ್ದು, ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ತಿಳಿಸಿದರು.

ನಗರದ ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ)ದಲ್ಲಿ 14 ಕೊಠಡಿಯ 108 ಟೇಬಲ್‌ಗಳಲ್ಲಿ ಎಣಿಕೆ ಕಾರ್ಯ ನಡೆಯಲಿದೆ. 22 ಸುತ್ತುಗಳಲ್ಲಿ ನಡೆದ ಬಳಿಕ ಫಲಿತಾಂಶ ಪ್ರಕಟಗೊಳ್ಳಲಿದೆ. 16 ಭದ್ರತಾ ಕೊಠಡಿಗಳನ್ನು ಅಂದು ಬೆಳಗ್ಗೆ 7.30ಕ್ಕೆ ಅಭ್ಯರ್ಥಿ, ಚುನಾವಣಾ ಏಜೆಂಟರು, ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ ಸಮ್ಮುಖದಲ್ಲಿ ವಿಡಿಯೋ ಚಿತ್ರೀಕರಣದೊಂದಿಗೆ ತೆರೆಯಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಣಿಕಾ ಕೇಂದ್ರಗಳಲ್ಲಿ 108 ಇವಿಎಂ ಎಣಿಕೆ ಟೇಬಲ್ ಹಾಗೂ 5 ಅಂಚೆ ಮತಪತ್ರ ಎಣಿಕೆ ಟೇಬಲ್ ಸೇರಿ 113 ಟೇಬಲ್‌ಗಳಿಗೆ ಮತ ಎಣಿಕೆ ಏಜೆಂಟರನ್ನು ನೇಮಕ ಮಾಡಲಾಗಿದೆ. ಅಭ್ಯರ್ಥಿಗಳು ನಮೂನೆ-18ರಲ್ಲಿ ಅರ್ಜಿ ಸಲ್ಲಿಸಿ ಏಜೆಂಟರನ್ನು ನೇಮಕ ಮಾಡಿಕೊಳ್ಳಬಹುದಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಬಣ್ಣವನ್ನು ನಿಗದಿಪಡಿಸಿ ಭಾವಚಿತ್ರವುಳ್ಳ ಗುರುತಿನ ಚೀಟಿಗಳನ್ನು ವಿತರಿಸಲಾಗುವುದು. ಅದನ್ನು ಬಳಸಿಕೊಂಡು ಎಣಿಕೆ ಕೇಂದ್ರಕ್ಕೆ ಪ್ರವೇಶ ಪಡೆಯಬಹುದು ಎಂದರು.

14 ಕೊಠಡಿಗಳಿಗೆ ತಲಾ ಎರಡರಂತೆ ಒಟ್ಟು 28 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಅಂಚೆ ಮತಪತ್ರ ಹಾಗೂ ಇಟಿಪಿಬಿಎಸ್ ಮತ ಎಣಿಕೆ ನಡೆಯುವ ಸ್ಥಳದಲ್ಲಿಯೂ ಸಿಸಿ ಕ್ಯಾಮರಾ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮತ ಎಣಿಕೆ ಕೊಠಡಿಯಲ್ಲಿ ಒಬ್ಬರು ಹಾಗೂ ಅಂಚೆ ಮತಪತ್ರ ಎಣಿಕಾ ಕೊಠಡಿಯಲ್ಲಿ ವಿಡಿಯೋಗ್ರಾಫರ್ ಅನ್ನು ನೇಮಿಸಿ ಎಣಿಕೆ ಪ್ರಕ್ರಿಯೆಯ ಪೂರ್ಣ ಚಿತ್ರೀಕರಣ ಮಾಡಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ಚುನಾವಣಾ ಆಯೋಗ ಮೇಲುಕೋಟೆ, ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಪಿ.ಅಣ್ಣಾಮಲೈ, ಮದ್ದೂರು, ಮಳವಳ್ಳಿ ಕ್ಷೇತ್ರಕ್ಕೆ ಪದ್ಮಾ, ಮಂಡ್ಯ ಮತ್ತು ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಉಮೇಶ್ ನಾರಾಯಣ್ ಪಾಂಡೆ, ಕೆ.ಆರ್.ಪೇಟೆ ಹಾಗೂ ಕೆ.ಆರ್.ನಗರ ಕ್ಷೇತ್ರಕ್ಕೆ ರವ್‌ನೀತ್ ಚೀಮಾ ಅವರನ್ನು ಎಣಿಕೆ ವೀಕ್ಷಕರನ್ನಾಗಿ ನೇಮಕ ಮಾಡಿದೆ.

ಎಂಟು ವಿಧಾನಸಭಾ ಕ್ಷೇತ್ರಕ್ಕೂ ಒಬ್ಬರು ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿ ಹಾಗೂ ಅಂಚೆ ಮತಪತ್ರ ಎಣಿಕೆಗಾಗಿ ನಾಲ್ಕು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಪ್ರತಿ ಎಣಿಕೆ ಟೇಬಲ್‌ಗೆ ಒಬ್ಬ ಮೇಲ್ವಿಚಾರಕ, ಒಬ್ಬರು ಎಣಿಕೆ ಸಹಾಯಕರು ಹಾಗೂ ಒಬ್ಬರು ಸೂಕ್ಷ್ಮವೀಕ್ಷಕರನ್ನು ನೇಮಕ ಮಾಡಲಾಗಿದೆ. ಕ್ಷೇತ್ರದ 2,046 ಮತಗಟ್ಟೆಗಳ ಮತ ಎಣಿಕೆಗೆ 117 ಮೇಲ್ವಿಚಾರಕರು, 116 ಸಹಾಯಕರು ಹಾಗೂ 134 ಮೈಕ್ರೋ ಅಬ್ಸರ್‌ವರ್‌ಗಳನ್ನು ನೇಮಿಸಲಾಗಿದೆ ಎಂದರು.

ಅಂಚೆ ಮತಪತ್ರ ಎಣಿಕೆಗಾಗಿ ಒಟ್ಟು 4 ಟೇಬಲ್ ಹಾಕಲಾಗಿದೆ. 4 ಮೇಲ್ವಿಚಾರಕರು, 8 ಸಹಾಯಕರನ್ನು ನೇಮಿಸಲಾಗಿದೆ.ಇಟಿಪಿಬಿಎಸ್ ಮತಪತ್ರ ಎಣಿಕೆಗಾಗಿ ಎರಡು ಟೇಬಲ್ ಇದ್ದು, ಇಬ್ಬರು ಮೇಲ್ವಿಚಾರಕರು ಹಾಗೂ ನಾಲ್ವರು ಸಹಾಯಕರನ್ನು ನೇಮಕ ಮಾಡಲಾಗಿದೆ ಎಂದರು.

ಪೇಪರ್ ಸ್ಲಿಪ್ ಎಣಿಕೆ
ಯಾವುದಾದರೂ ವಿಧಾನಸಭಾ ಕ್ಷೇತ್ರದ ಮತಗಟ್ಟೆಯಲ್ಲಿ ಬಳಸಲಾಗಿರುವ ಕಂಟ್ರೋಲ್ ಯೂನಿಟ್‌ನಲ್ಲಿ ತಾಂತ್ರಿಕ ಕಾರಣದಿಂದ ಫಲಿತಾಂಶ ಪ್ರಕಟವಾಗದಿದ್ದಲ್ಲಿ, ಅಂತಹ ಕಂಟ್ರೋಲ್ ಯೂನಿಟ್‌ಗಳನ್ನು ಸಹಾಯಕ ಚುನಾವಣಾಧಿಕಾರಿ ವಶಕ್ಕೆ ಪಡೆಯಲಾಗುವುದು. ಪೂರ್ಣ ಎಣಿಕೆ ಮುಕ್ತಾಯವಾದ ಬಳಿಕ ಕಂಟ್ರೋಲ್ ಯೂನಿಟ್ ಜತೆಗೆ ಆ ಮತಗಟ್ಟೆಯಲ್ಲಿ ಬಳಸಲಾಗಿದ್ದ ವಿವಿ ಪ್ಯಾಟ್‌ನಲ್ಲಿನ ಪೇಪರ್ ಸ್ಲಿಪ್‌ಗಳನ್ನು ಅಭ್ಯರ್ಥಿವಾರು ಎಣಿಕೆ ಮಾಡಲಾಗುವುದು ಎಂದು ಡಿಸಿ ವಿವರಿಸಿದರು.

ಆಯೋಗದ ನಿರ್ದೇಶನದಂತೆ ಎಲ್ಲ ಸುತ್ತು ಎಣಿಕೆ ಮುಗಿದ ಬಳಿಕ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿನ ಒಟ್ಟು ಮತಗಟ್ಟೆಗಳ ಪೈಕಿ 5 ಮತಗಟ್ಟೆಯನ್ನು ಆಯಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಲಾಟರಿ ಮೂಲಕ ಆಯ್ಕೆ ಮಾಡಲಿದ್ದಾರೆ. ನಂತರ ಆ ಮತಗಟ್ಟೆಯ ವಿವಿ ಪ್ಯಾಟ್‌ನಲ್ಲಿರುವ ಪೇಪರ್ ಸ್ಲಿಪ್‌ಗಳನ್ನು ಮತ ಎಣಿಕೆ ಕೊಠಡಿಯೊಳಗೆ ಪ್ರತ್ಯೇಕವಾಗಿ ಸ್ಥಾಪಿಸಲಾಗಿರುವ ವಿವಿ ಪ್ಯಾಟ್ ಸ್ಲಿಪ್ ಕೌಂಟಿಂಗ್ ಬೂತ್‌ಗೆ ಒಂದರ ನಂತರ ಒಂದರಂತೆ ಎಣಿಕೆ ಮಾಡಲು ಕ್ರಮ ವಹಿಸಲಾಗುವುದು ಎಂದರು.

ಏ.18ರಂದು ನಡೆದ ಮತದಾನದ ವೇಳೆ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ-60ರಲ್ಲಿ ಮತಗಟ್ಟೆ ಸಿಬ್ಬಂದಿ ಅಣಕು ಮತದಾನದ ನಂತರ ಮಾಕ್ ಫೋಲ್ ಕ್ಲಿಯರ್ ಮಾಡದೆ ಹಾಗೆಯೇ ಮತದಾನ ಪ್ರಕ್ರಿಯೆ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಯೋಗದ ನಿರ್ದೇಶನದಂತೆ ಆ ಮತಗಟ್ಟೆಯ ವಿವಿಪ್ಯಾಟ್‌ನಲ್ಲಿರುವ ಪೇಪರ್ ಸ್ಲಿಪ್‌ಗಳನ್ನು ಮತ ಎಣಿಕೆ ಮಾಡಲಾಗುವುದು ಎಂದರು.

ಗೌಪ್ಯತೆ ಉಲ್ಲಂಘನೆಗೆ ಮತ ರದ್ದು
ಚುನಾವಣೆಯಲ್ಲಿ ಇಟಿಪಿಬಿಎಸ್ ಮೂಲಕ ಮತ ಚಲಾವಣೆ ಮಾಡಿದ ಯೋಧ ಆರ್.ನಾಯಕ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮತ ಬಹಿರಂಗಪಡಿಸಿದ್ದರು. ಆದ್ದರಿಂದ, ಎಣಿಕೆ ದಿನ ಮತವನ್ನು ರದ್ದುಪಡಿಸಲಾಗುವುದು. ಅಂತೆಯೇ, ಮತ ಎಣಿಕೆ ಏಜೆಂಟರು, ಎಣಿಕೆ ಸಿಬ್ಬಂದಿ, ಚುನಾವಣಾ ಕೆಲಸ ನಿರತ ಅಧಿಕಾರಿ, ಸಿಬ್ಬಂದಿ ಮೊಬೈಲ್ ಫೋನ್ ಅಥವಾ ಕ್ಯಾಮರಾವನ್ನು ಎಣಿಕೆ ಕೇಂದ್ರಕ್ಕೆ ತೆಗೆದುಕೊಂಡು ಹೋಗುವುದಕ್ಕೆ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮತ ಎಣಿಕೆ ಸುತ್ತುಗಳ ವಿವರ
ಕ್ಷೇತ್ರದ ಹೆಸರು ಮತಗಟ್ಟೆ ಕೊಠಡಿ ಟೇಬಲ್ ಸುತ್ತುಗಳು
ಮಳವಳ್ಳಿ 268 02 14 20
ಶ್ರೀರಂಗಪಟ್ಟಣ 249 02 14 18
ಮದ್ದೂರು 253 01 12 21
ಮಂಡ್ಯ 258 01 12 22
ಮೇಲುಕೋಟೆ 251 02 14 18
ನಾಗಮಂಗಲ 257 02 14 19
ಕೆ.ಆರ್.ಪೇಟೆ 258 02 14 19
ಕೆ.ಆರ್.ನಗರ 252 02 14 18
ಒಟ್ಟು 2046 14 108

Leave a Reply

Your email address will not be published. Required fields are marked *