ಹಾವುಗೊಲ್ಲರಿಗೆ ಶೀಘ್ರ ನಿವೇಶನ ಹಂಚಿಕೆ

ಎನ್.ಆರ್.ಪುರ: ಜ್ಯೋತಿಷಿಯೊಬ್ಬರ ಮಾತು ಕೇಳಿ ಗುಳೆ ಹೋದ ಹಾವುಗೊಲ್ಲ ಕುಟುಂಬಗಳಿಗೆ ಜಿಲ್ಲಾಡಳಿತದಿಂದ ನಾಗಲಾಪುರ ಗ್ರಾಪಂ ವ್ಯಾಪ್ತಿಯ ಸರ್ವೆ ನಂ.179ರಲ್ಲಿ 6.20 ಎಕರೆ ಜಾಗ ಗುರುತಿಸಿದ್ದು ಇದರಲ್ಲಿ 5.20 ಎಕರೆ ನಿವೇಶನ ರಹಿತರಿಗೆ ನಿವೇಶನಕ್ಕೆ, 1ಎಕರೆ ಹಿಂದು ಸ್ಮಶಾನಕ್ಕಾಗಿ ಜಾಗ ಕಾಯ್ದಿರಿಸಿ ಆದೇಶ ಹೊರಡಿಸಿದೆ.

5.20 ಎಕರೆ ಜಾಗದಲ್ಲಿ ಹಾವುಗೊಲ್ಲರ ಕುಟುಂಬಗಳಿಗೆ ವಿಶೇಷ ಆದ್ಯತೆ ನೀಡಿ, ನಿವೇಶನ ಹಂಚಿ ಉಳಿದ ನಿವೇಶನಗಳನ್ನು ಗ್ರಾಪಂ ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಿದ ನಿವೇಶನ ರಹಿತರಿಗೆ ಹಂಚಲು ಗ್ರಾಪಂ ಸಿದ್ಧತೆ ಮಾಡಿಕೊಂಡಿದೆ.

ಆಶ್ರಯ ನಿವೇಶನ ಹಾಗೂ ಸ್ಮಶಾನ ಜಾಗಕ್ಕೆ ಕಾಯ್ದಿರಿಸಿ ಜಾಗದಲ್ಲಿರುವ ಅಕೇಶಿಯಾ ಮರಗಳನ್ನು ತೆರವುಗೊಳಿಸುವಂತೆ ಹಾಗೂ ಕಂದಾಯ ಇಲಾಖೆಯಿಂದ ದಾಖಲೆ ಸಮೇತ ಪಂಚಾಯಿತಿಗೆ ಹಸ್ತಾಂತರಿಸಿ ಬಡಾವಣೆ ಮಾಡಲು ಅನುವು ಮಾಡಿಕೊಡುವಂತೆ ಗ್ರಾಪಂಗೆ ಸೂಚಿಸಿದೆ.

ಮೀಸಲಿರಿಸಿದ ಜಾಗ ಕಾಪಾಡುವ ಉದ್ದೇಶದಿಂದ ನಾಗಲಾಪುರ ಗ್ರಾಪಂ ಆಡಳಿತ ಮಂಡಳಿ ಸ್ಥಳೀಯರ ಸಹಕಾರ ಪಡೆದು ಟ್ರೆಂಚ್ ನಿರ್ವಿುಸಿ ಅತಿಕ್ರಮ ಪ್ರವೇಶ ಮಾಡದ ರೀತಿಯಲ್ಲಿ ಫಲಕ ಅಳವಡಿಸಿದೆ. ಸಾರ್ವಜನಿಕ ಜಾಗವನ್ನು ಈಗಾಗಲೆ ಅರ್ಜಿ ಸಲ್ಲಿಸಿರುವ ಹಾಗೂ ಈ ಹಿಂದೆ ವಲಸೆ ಹೋಗಿದ್ದ ಕೆಲವು ಹಾವುಗೊಲ್ಲ ಕುಟುಂಬಗಳಿಗೆ ಇಲಾಖಾ ಮಾರ್ಗ ಸೂಚಿಯಂತೆ ನಿವೇಶನ ಒದಗಿಸಲು ಕಾರ್ಯಪ್ರವೃತ್ತವಾಗಿದೆ.

ನಿವೇಶನಕ್ಕಾಗಿ ಜಾಗ ಗುರುತಿಸಿರುವುದು ಶ್ಲಾಘನೀಯ. ಅರಣ್ಯ ಇಲಾಖೆ ಮರ ತೆರವುಗೊಳಿಸುವ ಹಾಗೂ ಕಂದಾಯ ಇಲಾಖೆ ಪಹಣಿಯೊಂದಿಗೆ ಜಾಗವನ್ನು ಪೂರ್ಣವಾಗಿ ಗ್ರಾಪಂಗೆ ಹಸ್ತಾಂತರಿಸುವ ಜತೆಗೆ ವಸತಿ ನಿಗಮ, ಬೆಂಗಳೂರಿನಿಂದ ಲೇ ಔಟ್ ನಿರ್ಮಾಣ ಸೇರಿ ಮೂಲ ಸೌಕರ್ಯಕ್ಕೆ ಅನುದಾನ ಬಿಡುಗಡೆ ಮಾಡಬೇಕು. ನಾಗಲಾಪುರ ಗ್ರಾಪಂ ಅಧ್ಯಕ್ಷೆ ಯಶೋದಾಬಾಯಿ ತಿಳಿಸಿದರು.

ಹಾವುಗೊಲ್ಲರ 16 ಕುಟುಂಬಗಳು ನಿವೇಶನಕ್ಕೆ ಅರ್ಜಿ ಸಲ್ಲಿಸಿವೆ. ಮಾರ್ಗಸೂಚಿಯಂತೆ ಹಾವುಗೊಲ್ಲ ಕುಟುಂಬದವರು ಫಲಾನುಭವಿ ಆಯ್ಕೆಗೆ ಅರ್ಹರಿರುವುದರಿಂದ ಗ್ರಾಪಂ ಗ್ರಾಮಸಭೆ ನಿರ್ಣಯದಂತೆ ಆದ್ಯತೆ ನೀಡಬಹುದು. ಉಳಿದಂತೆ ಸರ್ಕಾರದ ಮಾರ್ಗಸೂಚಿಯಂತೆ ನಿವೇಶನ ರಹಿತರಿಗೆ ನಿವೇಶನ ಹಂಚಿಕೆಗೆ ಕ್ರಮಕೈಗೊಳ್ಳಲಾಗುವುದು. ನಾಗಲಾಪುರ ಪಿಡಿಒಎನ್.ಎಲ್.ಮನೀಶ್ ಹೇಳಿದರು.</