More

  ನವನಗರ ಯೂನಿಟ್-1, 2ರ ಪ್ರಾರ್ಪರ್ಟಿ ಕಾರ್ಡ್ ವಿತರಣೆ

  ಬಾಗಲಕೋಟೆ : ನವನಗರದ ಯೂನಿಟ್-1 ಮತ್ತು 2 ರ ವ್ಯಾಪ್ತಿಗೆ ಒಳಪಡುವ ಅಧಿಕೃತ ಮಾಲೀಕತ್ವದ ದಾಖಲೆಗಳ (ಪ್ರಾಪರ್ಟಿ ಕಾರ್ಡ್) ವಿತರಣೆಗೆ ಶಾಸಕ ವೀರಣ್ಣ ಚರಂತಿಮಠ ಸಾಂಕೇತಿಕವಾಗಿ ಬುಧವಾರ ಚಾಲನೆ ನೀಡಿದರು.

  ನವನಗರದ ಸೆಕ್ಟರ್ ನಂ.52ರಲ್ಲಿರುವ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲಾತಿಗಳು ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕರಡು ಆಸ್ತಿಗಳ ಪ್ರಕಟಣಾ ಪತ್ರ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಾಗಲಕೋಟೆ ನಗರ ವ್ಯಾಪ್ತಿಯಲ್ಲಿ ಒಟ್ಟು 50 ಸಾವಿರ ಆಸ್ತಿಗಳಿದ್ದು, ಈ ಪೈಕಿ 34 ಸಾವಿರ ಆಸ್ತಿಗಳ ಮಾಲೀಕತ್ವದ ದಾಖಲೆಗಳು ಸಿದ್ಧಗೊಂಡಿವೆ. ಇನ್ನೂ 16 ಸಾವಿರ ಆಸ್ತಿಗಳ ದಾಖಲೆ ಸಿದ್ಧಪಡಿಸುವ ಕಾರ್ಯ ಮುಕ್ತಾಯದ ಹಂತದಲ್ಲಿರುವುದಾಗಿ ತಿಳಿಸಿದರು.
  ಕೆಜೆಪಿ ಆಗದ ಆಸ್ತಿಯ ವಾಟ್ನಿ, ಸಾಲ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಕುರಿತು ಅನೇಕ ಜನರ ತೊಂದರೆಯನ್ನು ಮನಗಂಡು 2021 ರಲ್ಲಿ ಆಸ್ತಿ ದಾಖಲೆ ಕಾರ್ಡ್ ತಯಾರಿಸಲು ಪ್ರಾರಂಭಿಸಲಾಯಿತು. ಈ ಕಾರ್ಯಕ್ಕೆ ಜೂನ್ ಮಾಹೆಯಲ್ಲಿ ಡ್ರೋನ್ ಹಾರಾಟದ ಜತೆಗೆ ರೋವರ್ ಬಳಸಿ ಆಸ್ತಿಗಳ ಪರಿಶೀಲನೆ ನಡೆಸಲಾಯಿತು. ಆಗಸ್ಟ್ ತಿಂಗಳಲ್ಲಿ ಭೂದಾಖಲೆ ಇಲಾಖೆ ಆಯುಕ್ತರು ಸೆಕ್ಟರ್ ನಂ.21ಕ್ಕೆ ಭೇಟಿ ನೀಡಿ ಅಧಿಕೃತ ಚಾಲನೆ ನೀಡಿದರು ಎಂದು ತಿಳಿಸಿದರು.

  ತಂತ್ರಜ್ಞಾನವನ್ನು ಬಳಕೆ ಮಾಡುವ ಮೂಲಕ ಅತಿ ಕಡಿಮೆ ಅವಧಿಯಲ್ಲಿ ನಗರದ ಆಸ್ತಿಗಳ ದಾಖಲೆಗಳನ್ನು ಕಲೆ ಹಾಕಲು ಸಾಧ್ಯವಾಯಿತು. ಈ ಪ್ರಾಪರ್ಟಿ ದಾಖಲೆಯಲ್ಲಿ ನಕಾಶೆ, ಗೂಗಲ್ ಲಿಂಕ್ ಮತ್ತು ಮನೆ ಮಾಲೀಕರ ಭಾವಚಿತ್ರ ಒಳಗೊಂಡಿರುತ್ತದೆ. ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

  ಜಿಲ್ಲಾಧಿಕಾರಿ ಪಿ. ಸುನೀಲಕಮಾರ್ ಮಾತನಾಡಿ, ಈ ಹಿಂದೆ ಆಸ್ತಿಗಳ ದಾಖಲೆ ಕಲೆ ಹಾಕಲು ಹದ್ದುಬಸ್ತ ಮಾಡಲು ತುಂಬ ತೊಂದರೆಯಾಗುತ್ತಿತ್ತು. ಈಗ ತಂತ್ರಜ್ಞಾನ ಬಳಕೆಯಿಂದ ಅಧಿಕೃತ ದಾಖಲೆ ಪಡೆಯಲು ಸಾಧ್ಯವಾಗುತ್ತಿದೆ. ನವನಗರದಲ್ಲಿ ಚೆನ್ನಾಗಿ ಲೇಔಟ್ ಆಗಿದ್ದು, ವಿದ್ಯಾಗಿರಿ ಮತ್ತು ಹಳೆಯ ಬಾಗಲಕೋಟೆಯಲ್ಲಿ ಸರ್ವೇ ಕಾರ್ಯ ಮಾಡಲಾಗುತ್ತಿದೆ. ಸಾರ್ವಜನಿಕರು ಒತ್ತುವರಿ ಮಾಡಿರುವ ಜಾಗವನ್ನು ತೆರವುಗೊಳಿಸಿದಲ್ಲಿ ಸರ್ವೇ ಕಾರ್ಯಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಈ ಕಾರ್ಯಕ್ಕೆ ಸಹಕರಿಸಬೇಕು. ಅಂದಾಗ ಮಾತ್ರ ತಮ್ಮ ಆಸ್ತಿಗಳ ಅಧಿಕೃತ ದಾಖಲೆ ನಿಮ್ಮ ಕೈ ಸೇರಲಿದೆ ಎಂದರು.

  ಭೂದಾಖಲೆಗಳ ಉಪ ನಿರ್ದೇಶಕ ಮಹಾಂತೇಶ ಮುಳಗುಂದ ಮಾತನಾಡಿ, ನಗರದ ಅಧಿಕೃತ ಮಾಲೀಕತ್ವದ ದಾಖಲೆ ಯೋಜನೆ ಉದ್ದೇಶ ಪ್ರತಿ ಆಸ್ತಿಗಳ ಮಾಲೀಕತ್ವ ದಾಖಲೆ ನಿರೂಪಿಸುವುದು. ಕಳೆದ ಎರಡೂವರೆ ತಿಂಗಳಲ್ಲಿ ಡ್ರೋನ್ ಮುಖಾಂತರ ಕೆಲಸ ನಿರ್ವಹಿಸುತ್ತಿದ್ದು, ಯೂನಿಟ್-1 ಮತ್ತು 2 ಹಾಗೂ ವಿದ್ಯಾಗಿರಿ ಸೇರಿ 34 ಸಾವಿರ ಆಸ್ತಿಗಳ ದಾಖಲೆ ಸಿದ್ಧತೆ ಕಾರ್ಯ ಮಾಡಲಾಗಿದೆ. ಕಚ್ಚಾ ಕರಡು ಪ್ರತಿ ನೀಡಲಾಗುತ್ತಿದೆ. ಈ ಬಗ್ಗೆ ತಕರಾರು ಇದ್ದಲ್ಲಿ 30 ದಿನಗಳ ಒಳಗಾಗಿ ಬಿಟಿಡಿಎ ಕಚೇರಿಗೆ ಸಲ್ಲಿಸಿ ದಾಖಲೆಯನ್ನು ಸರಿಪಡಿಸಿಕೊಳ್ಳಬಹುದು. 10 ಜನ ಭೂಮಾಪಕರು ಈ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

  ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ಸಭಾಪತಿ ಅಂಬಾಜಿ ಜೋಶಿ, ಬಿಟಿಡಿಎ ಸದಸ್ಯರಾದ ಕುಮಾರ ಯಳ್ಳಿಗುತ್ತಿ, ಶಿವಾನಂದ ಟವಳಿ, ವಾರ್ಡ್ ಸದಸ್ಯೆ ನಾಗರತ್ನಾ ಹೆಬ್ಬಳ್ಳಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.

  ನವನಗರದಲ್ಲಿ ಮುಳುಗಡೆ ಸಂತ್ರಸ್ತರಿಗೆ ಹಂಚಿಕೆಯಾಗಿದ್ದ ನಿವೇಶನಗಳಿಗೆ ಪ್ರಾಪರ್ಟಿ ಕಾರ್ಡ್ ನೀಡುತ್ತಿರುವುದು ಉತ್ತಮವಾಗಿದೆ. ಸಂತ್ರಸ್ತರು ಸದ್ಬಳಕೆ ಮಾಡಿಕೊಳ್ಳಬೇಕು. ವಾಟ್ನಿ ಮಾಡಿಕೊಳ್ಳಲು, ಸಾಲ ಪಡೆದುಕೊಳ್ಳಲು ಸಹಾಯವಾಗಲಿದೆ.
  ಕುಮಾರ ಯಳ್ಳಿಗುತ್ತಿ 
  ಬಿಟಿಡಿಎ ಸದಸ್ಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts