ಮಂಡ್ಯ: ಅಂಗವಿಕಲರಿಗೆ ನೀಡಿರುವ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ಸದುಪಯೋಗಪಡೆದುಕೊಳ್ಳುವ ಮೂಲಕ ಸ್ವಾವಲಂಬ ಬದುಕು ಕಟ್ಟಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಸಲಹೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ 2022-23ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ ಎಂಟು ಜನ ಅಂಗವಿಕಲರಿಗೆ 7,95,576 ರೂ ವೆಚ್ಚದಲ್ಲಿ ಯಂತ್ರಚಾಲಿತ ತ್ರಿಚಕ್ರ ವಾಹನ ವಿತರಿಸಿ ಮಾತನಾಡಿದರು.
ಅಂಗವಿಕಲರು ಮುಖ್ಯವಾಹಿನಿಗೆ ಬರಲು ಸರ್ಕಾರ ವಿವಿಧ ಯೋಜನೆ ರೂಪಿಸಿ ಪ್ರತ್ಯೇಕ ಅನುದಾನ ಮೀಸಲಿಡುತ್ತಿದೆ. ವಾಹನ ಪಡೆದುಕೊಂಡಿರುವವರು ಇನ್ನೊಬ್ಬರಿಗೆ ನೀಡದೇ ಸದ್ಭಳಕೆ ಮಾಡಿಕೊಳ್ಳಬೇಕು. ನ್ಯೂನತೆಯ ಬಗ್ಗೆ ಮಾನಸಿಕವಾಗಿ ಕುಗ್ಗದೇ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ವಿಶ್ವಾಸ ತುಂಬಿದರು.
ಜಿಲ್ಲಾಧಿಕಾರಿ ಡಾ.ಕುಮಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜಮೂರ್ತಿ, ಹಿರಿಯ ನಾಗರೀಕ ಮತ್ತು ವಿಶೇಷ ಚೇತನ ಕಲ್ಯಾಣಾಧಿಕಾರಿ ರೋಹಿತ್ ಇದ್ದರು.