ಅರಕಲಗೂಡು: ಮಳೆಯಿಂದ ಮನೆ ಕಳೆದುಕೊಂಡು ರಾಮ ಮಂದಿರದಲ್ಲಿ ನೆಲೆಸಿದ್ದ ತಾಲೂಕಿನ ಮಾದಿಹಳ್ಳಿ ಕಾಲನಿ ಗ್ರಾಮದ ಸಂತ್ರಸ್ತೆ ಚಿಕ್ಕಮ್ಮ ಕುಟುಂಬಕ್ಕೆ ತಹಸೀಲ್ದಾರ್ ಕೆ.ಸಿ.ಸೌಮ್ಯಾ ಆಹಾರ ಕಿಟ್ ವಿತರಿಸಿದರು.
ಮನೆ ಸಂಪೂರ್ಣ ಹಾನಿಯಾಗಿದ್ದ ಹಿನ್ನೆಲೆಯಲ್ಲಿ ವಾಸ ಮಾಡಲು ಮನೆ ಇಲ್ಲದ ಕಾರಣ ಗ್ರಾಮ ಆಡಳಿತಾಧಿಕಾರಿ ಹಾಗೂ ರಾಜಸ್ವ ನಿರೀಕ್ಷಕರು ಭೇಟಿ ನೀಡಿ ಗ್ರಾಮದಲ್ಲಿರುವ ರಾಮಮಂದಿರದಲ್ಲಿ ತಾತ್ಕಾಲಿಕವಾಗಿ ವಾಸ ಮಾಡಲು ಅನುವು ಮಾಡಿಕೊಟ್ಟಿದ್ದರು. ಇದೀಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂತ್ರಸ್ತ ಕುಟುಂಬಕ್ಕೆ ಆಹಾರದ ಕಿಟ್ ವಿತರಣೆ ಮಾಡಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದರು.
ಮನೆ ಸಂಪೂರ್ಣ ಹಾನಿಯಾಗಿದ್ದು ಸಂತ್ರಸ್ತರಿಗೆ ಸುಮಾರು 15 ದಿನಗಳಿಗೆ ಆಗುವಷ್ಟು ಆಹಾರದ ಕಿಟ್ ವಿತರಣೆ ಮಾಡಲಾಗಿದೆ. ಅಲ್ಲದೆ ಜಿಲ್ಲಾಧಿಕಾರಿಗೆ ಕಡತ ಸಲ್ಲಿಸಿ ತ್ವರಿತವಾಗಿ ಸವಲತ್ತುಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ತಾಲೂಕು ಶಿರಸ್ತೇದಾರ್ ಸಿ.ಸ್ವಾಮಿ, ರಾಜಸ್ವ ನಿರೀಕ್ಷಕ ಲೋಕೇಶ್, ಗ್ರಾಮ ಆಡಳಿತಾಧಿಕಾರಿ ಸಲ್ಮಾನ್ ಖಾನ್ ಇದ್ದರು.