ಸವಲತ್ತುಗಳನ್ನು ಸಕಾಲದಲ್ಲಿ ವಿತರಿಸಿ

ಕೊಳ್ಳೇಗಾಲ: ಪಟ್ಟಣದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಬುಧವಾರ ಪರಿಶಿಷ್ಟಜಾತಿ, ವರ್ಗಗಳ ಆಯೋಗದ ಅಧ್ಯಕ್ಷ ಅಮರನಾಥ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಬಳಿಕ ನಿಲಯದ ಕಾರ್ಯವೈಖರಿ ಕುರಿತು ಮಾಹಿತಿ ಪಡೆದ ಅವರು, ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಬರುವ ಎಲ್ಲ ರೀತಿಯ ಸವಲತ್ತುಗಳನ್ನು ತಪ್ಪದೆ ಸಕಾಲದಲ್ಲಿ ವಿತರಿಸಬೇಕು. ಶಾಲೆಯಿಂದ ನಿಲಯಕ್ಕೆ ಆಗಮಿಸಿದ ಮಕ್ಕಳಿಗೆ ಓದಿಕೊಳ್ಳಲು ಉತ್ತಮ ಪರಿಸರ ಒದಗಿಸುವುದು, ಸುರಕ್ಷಿತ ಊಟೋಪಚಾರ ಕಲ್ಪಿಸಬೇಕು ಎಂದು ನಿಲಯಪಾಲಕಿ ಮಂಜುಳಾ ಅವರಿಗೆ ಖಡಕ್ ಸೂಚನೆ ನೀಡಿದರು.

ಈ ನಡುವೆ ನಿಲಯದ ಮಾಹಿತಿ ಫಲಕದಲ್ಲಿ ಜ್ಯೋತಿ ಎಂಬುವರಿಂದ ನಿಲಯದ ರಾತ್ರಿ ಕಾವಲು ನಿರ್ವಹಿಸುತ್ತಿರುವ ಬರಹ ವೀಕ್ಷಿಸಿದ ಅಧ್ಯಕ್ಷರು, ಇದು ಸರಿಯಲ್ಲ. ಹೆಣ್ಣು ಮಕ್ಕಳ ಹಾಸ್ಟೆಲ್‌ಗಳಿಗೆ ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಬೇಕು ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಪ್ರಬಾರ ಸಹಾಯಕ ನಿರ್ದೇಶಕಿ ಎಸ್.ಜಯಕಾಂತ ಅವರಿಗೆ ಸಲಹೆ ನೀಡಿದರು.

ನಂತರ ಈ ಕುರಿತು ಇಲಾಖಾ ನಿಯಮದಲ್ಲಿ ಅವಕಾಶವಿಲ್ಲ ಎಂಬುದನ್ನು ತಕ್ಷಣ ಅರಿವಿಗೆ ತಂದುಕೊಂಡ ಅಧ್ಯಕ್ಷರು, ಸ್ಥಳದಲ್ಲಿದ್ದ ಡಿವೈಎಸ್ಪಿ ಪುಟ್ಟಮಾದಯ್ಯ, ಸರ್ಕಲ್ ಇನ್ಸ್‌ಪೆಕ್ಟರ್ ಆರ್.ಶ್ರೀಕಾಂತ್ ಅವರೊಂದಿಗೆ ಸಮಾಲೋಚಿಸಿ, ತಾಲೂಕಿನಾದ್ಯಂತ ಇರುವ ಹೆಣ್ಣು ಮಕ್ಕಳ ಹಾಸ್ಟೆಲ್, ಸುತ್ತಮುತ್ತ ಪೊಲೀಸ್ ಗಸ್ತು ಹೆಚ್ಚಿಸುವಂತೆ ಸೂಚನೆ ನೀಡಿದರು.
ಈ ವೇಳೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿ ಅಧೀಕ್ಷಕ ಮಂಜುನಾಥ್, ಮುಖಂಡರಾದ ಡಾ.ನವೀನ್‌ಕುಮಾರ್, ಅಣಗಳ್ಳಿ ದಶರಥ್, ಸಿಂಗಾನಲ್ಲೂರು ರಾಜಣ್ಣ, ನಗರಸಭಾ ಮಾಜಿ ಅಧ್ಯಕ್ಷ ಪಿ.ಮಲ್ಲಿಕಾರ್ಜುನ್, ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಕಾರ್ಯದರ್ಶಿ ಪುಟ್ಟಬುದ್ದಿ, ನಿರ್ದೇಶಕ ಎಂ.ನಟರಾಜುಮಾಳಿಗೆ ಇದ್ದರು.

ಶಿಷ್ಟಚಾರದ ಸ್ವಾಗತ: ಇದಕ್ಕೂ ಮೊದಲು ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ತೆರಳಲು ಬುಧವಾರ ಬೆಳಗ್ಗೆ ಬೆಂಗಳೂರು ಮಾರ್ಗದಿಂದ ಆಗಮಿಸಿದ ಪರಿಶಿಷ್ಟಜಾತಿ, ವರ್ಗಗಳ ಆಯೋಗದ ಅಧ್ಯಕ್ಷ ಅಮರನಾಥ್ ಅವರನ್ನು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗಂಗಾಧರ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಎಡಿ ಎಸ್.ಜಯಕಾಂತ ಅವರು ಶಿಷ್ಟಚಾರದಂತೆ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಹೂಗುಚ್ಛ ನೀಡಿ ಸ್ವಾಗತಿಸಿ, ಪಟ್ಟಣದ ಪಿಡಬ್ಲ್ಯೂಡಿ ಅತಿಥಿಗೃಹಕ್ಕೆ ಕರೆತಂದರು.

ಬೆತ್ತಲೆ ಮೆರವಣಿಗೆಗೆ ನ್ಯಾಯ ದೊರಕಿಸಿ: ಇದೇ ವೇಳೆ ಪಟ್ಟಣದ ಪಿಡಬ್ಲ್ಯೂಡಿ ಅತಿಥಿಗೃಹದಲ್ಲಿ ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕೆಲ ಸಂಚಾಲಕರು, 20 ದಿನಗಳ ಹಿಂದೆ ಸವರ್ಣಿಯರಿಂದ ನಡೆದ ಗುಂಡ್ಲುಪೇಟೆ ತಾಲೂಕಿನ ಶ್ಯಾನಡ್ರಹಳ್ಳಿಯ ಎಸ್.ಪ್ರತಾಪ್ ಬೆತ್ತಲೆ ಮೆರವಣಿಗೆ ಪ್ರಕರಣವನ್ನು ದಿಕ್ಕು ತಪ್ಪಿಸಿ ಆರೋಪಿಗಳಿಗೆ ಸಹಕಾರಿಯಾಗಿರುವ ಸ್ಥಳಿಯ ಸಬ್‌ಇನ್ಸ್‌ಪೆಕ್ಟರ್, ಇನ್ಸ್‌ಪೆಕ್ಟರ್, ಡಿವೈಎಸ್ಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಪ್ರಕ್ರಣದಲ್ಲಿ ನೊಂದವರಿಗೆ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿ ಆಯೋಗದ ಅಧ್ಯಕ್ಷರಿಗೆ ಲಿಖಿತ ಮನವಿ ಸಲ್ಲಿಸಿದರು.

Leave a Reply

Your email address will not be published. Required fields are marked *