ಎಲ್ಲ ವಿದ್ಯಾರ್ಥಿಗಳಿಗೂ ಬಸ್ ಪಾಸ್ ವಿತರಿಸಿ

ರಾಣೆಬೆನ್ನೂರ: ಎಲ್ಲ ಶಾಲಾ-ಕಾಲೇಜ್ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್​ಪಾಸ್ ವಿತರಿಸಲು ಹಾಗೂ ಪದವಿ ವಿದ್ಯಾರ್ಥಿಗಳಿಗೆ ನೂತನ ಬಸ್​ಪಾಸ್ ವಿತರಿಸುವವರೆಗೆ ಹಳೇ ಬಸ್​ಪಾಸ್ ಮುಂದುರಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿವಿಧ ಕಾಲೇಜ್​ಗಳ ವಿದ್ಯಾರ್ಥಿನಿಯರು ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಎಸ್​ಜೆಎಂವಿ ಮಹಿಳಾ ವಿದ್ಯಾಲಯದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿನಿಯರು, ಬಸ್ ನಿಲ್ದಾಣದ ಎದುರು ಮಾನವ ಸರಪಳಿ ನಿರ್ವಿುಸಿ, ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಎಲ್ಲ ಶಾಲಾ-ಕಾಲೇಜ್ ವಿದ್ಯಾರ್ಥಿಗಳಿಗೆ ಉಚಿತ ಬಸ್​ಪಾಸ್ ನೀಡಲು ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು. ತಾಲೂಕು ಸಂಚಾಲಕ ರಾಘವೇಂದ್ರ ಪಿ. ಮಾತನಾಡಿ, ಬಡ ವಿದ್ಯಾರ್ಥಿಗಳು ಎಲ್ಲ ವರ್ಗದ ಸಮುದಾಯದಲ್ಲಿದ್ದು, ಸರ್ಕಾರ ಎಲ್ಲರಿಗೂ ಉಚಿತ ಬಸ್​ಪಾಸ್ ಸೇವೆ ನೀಡಬೇಕು ಎಂದು ಆಗ್ರಹಿಸಿದರು.

ಬಸ್​ಪಾಸ್ ನೀಡುವಲ್ಲಿ ವಿಳಂಬ ವಾದ ಕಾರಣ 1ನೇ ತರಗತಿಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಹಳೇ ಬಸ್​ಪಾಸ್ ಹಾಗೂ ಪ್ರವೇಶ ರಸೀದಿ ಮೇಲೆ ಓಡಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ಆದರೆ, ಪದವಿ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ನೀಡಿಲ್ಲ. ಈ ಕುರಿತು ಸರ್ಕಾರ ಸೂಕ್ತ ಆದೇಶ ಹೊರಡಿಸ ಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಬಂದ ಸಾರಿಗೆ ಸಂಸ್ಥೆ ಘಟಕ ವ್ಯವಸ್ಥಾಪಕ ಶಿವಮೂರ್ತಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಟಿಪ್ಪು ಕುಸಗೂರ, ದುಂಡೇಶ ಹೊಸಳ್ಳಿ, ಅನ್ನಪೂರ್ಣ ಉನ್ನತಿ, ಬಸವರಾಜ ಕೆ., ಕೀರ್ತಿ ಎಂ., ವಿಶ್ವನಾಥ ಎಂ.ಜಿ., ರಮೇಶ ಪಿ.ವೈ., ಸಂಜೀವ ಕುಂಚೂರು, ಸಚಿನ ಅನ್ನೇರ, ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *