ಸಾಗರ: ಸಾಗರದ ಜನ್ನತ್ ನಗರದ ಜೈ ಭುವನೇಶ್ವರಿ ಯುವಕ ಸಂಘ ಪ್ರತಿಷ್ಠಾಪಿಸಿದ್ದ ಗಣಪತಿಯನ್ನು ಬುಧವಾರ ವಿಸರ್ಜಿಸಲಾಯಿತು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮೆರವಣಿಗೆಯುದ್ದಕ್ಕೂ ವಿವಿಧ ಸಂಘ ಸಂಸ್ಥೆಗಳು ಗಣಪತಿಗೆ ಮಾಲಾರ್ಪಣೆ ಮಾಡಿದವು. ಯುವಕರು ಮತ್ತು ಯುವತಿಯರು ನೃತ್ಯ ಮಾಡಿದರು. ಪಟಾಕಿಗಳನ್ನು ಸಿಡಿಸಿ ಯುವಜನರು ಸಂಭ್ರಮಿಸಿದರು. ಶ್ರೀರಾಮ ದೇವರ ಧ್ವಜ, ಓಂ ಹಾಗೂ ಬಜರಂಗ ದಳದ ಧ್ವಜಗಳು ಮೆರವಣಿಗೆಯಲ್ಲಿ ರಾರಾಜಿಸಿದವು.
ಮೆರವಣಿಗೆ ಸಾಗಿಬಂದ ದಾರಿಯಲ್ಲಿ ಮುಸ್ಲಿಮರು ಪಾನಕ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಏರ್ಪಡಿಸುವ ಮೂಲಕ ಸೌಹಾರ್ದ ಮೆರೆದರು. ಶಾಸಕ ಗೋಪಾಲಕೃಷ್ಣ ಬೇಳೂರು, ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರು ವಿಶೇಷ ಪೂಜೆ ಸಲ್ಲಿಸಿದರು.
ನಗರಸಭೆ ಸದಸ್ಯರು, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್, ಉಪವಿಭಾಗಾಧಿಕಾರಿ ಯತೀಶ್, ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ, ಪೌರಾಯುಕ್ತ ಎಚ್.ಕೆ.ನಾಗಪ್ಪ ಪಾಲ್ಗೊಂಡಿದ್ದರು.
ಗಣಪತಿ ಸಂಘದ ಗೌರವಾಧ್ಯಕ್ಷ ಕೆ.ಸತೀಶ್, ಅಧ್ಯಕ್ಷ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ರಮೇಶ್, ಉತ್ಸವ ಸಮಿತಿಯ ಐ.ವಿ.ಹೆಗಡೆ, ಕೋಮಲ್ ರಾಘವೇಂದ್ರ, ಕೆ.ಎಚ್.ಸುಧೀಂದ್ರ, ಸುದರ್ಶನ್, ಕೆ.ವಿ.ಪ್ರವೀಣ್, ಮಶ್ಚೇಂದ್ರನಾಥ ಜೋಗಿ, ವಿರೂಪಾಕ್ಷ ಗೌಡ, ಸಂಘ ಪರಿವಾರದ ಪ್ರಮುಖರು ಪಾಲ್ಗೊಂಡಿದ್ದರು.