ಅರಿವಿನ ಕೊರತೆಯಿಂದ ರಕ್ತದಾನಕ್ಕೆ ಹಿಂದೇಟು

ಹಾಸನ: ಆರೋಗ್ಯವಂತ ಯುವಕರು ರಕ್ತದಾನ ಮಾಡುವ ಮೂಲಕ ಮತ್ತೊಂದು ಜೀವರಕ್ಷಣೆಗೆ ನೆರವಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ಸತೀಶ್‌ಕುಮಾರ್ ಸಲಹೆ ನೀಡಿದರು.
ನಗರದ ಹೇಮಾವತಿ ಪ್ರತಿಮೆ ಬಳಿ ಜಿಲ್ಲಾ ಸ್ವಯಂ ಪ್ರೇರಿತ ರಕ್ತದಾನಿಗಳ ಬಳಗ, ಕಾರು ಹಾಗೂ ಆಟೋ ಮಾಲೀಕರ ಸಂಘ ಹಾಗೂ ರಕ್ತ ನಿಧಿಯಿಂದ ಶುಕ್ರವಾರ ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ಏರ್ಪಡಿಸಿದ್ದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಅಪಘಾತ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಿರುತ್ತದೆ. ರಕ್ತದಾನ ಮಾಡಿದರೆ ಯಾವುದೇ ಅಪಾಯ ಎದುರಾಗುವುದಿಲ್ಲ. ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕು. ಆದರೆ ಅರಿವಿನ ಕೊರತೆ ಹಾಗೂ ಭಯದಿಂದ ಜನರು ರಕ್ತದಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಕೃಷ್ಣಮೂರ್ತಿ ಮಾತನಾಡಿ, ಒಂದು ಬಾಟಲ್ ರಕ್ತ ನಾಲ್ಕು ಜನರ ಜೀವ ಉಳಿಸುತ್ತದೆ. 18 ರಿಂದ 65 ವರ್ಷದವರೆಗಿನ ಆರೋಗ್ಯವಂತ ವ್ಯಕ್ತಿ ಯಾವಾಗ ಬೇಕಾದರೂ ರಕ್ತದಾನ ಮಾಡಬಹುದು ಎಂದರು.
ಸ್ವಯಂ ಪ್ರೇರಿತ ರಕ್ತದಾನಿಗಳ ಬಳಗದ ಉಪಾಧ್ಯಕ್ಷ ಬಿ.ಎಂ.ರವಿಕುಮಾರ್ ಮಾತನಾಡಿ, ಇದೇ ಪ್ರಥಮ ಬಾರಿಗೆ ಹಾಸನದಲ್ಲಿ ರಕ್ತ ದಾನ ಶಿಬಿರ ಹಮ್ಮಿಕೊಂಡಿದ್ದು ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಹೇಳಿದರು.

ನೂರಾರು ಜನರು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು. ರಕ್ತದಾನ ಮಾಡಿದ ಪ್ರತಿಯೊಬ್ಬರಿಗೆ ಪ್ರಮಾಣಪತ್ರ ಹಾಗೂ ಪುಸ್ತಕವನ್ನು ಉಡುಗೊರೆಯಾಗಿ ನೀಡಲಾಯಿತು. ಜಿಲ್ಲಾ ಏಡ್ಸ್ ಮತ್ತು ಕ್ಷಯ ನಿಯಂತ್ರಣಾಧಿಕಾರಿ ಡಾ.ನಾಗೇಶ್ ಆರಾಧ್ಯ, ಡಾ. ಭಾರತಿ ರಾಜ ಶೇಖರ್, ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್, ದಂತ ವೈದ್ಯ ವೈಭವ್, ಹಾಸನ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ವೈ.ಎನ್.ಅಬ್ಬಾಸ್, ನಗರ ಕಾರು ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ರಮೇಶ್, ಸ್ವಯಂ ಪ್ರೇರಿತ ರಕ್ತ ದಾನಿಗಳ ಬಳಗದ ಅಧ್ಯಕ್ಷ ಎಂ. ಹರೀಶ್, ಕಾರ್ಯದರ್ಶಿ ನಟರಾಜ್ ಪಟೇಲ್ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *