ಕಾಂಗ್ರೆಸ್​ನಿಂದ ಖಡಕ್​ ಎಚ್ಚರಿಕೆ: ಅತೃಪ್ತರ ಸಭೆ ದಿಢೀರ್​ ರದ್ದು

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಗಿರಿ ಸಿಗದೆ ಅತೃಪ್ತಗೊಂಡಿದ್ದ ಶಾಸಕರ ಗುಂಪು ನಾಳೆ ನಡೆಸಲು ಉದ್ದೇಶಿಸಿದ್ದ ಸಭೆ ಕಾಂಗ್ರೆಸ್​ ನಾಯಕರ ಎಚ್ಚರಿಕೆಯ ಹಿನ್ನೆಲೆಯಲ್ಲಿ ದಿಢೀರ್​ ರದ್ದಾಗಿದೆ.

ಎಂ.ಬಿ ಪಾಟೀಲ್​ ನೇತೃತ್ವದಲ್ಲಿ ಒಟ್ಟುಗೂಡಿದ್ದ ಸತೀಶ್​ ಜಾರಕಿಹೊಳಿ, ಎಚ್​.ಕೆ ಪಾಟೀಲ್​, ಲಕ್ಷ್ಮೀ ಹೆಬ್ಬಾಳ್ಕರ್​ ಮುಂತಾದವರು ನಾಳೆ ಸಭೆ ನಡೆಸಿ ಮುಂದಿನ ನಡೆ ನಿರ್ಧರಿಸುವವರಿದ್ದರು. ಆದರೆ, ಕಾಂಗ್ರೆಸ್​ ಹೈಕಮಾಂಡ್​ನ ಎಚ್ಚರಿಕೆ ಹಿನ್ನೆಲೆಯಲ್ಲಿ ಅತೃಪ್ತರು ಸಭೆ ನಡೆಸುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಇದಕ್ಕೂ ಮೊದಲು ಭಿನ್ನಮತೀಯ ನಾಯಕರೊಂದಿಗೆ ಸಭೆ ನಡೆಸಿದ್ದ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ವೇಣುಗೋಪಾಲ್​, ಇನ್ನು ಮುಂದೆ ಯಾವುದೇ ಸಭೆ ನಡೆಸದಂತೆ ಎಂ.ಬಿ ಪಾಟೀಲ್​ ಮುಂತಾದವರಿಗೆ ಎಚ್ಚರಿಕೆ ನೀಡಿದ್ದು, ಅಸಮಾಧಾನಿತರನ್ನು ಸಮಾಧಾನಪಡಿಸುವ ಶಕ್ತಿ ಕಾಂಗ್ರೆಸ್​ಗೆ ಇದೆ ಎಂದು ಹೇಳಿದ್ದರು.

ಇದಾದ ನಂತರ ಮಾತನಾಡಿದ ಎಂ.ಬಿ ಪಾಟೀಲ್​, ವೇಣುಗೋಪಾಲ್​ ಜತೆ ನಡೆದ ಚರ್ಚೆಯ ಬಗ್ಗೆ ಏನನ್ನೂ ಹೇಳದೆ, ಏಕಾಏಕಿ, ನಾಳಿನ ಸಭೆ ರದ್ದು ಎಂದು ಹೇಳಿ ಕಾರಿನಲ್ಲಿ ತೆರಳಿದರು.

Leave a Reply

Your email address will not be published. Required fields are marked *