ಚಡಚಣ: ಎಂಟು ವರ್ಷಗಳ ಹಿಂದೆ 480 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭವಾದ ಚಡಚಣ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ಮೋಹನ್ ರಾಜ್ ಬುಧವಾರ ಪರಿಶೀಲಿಸಿದರು. ಕಾಮಗಾರಿ ಅವ್ಯವಸ್ಥೆಗೆ, ಅಧಿಕಾರಿಗಳ ಕಾರ್ಯ ವೈಕರಿಗೆ ಅಸಮಾಧಾನ ವ್ಯಕ್ತಪಡಿಸಿದರು.
ಅನೇಕ ಕಡೆಗಳಲ್ಲಿ ಎಂಡಿ ಮೋಹನ್ ರಾಜ್ ಅವರನ್ನು ರೈತರು ಸುತ್ತುವರಿದು ಕಾಮಗಾರಿ ಪೂರ್ಣಗೊಳಿಸದೆ ಅಧಿಕಾರಿಗಳು ಹಣ ಲಪಟಾಯಿಸಿದ್ದಾರೆ ಎಂದು ಆರೋಪಿಸಿದರು. ಎಂಡಿ ಭೇಟಿ ನೀಡಿದ ಬಹುತೇಕ ಕಡೆಗಳಲ್ಲಿ ಕಾಮಗಾರಿ ಮುಗಿಯದಿರುವುದು ಗಮನಕ್ಕೆ ಬಂದಿತು. ಅಧಿಕಾರಿಗಳಿಗೆ ಯೋಜನೆ ಕುರಿತು ಮಾಹಿತಿ ಕೇಳಿದಾಗ ಬಹುತೇಕರು ಉತ್ತರಿಸಲು ತಡಬಡಾಯಿಸಿದರು. ಗುತ್ತಿಗೆದಾರರ ಮೇಲೆ ಹೊರೆಸುವ ಪ್ರಯತ್ನ ಮಾಡಿದರು.
ಚಡಚಣ ಏತ ನೀರಾವರಿ ವ್ಯಾಪಿಯಲ್ಲಿ 600 ಔಟ್‌ಲೆಟ್‌ಗಳಿದ್ದು, ಇದರಲ್ಲಿ 150 ಔಟ್‌ಲೆಟ್‌ಗಳಲ್ಲಿ ಪ್ರಾಯೋಗಿಕವಾಗಿ ಮಾತ್ರ ನೀರು ಹರಿದಿರುವುದನ್ನು ಒಪ್ಪಿಕೊಂಡರು. ನಾಗಠಾಣ ಶಾಸಕ ವಿಠ್ಠಲ ಕಟಕಧೊಂಡ ಮತ್ತು ಕೆಬಿಜೆಎನ್‌ಎಲ್ ಎಲ್ಲ ಹಂತದ ಅಧಿಕಾರಿಗಳು ಹಾಜರಿದ್ದರು.
ಕೆಬಿಜೆಎನ್‌ಎಲ್ ಮುಖ್ಯ ಇಂಜಿನಿಯರ್ ಎಚ್.ರವಿಶಂಕರ, ಸೂಪರಿಟೆಂಡೆಂಟ್ ಇಂಜಿನಿಯರ್ ಮನೋಜಕುಮಾರ ಗಡಬಳ್ಳಿ, ಆಲಮೇಲ, ಝಳಕಿ ಮತ್ತು ರಾಂಪೂರದ ಇಇ, ಎಇಇಗಳು ಹಾಜರಿದ್ದರು.
ಕೂಲಂಕಷ ಪರಿಶೀಲನೆ: ಚಡಚಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋಹನ್ ರಾಜ್, ಇಂಡಿ, ಚಡಚಣ ತಾಲೂಕುಗಳ ಕೆರೆ ತುಂಬುವ ಯೋಜನೆ ಮತ್ತು ಚಡಚಣ ಏತ ನೀರಾವರಿ ಯೋಜನೆ ಕುರಿತು ಅವಲೋಕನ ನಡೆಸಿದ್ದೇನೆ. ಚಡಚಣ ಏತ ನೀರಾವರಿಯ ವಿಷಯದಲ್ಲಿ ಲೋಪಗಳು ನಡೆದಿರುವುದು ನನ್ನ ಗಮನಕ್ಕೆ ಬಂದಿದೆ. ಈ ದಿಸೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಕೂಲಂಕಷವಾಗಿ ಪರಿಶೀಲಿಸುತ್ತೇನೆ. 6 ತಿಂಗಳಲ್ಲಿ ಈ ಯೋಜನೆ ವ್ಯವಸ್ಥಿತ ರೀತಿಯಲ್ಲಿ ಕಾರ್ಯರೂಪಗೊಳ್ಳುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನಾಗಠಾಣ ಶಾಸಕರು ಈ ಯೋಜನೆ ಕುರಿತು ಮಾಹಿತಿ ನೀಡಿದ್ದಾರೆ. ಈ ಯೋಜನೆಗೆ ಸ್ಕಾಡ್ ಅಳವಡಿಸಬೇಕು ಎಂದು ವಿನಂತಿ ಮಾಡಿದ್ದಾರೆ. ಈ ದಿಸೆಯಲ್ಲಿ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಹೇಳಿದರು. ಯೋಜನೆ ಸಮಗ್ರ ಮಾಹಿತಿ ಪಡೆದ ನಂತರ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಚಡಚಣ ಏತ ನೀರಾವರಿ ಯೋಜನೆ ಈ ಭಾಗದ ರೈತರ ಕನಸು. ಅಧಿಕಾರಿಗಳು ಯೋಜನೆಯನ್ನು ಸಂಪೂರ್ಣವಾಗಿ ಹಳ್ಳ ಹಿಡಿಸಿದ್ದಾರೆ. ಆದ್ದರಿಂದಲೆ ಕೆಬಿಜೆಎನ್‌ಎಲ್ ಎಂಡಿ ಅವರನ್ನು ಪ್ರತ್ಯಕ್ಷ ಸಮೀಕ್ಷೆಗೆ ಇಲ್ಲಿ ಕರೆದುಕೊಂಡು ಬಂದಿದ್ದೇನೆ. ರೈತರ ಹೊಲಗಳಿಗೆ ನೀರು ಹರಿಸಿಯೇ ತೀರುವೆ.
| ವಿಠಲ ಕಟಕಧೊಂಡ, ಶಾಸಕ, ನಾಗಠಾಣ