ಕಾಂಗ್ರೆಸ್ ಮುನಿಸು ಸ್ಫೋಟ

ಬೆಂಗಳೂರು: ದೋಸ್ತಿ ಪಕ್ಷ ಜೆಡಿಎಸ್​ಗೆ ಎಂಟು ಸ್ಥಾನ ಬಿಟ್ಟುಕೊಟ್ಟಿರುವ ಪಕ್ಷದ ನಿರ್ಧಾರಕ್ಕೆ ಕಾಂಗ್ರೆಸ್​ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಂಡ್ಯ ಹಾಗೂ ಹಾಸನದಲ್ಲಿ ಮೊದಲಿನಿಂದಲೂ ಮೈತ್ರಿಗೆ ವಿರೋಧ ಇದ್ದೇ ಇತ್ತು. ಆದರೆ ತುಮಕೂರು ಹಾಗೂ ಉತ್ತರ ಕನ್ನಡ ಕೊಟ್ಟಿರುವುದಕ್ಕೆ ಪಕ್ಷದೊಳಗೆ ವ್ಯಾಪಕ ಆಕ್ಷೇಪ ಕೇಳಿಬರುತ್ತಿದೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಇದ್ದರೂ ತುಮಕೂರನ್ನು ಬಿಟ್ಟುಕೊಟ್ಟಿದ್ದು ಏಕೆ ಎಂಬ ಪ್ರಶ್ನೆ ಎದ್ದಿದೆ. ಮಾಜಿ ಶಾಸಕರಾದ ಕೆ.ಎನ್. ರಾಜಣ್ಣ ಅವರಂತೂ ಒಂದು ಹೆಜ್ಜೆ ಮುಂದಿಟ್ಟು ಸ್ವತಂತ್ರವಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವ ಟಿ.ಬಿ. ಜಯಚಂದ್ರ, ಮಾಜಿ ಶಾಸಕ ರಫೀಕ್ ಅಹಮದ್, ಸಂಸದ ಮುದ್ದ ಹನುಮೇಗೌಡ ಪಕ್ಷದ ನಿರ್ಧಾರವನ್ನು ಟೀಕಿಸಿದ್ದಾರೆ.

ಉತ್ತರದಲ್ಲೂ ಆಕ್ರೋಶ: ಉತ್ತರ ಕನ್ನಡದಲ್ಲಿ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು, ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯ ಶ್ರೀಕಾಂತ್ ಘೋಟ್ನೇಕರ್ ಅವರಿಗೆ ಟಿಕೆಟ್ ನೀಡಬೇಕಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು-ಉಡುಪಿ, ಶಿವಮೊಗ್ಗ ಕ್ಷೇತ್ರದ ಕಾರ್ಯಕರ್ತರು ಪಕ್ಷ ಕಟ್ಟುವುದು ಹೇಗೆ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.

ಹಾಸನದಲ್ಲಿ ಎ. ಮಂಜು ಬಿಜೆಪಿಗೆ ಹೊರಟು ನಿಂತಿದ್ದಾರೆ. ಅವರೊಂದಿಗೆ ಇನ್ನೂ ಯಾರ್ಯಾರು ಹೋಗುವರೋ ಎಂಬ ಭಯ ಮುಖಂಡರನ್ನು ಆವರಿಸಿದೆ. ಜೆಡಿಎಸ್​ಗೆ ಮತ ಹಾಕಿಸದಿದ್ದರೆ ಕಾಂಗ್ರೆಸ್ ಅಭ್ಯರ್ಥಿಗಳಿರುವ ಕಡೆ ಅವರು ಕೈಕೊಟ್ಟರೆ ಏನು ಮಾಡುವುದು ಎಂಬ ಅಳುಕು ಕಾಂಗ್ರೆಸಿಗರಲ್ಲಿದೆ.