ಕೈ-ದಳ ತಳಮಳ!

ಲೋಕಕದನದ ಮೊದಲೇ ಆಂತರಿಕ ಕಲಹದ ಅಗ್ನಿಪರೀಕ್ಷೆ | ಸೀಟು ಹಂಚಿಕೆಯ ಬಳಿಕ ತಪ್ಪಿದ ದೋಸ್ತಿಗಳ ತಾಳಮೇಳ

ಬೆಂಗಳೂರು: ಬಿಜೆಪಿಯನ್ನು ಕಟ್ಟಿಹಾಕಬೇಕೆಂಬ ಏಕೈಕ ಉದ್ದೇಶದೊಂದಿಗೆ ಸ್ಥಳೀಯ ಮಟ್ಟದ ನಾಯಕರು, ಕಾರ್ಯಕರ್ತರ ಅಭಿಪ್ರಾಯವನ್ನೂ ಆಲಿಸದೆ ಪರಸ್ಪರ ಕೂಡಾವಳಿ ಮಾಡಿಕೊಂಡು ಲೋಕಸಭಾ ಮತಸಮರಕ್ಕೆ ತೊಡೆತಟ್ಟಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಆಂತರಿಕ ಕಲಹದ ಅಗ್ನಿಪರೀಕ್ಷೆ ಎದುರಾಗಿದೆ.

ಲೋಕಸಭೆ ಚುನಾವಣೆಗಾಗಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡು ಬಿಜೆಪಿ ಎದುರಿಸಲು ಸಜ್ಜಾಗಿದ್ದರೂ ಎರಡೂ ಪಕ್ಷಗಳ ನಡುವೆ ಸ್ಥಳೀಯವಾಗಿ ಕಾಡುತ್ತಿರುವ ಸಮನ್ವಯದ ಸಮಸ್ಯೆ, ಟಿಕೆಟ್ ಹಂಚಿಕೆ ಬಳಿಕ ಉಲ್ಬಣಗೊಂಡಿರುವ ಆಂತರಿಕ ಆಕ್ರೋಶ ಫಲಿತಾಂಶದ ಮೇಲೆ ಪರಿಣಾಮ ಬೀರುವ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಬಲವಂತದ ಹೊಂದಾಣಿಕೆಯ ಸಮಸ್ಯೆ ಚುನಾವಣೆಯ ಹೊಸ್ತಿಲಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ. ಲೋಕಸಭೆ ಚುನಾವಣೆಯ ಸೀಟು ಹಂಚಿಕೆ ಬಳಿಕ ಸ್ಥಳೀಯವಾಗಿ ವಿರೋಧ ವ್ಯಕ್ತವಾಗುತ್ತಿರುವುದು ಕೂಡ ಎರಡೂ ಪಕ್ಷಗಳು ಆರಂಭದಲ್ಲಿ ಎಡವಿದ್ದರ ಪರಿಣಾಮವೇ ಆಗಿದೆ. ಹಳೆಯ ಮೈಸೂರು ಭಾಗದಲ್ಲಿ ಎರಡೂ ಪಕ್ಷದ ಕಾರ್ಯಕರ್ತರು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಆದರೆ ಸ್ವಾಭಿಮಾನ ಒತ್ತೆ ಇಟ್ಟು ಇನ್ನೊಂದು ಪಕ್ಷದ ಪರವಾಗಿ ಮತಯಾಚನೆ ಮಾಡುವರೇ ಎಂಬುದು ಈಗ ಕಾಡುತ್ತಿರುವ ಮಿಲಯನ್ ಡಾಲರ್ ಪ್ರಶ್ನೆ.

ಮೋದಿ ಅಲೆಯನ್ನು ಎದುರಿಸುವುದು ಅಷ್ಟು ಸುಲಭವಲ್ಲ ವೆಂಬುದು ದೋಸ್ತಿ ಪಕ್ಷಗಳ ಮುಖಂಡರ ಅರಿವಿಗೆ ಬರಲಾರಂಭಿಸಿದೆ. ಎರಡೂ ಪಕ್ಷಗಳು ಆರಂಭದಲ್ಲೇ ತೋರಿಸಿದ ನಿರ್ಲಕ್ಷ್ಯ ಇದಕ್ಕೆ ಬಹುಮುಖ್ಯ ಕಾರಣವಾಗಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವೂ ಹೌದು.

ಹಿಡಿತಕ್ಕೆ ಪ್ರಯತ್ನ: ಸಮ್ಮಿಶ್ರ ಸರ್ಕಾರದ ನೇತೃತ್ವವನ್ನು ಜೆಡಿಎಸ್ ವಹಿಸಿದ್ದರೂ ಸರ್ಕಾರದ ಮೇಲೆ ಹಿಡಿತ ಸಾಧಿಸಲು ಎರಡೂ ಪಕ್ಷಗಳು ಪ್ರಯತ್ನ ನಡೆಸುತ್ತಿವೆ. ಪರಸ್ಪರ ಸಮನ್ವಯ ಕಾಣದಿರಲು ಇದೇ ಪ್ರಮುಖ ಕಾರಣ.

ರಚನೆಯಾಗಲಿಲ್ಲ ಸಮಿತಿ

ಲೋಕಸಭಾ ಚುನಾವಣೆಯನ್ನು ಒಟ್ಟಿಗೆ ಎದುರಿಸುವ ಬಗ್ಗೆ ಎರಡೂ ಪಕ್ಷದ ಮುಖಂಡರ ನಡುವೆ ಸರ್ಕಾರ ರಚನೆಯ ಸಂದರ್ಭದಲ್ಲೇ ನಿರ್ಧಾರವಾಗಿತ್ತು. ಆದರೆ ತಂತಮ್ಮ ಕಾರ್ಯಕರ್ತರನ್ನು ಈ ನಿಟ್ಟಿನಲ್ಲಿ ಸಜ್ಜುಗೊಳಿಸುವ ಕೆಲಸಕ್ಕೆ ಮುಂದಾಗಲಿಲ್ಲ.

ರಾಜ್ಯ ಮಟ್ಟದಂತೆ ಸ್ಥಳೀಯವಾಗಿಯೂ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ರಚನೆಯ ಬಗ್ಗೆ ನಡೆದಿದ್ದ ಚರ್ಚೆ ಕಾರ್ಯರೂಪಕ್ಕೆ ಬರಲಿಲ್ಲ. ಅದರ ಪರಿಣಾಮ ತುಮಕೂರು, ಮಂಡ್ಯ, ಹಾಸನ, ಉತ್ತರ ಕನ್ನಡ ಕ್ಷೇತ್ರಗಳಲ್ಲಿ ಗೋಚರಿಸಲಾರಂಭಿಸಿದೆ. ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ಮಾಡಿ ಕಾರ್ಯಕರ್ತರನ್ನು ಇಂತಹದೊಂದು ಮೈತ್ರಿಗೆ ಮಾನಸಿಕವಾಗಿ ಸಜ್ಜುಗೊಳಿಸಬೇಕಾಗಿತ್ತು ಎಂಬುದನ್ನು ಎರಡೂ ಪಕ್ಷದ ಮುಖಂಡರು ಒಪ್ಪಿಕೊಳ್ಳುತ್ತಾರೆ.

ಭಿನ್ನರ ವಿರುದ್ಧ ಕ್ರಮವಿಲ್ಲ

ಸಮ್ಮಿಶ್ರ ಸರ್ಕಾರದ ಬಗ್ಗೆ ಮೈತ್ರಿ ಪಕ್ಷಗಳ ಮುಖಂಡರು ಅಲ್ಲಲ್ಲಿ ದನಿ ಎತ್ತುತ್ತಲೇ ಇದ್ದಾರೆ. ಅದರಲ್ಲೂ ಕಾಂಗ್ರೆಸ್​ನ ಹಾಲಿ ಹಾಗೂ ಮಾಜಿ ಶಾಸಕರು ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಸ್ವತಃ ಸಿದ್ದರಾಮಯ್ಯ ಧರ್ಮಸ್ಥಳದಲ್ಲಿ ಸರ್ಕಾರದ ಆಯುಷ್ಯದ ಬಗ್ಗೆ ಮಾತನಾಡಿದ್ದರು. ಆದರೆ ಟೀಕೆ ಮಾಡುವ ಮುಖಂಡರ ವಿರುದ್ಧ ಕ್ರಮ ಅಥವಾ ಸಮಾಧಾನ ಮಾಡುವ ಪ್ರಯತ್ನ ಎರಡೂ ಕಡೆಯಿಂದ ನಡೆದಿದ್ದರೆ ಈಗ ಕೇಳಿ ಬರುತ್ತಿರುವ ಅಪಸ್ವರ ಇರುತ್ತಿರಲಿಲ್ಲ. ಸಮನ್ವಯ ಸಮಿತಿಯಲ್ಲಿ ಅಂತಹ ಕೆಲಸ ನಡೆದಿಲ್ಲ. ಆದ್ದರಿಂದ ವರಿಷ್ಠರ ಮಟ್ಟದಲ್ಲಿ ಹೊಂದಾಣಿಕೆಯಾಗಿದ್ದರೂ, ಸ್ಥಳೀಯವಾಗಿ ಮತಗಳ ವರ್ಗಾವಣೆ ದೊಡ್ಡ ಸವಾಲಿನ ಕೆಲಸವಾಗಿದೆ.

ಮತಗಳಿಕೆ ಲೆಕ್ಕಾಚಾರ

ಬಿಜೆಪಿ ವಿರುದ್ಧ ಎರಡೂ ಪಕ್ಷಗಳು ಒಂದಾಗಿ ಕಳೆದ ಬಾರಿ ಗೆದ್ದಿದ್ದಕ್ಕಿಂತ ನಾಲ್ಕರಿಂದ ಐದು ಕ್ಷೇತ್ರ ಹೆಚ್ಚು ಗೆಲ್ಲಬಹುದೆಂದು ಲೆಕ್ಕ ಹಾಕಿವೆ. ಅದಕ್ಕೆ ನೀಡುವ ಕಾರಣ ಕಳೆದ ಎರಡು ಚುನಾವಣೆಯ ಮತಗಳಿಕೆ ಪ್ರಮಾಣ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ. 43.4, ಕಾಂಗ್ರೆಸ್ ಶೇ. 41.2 ಹಾಗೂ ಜೆಡಿಎಸ್ 11.1 ಮತಗಳಿಸಿದ್ದವು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇ. 36.24, ಕಾಂಗ್ರೆಸ್ ಶೇ. 28.14 ಹಾಗೂ ಜೆಡಿಎಸ್ ಶೇ. 18.3 ಮತ ಪಡೆದಿದ್ದವು. ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದರೆ ಹೆಚ್ಚಿನ ಸ್ಥಾನ ಗೆಲ್ಲಬಹುದೆಂಬುದು ಲೆಕ್ಕಾಚಾರ. ಮತದಾರರಿಗೆ ಮೈತ್ರಿಯ ಅನಿವಾರ್ಯತೆ ಮನವರಿಕೆ ಮಾಡಿಕೊಡುವುದಕ್ಕಿಂತ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯುವುದು ಸವಾಲಿನ ಕೆಲಸವಾಗಿದೆ. ಆದರೆ ಅದಕ್ಕೆ ತಕ್ಕ ತಯಾರಿ ಮಾಡದೇ ಈಗ ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ರೀತಿಯಲ್ಲಿ ಎರಡೂ ಪಕ್ಷಗಳು ಪ್ರಯತ್ನಕ್ಕೆ ಮುಂದಾಗಿವೆ. ಆದರೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿವೆ ಎಂಬುದು ಪ್ರಶ್ನೆ.

ಮೂಡಲಿಲ್ಲ ಒಮ್ಮತ

ಸರ್ಕಾರ ಮುನ್ನಡೆಸಲು ರಾಜ್ಯ ಮಟ್ಟದಲ್ಲಿ ಸಮನ್ವಯ ಸಮಿತಿ ರಚನೆಯಾಗಿದ್ದರೂ ಎರಡೂ ಪಕ್ಷದಲ್ಲಿ ಒಮ್ಮತ ಮೂಡಲೇ ಇಲ್ಲ. ರಾಜ್ಯ ಮಟ್ಟದಲ್ಲಿ ಕಾಣಿಸಿಕೊಂಡ ಈ ಸಮಸ್ಯೆ ಜಿಲ್ಲಾ ಮಟ್ಟಕ್ಕೂ ವಿಸ್ತರಿಸಿದೆ. ಅದರ ಪರಿಣಾಮವೀಗ ಲೋಕಸಭಾ ಚುನಾವಣೆಯ ಮೇಲೂ ಕಾಣಿಸಲಾರಂಭಿಸಿದೆ.

ಖುಷಿಯಲ್ಲಿದೆ ಬಿಜೆಪಿ

ಬಿಜೆಪಿ ರಾಜ್ಯಾಧ್ಯಕ್ಷ ್ಷ ಬಿ.ಎಸ್. ಯಡಿಯೂರಪ್ಪ ರಾಜ್ಯದಲ್ಲಿ 22 ಸ್ಥಾನ ಗೆಲ್ಲುವುದಾಗಿ ಹೇಳುತ್ತಿದ್ದಾರೆ. ರಾಜಕೀಯದ ಉದ್ದಗಲ ಚೆನ್ನಾಗಿ ಬಲ್ಲ ಅವರಿಗೆ, ದೋಸ್ತಿಗಳಲ್ಲಿ ಹೊಂದಾಣಿಕೆ, ಸಮನ್ವಯ ಇಲ್ಲದಿರುವುದರಿಂದ ಅದರ ಲಾಭವಾಗುತ್ತದೆ ಎಂಬ ಖುಷಿಯಿಂದಲೇ ಹೀಗೆ ಮಾತನಾಡುತ್ತಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.