ವಿಪತ್ತು ನಿರ್ವಹಣೆಗೆ ಯುವ ಪಡೆ

ಅವಿನ್ ಶೆಟ್ಟಿ ಉಡುಪಿ
ಪ್ರಾಕೃತಿಕ ವಿಕೋಪಗಳನ್ನು ಎದುರಿಸಿ ಜನ, ಜಾನುವಾರುಗಳನ್ನು ರಕ್ಷಿಸಲು ಯುವಕರಿಗೆ ವಿಪತ್ತು ನಿರ್ವಹಣೆ ತರಬೇತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಪ್ರಾಯೋಗಿಕ ಯೋಜನೆಯಾಗಿ 28 ರಾಜ್ಯಗಳ 32 ಜಿಲ್ಲೆಗಳ ಯುವಜನರಿಗೆ ತರಬೇತಿ ನೀಡಲಾಗುತ್ತದೆ. ಈ ಪೈಕಿ ರಾಜ್ಯದಿಂದ ಉಡುಪಿ ಜಿಲ್ಲೆ ಮಾತ್ರ ಆಯ್ಕೆಯಾಗಿದೆ. ವಿಪತ್ತು ನಿರ್ವಹಣಾ ತಂಡಕ್ಕೆ ಈ ವರ್ಷ ಜಿಲ್ಲೆಯ ಕಾಪು, ಬೈಂದೂರು, ಉಡುಪಿ, ಬ್ರಹ್ಮಾವರ, ಕುಂದಾಪುರ, ಹೆಬ್ರಿ ಸಹಿತ ಎಲ್ಲ ಏಳು ತಾಲೂಕುಗಳಿಂದ ತಲಾ 30 ಯುವಕರಿಗೆ ತರಬೇತಿ ನೀಡಲಾಗುವುದು ಎಂದು ನೆಹರು ಯುವ ಕೇಂದ್ರ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿಸೋಜ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಹಯೋಗದಲ್ಲಿ ಯುವಜನರಿಗೆ ವಿಪತ್ತು ನಿರ್ವಹಣೆ ತರಬೇತಿ ಆಯೋಜಿಸಿದ್ದು, ಜಿಲ್ಲೆಯ ಪ್ರತಿ ತಾಲೂಕು ಮಟ್ಟದಲ್ಲಿ ಸ್ವಯಂಸೇವಕರ ವಿಪತ್ತು ನಿರ್ವಹಣಾ ತಂಡ ಅಸ್ತಿತ್ವಕ್ಕೆ ಬರಲಿದೆ.

ಎನ್‌ಡಿಆರ್‌ಎಫ್‌ನಲ್ಲಿ ತರಬೇತಿ: ಆಂಧ್ರಪ್ರದೇಶ ವಿಜಯವಾಡದ 10ನೇ ಬೇಟಾಲಿಯನ್ ಎನ್‌ಡಿಆರ್‌ಎಫ್ ತರಬೇತಿ ಕೇಂದ್ರದಲ್ಲಿ ಸೆಪ್ಟಂಬರ್ ಮೊದಲ ವಾರದಿಂದ ತರಬೇತಿ ನಡೆಯಲಿದೆ. ಈ ತರಬೇತಿಗೆ ಆಯ್ಕೆಯಾಗುವ ಪ್ರತಿ ತಂಡಕ್ಕೆ 6 ದಿನಗಳ ತರಬೇತಿ ಇರುತ್ತದೆ. ಅಭ್ಯರ್ಥಿಗಳಿಗೆ ಪ್ರಯಾಣ ಭ ತ್ಯೆ, ಊಟ ಹಾಗೂ ವಸತಿ ವೆಚ್ಚವನ್ನು ಸಂಪೂರ್ಣವಾಗಿ ನೆಹರು ಯುವ ಕೇಂದ್ರವೇ ಭರಿಸಲಿದೆ.

ಆಸಕ್ತರಿಗೆ ಅವಕಾಶ: ಸ್ವಯಂಸೇವಾ ಮನೋಭಾವವುಳ್ಳ ಯುವಜನರು ನಿರ್ವಹಣಾ ತಂಡ ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ಮಣಿಪಾಲ ಡಿಸಿ ಕಚೇರಿಯಲ್ಲಿರುವ ನೆಹರು ಯುವ ಕೇಂದ್ರ ಆಯ್ಕೆ ಪ್ರಕ್ರಿಯೆ ನಡೆಸಲಿದೆ. 22ರಿಂದ 29 ವರ್ಷ ವಯಸ್ಸಿನವರಾಗಿದ್ದು, ಕನಿಷ್ಠ 10ನೇ ತರಗತಿ ತೇರ್ಗಡೆ ಆಗಿರಬೇಕು. ದೈಹಿಕ, ಮಾನಸಿಕರಾಗಿ ಸಮರ್ಥರಿರಬೇಕು. ತಮ್ಮ ಗ್ರಾಮ ಅರಿವಿರಬೇಕು. ವಿಪತ್ತು ಸಂದರ್ಭ ಶೀಘ್ರ ಸ್ಪಂದಿಸಬೇಕು. ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಸೇವಾ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡರಬೇಕು.ತುರ್ತು ಸಂದರ್ಭದ ಕರೆಗೆ ಪ್ರತಿಕ್ರಿಯಿಸುವವರು ತರಬೇತಿಯಲ್ಲಿ ಭಾಗವಹಿಸಬಹುದು. ಅರ್ಜಿ ಸಲ್ಲಿಸಲು ಆಗಸ್ಟ್ 22 ಕೊನೆಯ ದಿನ. ಮಾಹಿತಿಗಾಗಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್ಪ್ರೇಡ್ ಡಿಸೋಜ (0820-2574992, 9958325151) ಅವರನ್ನು ಸಂಪರ್ಕಿಸಬಹುದು.

ಸಮಾಜಮುಖಿ ಚಿಂತನೆಯುಳ್ಳ, ಸೇವಾ ಮನೋಭಾವ ಯುವಜನರು ತರಬೇತಿ ಪಡೆದುಕೊಂಡು ತಮ್ಮ ಗ್ರಾಮಗಳಲ್ಲಿ ಸಂಭವಿ ಸುವ ವಿಪತ್ತುಗಳನ್ನು ನಿರ್ವಹಿಸಬಹುದು. ಯುವಜನರು ಗೊಂದಲಕ್ಕೆ ಒಳಗಾಗಬಾರದು. ಇದು ಕಾಯಂ ಹುದ್ದೆ ಅಲ್ಲ. ಆಸಕ್ತರು ಆ.22ರ ಒಳಗೆ ಅರ್ಜಿ ಸಲ್ಲಿಸಬೇಕು.
ವಿಲ್ಫ್ರೆಡ್ ಡಿಸೋಜ ಜಿಲ್ಲಾ ಯುವ ಸಮನ್ವಯಾಧಿಕಾರಿ, ನೆಹರು ಯುವ ಕೇಂದ್ರ

Leave a Reply

Your email address will not be published. Required fields are marked *