<68 ಪಂಪ್ಸೆಟ್ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಜಿಲ್ಲಾಡಳಿತ ಆದೇಶ>
ಅವಿನ್ ಶೆಟ್ಟಿ ಉಡುಪಿ
ಹಿರಿಯಡಕ, ಪೆರ್ಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವರ್ಣಾ ನದಿ ಎಡದಂಡೆ, ಬಲದಂಡೆಗಳ ರೈತರ 68 ಕೃಷಿ ಪಂಪ್ಸೆಟ್ಗಳ ವಿದ್ಯುತ್ ಸಂಪರ್ಕವನ್ನು ಅವಧಿಗೆ ಮುನ್ನವೇ ಕಡಿತಗೊಳಿಸಲು ಜಿಲ್ಲಾಡಳಿತ ನೋಟಿಸ್ ನೀಡಿದೆ. ಉಡುಪಿ ನಗರಸಭೆ ಮನವಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಕ್ರಮ ಕೈಗೊಳ್ಳುತ್ತಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಂಪ್ಸೆಟ್ ವಿದ್ಯುತ್ ಕಡಿತ ಪರಿಣಾಮ ಈ ಭಾಗದ 560 ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಭಾಗದಲ್ಲಿ ಪ್ರಮುಖ ಬೆಳೆಗಳಾದ ತೆಂಗು, ಅಡಕೆ, ಬಾಳೆ, ಕಾಳು ಮೆಣಸು ಹೆಚ್ಚು ಬೆಳೆಯಲಾಗುತ್ತದೆ. ಈಗಾಗಲೇ ನೀರಿನ ಅಗತ್ಯ ಹೆಚ್ಚಿರುವುದರಿಂದ ಅಧಿಕ ನೀರಿಲ್ಲದೆ ಬೆಳೆಗಳು ಸೊರಗಲಾರಂಭಿಸಿವೆ. ಹಿರಿಯಡಕ, ಪೆರ್ಡೂರು ಗ್ರಾಪಂ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆ ಪ್ರಮುಖ ಆದಾಯದ ಮೂಲ. ಕೃಷಿಯನ್ನೇ ನಂಬಿದ ಕುಟುಂಬ ಮತ್ತು ಕಾರ್ಮಿಕ ವರ್ಗ ಇಲ್ಲಿದೆ. ಬೆಳೆ ನಾಶವಾದರೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಅವಧಿಗೆ ಮುನ್ನ: ಇತ್ತೀಚೆಗೆ ಪ್ರತಿವರ್ಷ ಅವಧಿಗೆ ಮುನ್ನವೇ ಪಂಪ್ಸೆಟ್ ಕಡಿತಗೊಳಿಸುವುದರಿಂದ ರೈತರು ಹೈರಾಣಾಗುತ್ತಿದ್ದಾರೆ. ಉಡುಪಿ ನಗರ ವೇಗವಾಗಿ ಬೆಳೆಯುತ್ತಿರುವ ಪರಿಣಾಮ ನೀರಿನ ಅಗತ್ಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಟ್ಟಡಗಳ ಮೇಲೆ ಕಟ್ಟಡ, ಎಲ್ಲೆಂದರಲ್ಲಿ ವಸತಿ ಸಮುಚ್ಚಯಗಳು ತಲೆ ಎತ್ತುತ್ತಿವೆ. ಇದರಿಂದ ಅಕ್ಕಪಕ್ಕದ ಗ್ರಾಮಗಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ ಎನ್ನುತ್ತಾರೆ ರೈತರು. ಒಂದು ಕಾಲದಲ್ಲಿ ಸ್ವರ್ಣಾ ನದಿ ನೀರಿನಿಂದ ವರ್ಷದ ಎಲ್ಲ ದಿನಗಳಲ್ಲಿ ಸಮೃದ್ಧ ಕೃಷಿ ಮಾಡುತ್ತಿದ್ದೆವು, ಯಾವುದೇ ತೊಂದರೆ ಇರಲಿಲ್ಲ. ನಗರದ ನೀರಿನ ಅಗತ್ಯತೆಗಾಗಿ ನಮಗೆ ಸಮಸ್ಯೆ ಮಾಡುತ್ತಿದ್ದಾರೆ ಎಂಬುದು ರೈತರ ಅಳಲಾಗಿದೆ.
ಪರ್ಯಾಯ ವ್ಯವಸ್ಥೆ: ಹೆಚ್ಚಿನ ರೈತರು ಪರ್ಯಾಯ ವ್ಯವಸ್ಥೆಯಾಗಿ 20ಕ್ಕೂ ಅಧಿಕ ಸ್ವಂತ ಬೋರ್ವೆಲ್ ಕೊರೆಸಿದ್ದಾರೆ. ಆದರೆ ಯಾವ ಬೋರ್ವೆಲ್ನಲ್ಲಿಯೂ ಸಮರ್ಪಕ ನೀರು ಲಭಿಸುತ್ತಿಲ್ಲ. ಬಂಡೆಕಲ್ಲು, ಕೆಂಪುಮಣ್ಣು ಪ್ರದೇಶ ಆಗಿರುವುದರಿಂದ ನೀರಿನ ಒರತೆ ಈ ಭಾಗದಲ್ಲಿ ಕಂಡು ಬರುತ್ತಿಲ್ಲ. ಹೀಗಾಗಿ ಸ್ವರ್ಣಾ ನದಿ ನೀರೇ ನಮಗೆ ಆಧಾರ ಎನ್ನುತ್ತಾರೆ ಕೃಷಿಕರು.
ವಾರಕ್ಕೊಮ್ಮೆ ನೀರು ಕೊಡಿ
ಹಿರಿಯಡಕ ಬಜೆ ಡ್ಯಾಂ ನಿರ್ಮಿಸುವಾಗ ಯಾವುದೇ ಸಮಸ್ಯೆ ಇಲ್ಲದಂತೆ, ಎಲ್ಲ ರೀತಿಯ ನೀರಿನ ಸೌಕರ್ಯ ಒದಗಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಈಗ ನಗರಕ್ಕೆ ಕುಡಿಯುವ ನೀರಿಗಾಗಿ ನಮ್ಮ ಪಂಪ್ಸೆಟ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಬಜೆ ಡ್ಯಾಂನಲ್ಲಿ ಜನವರಿವರೆಗೆ ಭಾರಿ ಪ್ರಮಾಣದಲ್ಲಿ ನೀರು ಸೋರಿಕೆಯಾಗಿದೆ. ಶಿರೂರು ಎರಡನೇ ಹಂತದಲ್ಲೂ ಸೋರಿಕೆಯಾಗುತ್ತಿದೆ. ಇದನ್ನೆಲ್ಲ ಸಮರ್ಪಕವಾಗಿ ದುರಸ್ತಿ ಮಾಡಿದ್ದರೆ ಒಂದು ತಿಂಗಳ ಮಟ್ಟಿಗೆ ನೀರಿನ ಸಮಸ್ಯೆ ಬರುವುದಿಲ್ಲ. ಕೇವಲ ಮರಳುಚೀಲ ಇಟ್ಟು ದುರಸ್ತಿ ಮಾಡಿದ್ದಾರೆ ಎಂದು ಹೇಳುವ ಕೃಷಿಕರು, ಕನಿಷ್ಠ ವಾರಕ್ಕೆ ಎರಡು ಬಾರಿ, ಮಾರ್ಚ್ನಿಂದ ವಾರಕ್ಕೊಮ್ಮೆ ನೀರಿನ ವ್ಯವಸ್ಥೆ ಮಾಡಿಕೊಡುವಂತೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದೇವೆ. ನೀರಿಲ್ಲದೆ ಬೆಳೆಗಳು ಬಾಡುತ್ತಿವೆ. ಅವಧಿಗೆ ಮುನ್ನ ಪಂಪ್ಸೆಟ್ ಕಡಿತಗೊಳಿಸಿ ಪರಿಣಾಮ ಕಳೆದ ವರ್ಷ ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ಈಗಾಗಲೇ ಪಂಪ್ಸೆಟ್ ಕಡಿತ ಆರಂಭವಾಗಿದೆ. ವಾರಕ್ಕೆ ಎರಡು, ಒಂದು ಭಾರಿ ನೀರು ಕೊಡುವ ವ್ಯವಸ್ಥೆಗೆ ಜಿಲ್ಲಾಧಿಕಾರಿ ಮನಸ್ಸು ಮಾಡಬೇಕು.
– ಕುದಿ ಶ್ರೀನಿವಾಸ್ ಭಟ್, ಕೃಷಿಕ