ಅಡಕೆ ಮರ ಸ್ಥಳಾಂತರ ಪ್ರಯೋಗ

ವಿಜಯವಾಣಿ ಸುದ್ದಿಜಾಲ ಪುತ್ತೂರು
ಮುಂಡೂರಿನ ಕೃಷಿಕ ರಾಜೇಶ್ ಎ. ಎಂಬುವರು ಆರು ವರ್ಷದ 40 ಅಡಕೆ ಮರಗಳನ್ನು ಯಂತ್ರ ಬಳಸಿ ಯಶಸ್ವಿಯಾಗಿ ಸ್ಥಳಾಂತರಿಸಿದ್ದಾರೆ.

ಮನೆ ನಿರ್ಮಿಸುವ ಉದ್ದೇಶದಿಂದ ಅಡಕೆ ಗಿಡಗಳನ್ನು ಕಡಿಯಬೇಕಿತ್ತು. ಕೈಯಾರೆ ನೆಟ್ಟು ಬೆಳೆಸಿದ ಫಲ ನೀಡುವ ಅಡಕೆ ಮರಗಳನ್ನು ಕಡಿಯುವ ಬದಲು ಬೇರೆಡೆ ಸ್ಥಳಾಂತರಿಸಬಾರದೇಕೆ ಎಂಬ ಯೋಚನೆ ಬಂದು ಅದನ್ನೇ ಕಾರ್ಯಗತಗೊಳಿಸಿದ್ದಾರೆ ರಾಜೇಶ್.

25 ಅಡಿ ಎತ್ತರಕ್ಕೆ ಬೆಳೆದು ನಿಂತ ಅಡಕೆ ಮರಗಳನ್ನು ಮೊದಲು ಜೆಸಿಬಿ ಬಳಸಿ ಸ್ಥಳಾಂತರಿಸಲು ಯತ್ನಿಸಿದಾಗ ಮರ ಮುರಿಯುವ ಅಪಾಯ ಎದುರಾಯಿತು. ಆಗ ಜೆಸಿಬಿ ಬದಲು ಹಿಟಾಚಿ ಬಳಸಲಾಯಿತು. ತೆಂಗಿನ ಗಿಡವನ್ನು ಶ್‌ಟಿ ಮಾಡಿ ನುರಿತರಿದ್ದ ಹಿಟಾಚಿ ಚಾಲಕರ ಸಲಹೆ ಪಡೆದು ಸ್ಥಳಾಂತರಿಸುವ ಕಾರ್ಯ ನಡೆಯಿತು.

ಇದಕ್ಕಾಗಿ ಅಡಕೆ ಗಿಡದ ಸುತ್ತ ಸ್ವಲ್ಪ ಜಾಗ ಬಿಟ್ಟು 4 ಭಾಗದಿಂದಲೂ ಗುಂಡಿ ತೋಡಿ, ಅಡಿ ಭಾಗದಿಂದ ಮಣ್ಣನ್ನು ಸಡಿಲ ಮಾಡಿ ಹಿಟಾಚಿಯ ಬಕೆಟ್‌ಗೆ ಮಣ್ಣು ಸಹಿತ ಮೆಲ್ಲನೆ ಮರವನ್ನು ಇಳಿಸಲಾಗಿದೆ. ಹಿಟಾಚಿಗೆ ಎರಡು ಕಡೆಯಿಂದ ಹಗ್ಗದಿಂದ ಬಿಗಿದು, ಮೊದಲೇ ತೋಡಿಟ್ಟ ಗುಂಡಿಗೆ ಮರಗಳನ್ನು ನೆಡಲಾಗಿದೆ.
ನಾಲ್ಕು ವರ್ಷ ಹಿಂದೆ ಪ್ರಾಯೋಗಿಕವಾಗಿ ಶಿಫ್ಟ್ ಮಾಡಿದ ಅಡಕೆ ಮರಗಳು ಉತ್ತಮ ಫಸಲು ನೀಡುತ್ತಿದ್ದು, ಅದರ ಮುಂದಿನ ಭಾಗವಾಗಿ ಈಗ ಯಂತ್ರ ಬಳಸಿ ಸ್ಥಳಾಂತರ ಕಾರ್ಯ ನಡೆಸಲಾಗಿದೆ.