ಶಿವಮೊಗ್ಗ: ಬೆಳಗಾವಿ ಗಡಿ ಭಾಗದಲ್ಲಿ ಮರಾಠಿಗರಿಂದ ಕನ್ನಡಿಗರ ಮೇಲಿನ ದೌರ್ಜನ್ಯ ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳು ಕರೆಕೊಟ್ಟ ಕರ್ನಾಟಕ ಬಂದ್‌ಗೆ ಜಿಲ್ಲಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಜನಜೀವನ ಎಂದಿನಂತೆ ಇದ್ದು ಬಂದ್ ಬಿಸಿ ಮಲೆನಾಡಿನ ಜನತೆಗೆ ಕೊಂಚವೂ ತಟ್ಟಲಿಲ್ಲ.
ಕೆಎಸ್‌ಆರ್‌ಟಿಸಿ, ಖಾಸಗಿ ಹಾಗೂ ನಗರ ಸಾರಿಗೆ ಬಸ್‌ಗಳ ಸಂಚಾರ ಎಂದಿನಂತಿತ್ತು. ಆಟೋ, ಟ್ಯಾಕ್ಸಿ, ಟೆಂಪೋ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಇರಲಿಲ್ಲ. ಮುಂಜಾನೆಯಿಂದಲೇ ಬಸ್‌ಗಳ ಸಂಚಾರ ಇದ್ದ ಕಾರಣ ದಿನವಿಡೀ ಜನದಟ್ಟಣೆ, ವಾಹನ ಸಂಚಾರ ಎಂದಿನಂತೆ ಇತ್ತು. ಅಂಗಡಿ ಮುಂಗಟ್ಟುಗಳು ಎಂದಿನಂತೆಯೇ ಕಾರ್ಯನಿರ್ವಹಿಸಿದವು.
ನಾಲ್ಕನೇ ಶನಿವಾರ ಆಗಿದ್ದ ಕಾರಣ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಅದನ್ನು ಹೊರತುಪಡಿಸಿದರೆ ಹೂವು, ಹಣ್ಣು, ತರಕಾರಿ ಮಾರಾಟ, ಹಾಲು, ಪತ್ರಿಕೆ, ಆರೋಗ್ಯ ಸೇವೆಗಳಲ್ಲಿ ಯಾವುದೇ ವ್ಯತ್ಯಯ ಇರಲಿಲ್ಲ. ಬಿಸಿಲು, ಒಣ ಹವೆ ನಡುವೆಯೂ ಜನರು ತಮ್ಮ ಕೆಲಸ ಕಾರ್ಯಗಳ ನಿಮಿತ್ತ ಜಿಲ್ಲಾ ಕೇಂದ್ರಗಳಿಗೆ ಬಂದು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಹೋಟೆಲ್‌ಗಳು, ಪೆಟ್ರೋಲ್ ಬಂಕ್‌ಗಳು, ವಾಣಿಜ್ಯ ಸಂಘಟನೆಗಳು, ಆಟೋ ಸಂಘಗಳು ಬಂದ್‌ಗೆ ಯಾವುದೇ ಬೆಂಬಲ ನೀಡಲಿಲ್ಲ. ಹಾಗಾಗಿ ಕನ್ನಡಪರ ಸಂಘಟನೆಗಳು ಕರೆಕೊಟ್ಟ ಕರ್ನಾಟಕ ಬಂದ್ ಜಿಲ್ಲೆಯಲ್ಲಿ ಸಂಪೂರ್ಣ ವಿಫಲವಾಯಿತು. ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆ ಪರೀಕ್ಷೆಗಳು ನಡೆಯುತ್ತಿದ್ದ ಕಾರಣ ಕರ್ನಾಟಕ ಬಂದ್‌ನಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದು ಎಂಬ ಆತಂಕ ಪಾಲಕರನ್ನು ಕಾಡುತ್ತಿತ್ತು. ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ನಿಗಾವಹಿಸಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆಯಿಂದ ಭದ್ರತೆ ಹೆಚ್ಚಿಸಲಾಗಿತ್ತು.

ಅಧಿಕೃತ ಬೆಂಬಲ ಘೋಷಿಸದ ಸಂಘಟನೆಗಳು
ಎಂಇಎಸ್ ಪುಂಡಾಟಿಕೆ ವಿರೋಧಿಸಿ ಬೆಂಗಳೂರಿನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರ್ನಾಟಕ ಬಂದ್‌ಗೆ ವಿವಿಧ ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿದ್ದವು. ಆದರೆ ಜಿಲ್ಲೆಯ ಮಟ್ಟಿಗೆ ಯಾವುದೇ ಸಂಘಟನೆಗಳು ಅಧಿಕೃತವಾಗಿ ಬಂದ್‌ಗೆ ಬೆಂಬಲವನ್ನು ಘೋಷಣೆ ಮಾಡಲೇ ಇಲ್ಲ. ಯಾವುದೇ ಸ್ಪಂದನೆ ಸಿಗದೆ ಜಿಲ್ಲಾದ್ಯಂತ ಬಂದ್ ವಿಫಲಗೊಂಡಿತು.