More

    ಅತ್ಯಾಚಾರಿಗಳ ಪಾಲಿನ ನೇಣುಕುಣಿಕೆ ದಿಶಾ!

    ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಬಳಿಕ ಅತ್ಯಾಚಾರಿಗಳ ವಿರುದ್ಧ ಕಠಿಣ ಹಾಗೂ ತ್ವರಿತ ಕ್ರಮಕ್ಕಾಗಿ 21 ದಿನಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಆಂಧ್ರಪ್ರದೇಶ ಸರ್ಕಾರ ಜಾರಿಗೆ ತಂದಿರುವ ‘ದಿಶಾ’ ಕಾನೂನು ಹೊಸ ಸಂಚಲನವನ್ನೇ ಮೂಡಿಸಿದೆ. ಈ ಕಾಯ್ದೆಯು ಸರಿಯಾದ ರೀತಿಯ ಅನುಷ್ಠಾನಕ್ಕೆ ನೇಮಕಗೊಂಡಿದ್ದಾರೆ ಇಬ್ಬರು ಮಹಿಳಾ ಅಧಿಕಾರಿಗಳು. ಏನಿದು ಕಾಯ್ದೆ? ಈ ಅಧಿಕಾರಿಗಳ ಕರ್ತವ್ಯವೇನು? ಅಪರಾಧಿಗಳನ್ನು ಮಟ್ಟಹಾಕಲು ಇಂಥದ್ದೊಂದು ಕಾನೂನು ಎಲ್ಲಾ ರಾಜ್ಯಗಳಿಗೂ ಮಾದರಿಯಾಗಬಾರದೇಕೆ?

    ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕುವ ಸಲುವಾಗಿಯೇ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ಸರ್ಕಾರ ಇತ್ತೀಚೆಗೆ ದಿಶಾ ಎಂಬ ನೂತನ ಕಾನೂನು ಜಾರಿಗೆ ತಂದಿದೆ. ದಿಶಾ ಕಾನೂನಿನ ಪ್ರಕಾರ ಮಹಿಳೆಯರು ಮತ್ತು ಮಕ್ಕಳ ಮೇಲೆ ಅತ್ಯಾಚಾರದಂಥ ಹೇಯ ಕೃತ್ಯ ಎಸಗುವವರಿಗೆ 21 ದಿನದೊಳಗೆ ಗಲ್ಲು ಶಿಕ್ಷೆ ವಿಧಿಸುವ ಅವಕಾಶವಿದೆ. ನ.27ರಂದು ಹೈದರಾಬಾದ್ ಸಮೀಪ ಪಶುವೈದ್ಯೆ ಮೇಲೆ ನಡೆದ ಪೈಶಾಚಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂತ್ರಸ್ತೆಯ ಗುರುತನ್ನು ರಕ್ಷಿಸುವ ಉದ್ದೇಶದಿಂದ ಪೊಲೀಸರು ಸಂತ್ರಸ್ತೆ ಹೆಸರನ್ನು ‘ದಿಶಾ’ ಎಂದು ಉಲ್ಲೇಖಿಸಿದ್ದರಿಂದ ಹೊಸ ಕಾನೂನಿಗೂ ಅದನ್ನೇ ಇಡಲಾಗಿದೆ. ಕಾನೂನಿದ್ದರೆ ಸಾಕೆ, ಅದನ್ನು ಸಮರ್ಥವಾಗಿ ಜಾರಿಗೊಳಿಸುವ ಅಧಿಕಾರಿಗಳು ಬೇಡವೆ?. ಇದಕ್ಕಾಗಿಯೇ ಆಂಧ್ರ ಸರ್ಕಾರ ಇಬ್ಬರು ಖಡಕ್ ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಿದೆ.

    ಐಎಎಸ್ ಅಧಿಕಾರಿ ಡಾ. ಕೃತಿಕಾ ಶುಕ್ಲಾ ಹಾಗೂ ಐಪಿಎಸ್ ಅಧಿಕಾರಿ ಎಂ. ದೀಪಿಕಾ ‘ದಿಶಾ’ ಕಾನೂನಿನ ವಿಶೇಷ ಅಧಿಕಾರಿಗಳಾಗಿ ತಿಂಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದು, ಕಾನೂನು ಜಾರಿಗೆ ತಮ್ಮ ಮುಂದಿರುವ ಸವಾಲುಗಳು ಹಾಗೂ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಕೃತಿಕಾ ಶುಕ್ಲಾ ಪ್ರಸ್ತುತ ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರಾಗಿದ್ದು, ದೀಪಿಕಾ ಕರ್ನಲ್​ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘7 ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳ ತನಿಖೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಿದ್ದೇವೆ. ದೋಷಾರೋಪ ಪಟ್ಟಿಗಳ ಕರಡು ತಯಾರಿಕೆ, ವಿಧಿವಿಜ್ಞಾನ ಪ್ರಯೋಗಾಲಯಗಳ ಸಾಮರ್ಥ್ಯ ಸುಧಾರಿಸುವುದು, ಅತ್ಯುತ್ತಮ ವೈದ್ಯರು ಅದರಲ್ಲೂ ವಿಶೇಷವಾಗಿ ಸ್ತ್ರೀರೋಗತಜ್ಞರನ್ನು ನೇಮಿಸಿಕೊಳ್ಳುವುದು, ಉತ್ತಮ ಸೈಬರ್ ತಜ್ಞರೂ ಸೇರಿದಂತೆ ತನಿಖೆಯನ್ನು ಆದಷ್ಟು ವೇಗಗೊಳಿಸುವ ವ್ಯವಸ್ಥೆ ರಚಿಸುತ್ತಿದ್ದೇವೆ’ ಎನ್ನುತ್ತಾರೆ ಐಪಿಎಸ್ ಅಧಿಕಾರಿ ಎಂ. ದೀಪಿಕಾ. ಪ್ರತಿ ಜಿಲ್ಲೆಗಳಲ್ಲಿ ಡಿಎಸ್​ಪಿ ರ್ಯಾಂಕ್​ನ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡವನ್ನೂ ರಚಿಸಲಾಗುತ್ತದೆ. ಈ ತಂಡ ಜಿಲ್ಲೆಯ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ಕೇಂದ್ರೀಕರಿಸುತ್ತದೆ. ಇದರ ಜತೆಗೆ ಮಹಿಳಾ ಮಿತ್ರ ಸಮೀತಿಗಳನ್ನು ರಚಿಸಲಾಗಿದೆ. ಇದರಲ್ಲಿ ಸ್ಥಳೀಯ ಮಹಿಳೆಯರು ಸೇರಿದಂತೆ ಇಲಾಖೆಯ ಮಹಿಳಾ ಸಿಬ್ಬಂದಿಯೂ ಇರಲಿದ್ದು, ಸ್ಥಳೀಯವಾಗಿ ಮಹಿಳೆಯರ ಮೇಲೆ ಏನಾದರೂ ದೌರ್ಜನ್ಯ ಘಟನೆಗಳು ಬೆಳಕಿಗೆ ಬಂದರೆ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲು ಸಹಾಯ ಮಾಡಲಿದೆ ಎನ್ನುತ್ತಾರವರು.

    ದಿಶಾ ಕಾನೂನಿನ ವಿಶೇಷ ಅಧಿಕಾರಿಗಳು ಪ್ರತಿ ಜಿಲ್ಲೆಯ ಮುಖ್ಯಸ್ಥರ ಜತೆ ನಿಯಮಿತವಾಗಿ ವಿಡಿಯೋ ಕಾನ್ಪರೆನ್ಸ್ ಮೂಲಕ ಸಮಾಲೋಚನೆ ನಡೆಸುತ್ತಾರೆ. ಜತೆಗೆ ಪ್ರತಿ ಠಾಣೆಗಳಲ್ಲೂ ಮಹಿಳಾ ಮಿತ್ರ ಸಮಿತಿ ಸದಸ್ಯರಿರುವುದರಿಂದ ಪ್ರಕರಣಗಳ ಬಗ್ಗೆ ಠಾಣೆಗಳಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂಬುದನ್ನು ಅವರು ಖಚಿತಪಡಿಸುತ್ತಾರೆ.

    ಆಂಧ್ರಪ್ರದೇಶದಲ್ಲಿ ಸದ್ಯ ವಿಜಯವಾಡ, ತಿರುಪತಿ ಮತ್ತು ವೈಜಾಗ್​ನಲ್ಲಿ ಮೂರು ವಿಧಿವಿಜ್ಞಾನ ಪ್ರಯೋಗಾಲಯಗಳಿವೆ. ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳ ತನಿಖೆಗೆ ಡಿಎನ್​ಎ, ಸೆರೋಲಜಿ ಮತ್ತು ಸೈಬರ್ ವಿಶ್ಲೇಷಣೆಗಾಗಿ ಈ ಲ್ಯಾಬ್​ಗಳಿಗೆ ಉತ್ತಮ ಹಾಗೂ ಅತ್ಯಾಧುನಿಕ ಉಪಕರಣಗಳು ಬೇಕಾಗಿದ್ದು, ಸರ್ಕಾರ ಈಗಾಗಲೇ ಇವುಗಳಿಗೆ ಬಜೆಟ್ ನಿಗದಿಪಡಿಸಿದೆ. ಜತೆಗೆ ಉತ್ತಮ ತಜ್ಞರನ್ನು ನೇಮಿಸುತ್ತಿದೆ.

    ದಿಶಾ ಕಾನೂನಿನಲ್ಲಿ ಅನೇಕ ಗೊಂದಲಗಳೂ ಕೂಡ ಇದ್ದು, 7 ದಿನಗಳೊಳಗೆ ತನಿಖೆ ಪೂರ್ಣಗೊಳಿಸಲು ಸಾಧ್ಯವೆ ಎಂಬ ಪ್ರಶ್ನೆಯೂ ಇದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಧಿಕಾರಿ ದೀಪಿಕಾ, ‘ನಿರ್ಣಾಯಕ ಸಾಕ್ಷ್ಯಗಳು ಹಾಗೂ ಸಿಸಿಟಿವಿಗಳ ಸ್ಪಷ್ಟ ವಿಡಿಯೋಗಳು ಲಭ್ಯವಿರುವ ಪ್ರಕರಣಗಳಲ್ಲಿ ಅಪರಾಧಿಗಳನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾದರೆ ಅಂತಹ ಪ್ರಕರಣಗಳ ವಿಚಾರಣೆಯನ್ನು 7 ದಿನಗಳಲ್ಲಿ ಮುಗಿಸಬಹುದು. ಆದರೆ ಅಪರಾಧಿಯನ್ನು ಪತ್ತೆಮಾಡಲಾಗದ ಸಂದಿಗ್ಧ ಪರಿಸ್ಥಿತಿಗಳಲ್ಲಿ, ಯಾವುದೇ ಸಾಕ್ಷ್ಯಗಳಿಲ್ಲದಿದ್ದಲ್ಲಿ 7 ದಿನಗಳೊಳಗೆ ವಿಚಾರಣೆ ಮುಗಿಸಲೇಬೇಕೆಂಬ ನಿಬಂಧನೆ ಕಾನೂನಿನಲ್ಲಿಲ್ಲ, ಇಂಥಹ ಪ್ರಕರಣಗಳಿಗಾಗಿ ಹೆಚ್ಚಿನ ಸಮಯವಕಾಶ ಸಿಗಲಿದೆ’ ಎಂದಿದ್ದಾರೆ. ಇದೇ ರೀತಿ ನ್ಯಾಯಾಲಯಗಳಲ್ಲೂ ಅರ್ಹವಾದ ಸಾಕ್ಷ್ಯಗಳು ಇದ್ದಾಗ ಮಾತ್ರ 14 ದಿನಗಳಲ್ಲಿ ತೀರ್ಪು ನೀಡಲು ಸಾಧ್ಯವಾಗುತ್ತದೆ. ಮತ್ತೊಂದು ಅಂಶವೆಂದರೆ ದಿಶಾ ಕಾನೂನಿನ ಅನ್ವಯ ಎಲ್ಲ ಅತ್ಯಾಚಾರ ಪ್ರಕರಣಗಳಲ್ಲೂ ಮರಣದಂಡನೆ ಶಿಕ್ಷೆ ವಿಧಿಸಲಾಗುವುದಿಲ್ಲ. ವಿಶೇಷವಾಗಿ ಘೋರ ಕೃತ್ಯಗಳಲ್ಲಿ ಮಾತ್ರ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಲಾಗುತ್ತದೆ. ಉಳಿದಂತೆ ಅಪರಾಧಿಗಳಿಗೆ ಕಠಿಣ ಶಿಕ್ಷೆಗಳನ್ನು ನೀಡಲಾಗುತ್ತದೆ.

    ದಿಶಾ ಕಾನೂನು ಸಮಾಜದ ವ್ಯವಸ್ಥೆಯಲ್ಲಿ ಯಾವ ರೀತಿ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂದು ನೋಡಲು ಆರಂಭಿಕ ತಿಂಗಳುಗಳು ಬಹಳ ನಿರ್ಣಾಯಕ. ನಮಗೆ ನೀಡಲಾದ ಸಮಯಸೂಚಿಗಳು ದೊಡ್ಡ ಸವಾಲನ್ನು ಒಡ್ಡಿವೆ. ನಾನು ಕೂಡ ಸವಾಲುಗಳನ್ನು ಎದುರು ನೋಡುತ್ತಿದ್ದು, ನನ್ನ ಕೈಲಾದಷ್ಟು ಕೆಲಸ ಮಾಡುತ್ತೇನೆ.

    | ಎಂ. ದೀಪಿಕಾ ಐಪಿಎಸ್ ಅಧಿಕಾರಿ

    ಏನಿದು ಹೊಸ ಕಾನೂನು?

    ಅತ್ಯಾಚಾರ ಪ್ರಕರಣಗಳಲ್ಲಿ ಪ್ರಬಲವಾದ ಸಾಕ್ಷ್ಯಗಳಿದ್ದಲ್ಲಿ ಅಂಥವರನ್ನು 21 ದಿನಗಳೊಳಗೆ ಶಿಕ್ಷೆಗೆ ಗುರಿಪಡಿಸುವ ಅವಕಾಶ ಹೊಸ ಕಾನೂನಿನಲ್ಲಿದೆ. 7 ದಿನಗಳ ಒಳಗಾಗಿ ತನಿಖೆ ಪೂರ್ಣಗೊಂಡು, 14 ದಿನಗಳ ಒಳಗಾಗಿ ತೀರ್ಪು ಪ್ರಕಟವಾಗಲಿದೆ. ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ತ್ವರಿತಗತಿಯ ನ್ಯಾಯಾಲಯ ಸ್ಥಾಪನೆಯಾಗಲಿದ್ದು, ಇದಕ್ಕೆ ಪ್ರತ್ಯೇಕ ಪಬ್ಲಿಕ್ ಪ್ರಾಸಿಕ್ಯೂಟರ್​ಗಳನ್ನು ನೇಮಕ ಮಾಡಲಾಗುತ್ತದೆ. ಅತ್ಯಾಚಾರ ಹೊರತಾಗಿ ಇತರ ಲೈಂಗಿಕ ದೌರ್ಜನ್ಯಗಳಿಗೆ ಜೀವಾವಧಿ ಶಿಕ್ಷೆಯನ್ನು ನಿಗದಿ ಮಾಡಲಾಗಿದೆ. ಮಕ್ಕಳ ವಿರುದ್ಧ ಕೃತ್ಯ ನಡೆದಿದ್ದರೆ, ಅಪರಾಧ ನಡೆದ 21 ದಿನಗಳ ಒಳಗಾಗಿ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸುವ ಪ್ರಸ್ತಾಪ ಹೊಸ ಕಾನೂನಿನಲ್ಲಿದೆ. ಸಾಮಾಜಿಕ ಜಾಲತಾಣ, ಇ-ಮೇಲ್​ಗಳ ಮೂಲಕ ಮಹಿಳೆಯರಿಗೆ ಕಿರುಕುಳ ಕೊಡುವ ವ್ಯಕ್ತಿಗಳಿಗೆ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾಪ ಮಾಡಲಾಗಿದೆ. ಈ ಅಪರಾಧಗಳಿಗೆ 2 ವರ್ಷದಿಂದ 4 ವರ್ಷದ ವರೆಗೂ ಶಿಕ್ಷೆ ವಿಧಿಸಬಹುದು. ಮೇಲ್ಮನವಿಗಳನ್ನು 3 ತಿಂಗಳ ಒಳಗಾಗಿ ಇತ್ಯರ್ಥ ಮಾಡಬೇಕಿದೆ. ಮಹಿಳೆಯರ ಮೇಲಿನ ಅಪರಾಧ ಕುರಿತು ಸರ್ಕಾರ ಪ್ರತ್ಯೇಕ ರಿಜಿಸ್ಟ್ರಿಯನ್ನೂ ತಯಾರಿಸಲಿದೆ.

    ಡಾ. ಕೃತಿಕಾ ಶುಕ್ಲಾ

    ಎಲ್ಲಿಬೇಕಾದರೂ ದೂರು ನೀಡಿ

    ಅತ್ಯಾಚಾರ ಅಥವಾ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರು ಘಟನೆ ನಡೆದ ಸ್ಥಳದ ವ್ಯಾಪ್ತಿಯ ಬಗ್ಗೆ ಚಿಂತಿಸದೇ ತಮ್ಮ ಸನಿಹದ ಯಾವುದೇ ಠಾಣೆಯಲ್ಲೂ ದೂರು ದಾಖಲಿಸಬಹುದು. ಪೊಲೀಸರು ಕೂಡ ಠಾಣಾ ವ್ಯಾಪ್ತಿ ನೆಪವೊಡ್ಡಿ ದೂರು ದಾಖಲಿಸಿಕೊಳ್ಳಲು ನಿರಾಕರಿಸುವಂತಿಲ್ಲ. ದೂರು ದಾಖಲಿಸಕೊಂಡ ಬಳಿಕ ಪೊಲೀಸರೆ ಸಂಬಂಧ ಪಟ್ಟ ವ್ಯಾಪ್ತಿಯ ಠಾಣೆಗೆ ದೂರನ್ನು ವರ್ಗಾಯಿಸಬೇಕು. ಅಲ್ಲದೇ ಇದರ ಜತೆಗೆ ಪ್ರತಿ ಜಿಲ್ಲೆಗಳಲ್ಲೂ ಒಂದು ದಿಶಾ ಠಾಣೆಯನ್ನೂ ಗುರುತಿಸಲಾಗುತ್ತಿದೆ. ಆದರೆ ಈ ಠಾಣೆಗಳು ದಿಶಾ ಕಾನೂನಿನ ಅಡಿಯಲ್ಲಿ ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಅಥವಾ ಕೌಟುಂಬಿಕ ದೌರ್ಜನ್ಯದ ಪ್ರಕರಣಗಳನ್ನು ತನಿಖೆ ನಡೆಸುವುದಿಲ್ಲ. ಐಪಿಸಿ ಸೆಕ್ಷನ್ 326ಎ (ಆಸಿಡ್ ದಾಳಿ), 354ಎ, 376 (ಇದರಲ್ಲಿ ಸಾಮೂಹಿಕ ಅತ್ಯಾಚಾರವೂ ಸೇರಿದೆ) ಮತ್ತು ಪೊಕ್ಸೊ ಕಾಯ್ದೆ ಅಡಿಯಲ್ಲಿ ನಡೆದ ಗಂಭೀರ ಮತ್ತು ಘೊರ ಅಪರಾಧಗಳನ್ನು ಮಾತ್ರ ದಿಶಾ ಠಾಣೆಗಳು ತನಿಖೆ ನಡೆಸುತ್ತವೆ.

    ನವೀನ್ ರಟ್ಟೀಹಳ್ಳಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts