ಟೈಗರ್-ದಿಶಾ ಪ್ರೀತಿ ಅಧಿಕೃತ?

ಬಾಲಿವುಡ್​ನ ಲವ್ ಬರ್ಡ್ಸ್ ಅಂತಲೇ ಕರೆಸಿಕೊಂಡಿರುವ ಟೈಗರ್ ಶ್ರಾಫ್ ಮತ್ತು ದಿಶಾ ಪಟಾಣಿ ‘ನಾವಿಬ್ಬರು ಪ್ರೇಮಿಗಳು’ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ನೋಡುಗರ ಕಣ್ಣಿಗೆ ಪ್ರೇಮಿಗಳಂತೆಯೇ ಬಿಂಬಿತವಾಗುತ್ತಿದ್ದರು. ಒಟ್ಟಿಗೆ ಸಿನಿಮಾ ಮಾಡಿದರು, ಕೈ ಕೈ ಹಿಡಿದು ಸುತ್ತಾಡಿದರು. ಆದರೆ, ತಮ್ಮೊಳಗಿನ ಪ್ರೀತಿಯನ್ನು ಎರಡು ವರ್ಷ ಕಳೆದರೂ ಹೇಳಿಕೊಳ್ಳಲೇ ಇಲ್ಲ. ಆದರೆ ಈ ಬಾರಿಯ ಪ್ರೇಮಿಗಳ ದಿನದಂದು ಹೊಸ ಸೂಚನೆ ಸಿಕ್ಕಿದೆ. ನೇರವಾಗಿ ಏನನ್ನೂ ಹೇಳಿಕೊಳ್ಳದೆ, ಪರಸ್ಪರರು ಅವರವರ ಇನ್​ಸ್ಟಾಗ್ರಾಂ ಖಾತೆಯಲ್ಲಿ ಒಂದೇ ಭಂಗಿಯಲ್ಲಿ ನಿಂತ ಫೋಟೋ ಅಪ್​ಲೋಡ್ ಮಾಡಿದ್ದಾರೆ. ತೋರು ಬೆರಳಿನ ಉಂಗುರಕ್ಕೆ ಮುತ್ತಿಕ್ಕಿ ‘ನನ್ನ ಸರದಿ ಮುಗೀತು’ ಎಂದು ಟೈಗರ್ ಹೇಳಿಕೊಂಡರೆ, ಅದೇ ಥರ ತೋರು ಬೆರಳಿಗೆ ಚುಂಬಿಸಿದ ಫೋಟೋದ ಜತೆಗೆ, ‘ಯಾರೋ ಈ ರೀತಿ ಮಾಡುವಂತೆ ಹೇಳಿದರು, ಅದಕ್ಕೆ ಯೆಸ್ ಎಂದೆ’ ಎಂದು ಬರೆದುಕೊಂಡಿದ್ದಾರೆ ದಿಶಾ. ಇನ್​ಸ್ಟಾಗ್ರಾಂನಲ್ಲಿ ಈ ರೀತಿ ಪೋಸ್ಟ್ ಹಾಕಿದ್ದೇ ತಡ ಸಾವಿರಾರು ಕಮೆಂಟ್​ಗಳು ಸಂದಾಯವಾಗಿವೆ. -ಏಜೆನ್ಸೀಸ್