ಭತ್ತ ಬೆಳೆಗೆ ಕಂದು ಜಿಗಿಕೀಟ ಕಾಟ

«ನೂರಾರು ಎಕರೆ ಪ್ರದೇಶದಲ್ಲಿ ಪೈರು ಹಾನಿ * ಇಲಾಖಾ ತಜ್ಞರಿಂದ ಪರಿಶೀಲನೆ»

– ಲೋಕೇಶ್ ಸುರತ್ಕಲ್
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭತ್ತದ ಹಿಂಗಾರು (ಸುಗ್ಗಿ) ಬೆಳೆಗೆ ವಿಚಿತ್ರ ರೋಗ ಕಾಣಿಸಿಕೊಂಡಿದೆ.
ಇದನ್ನು ಕಂದು ಜಿಗಿಹುಳ ರೋಗ ಎಂದು ಇಲಾಖೆ ಗುರುತಿಸಿದೆ. ಅನೇಕ ಪ್ರದೇಶಗಳಲ್ಲಿ ಈಗಷ್ಟೇ ರೋಗ ಆರಂಭಿಕ ಹಂತದಲ್ಲಿದ್ದು, ಗುರುತಿಸಲ್ಪಟ್ಟಿಲ್ಲ. ಈ ರೋಗವನ್ನು ಸೂಕ್ತ ಸಮಯದಲ್ಲಿ ತಡೆಗಟ್ಟದಿದ್ದಲ್ಲಿ ಸುಗ್ಗಿ ಬೆಳೆಗೆ ವ್ಯಾಪಕ ನಷ್ಟ ಖಚಿತ ಎಂಬ ಭೀತಿಯಿದೆ.
ಸುರತ್ಕಲ್ ಆಸುಪಾಸಿನ ದೇಲಂತಬೆಟ್ಟು, ಎಕ್ಕಾರು ಮೊದಲಾದ ಕಡೆ ಎಕರೆಗಟ್ಟಲೆ ಪೈರಿಗೆ ಹಾನಿಯಾಗಿದ್ದು, ಸುರತ್ಕಲ್ ಬಳಿ ಇಲಾಖಾ ತಜ್ಞರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಸುರತ್ಕಲ್ ಬಳಿ 50 ಎಕರೆ, ಮೂಲ್ಕಿ ಬಳಿ 60 ಎಕರೆ ಪ್ರದೇಶದ ಪೈರು ಹಾನಿ ಅಂದಾಜಿಸಲಾಗಿದೆ.
ಕುತ್ತೆತ್ತೂರು ಮಿಲ್ ಬಳಿ ನೇಜಿ ಇದೇ ರೋಗದಿಂದ ಬೆಂಕಿ ರೋಗ ಪೀಡೆಯಂತೆ ಕೆಂಪು ಬಣ್ಣಕ್ಕೆ ತಿರುಗಿದೆ ಎಂದು ಕೃಷಿಕ ರಮಾನಂದ ಶೆಟ್ಟಿ ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿಯೂ ಈ ರೋಗ ಕಾಣಿಕೊಂಡಿರುವ ಬಗ್ಗೆ ಮಾಹಿತಿ ಇದೆ ಎಂದು ಕೃಷಿ ಇಲಾಖೆಯ ಮಂಗಳೂರಿನ ಜಂಟಿ ಕೃಷಿ ನಿರ್ದೇಶಕರ ಕಚೇರಿ ಅಧಿಕಾರಿ ಸೀತಾ ವಿಜಯವಾಣಿಗೆ ತಿಳಿಸಿದರು.

ಉಪಶಮನ: ರೋಗ ತಡೆಗೆ ಒಂದು ಲೀಟರ್ ನೀರಿಗೆ ಒಂದು ಗ್ರಾಂ ಅಸಿಫೇಟ್ ದ್ರಾವಣ ಬೆರೆಸಿ ಸಿದ್ಧಪಡಿಸಲಾದ ದ್ರಾವಣ ಹಾಗೂ ಲೀ. ನೀರಿಗೆ ಅರ್ಧ ಎಂಎಲ್ ಡಿಡಿವಿಡಿ ಬೆರೆಸಿ ಸಿದ್ಧಪಡಿಸಲಾದ ದ್ರಾವಣವನ್ನು ಎಕರೆಗೆ 150 ಲೀ.ನಿಂದ 200 ಲೀ.ವರೆಗೆ ಸಂಜೆ ವೇಳೆ ಸಿಂಪಡಿಸಬೇಕು. ಗದ್ದೆಯ ನೀರನ್ನು ಆಗಾಗ ಖಾಲಿ ಮಾಡಿ ಮತ್ತೆ ತುಂಬಿಸಬೇಕು ಎಂದು ಇಲಾಖೆ ತಿಳಿಸಿದೆ. ಕೀಟ ತಿಂದು ಹಾಕುವ ಕಾರಣ ರೋಗ ತಾಗಿದ ಗಿಡದ ಬುಡವೇ ಕೊಳೆತು ಹೋಗಿರುತ್ತದೆ, ತೆಗೆದಲ್ಲಿ ಪೈರು ಕೈಯಲ್ಲಿ ಬರುತ್ತದೆ ಎಂದು ಇಲಾಖೆ ತಿಳಿಸಿದೆ.

ಕಟಾವು ಯಂತ್ರದಿಂದ ಬಂತೇ?
ತೆಂಗಿನ ಬೆಳೆಗೆ ನೋಣ ಹಾವಳಿ ಬೇರೆ ಜಿಲ್ಲೆಗಳ ಸೀಯಾಳದ ಮೂಲಕ ಬಂದಿರಬೇಕು ಎಂಬ ಶಂಕೆ ವ್ಯಾಪಕವಾಗಿತ್ತು. ಅದೇ ಮಾದರಿಯಲ್ಲಿ ಈ ರೋಗ ಬೇರೆ ರಾಜ್ಯಗಳಿಂದ ಪೈರು ಕಟಾವು ಯಂತ್ರ ಅಥವಾ ಹೊರಜಿಲ್ಲೆಗಳಿಂದ ತಂದ ಬೈಹುಲ್ಲಿನ ಮೂಲಕ ಬಂದಿರಬಹುದು ಎಂಬ ಶಂಕೆ ಇದೆ.

 

ಕಾರ್ಕಳ ಮತ್ತು ಬ್ರಹ್ಮಾವರ ಭಾಗಗಳಲ್ಲಿ ಕಂದುಜಿಗಿಹುಳ ರೋಗ ಪತ್ತೆಯಾಗಿದೆ. ಪ್ರತಿವರ್ಷ ಈ ರೋಗ ಕಂಡುಬಂದರೂ ಈ ಬಾರಿ ಹವಾಮಾನದ ವೈಪರೀತ್ಯದಿಂದ ಸುಮಾರು 300 ಎಕರೆ ಪ್ರದೇಶಗಳಲ್ಲಿ ವ್ಯಾಪಿಸಿದೆ. ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಔಷಧಿಗಳನ್ನು ದಾಸ್ತಾನು ಇರಿಸಲಾಗಿದ್ದು, ಸಿಂಪಡಣೆ ಬಳಿಕ ಉತ್ತಮ ಫಲಿತಾಂಶ ಲಭಿಸಿದೆ.
– ಕೆಂಪೇಗೌಡ, ಕೃಷಿ ಇಲಾಖೆ ಉಪನಿರ್ದೇಶಕ, ಉಡುಪಿ ಜಿಲ್ಲೆ

 

ಮೂಡುಬಿದಿರೆ, ಮೂಲ್ಕಿ, ಸುರತ್ಕಲ್ ಭಾಗದಲ್ಲಿ ಭತ್ತದ ಗದ್ದೆಯಲ್ಲಿ ಕಂದು ಜಿಗಿಕೀಟ ಕಾಣಿಸಿಕೊಂಡಿದ್ದು, ಕೆವಿಕೆಯವರ ಸಹಕಾರ ಪಡೆದು ತೀವ್ರ ನಿಗಾ ಇಡಲಾಗುತ್ತಿದೆ. ಕೀಟನಾಶಕ ಬಳಕೆಯ ಕುರಿತು ರೈತರಿಗೆ ಮಾಹಿತಿ ನೀಡಲಾಗಿದೆ. ಮೊದಲ ಬಾರಿಗೆ ಈ ಕೀಟ ಕಾಣಿಸಿಕೊಂಡಿದೆ. ರಸ ಹೀರುವ ಕೀಟದ ಜಾತಿಯಾಗಿದ್ದು, ನಾಟಿ ಮಾಡಿದ ಚಿಕ್ಕ ಗಿಡದಲ್ಲೇ ಕಾಂಡದಿಂದ ರಸ ಹೀರುತ್ತದೆ. ಇದರಿಂದ ಗಿಡ ಕಂದು ಬಣ್ಣಕ್ಕೆ ತಿರುತ್ತದೆ. ರೈತರು ಭತ್ತ ಬೆಳ ಕುರಿತಂತೆ ನಿರಂತರ ನಿಗಾ ಇರಿಸಬೇಕು.
– ಸೀತಾ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ, ದಕ್ಷಿಣ ಕನ್ನಡ