Tuesday, 11th December 2018  

Vijayavani

Breaking News

ಮಾತು ಮಾತು ಮಥಿಸಿ ಬಂತು

Sunday, 07.01.2018, 3:05 AM       No Comments

ಕಾದಂಬರಿ ಲೋಕದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿ, ಅಸಂಖ್ಯ ಓದುಗರನ್ನು, ಅಭಿಮಾನಿಗಳ ದೊಡ್ಡ ಬಳಗವನ್ನು ಹೊಂದಿರುವ ಸಾಹಿತ್ಯದ ಮೇರುಪ್ರತಿಭೆ ಡಾ.ಸಂತೇಶಿವರ ಲಿಂಗಪ್ಪ ಭೈರಪ್ಪ. ಭೈರಪ್ಪನವರ ಬದುಕೇ ವಿಚಿತ್ರ ಅನುಭವಗಳ, ಸಂಕಟ-ತಳಮಳಗಳ ಮೊತ್ತ. ಜೀವನದ ಹಲವು ಮುಖಗಳೇ ಅವರನ್ನು ಚಿಂತನೆಗೆ ಪ್ರೇರೇಪಿಸಿ, ಬರವಣಿಗೆಗೆ ಸ್ಫೂರ್ತಿ ಕೊಟ್ಟಿವೆ. ಭೈರಪ್ಪನವರು ಆಡಿ ಬೆಳೆದ ಸಂತೇಶಿವರ, ಓದಿಗೆ ಆಯ್ದುಕೊಂಡ ದೇವಸ್ಥಾನದ ಆವರಣ, ಈಜಾಡುತ್ತಿದ್ದ ಕೆರೆ… ಇವೆಲ್ಲ ಮುದ ನೀಡುವ ಜತೆಗೆ ಬೌದ್ಧಿಕ ಚಿಂತನೆಗೆ ತೊಡಗಿಸುವ ತಾಣಗಳು. ಶ್ರೀಮತಿ ಗೌರಮ್ಮ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ ‘ನಾವು-ನೀವು ಎಸ್.ಎಲ್.ಭೈರಪ್ಪರ ಜತೆ ಸಂತೇಶಿವರದಲ್ಲಿ’ ಎಂಬ ಕಾರ್ಯಕ್ರಮದಲ್ಲಿ ನೆನಪುಗಳ ರಾಶಿಯೊಂದಿಗೆ ಭೈರಪ್ಪ ತಮ್ಮ ಬದುಕನ್ನು ತೆರೆದಿಟ್ಟರು. ‘ಭೈರಪ್ಪ ಯಾವಾಗಲೂ ಸೀರಿಯಸ್ ಆಗಿ ಮಾತಾಡ್ತಾರೆ’ ಎಂಬ ಗ್ರಹಿಕೆಯನ್ನೇ ಹೋಗಲಾಡಿಸಿಬಿಟ್ಟರು.

|ನಿರೂಪಣೆ: ರವೀಂದ್ರ ಎಸ್.ದೇಶಮುಖ್

ಉತ್ಸವಮೂರ್ತಿ ಊರಾಡಿದಷ್ಟು ಮೂಲದೇವರ ಮಹಿಮೆ ಕಮ್ಮಿಯಾಗುತ್ತೆ! ಸಂತೇಶಿವರದಲ್ಲಿ ಪ್ರತಿವರ್ಷ ಗಂಗಾಧರೇಶ್ವರ ಸ್ವಾಮಿ ಜಾತ್ರೆ ನಡೆಯುತ್ತೆ. ರಥೋತ್ಸವಕ್ಕೆ ದುಡ್ಡು, ದಿನಸಿ ಸಂಗ್ರಹಿಸಲು ಉತ್ಸವಮೂರ್ತಿಯನ್ನು ಸುತ್ತಲಿನ ಏಳು ಹಳ್ಳಿಗಳಿಗೆ ಕೊಂಡೊಯ್ದು ಮನೆಗಳ ಮುಂದೆ ನಿಲ್ಲಿಸುತ್ತಿದ್ದರು. ಪಕ್ಕದ ನುಗ್ಗೆಹಳ್ಳಿಯ ನರಸಿಂಹಸ್ವಾಮಿ ದೇವಸ್ಥಾನವೂ ತುಂಬ ಪ್ರಸಿದ್ಧ. ಆ ಊರಿನವರು ಬಹಳ ಅದ್ದೂರಿಯಾಗಿ ವಾರ್ಷಿಕ ರಥೋತ್ಸವ ನೇರವೇರಿಸ್ತಾ ಇದ್ರು. ಅವರಿಗಿಂತ ಅದ್ದೂರಿಯಾಗಿ ಗಂಗಾಧರೇಶ್ವರ ಸ್ವಾಮಿ ರಥೋತ್ಸವ ನಡೆಸಬೇಕು ಎಂಬ ಬಯಕೆ ಗ್ರಾಮಸ್ಥರಲ್ಲಿ ಹುಟ್ಟಿತು. ಇದಕ್ಕಾಗಿ ಏನು ಮಾಡಬೇಕು? ಉತ್ಸವಮೂರ್ತಿಯನ್ನು ಮತ್ತಷ್ಟು ಹಳ್ಳಿಗಳಿಗೆ ಕೊಂಡೊಯ್ದರಾಯಿತು ಎಂದು ನಿಶ್ಚಯಿಸಿದರು. ಆಗ ಇದೇ ದೇವಸ್ಥಾನದಲ್ಲಿ ಇದ್ದ ಮಹಾದೇವಯ್ಯ ಎಂಬ ಸನ್ಯಾಸಿ ‘ಹಾಗೆಲ್ಲ ಮಾಡಬ್ಯಾಡ್ರಪ್ಪ, ಉತ್ಸವಮೂರ್ತಿ ಊರಾಡಿದಷ್ಟು ಮೂಲದೇವರ ಮಹಿಮೆ ಕಮ್ಮಿಯಾಗುತ್ತೆ’ ಅಂದರು. ನನ್ನದು ಚಿಕ್ಕ ವಯಸ್ಸಾದ್ದರಿಂದ ಆ ಮಾತು ಒಗಟಾಗಿ ಕಂಡಿತು.

‘ಹಾಗಂದ್ರೆ ಏನು ಐನವ್ರೆ’ ಅಂತ ಮಹಾದೇವಯ್ಯರಲ್ಲಿ ಕೇಳಿದೆ. ಅದಕ್ಕವರು-‘ನೀನು ತುಂಬ ಚಿಕ್ಕವನಪ್ಪ. ಮುಂದೆ ಹೋದಮ್ಯಾಲೆ ನಿನಗೇ ಈ ಮಾತು ಅರ್ಥ ಆಗಬಹುದು, ಅರ್ಥ ಆಗದೇನೂ ಇರಬಹುದು’ ಎಂದರು.

ಮುಂದೆ ನಾನು ಉತ್ತರ ಭಾರತದಲ್ಲೆಲ್ಲ ಕೆಲಸ ಮಾಡಿ ಮೈಸೂರಿಗೆ ಮರಳಿದೆ. ಅಷ್ಟೊತ್ತಿಗೆಲ್ಲ ಒಂದಿಷ್ಟು ಕಾದಂಬರಿ ಬರೆದು ಹೆಸರು ಮಾಡಿದ್ದೆ. ಮೈಸೂರಿಗೆ ಬಂದಾಕ್ಷಣ ಜನ ಗುರುತಿಸಿ ನನ್ನನ್ನು ಸಮಾರಂಭಗಳಲ್ಲಿ ಭಾಷಣ ಮಾಡಲು ಕರೆಯತೊಡಗಿದರು. ಪತ್ರಿಕೆಗಳಲ್ಲಿ ಫೋಟೋ, ಸುದ್ದಿ ಬಂತು. ಮಜಾ ಅನಿಸಿತು. ಜನ ಮತ್ತಷ್ಟು ಕಾರ್ಯಕ್ರಮಗಳಿಗೆ ಕರೆದರು. ಹೀಗೆ ಆರು ತಿಂಗಳು ಬಿಡುವಿಲ್ಲದೆ ಒಂದಾದರೊಂದರಂತೆ ಭಾಷಣ ಮಾಡಿದೆ. ಮನೆಯಲ್ಲಿ ಶಾಲು, ಮೈಸೂರು ಪೇಟಾಗಳ ಸಂಗ್ರಹಾಗಾರವೇ ಸೃಷ್ಟಿಯಾಯಿತು. ಆಮೇಲೆ ಒಂದು ದಿನ ಇದ್ದಕ್ಕಿದ್ದ ಹಾಗೇ ಅನ್ನಿಸಿತು- ಮೈಸೂರಿಗೆ ಬಂದು ಆರು ತಿಂಗಳಾಯಿತು, ಒಂದಕ್ಷರ ಬರೆದಿಲ್ಲ. ಒಂದಕ್ಷರ ಓದಿಲ್ಲ. ಬರೀ ಭಾಷಣ ಮಾಡ್ಕೊಂಡು ಓಡಾಡ್ತಾ ಇದ್ದೀನಿ. ಆಗ ನನಗೆ ಅನಿಸ್ತು ‘ಉತ್ಸವಮೂರ್ತಿ ಊರಾಡಿದಷ್ಟು ಮೂಲದೇವರ ಮಹಿಮೆ ಕಮ್ಮಿಯಾಗುತ್ತೆ’ ಎಂದು. ದಯವಿಟ್ಟು ಯಾರೂ ನನ್ನನ್ನು ಭಾಷಣಕ್ಕೆ ಕರೆಯಬೇಡಿ. ಬರೀಬೇಕೆಂಬ ಆಸೆ ನನಗಿದೆ, ಬರೆಸಬೇಕು ಎಂಬ ಆಸೆ ನಿಮಗಿದ್ದರೆ ಭಾಷಣಕ್ಕೆ ಕರೀಬೇಡಿ.

ಪ್ರೀತಿಯ ಜೀವ ಮಹಾದೇವಯ್ಯ

ಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇರುತ್ತಿದ್ದ ಮಹಾದೇವಯ್ಯ ಎಂಬ ಸನ್ಯಾಸಿಗೆ ನನ್ನ ಕಂಡರೆ ತುಂಬಾ ಪ್ರೀತಿ. ನನ್ನನ್ನು ತೊಡೆ ಮೇಲೆ ಕೂರಿಸಿಕೊಂಡು ರಾಗಿ ಮುದ್ದೆ ತಿನ್ನಿಸೋರು. ಮೂರ್ನಾಲ್ಕು ವರ್ಷಕ್ಕೊಮ್ಮೆ ಪ್ಲೇಗ್ ಬಂದರೆ ಊರಿನ 50-60 ಜನ, ಒಂದೇ ಮನೆಯ ಇಬ್ಬರು-ಮೂವರು ಸಾಯೋರು. ನಮ್ಮ ಮನೆಯಲ್ಲೂ ಹಾಗೇ ಆಯಿತು. ಪ್ಲೇಗ್​ನಿಂದ ನನ್ನಕ್ಕ ಮತ್ತು ಅಣ್ಣ ಇಬ್ಬರೂ ಎರಡೇ ಗಂಟೆ ಅಂತರದಲ್ಲಿ ಮರಣ ಹೊಂದಿದರು. ನನಗೂ ಪ್ಲೇಗ್ ಆವರಿಸಿಕೊಂಡಿತ್ತು. ಅತ್ತ ನನ್ನ ಅಕ್ಕ ಮತ್ತು ಅಣ್ಣನ ಶವಗಳನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯುತ್ತಿದ್ದಂತೆ ನನ್ನಮ್ಮ ನನ್ನನ್ನು ಎತ್ತಿಕೊಂಡು ಕೆರೆ ಏರಿ ಮೇಲೆ ಹೋಗಿ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಜನೆ ಮಾಡುತ್ತಿದ್ದ ಮಹಾದೇವಯ್ಯನವರ ತೊಡೆ ಮೇಲೆ ಹಾಕಿದಳು. ‘ನಾನು ತುಂಬಾ ನತದೃಷ್ಟೆ. ಪ್ಲೇಗ್​ನಿಂದ ಇಬ್ಬರು ಮಕ್ಕಳು ಪ್ರಾಣಬಿಟ್ಟಿದ್ದಾರೆ. ಇವನಿಗೂ ಪ್ಲೇಗ್ ಬಡಿದುಕೊಂಡಿದೆ. ಈಗ ಇವನು ನನ್ನ ಮಗ ಅಲ್ಲ, ನಿಮ್ಮ ಮಗ. ಅವನು ಬದುಕುತ್ತಾನೋ, ಸಾಯ್ತಾನೋ ನಂಗೆ ಗೊತ್ತಿಲ್ಲ. ಮುಂದೆ ಅವನು ನಿಮ್ಮ ಹಾಗೆ ಸನ್ಯಾಸಿಯಾದ್ರೂ ಚಿಂತೆಯಿಲ್ಲ, ಆದ್ರೆ ಅವನು ಬದುಕುಳಿಯಬೇಕು’ ಅಂತ ಹೇಳಿ ಅಳುತ್ತ ಮನೆ ಹಾದಿ ಹಿಡಿದಿದ್ದಳು. ಮುಂದೆ, ಏನಾಯಿತೋ ಗೊತ್ತಿಲ್ಲ, ನಾನು ಬದುಕಿಕೊಂಡೆ. ಇದನ್ನು ನೆನಪಿಸಿಕೊಂಡಾಗೆಲ್ಲ ಶಂಕರಾಚಾರ್ಯರು ನೆನಪಾಗ್ತಾರೆ. ಅಮ್ಮ ಕೂಡ ಶಂಕರಾಚಾರ್ಯರ ತಾತ್ವಿಕತೆಗೆ ಬಂದುಬಿಟ್ಟಿದ್ದಳಾ?

ತಮ್ಮನ ಶವ ಹೊತ್ತುಕೊಂಡು ಹೋದೆ

ಹೈಸ್ಕೂಲ್ ಮೊದಲನೇ ವರ್ಷ ಚೆನ್ನರಾಯಪಟ್ಟಣದಲ್ಲಿ ಓದ್ತಾ ಇದ್ದೆ. ಟಾಕೀಸ್​ನಲ್ಲಿ ತಿಂಗಳಿಗೆ ಐದು ರೂಪಾಯಿ ಸಂಬಳಕ್ಕೆ ಗೇಟ್ಕೀಪರ್ ಕೆಲಸ ಮಾಡ್ತಾ ಇದ್ದೆ. ಒಂದು ಚಿಕ್ಕ ಕೋಣೆ ಬಾಡಿಗೆಗೆ ಪಡೆದಿದ್ದೆ. ಸೆಕೆಂಡ್ ಶೋ ಮುಗಿಸಿ ಮನೆಗೆ ತಲುಪಿ ರಾತ್ರಿ ಮಲಗುವಷ್ಟರಲ್ಲಿ ತಡವಾಗುತ್ತಿತ್ತು. ಅದೊಂದು ದಿನ ಬೆಳಗ್ಗೆ 6 ಗಂಟೆಗೇ ಯಾರೋ ಕೋಣೆ ಬಾಗಿಲು ಬಡಿದ ಸದ್ದಾಯಿತು. ಎಲೆಕ್ಟ್ರಿಕಲ್ ಡಿಪಾರ್ಟ್​ವೆುಂಟ್​ನ ವ್ಯಕ್ತಿಯೊಬ್ಬ ಬಂದು ‘ನಿನ್ನ ತಮ್ಮ ಸತ್ತು ಹೋಗಿದ್ದಾನಂತೆ. ಬೇಗ ಊರಿಗೆ ಬರಬೇಕಂತೆ’ ಅಂತ ಹೇಳಿದ. ಆಗ ನನಗೆ 15 ವರ್ಷ, ತಮ್ಮನಿಗೆ 5 ವರ್ಷ. ಗಂಟೆಗೆ ಎರಡಾಣೆ ಅಂತೆ ಸೈಕಲ್ ಬಾಡಿಗೆಗೆ ಪಡೆದು ಸಂತೇಶಿವರಕ್ಕೆ ತಲುಪಿದೆ. ಅಜ್ಜಿಯೊಬ್ಬಳೇ ಶವದ ಮುಂದೆ ಕುಳಿತಿದ್ದಳು. ಆ ಹೊತ್ತಿಗಾಗಲೇ ಅಮ್ಮ ತೀರಿಹೋಗಿದ್ದಳು. ಊರಿನ ಜಾತಿಯಸ್ಥರು ಯಾರೂ ಬಂದಿರಲಿಲ್ಲ. ಮುಂದೇನು ಮಾಡೋದು ಅಂತ ನನಗೂ ತೋಚಲಿಲ್ಲ. ನಮ್ಮ ಊರಿನ ಕರಡಿ ಎಂಬ ವ್ಯಕ್ತಿ ಬಂದು ‘ಎಷ್ಟು ಹೊತ್ತು ಇಟ್ಟುಕೊಂಡ್ರೂ ಅಷ್ಟೇಯಪ್ಪ, ಮುಂದಿನ ಕೆಲಸ ಮುಗಿಸು’ ಎಂದ. ಕರಡಿ ಸೌದೆ ವ್ಯವಸ್ಥೆ ಮಾಡಿದ. ಒಂದು ಕೈಯಲ್ಲಿ ನಾನು ಮಡಿಕೆ ಹಿಡ್ಕೊಂಡು ಮತ್ತೊಂದು ಕೈಯಿಂದ ಶವವನ್ನು ಭುಜದ ಮೇಲೆ ಎತ್ತಿಕೊಂಡು ಸ್ಮಶಾನದತ್ತ ನಡೆದುಕೊಂಡೇ ಹೋದೆ! ಕರಡಿಯೇ ಶಾಸ್ತ್ರ ಹೇಳಿದ. ಬೆಳಗ್ಗೆಯಿಂದ ಸೈಕಲ್ ಹೊಡ್ಕೊಂಡು ಬಂದಿದ್ದರಿಂದ ಹೊಟ್ಟೆ ತುಂಬಾನೇ ಹಸೀತಾ ಇತ್ತು. ಮನೆಯಲ್ಲಿ ತಿನ್ನಲು ಏನೂ ಇರಲಿಲ್ಲ. ಆಗ ಅಜ್ಜಿ ಎದುರುಮನೆಯ ದೇವರಾಯನವರ ಮನೆಯಿಂದ ಜೋಳದ ಹಿಟ್ಟೋ, ರಾಗಿ ಹಿಟ್ಟೋ ಇಸ್ಕೊಂಡು ಬಾ ಅಂತ ಕಳುಹಿಸಿದಳು. ಅವರ ಮನೆಗೆ ಹೋಗಿ ಅಜ್ಜಿ ಹೇಳಿದ್ದನ್ನು ಹೇಳಿದೆ. ಶಾನುಭೋಗರಾದ ದೇವರಾಯನವರು ಇರಪ್ಪ ಅಂತ ಹೇಳಿ ಹಿಟ್ಟು ತರಲು ಒಳಗೆ ಹೋದರು. ಬೆನ್ನಿಗೇ ಅವರ ಹೆಂಡತಿ ಸಂಪಮ್ಮ ಬಂದು ಅವರನ್ನ ತಡೆದು ‘ಕೊಡ್ತೀನಿ ಅಂತೀರಲ್ಲ, ಅದೆಲ್ಲ ಎಲ್ಲಿಂದ ಬರುತ್ತೆ’ ಅಂತ ಗದರಿಸಿದಳು. ಅವರ ಮನೆಯಲ್ಲಿ ಒಂದು ಆಳಿನ ಎತ್ತರದಷ್ಟು ಜೋಳ ಬಿದ್ದಕೊಂಡು ಇರೋದು. ಈ ಸಂಪಮ್ಮ ಬೇರೆ ಯಾರೂ ಅಲ್ಲ. ಈಕೆಗೆ ರಂಗಣ್ಣ ಅಂತ ಮಗು ಜನಿಸಿತ್ತು. ಅದೇನೋ ಬಾಣಂತಿ ಸನ್ನೆಯಂತೆ, ಸಂಪಮ್ಮ ಮಗುವನ್ನೇ ಕೊಲ್ಲಲು ಹೋಗೋಳು. ಇನ್ನು ಎದೆಹಾಲು ಕುಡಿಸೋದಂತೂ ದೂರದ ಮಾತು. ಅದಕ್ಕೆ ನನ್ನಮ್ಮ ನನಗೆ ಎದೆಹಾಲು ಸ್ವಲ್ಪ ಕುಡಿಸಿ, ರಂಗಣ್ಣನಿಗೂ ಕುಡಿಸುತ್ತಿದ್ದಳು. ಅದಕ್ಕೆ ದೇವರಾಯನವರು ಹೆಂಡತಿ ಮೇಲೆ ಗದರಿ ‘ನೀನೇನು ಮನುಷ್ಯಳೇನೆ. ನಿನ್ನ ಮಗುಗೆ ಅವರಮ್ಮ ಎದೆಹಾಲು ಕುಡಿಸಿದ್ಲು. ಇವತ್ತು ಆಕೆ ಮಗ ಸತ್ತಿದಾನೆ. ಹಾಗೆ ನೋಡಿದ್ರೆ ನೀನೇ ಅಡುಗೆ ಮಾಡಿ ಅವರ ಮನೆಯಲ್ಲಿ ಇಟ್ಟುಬರಬೇಕು. ಅಂಥದ್ದರಲ್ಲಿ ಒಂದಿಷ್ಟು ಜೋಳ ಕೊಡೋಕು ತಡೀತಿಯಲ್ಲ…’ ಎಂದರು. ಆದರೆ, ಸಂಪಮ್ಮ ಒಪ್ಪಲಿಲ್ಲ. ಅವರ ವಿರೋಧಕ್ಕೆ ದೇವರಾಯನವರು ಅಸಹಾಯಕರಾಗಿ ‘ನಾನು ಏನು ಮಾಡ್ಲಪ್ಪ ಮಗು…’ ಅಂತ ಅಳುವಿನ ಸ್ವರದಲ್ಲಿ ಪ್ರಶ್ನಿಸಿದರು. ನಾನು ಮನೆಗೆ ಮರಳಿ ಬಂದೆ. ಒಂದು ಗಂಟೆ ಹೆಚ್ಚಾದರೂ ಮತ್ತೆ ಎರಡಾಣೆ ಬಾಡಿಗೆ ಕೊಡಬೇಕಾಗುತ್ತಿತ್ತು. ಹಾಗಾಗಿ, ಮತ್ತದೇ ಸೈಕಲ್ ಹೊಡೆದುಕೊಂಡು ಚನ್ನರಾಯಪಟ್ಟಣಕ್ಕೆ ಬಂದೆ.

ಸಾಹಿತ್ಯಕ್ಕೆ ಬೇಡ ಎಡ-ಬಲದ ಹಂಗು

ರಸಾನಂದವನ್ನು ಬ್ರಹ್ಮಾನಂದದ ಸಹೋದರ ಎನ್ನುತ್ತಾರೆ ನಿಜ. ಆದರೆ, ಕಲೆಯ ಗುರಿ ಏನು ಎಂಬುದು ಮೂಲ ಪ್ರಶ್ನೆ. ಕೆಲವರು ಕಲೆಯ ಗುರಿ ಸಮಾಜವನ್ನು ಉದ್ಧಾರ ಮಾಡುವುದು ಅಂತಾರೆ. ‘ನಮ್ಮ ಸಿದ್ಧಾಂತಕ್ಕೆ ಅನುಗುಣವಾಗಿ ಸಮಾಜ ತಿದ್ದುವುದು ಕಲೆಯ ಗುರಿ’ ಎಂದು ಎಡಪಂಥೀಯರು ಹೇಳುತ್ತಾರೆ. ಸಮಾಜ ಬದಲಾವಣೆ ಮಾಡುವುದು ಸಾಹಿತ್ಯ, ಸಾಹಿತಿಯ ಕೆಲಸವಲ್ಲ. ಮನುಷ್ಯ ಜೀವನದಲ್ಲಿ ಬರುವಂಥ ಭಾವನೆಗಳು, ತಾಕಲಾಟ, ಗಂಭೀರ ಸಮಸ್ಯೆಗಳು ಓದುಗರ ಅನುಭವಕ್ಕೆ ಬರುವಂತೆ ವರ್ಣಿಸುವುದು ಸಾಹಿತಿಯ ಕೆಲಸವೇ ಹೊರತು ಎಡ-ಬಲಗಳ ಹಂಗು ಇರಬಾರದು. ಸೈದ್ಧಾಂತಿಕ ಕೃತಿಗಳು ಬಹುಕಾಲ ಬಾಳುವುದಿಲ್ಲ.

ಭೇಟಿ ತಂದ ಮುದ

ಎಸ್.ಎಲ್.ಭೈರಪ್ಪ ಅವರ ಬಾಲ್ಯಜೀವನದಲ್ಲಿ ಮಹತ್ವವೆನಿಸಿದ ಸಂತೇಶಿವರದ ಹಲವು ತಾಣಗಳಿಗೆ ಭೈರಪ್ಪ ಅಭಿಮಾನಿಗಳು, ಸಾಹಿತ್ಯಾಸಕ್ತರು ಭೇಟಿ ನೀಡಿದರು. ಭೈರಪ್ಪ ಸಾಹಿತ್ಯದಲ್ಲಿ ಪ್ರಸ್ತಾಪಗೊಂಡ ಈ ತಾಣತಳಾದ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ, ಕೆರೆ, ತೋಟ, ರಂಗನಗುಡ್ಡ, ಶಾಲೆ, ಸ್ಮಶಾನ ಸೇರಿ ಹಲವು ಸ್ಥಳಗಳನ್ನು ಕಂಡು ಖುಷಿಪಟ್ಟರು. ಬಳಿಕ ಭೈರಪ್ಪನವರು ಸಂವಾದ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ಏಳು ಹೆಡೆ ಸರ್ಪ ನನ್ನ ಮಾವ!

ಬಾಗೂರಿನ ಕೆರೆ ಹಿಂಬದಿಯಲ್ಲಿರೋ ನಾಗೇಶ್ವರ ದೇವಸ್ಥಾನಕ್ಕೆ ನನ್ನ ಸೋದರಮಾವನೇ ಅಫಿಷಿಯಲ್ ಪೂಜಾರಿ. ನಾನು ಬೆಳಗ್ಗೆ ಬೇಗ ಎದ್ದು ಮಡಿಯಲ್ಲಿ ದೇವಸ್ಥಾನಕ್ಕೆ ಹೋಗಿ, ಹೂವು ಕೊಯ್ದು ಪೂಜೆ ಮಾಡಿ ಬರ್ತಿದ್ದೆ. ನಾಗೇಶ್ವರ ದೇವಸ್ಥಾನವಾಗಿದ್ದರಿಂದ ಅಲ್ಲಿ ಏಳು ಹಡೆ ಸರ್ಪ ಇರುತ್ತೆ ಅಂತ ತುಂಬಾ ಜನ ಭಾವಿಸಿದ್ರು. ಅದೊಂದು ದಿನ ಶಾಲೆ ಮುಗಿದ ಮೇಲೆ ಹಸಿವಾಗ್ತಾ ಇತ್ತು. ಅಲ್ಲೇ ಇರೋ ಗದ್ದೆಯಿಂದ ಸೊಪ್ಪಿನ ಕಡಲೆ ತಗೊಂಡು ತಿಂದೆ. ಆವಾಗೊಂದು ಯೋಚನೆ ಹೊಳೆಯಿತು. ದಿನಾ ಬೆಳಗ್ಗೆ ಸ್ನಾನ ಮಾಡಿ, ಉಪವಾಸದಿಂದ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡ್ತೀನಿ. ಈಗ ಊಟ ಆಗಿದೆ, ಮಧ್ಯಾಹ್ನದ ಹೊತ್ತು. ದೇವರು ಹೇಗೆ ಕಾಣಬಹುದು, ನಿಜಕ್ಕೂ ಏಳುಹೆಡೆ ಸರ್ಪ ಕಾಣಬಹುದಾ ಅಂತ ನಾಗೇಶ್ವರನ ದೇವಸ್ಥಾನಕ್ಕೆ ಹೋದೆ. ಧೈರ್ಯ ಮಾಡಿ ಒಳಗೆ ಹೋಗಲು ಅನುವಾದೆ. ಇನ್ನೇನು ಒಳಪ್ರವೇಶಿಸಬೇಕು ಅನ್ನೋವಷ್ಟರಲ್ಲಿ ಹೆಣ್ಣಿನ ದನಿ ‘ನಿಮ್ಮ ಹುಡ್ಗ ನಿಮ್ಮ ಹುಡ್ಗ’ ಅಂತ ಕೇಳಿಸಿತು. ಕ್ಷಣಾರ್ಧದಲ್ಲೇ ಹೆಣ್ಣುಮಗಳೊಬ್ಬಳು ಸೆರಗು ಸರಿಮಾಡಿಕೊಳ್ಳುತ್ತ ನನ್ನನ್ನು ನೂಕಿ ಅಲ್ಲಿಂದ ಓಡಿಹೋದಳು. ಒಳಗಡೆಯಿಂದ ಪಂಚೆ ಸರಿ ಮಾಡಿಕೊಳ್ಳುತ್ತ ಬಂದ ನನ್ನ ಸೋದರಮಾವ. ಆಗ ಗೊತ್ತಾಯ್ತು, ಇಲ್ಲಿರೋ ಏಳುಹೆಡೆ ಸರ್ಪ ಯಾವುದು ಅಂತ!

ಬದುಕಲ್ಲಿ ಭಯ ಬಿತ್ತಿದ ಸೋದರಮಾವ

ನಮಗೆ ಗುಂಡಪ್ಪ ಮೇಷ್ಟ್ರು ಅಂತ ಇದ್ರು. ಅವರು ಅಮ್ಮಂಗೆ ಹೇಳಿದ್ರು- ‘ನೋಡವ್ವ ನಿನ್ನ ಗಂಡ ಊರೂರು ತಿರಗ್ತಾ ಇರ್ತಾನೆ. ಮಕ್ಳಿಗೆ ಗಂಡಸರ ಭಯ ಬೇಕು. ನೀನು ಭೈರಪ್ಪಂಗೆ ನಿನ್ನ ಅಣ್ಣನ ಮನೆಯಲ್ಲಿ ಒಂದೆರಡು ವರ್ಷ ಬಿಡು, ಸರಿಹೋಗಬಹುದು’. ಅಮ್ಮಂಗೂ ಇದು ಸರಿಯೆನಿಸಿ, ಬಾಗೂರಿನಲ್ಲಿದ್ದ ಸೋದರಮಾವನ ಮನೆಗೆ ಕರೆದುಕೊಂಡು ಹೋದರು. ನನ್ನ ಸೋದರಮಾವ ಪೊಲೀಸ್ ಪೇದೆಯಾಗಿದ್ದು ತಾನೇ ಕಳ್ಳತನ ಮಾಡಿ ಕೆಲಸ ಕಳೆದುಕೊಂಡವ! ಹಾಗಾಗಿ, ಟಾರ್ಚರ್ ನೀಡುವ ಪೊಲೀಸ್ ಪದ್ಧತಿಯೆಲ್ಲ ಅವನಿಗೆ ಗೊತ್ತಿತ್ತು. ಅದನ್ನೆಲ್ಲ ನನ್ಮೇಲೆಯೇ ಪ್ರಯೋಗಿಸಿದ. ಅಮ್ಮ ನನ್ನ ಬಗ್ಗೆ ಇವ ಹಿಂಗೇ, ನೀರು ಕಂಡ್ರೆ ಹಿಂದೆಮುಂದೆ ನೋಡದೆ ಹಾರ್ತಾನೆ, ನಾಟಕ-ಮೇಳ ಅಂತೆಲ್ಲ ಸುತ್ತುತ್ತಾನೆ ಎಂದು ಸೋದರಮಾವನಿಗೆ ಹೇಳಿ ಒಂದು ದಿನ ಇದ್ದು ಮರುದಿನ ಊರಿಗೆ ವಾಪಸಾದಳು. ಅದೊಂದು ದಿನ ಕೆರೆ ಹತ್ರ ಕರಕೊಂಡು ಹೋದ ಸೋದರಮಾವ ‘ಈಜ್ತಿಯೇನೋ’ ಅಂತ ಕೇಳಿದ. ‘ಹುಂ’ ಅಂದೆ. ತಕ್ಷಣವೇ ನೀರಿಗೆ ಧುಮುಕಿದೆ. ಕೆರೆಯ ಅರ್ಧದಷ್ಟು ದೂರ ಕ್ರಮಿಸಿ ವಾಪಸಾದೆ. ಅಲ್ಲಿರುವ ಜನರೆಲ್ಲ ನಿಬ್ಬೆರಗಾದರು. ಆದ್ರೆ ಸೋದರಮಾವ ಕೆರೆ ಹಿಂದಿದ್ದ ನಾಗೇಶ್ವರ ದೇವಸ್ಥಾನಕ್ಕೆ ಕರೆದೊಯ್ದು ನನ್ನ ಜುಟ್ಟು ಹಿಡಿದು ಸರಿಯಾಗಿ ಏಟು ಕೊಟ್ಟ, ಎಷ್ಟೆಂದರೆ ನನಗೆ ಅಳಲು ಕೂಡ ಶಕ್ತಿ ಇರಲಿಲ್ಲ. ನನ್ನ ಈಜುವ ಪ್ರತಿಭೆಗೆ ಸೂಕ್ತ ತರಬೇತಿ ಕೊಟ್ಟಿದ್ರೆ ಬಹುಶಃ ನ್ಯಾಷನಲ್ ಚಾಂಪಿಯನ್ ಆಗ್ತಿದ್ದೆ. ಆದ್ರೆ, ಸೋದರಮಾವ ಮುಂದೆ ಜೀವನದಲ್ಲಿ ಭಯ ಬಿತ್ತುತ್ತಲೇ ಹೋದ.

ಸದ್ಯಕ್ಕಿಲ್ಲ ಹೊಸ ಕೃತಿ

ಈಗ ನನ್ನ ತಲೆ ಖಾಲಿಯಾಗಿದೆ. ಹಿಂದೆಯೂ ಈ ಪರಿಸ್ಥಿತಿ ಅನುಭವಿಸಿದ್ದೇನೆ. ಮತ್ತೆ ಏನೋ ಹೊಳೆದಾಗ ಪಾತ್ರಗಳಿಗೆ ಜೀವತುಂಬಿ ಕಾದಂಬರಿ ಬರೆದಿದ್ದೇನೆ. ಆದರೆ, ಸದ್ಯಕ್ಕೆ ಯಾವುದೇ ಹೊಸ ಕೃತಿ ರಚಿಸುವ ಯೋಚನೆ ಇಲ್ಲ.

ಸೀತೆಯ ಕತೆ ಹೇಳಿರುವೆ

ನಾನು ‘ಉತ್ತರಾಕಾಂಡ’ ಬರೆದಿದ್ದು ಸೀತೆಯ ಕತೆ ಹೇಳುವುದಕ್ಕೇ ಹೊರತು ರಾಮಾಯಣ ಹೇಳಲಲ್ಲ. ಆದರೆ, ಕೆಲವರು, ಈ ಕೃತಿಯಲ್ಲಿ ರಾಮನನ್ನು ಕಡಿಮೆಯಾಗಿ ಕಾಣಲಾಗಿದೆ ಎಂದು ಅಸಮಾಧಾನ ಗೊಂಡಿದ್ದಾರೆ. ಇದು ಸೀತೆಯ ಕಥೆ. ಹಾಗೆಂದ ಮಾತ್ರಕ್ಕೆ ಆಕೆಯನ್ನು ವೈಭವೀಕರಿಸಿಲ್ಲ. ವಾಸ್ತವದ ಸೀತೆಯನ್ನು ಚಿತ್ರಿಸಿರುವೆ. ರಾಮನ ಮನಸ್ಸಿನ ತಲ್ಲಣವನ್ನೂ ಹೇಳಿರುವೆ.

ಕನ್ನಡಕ್ಕೆ ಬೇಕು ಸಂಸ್ಕೃತ

ಕನ್ನಡದ ಪ್ರಶ್ನೆಪತ್ರಿಕೆಯನ್ನು 100 ಅಂಕಗಳ ಬದಲು 150 ಅಂಕಗಳಿಗೆ ಮಾರ್ಪಡಿಸಿ, ಈ ಪೈಕಿ 100 ಕನ್ನಡ ಮತ್ತು 50 ಅಂಕಗಳಿಗೆ ಸಂಸ್ಕೃತದ ಪರೀಕ್ಷೆ ನಡೆಸಬೇಕು. ಮಾಧ್ಯಮಿಕ ಶಿಕ್ಷಣದ ಮೊದಲ ವರ್ಷದಿಂದ ಈ ಕ್ರಮ ಜಾರಿ ಗೊಳಿಸಿದರೆ ವಿದ್ಯಾರ್ಥಿ ಗಳ ಕನ್ನಡ ತುಂಬಾ ಗಟ್ಟಿ ಯಾಗುತ್ತದೆ. ಶುದ್ಧ ಕನ್ನಡದಲ್ಲಿ ಬರೆಯಲು ಸಾಧ್ಯವಾಗುತ್ತದೆ. ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಯಾಗಲು ನಾನೂ ಒಬ್ಬ ಪ್ರಮುಖ ಕಾರಣೀಕರ್ತನಾಗಿದ್ದೇನೆ. ಸಂಸ್ಕೃತದ ಜ್ಞಾನ ಪಡೆಯಲು ಹಿಂದೇಟು ಹಾಕಿದರೆ ನಾವು ಅವಿವೇಕಿಗಳಾಗುತ್ತೇವೆ.

ಇತಿಹಾಸ ತಿರುಚಲಾಗಿದೆ

ನಮ್ಮಲ್ಲಿ ಇತಿಹಾಸದ ಪಠ್ಯಕ್ರಮ ರಾಜಕೀಯದಿಂದ ಪ್ರೇರಿತವಾಗಿದೆ. ಸ್ವಾತಂತ್ರಾ್ಯನಂತರ ವೋಟಿಗಾಗಿ ನಮ್ಮ ರಾಜಕೀಯ ನಾಯಕರು ಬ್ರಿಟಿಷರು ಸಾರಿದ ಮಿಥ್ಯಗಳನ್ನೇ ಮುಂದುವರಿಸಿ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದರು. ಇಂದಿರಾಗಾಂಧಿ ಕಾಲದಲ್ಲಂತೂ ಇದು ತೀವ್ರ ಸ್ವರೂಪ ಪಡೆದುಕೊಂಡಿತು. ಈಗೇನಾದರೂ ಇತಿಹಾಸವನ್ನು ತಿದ್ದಿ, ಸರಿಯಾಗಿ ಬರೆಯಲು ಹೊರಟರೆ ಎಡಪಂಥೀಯರು ಹುಯಿಲೆಬ್ಬಿಸುತ್ತಾರೆ.

ಹರಕೆ ಹೊತ್ತಿದ್ದೆ!

ಸಂತೇಶಿವರದಿಂದ ಮೂರು ಮೈಲಿ ದೂರದಲ್ಲಿರೋ ರಂಗನಗುಡ್ಡದ ರಂಗಸ್ವಾಮಿ ತುಂಬ ಸ್ಟ್ರಾಂಗು ದೇವರು. ಎಲ್ಲೇ ಕಳ್ಳತನವಾದರೂ ಮನೆಯವರು ಬಂದು ಹರಕೆ ಹೊತ್ತುಕೊಂಡರೆ ಕಳ್ಳನಿಗೆ ಏನೋ ಕೆಡುಕಾಗಿ ಅವನೇ ಬಂದು ಕದ್ದ ಮಾಲು ಕೊಟ್ಟು ಹೋಗ್ತಾನೆ ಎಂಬ ನಂಬಿಕೆ ಇತ್ತು. ಸಂತೇಶಿವರದಲ್ಲಿ ರಜೆ ಮುಗಿಸಿ ಬಾಗೂರಿಗೆ ಹೊರಟೆ. ಚಕ್ಕುಲಿ, ಕೊಡಬಳೆಯೆಲ್ಲ ಕಟ್ಟಿಕೊಟ್ಟು ಅಮ್ಮ ಸ್ವಲ್ಪ ದೂರದವರೆಗೂ ನನ್ನ ಜತೆ ಬಂದು ‘ಮುಂದೆ ನೀ ಹೋಗಪ್ಪ’ ಅಂತ ಕಳುಹಿಸಿದ್ದಳು. ಗುಡ್ಡದ ಬುಡಕ್ಕೆ ಬರುತ್ತಿದ್ದಂತೆ ಒಂದು ಯೋಚನೆ ಹೊಳೆಯಿತು. ರಂಗಸ್ವಾಮಿಗೆ ಹರಕೆ ಹೊತ್ತುಕೊಂಡರೆ ಹೇಗೆ… ಅಂತ. ಗುಡ್ಡ ಹತ್ತಿ ಹೋದೆ. ಭಕ್ತಿಯಿಂದ ದೇವರಿಗೆ ಕೈಮುಗಿದು- ‘ನಾನು ಬಾಗೂರು ತಲುಪುವಷ್ಟರಲ್ಲಿ ನನ್ನ ಸೋದರಮಾವ ಸತ್ತುಬಿದ್ದಿರಲಿ’ ಅಂತ ಬೇಡಿಕೊಂಡೆ. ಬಲಗಡೆಯಿಂದ ಹೂವು ಬೀಳುತ್ತಿದ್ದಂತೆ ನಾನು ಧನ್ಯನಾದೆ ಎಂದುಕೊಂಡು ಹೂವನ್ನು ಕಿವಿಗೆ ಸಿಕ್ಕಿಸಿಕೊಂಡು ಹೊರಟೆ. ಆದರೆ, ಸೋದರಮಾವ ಗೋಡೆಗೆ ಒರಗಿ ಬೀಡಿ ಸೇದುತ್ತ, ಹೊಗೆ ಉಗುಳ್ತಾ ಇದ್ದ! ಅಲ್ಲಿಂದ ರಂಗಸ್ವಾಮಿ ಮೇಲಿನ ನಂಬಿಕೆ ಸ್ವಲ್ಪ ಕಡಿಮೆಯಾಯ್ತು!

Leave a Reply

Your email address will not be published. Required fields are marked *

Back To Top