ಹನೂರು: ಲೋಕಸಭೆ ಚುನಾವಣೆ ಕ್ಷಣಕ್ಷಣದ ಫಲಿತಾಂಶವನ್ನು ಮಂಗಳವಾರ ಪಟ್ಟಣ ಸೇರಿದಂತೆ ವಿವಿಧೆಡೆ ಅಂಗಡಿ-ಮುಂಗಟ್ಟುಗಳಲ್ಲಿ ಜನರು ಟಿವಿ ಹಾಗೂ ಮೊಬೈಲ್ ಮೂಲಕ ಕುತೂಹಲದಿಂದ ವೀಕ್ಷಿಸುವುದರ ಮೂಲಕ ಪರಸ್ಪರ ಚರ್ಚೆಯಲ್ಲಿ ತೊಡಗಿದ್ದರು.
ಏ.26 ರಂದು ಲೋಕಸಭೆ ಚುನಾವಣೆ ನಡೆದಿದ್ದು, ಫಲಿತಾಂಶದ ಬಗ್ಗೆ ಕ್ಷೇತ್ರದ ಜನರಲ್ಲಿ ತೀವ್ರ ಕುತೂಹಲ ಮನೆ ಮಾಡಿತ್ತು. ಪ್ರಬಲ ಆಕಾಂಕ್ಷಿಗಳಾದ ಕಾಂಗ್ರೆಸ್‌ನ ಸುನೀಲ್ ಬೋಸ್ ಹಾಗೂ ಬಿಜೆಪಿಯ ಎಸ್.ಬಾಲರಾಜು ಇವರಲ್ಲಿ ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಚಾರವೂ ರಾಜಕೀಯ ವಲಯದಲ್ಲಿ ನಡೆದಿತ್ತು. ದಿನಬೆಳಗಾದಂತೆ ಕಾರ್ಯಕರ್ತರಲ್ಲಿ ಚರ್ಚೆಗಳು ನಡೆಯುತ್ತಿದ್ದವು. ಹಾಗಾಗಿ ಫಲಿತಾಂಶದ ಬಗ್ಗೆ ಕ್ಷೇತ್ರದ ಜನತೆಯಲ್ಲಿ ಕುತೂಹಲ ಹೆಚ್ಚಾಗಿತ್ತು. ಮಂಗಳವಾರ ಬೆಳಗ್ಗೆ 8 ಗಂಟೆಯಾಗುತ್ತಿದ್ದಂತೆಯೇ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಫಲಿತಾಂಶದ ಮಾಹಿತಿಯನ್ನು ತಿಳಿದುಕೊಳ್ಳುವ ಬಗ್ಗೆ ಇನ್ನಿಲ್ಲದ ಕಾಳಜಿ ತೋರಿದರು.
ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಮನೆಯಲ್ಲಿದ್ದುಕೊಂಡೇ ಟಿವಿ ಮೂಲಕ ಫಲಿತಾಂಶದ ಬಗ್ಗೆ ಮಾಹಿತಿ ಪಡೆದರಲ್ಲದೆ, ಹನೂರು ಸೇರಿದಂತೆ ಇನ್ನಿತರ ಕಡೆಗಳಲ್ಲಿ ಕೆಲಸ ಕಾರ್ಯಗಳ ನಿಮಿತ್ತ ಆಗಮಿಸಿದ ರಾಜಕೀಯ ಕಾಳಜಿ ಉಳ್ಳವರು ನಿಂತ ಸ್ಥಳದಲ್ಲಿಯೇ ಮೊಬೈಲ್ ಮೂಲಕ ಚುನಾವಣಾ ಫಲಿತಾಂಶವನ್ನು ವೀಕ್ಷಿಸಿದರಲ್ಲದೆ ಕೆಲವು ಅಂಗಡಿ-ಮುಂಗಟ್ಟುಗಳಲ್ಲಿ ಟಿವಿ ಮೂಲಕ ಫಲಿತಾಂಶವನ್ನು ಕುತೂಹಲದಿಂದ ವೀಕ್ಷಿಸಿದರು. ಈ ವೇಳೆ ಪರಸ್ಪರ ಚರ್ಚೆಗಳು ಸಾಮಾನ್ಯವಾಗಿತ್ತು.
ಮಧ್ಯಾಹ್ನ 2 ಗಂಟೆಯಾಗುತ್ತಿದ್ದಂತೆಯೇ ಆರಂಭದಿಂದಲೂ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಜಯಗಳಿಸಿದ ಸುದ್ದಿ ತಿಳಿದು ಕಾಂಗ್ರೆಸ್ಸಿಗರು ಸಂತಸ ವ್ಯಕ್ತಪಡಿಸಿದರು. ಕಾರ್ಯಕರ್ತರು, ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸುನೀಲ್ ಬೋಸ್ ಅವರಿಗೆ ಅಭಿನಂದನೆ ಸಲ್ಲಿಸುವ ವಿಡಿಯೋ ಹಾಗೂ ಫೋಟೋಗಳು ಹರಿಯಬಿಟ್ಟು ಸಂತಸ ಹಂಚಿಕೊಂಡರು.