ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ಸೇರಿದಂತೆ ಮುಂದಿನ ಎಲ್ಲ ಚುನಾವಣೆಗಳನ್ನು ಜೆಡಿಎಸ್ ಮತ್ತು ಬಿಜೆಪಿ ಒಟ್ಟಾಗಿ ನಡೆಸಬೇಕಾ ಎಂಬುದನ್ನು ಪಕ್ಷದ ಕೋರ್ ಕಮಿಟಿಯಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಹೇಳಿದರು.
ಮುಖ್ಯವಾಗಿ ಶಿವಮೊಗ್ಗ ಮಹಾನಗರ ಪಾಲಿಕೆಗೆ ಚುನಾವಣೆಯನ್ನು ತ್ವರಿತವಾಗಿ ನಡೆಸಿ ಎಂಬುದು ನಮ್ಮ ಒತ್ತಾಯವಾಗಿದೆ. ಜನಪ್ರತಿನಿಧಿಗಳಿಲ್ಲದೆ ಕುಡಿಯುವ ನೀರಿನ ಸಂಪರ್ಕ ಸೇರಿದಂತೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಸರ್ಕಾರ ಚುನಾವಣೆ ಮಾಡಲು ಹಿಂದೇಟು ಹಾಕುತ್ತಿದೆ. ಪಾಲಿಕೆ ವ್ಯಾಪ್ತಿ ವಿಸ್ತರಣೆ ಆಗಬೇಕು ಎನ್ನುವುದು ಒಂದೆಡೆ ಇದೆ. ಸುತ್ತಮುತ್ತ ಹಳ್ಳಿಗಳನ್ನು ಸೇರ್ಪಡೆ ಮಾಡಬೇಕೆಂಬ ಚರ್ಚೆ ನಡೆಯುತ್ತಿದೆ. ಸ್ವತಃ ಜಿಲ್ಲಾಧಿಕಾರಿಗಳೇ ಚುನಾವಣೆ ನಡೆಸುವಂತೆ ಪಾಲಿಕೆ ಆಯುಕ್ತರಿಗೆ ನಾಲ್ಕು ಬಾರಿ ಪತ್ರ ಬರೆದಿದ್ದರೂ ಆಯುಕ್ತರಿಂದ ಮರು ಉತ್ತರ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಮುಖರಾದ ದೀಪಕ್ ಸಿಂಗ್, ನರಸಿಂಹ ಗಂಧನಮನೆ, ಸಿದ್ದಪ್ಪ, ಎಚ್.ಎಂ.ಸಂಗಯ್ಯ, ಜಯಣ್ಣ, ಸಂಜಯ್ ಕಶ್ಯಪ್, ಸಿದ್ದೇಶ್ವರ, ಪ್ರವೀಣ್, ಅರುಣ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.