ರಿಯಾಯಿತಿ ದರ ನಿಗದಿಗೆ ಒತ್ತಾಯ

ತಾಳಿಕೋಟೆ: ಗ್ರಾಮೀಣ ಪ್ರದೇಶದಿಂದ ತೆರಳುವ ಬಸ್​ಗಳಿಗೆ ರಿಯಾಯಿತಿ ದರ ರದ್ದುಪಡಿಸಿದ್ದು, ಕೂಡಲೇ ನಿಗದಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಘಟಕ ವ್ಯವಸ್ಥಾಪಕ ರವಿ ಅಂಚಿಗಾವಿ ಮೂಲಕ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಈ ಮೊದಲು ಪಟ್ಟಣದಿಂದ ವಿಜಯಪುರಕ್ಕೆ ತೆರಳುವ ಸಮಯದಲ್ಲಿ ಗ್ರಾಮೀಣ ಭಾಗದಲ್ಲಿ ನಿಲ್ಲುವ ವಾಹನಗಳಿಗೆ ರಿಯಾಯಿತಿ ದರ ನಿಗದಿಪಡಿಸಲಾಗಿತ್ತು. ಆದರೆ, ಇತ್ತೀಚಿಗೆ ರಿಯಾಯಿತಿ ದರ ರದ್ದುಗೊಳಿಸಿ ವೇಗದೂತ ವಾಹನಗಳ ದರವನ್ನು ಆಕರಣೆ ಮಾಡಲಾಗುತ್ತಿದೆ. ಅಲ್ಲದೆ, ಸಾಮಾನ್ಯ ವಾಹನಗಳ ಸಂಖ್ಯೆಗಳನ್ನು ಸಹ ಕಡಿತಗೊಳಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ರಿಯಾಯಿತಿ ದರ ರದ್ದುಪಡಿಸಿದ್ದರಿಂದ ರೈತರು, ಸೇರಿದಂತೆ ಸಾಮಾನ್ಯ ನಾಗರಿಕರಿಗೆ ಹೊರೆಯಾಗುತ್ತಿದೆ. ರಿಯಾಯಿತಿ ದರವನ್ನು ಅಳವಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಸಾರ್ವಜನಿಕರೊಂದಿಗೆ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಾಲೂಕು ಅಧ್ಯಕ್ಷ ನಿಸಾರ ಬೇಪಾರಿ, ಪ್ರಭುಗೌಡ ಪಾಟೀಲ, ನಬಿ ಲಾಹೋರಿ, ಮಂಜು ಬಡಿಗೇರ, ಪ್ರಭು ಅಣ್ಣಿಗೇರಿ, ಅಶೋಕ ಗುರು ಜಲಕರ, ಅಜೀಜ ಮನ್ಸೂರ, ಭಾಷಾ ಮೈತ್ರಿ, ವಿರೇಶ ಜವಳಗೇರಿ, ಸುರೇಶ ಬಿರಾದಾರ, ಸೌರಭ ಕುಲಕರ್ಣಿ, ಬುಡ್ಡಾ ಉಣ್ಣಿಬಾವಿ, ಇಬ್ರಾಹಿಂ ಪಟ್ಟೆವಾಲೆ, ಚಂದ್ರು ಕಸಬೇಗೌಡರ ಇತರರು ಇದ್ದರು.