ವಿರಾಜಪೇಟೆ: ವಿದ್ಯಾರ್ಥಿಯು ಪಠ್ಯದೊಂದಿಗೆ ಪಠ್ಯೇತರ, ದೈಹಿಕ ಶಿಕ್ಷಣ, ಸಾಮಾಜಿಕ ಶಿಕ್ಷಣ ಹಾಗೂ ಇನ್ನಿತರ ಶಿಕ್ಷಣವನ್ನು ಕಲಿಯುತ್ತಾನೆ. ಶಿಕ್ಷಣದೊಂದಿಗೆ ಸಾಮಾಜಿಕ ಮೌಲ್ಯಗಳನ್ನು ಕಲಿಯುವಂತಹ ಗುಣಗಳನ್ನು ಹೊಂದಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಂ.ಕೆ.ಜ್ಯೋತಿ ಪ್ರಕಾಶ್ ತಿಳಿಸಿದರು.
ಸಂತ ಅನ್ನಮ್ಮ ಪದವಿ ಕಾಲೇಜು ವಿರಾಜಪೇಟೆ ದೈಹಿಕ ಶಿಕ್ಷಣ ವಿಭಾಗ ಮತ್ತು ಐ.ಕ್ಯೂ,ಎ.ಸಿ ಹಾಗೂ ಬಿ.ಬಿ.ಎ ವಿಭಾಗದ ಸಹಯೋಗದಲ್ಲಿ ಗುರುವಾರ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಅಂತರ ಕಾಲೇಜು ಪುರುಷರ ಕಾಲ್ಚೆಂಡು ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜು ಶಿಕ್ಷಣವು ವಿಧ್ಯಾರ್ಥಿಯನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ಸೃಷ್ಟಿಸಿ ಸಮಾಜಕ್ಕೆ ನೀಡುತ್ತದೆ. ತಾವು ಧರಿಸುವ ಬಟ್ಟೆ, ಧರಿಸುವ ಸಂಸ್ಥೆಯ ಲಾಂಛನ, ನಡೆ-ನುಡಿ, ಗುಣ, ಹಾವ-ಭಾವದಿಂದ ವಿಧ್ಯಾರ್ಥಿಯ ಗುಣಮಟ್ಟವನ್ನು ನಿರ್ಧರಿಸುತ್ತದೆ. ದೈಹಿಕವಾಗಿ ಆರೋಗ್ಯದಿಂದಿರಲು ಕ್ರೀಡೆಯು ಸಹಕಾರಿಯಾಗಿದೆ. ಕ್ರೀಡಾಪಟುವಿಗೆ ಶಿಸ್ತು, ಸಂಯಮ ಮುಖ್ಯ. ಅಲ್ಲದೆ ದುರಭ್ಯಾಸದಿಂದ ಹೊರಬರಲು ಕ್ರೀಡೆಯು ಪ್ರಮುಖ ಪಾತ್ರ ವಹಿಸುತ್ತದೆ. ಪುಸ್ತಕದಲ್ಲಿರುವ ವಿಷಯಗಳಿಗೆ ಅಡಕವಾಗದೆ ಪ್ರಾಪಂಚಿಕ ಜ್ಞಾನ ಹೊಂದಲು ವಿದ್ಯಾರ್ಥಿಗಳು ಶ್ರಮವಹಿಸಬೇಕು. ಅಲ್ಲದೆ ಸಾಮಾಜಿಕ ಮೌಲ್ಯಗಳ ಅಡಿಪಾಯದೊಂದಿಗೆ ಸಮಾಜದ ಮುಖ್ಯವಾಹಿನಿ ಬರುವ ಛಲ ಹೊಂದಬೇಕು ಎಂದು ಹೇಳಿದರು.
ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಮದಲೈ ಮುತ್ತು ಮಾತನಾಡಿ, ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಸಾಮರಸ್ಯ ಬೆಸೆಯುವ ಸಮಾನತೆಯನ್ನು ಸೃಷ್ಟಿ ಮಾಡುವ ಶಕ್ತಿಯಾಗಿದೆ. ಕ್ರೀಡೆಗಳಲ್ಲಿ ಭಾಗವಹಿಸುವುದರೊಂದಿಗೆ ಸ್ನೇಹ ವೃದ್ಧಿಯಾಗಿ ವೈರತ್ವ ಮಾಯವಾಗುತ್ತದೆ. ಸಂತ ಅನ್ನಮ್ಮ ವಿದ್ಯಾ ಸಂಸ್ಥೆಯು ಪಠ್ಯೇತರ ಶಿಕ್ಷಣದೊಂದಿಗೆ ದೈಹಿಕ ಶಿಕ್ಷಣ, ಕಲೆ, ಸಂಸ್ಕೃತಿ ಮತ್ತು ಇತರ ಶಿಕ್ಷಣಗಳನ್ನು ವಿಧ್ಯಾರ್ಥಿಗಳಿಗೆ ನೀಡಿ ಉತ್ತಮ ವಿದ್ಯಾರ್ಥಿಯನ್ನಾಗಿ ರೂಪಿಸಲು ಶ್ರಮಿಸುತ್ತಿದೆ ಎಂದರು.
ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲ ತೃಪ್ತಿ ಬೋಪಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜು ಶಿಕ್ಷಣದಲ್ಲಿ ದೈಹಿಕ ಶಿಕ್ಷಣಕ್ಕೂ ಮಹತ್ವ ನೀಡಿರುವ ನಮ್ಮ ಸಂಸ್ಥೆಯು ಪ್ರಥಮ ಬಾರಿಗೆ ಅಂತರ ಕಾಲೇಜು ರಾಷ್ಟ್ರ ಮಟ್ಟದ ಕಾಲ್ಚೆಂಡು ಪಂದ್ಯಾಟವನ್ನು ಆಯೋಜಿಸಿದೆ. ಪದವಿ ವಿಭಾಗದ ಬಿ.ಬಿ.ಎ ಮತ್ತು ದೈಹಿಕ ಶಿಕ್ಷಣ ವಿಭಾಗದ ಜಂಟಿ ಆಶ್ರಯದಲ್ಲಿ ಎರಡು ದಿನಗಳ ಪಂದ್ಯಾಟಗಳು ನಡೆಯಲಿವೆ ಎಂದು ಹೇಳಿದರು.
ಪಂದ್ಯಾಟದಲ್ಲಿ ಕೊಡಗು ಜಿಲ್ಲೆ ಸೇರಿದಂತೆ ರಾಜ್ಯ ಮತ್ತು ಅಂತರ ರಾಜ್ಯಗಳ ಸುಮಾರು 28 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿವೆ ಎಂದರು.
ಕಾಲೇಜಿನ ಬಿ.ಬಿ.ಎ ವಿಭಾಗದ ಮುಖ್ಯಸ್ಥ ಹೇಮಾ ಬಿ.ಡಿ., ಪದವಿ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ರಾಜ ರೈ, ಪದವಿ ಕಾಲೇಜಿನ ಕ್ರೀಡಾ ಕಾರ್ಯದರ್ಶಿ ಕಾವೇರಪ್ಪ ಎನ್.ಡಿ., ವಿದ್ಯಾರ್ಥಿ ಸಂಚಾಲಕ ರಹೀಂ ಉಪಸ್ಥಿತರಿದ್ದರು.
ಪಂದ್ಯಾವಳಿಯ ಪ್ರಥಮ ಪಂದ್ಯಾಟವು ಸಂತ ಅನ್ನಮ್ಮ ಪದವಿ ಕಾಲೇಜು ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿರಾಜಪೇಟೆ ತಂಡಗಳ ಮಧ್ಯೆ ನಡೆದು 1-1 ಗೋಲುಗಳಿಂದ ಸಮ ಸಾಧಿಸಿದ ಹಿನ್ನಲೆಯಲ್ಲಿ ಪೆನಾಲ್ಟಿ ಶೂಟೌಟ್‌ಗೆ ಮನವಿ ಮಾಡಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಸಂತ ಅನ್ನಮ್ಮ ಕಾಲೇಜು ತಂಡ 2-0 ಗೋಲುಗಳಿಂದ ವಿಜಯವಾಯಿತು. ಶೇಷಪ್ಪ ಅಮ್ಮತ್ತಿ, ನಿದೀಶ್ ಮತ್ತು ಶ್ರೀನಿವಾಸ್ ಒಂಟಿಅಂಗಡಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಸಂತ ಅನ್ನಮ್ಮ ಪದವಿ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು, ದೈಹಿಕ ಶಿಕ್ಷಣ ಶಿಕ್ಷಕರು ಹಾಜರಿದ್ದರು.