ಗುತ್ತಿಗೆದಾರರಿಗೆ ಶಾಸಕ ಶರತ್ ಬಚ್ಚೇಗೌಡ ಎಚ್ಚರಿಕೆ ವಿವಿಧ ರಸ್ತೆ ಕಾಮಗಾರಿಗೆ ಚಾಲನೆ
ನಂದಗುಡಿ: ಜನರ ನಿರೀಕ್ಷೆಯಂತೆ ಪಾರದರ್ಶಕ ಅಡಳಿತ ನೀಡುವುದು, ಸರ್ವರಿಗೂ ಸಮಪಾಲು ಸಮಬಾಳು ಎಂಬಂತೆ ಅಭಿವೃದ್ಧಿ ಪಥದಲ್ಲಿ ಮುನ್ನೆಡೆಸುವುದೇ ಜನಪ್ರತಿನಿಧಿಯ ಕರ್ತವ್ಯ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ನಂದಗುಡಿಯ ಹೋಬಳಿ ಇಟ್ಟಸಂದ್ರದಲ್ಲಿ 15 ಲಕ್ಷ ರೂಪಾಯಿ, ಹಿಂಡಿಗನಾಳದಲ್ಲಿ 30 ಲಕ್ಷ ರೂಪಾಯಿ, ತರಬಹಳ್ಳಿ 15 ಲಕ್ಷ ರೂಪಾಯಿ, ದಳಸಗೆರೆ 10 ಲಕ್ಷ ರೂಪಾಯಿ, ನಡುವಿನಪುರದಲ್ಲಿ 10 ಲಕ್ಷ, ಚೊಕ್ಕಸಂದ್ರದಲ್ಲಿ 10 ಲಕ್ಷ, ಬೀರಹಳ್ಳಿ 10 ಲಕ್ಷ ರೂಪಾಯಿ ವೆಚ್ಚದ ಮುಖ್ಯಮಂತ್ರಿಗಳ ವಿಶೇಷ ಅನುದಾನ ಲೆಕ್ಕ ಶೀರ್ಷಿಕೆ 30-54ರ ಕಾಮಗಾರಿ ಅಡಿಯಲ್ಲಿ ಸಿ.ಸಿ.ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ರಸ್ತೆಗಳ ಅಭಿವೃದ್ಧಿಗೆ ಒತ್ತು ಕೊಟ್ಟು, ದೀರ್ಘಕಾಲ ಬಾಳಿಕೆ ಬರುವಂತೆ ಗುಣಮಟ್ಟಕ್ಕೆ ಆದ್ಯತೆ ನೀಡಿ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅಭಿವೃದ್ಧಿ ಕಾಮಗಾರಿಗಳಲ್ಲಿ ಕಳಪೆ ಕಂಡುಬಂದಲ್ಲಿ ಸಂಬಂಧಪಟ್ಟ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು
ಸೂಚಿಸಲಾಗುವುದು ಎಂದರು.
ತಾಲೂಕಿನಾದ್ಯಂತ ಎಲ್ಲ ಗ್ರಾಪಂಗಳ ವ್ಯಾಪ್ತಿಯ ಹಳ್ಳಿಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡಲಾಗುತ್ತಿದ್ದು, ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಗ್ರಾಮಗಳಲ್ಲಿ ಬಹಳಷ್ಟು ರಸ್ತೆಗಳ ಡಾಂಬರೀಕರಣ ಮತ್ತು ಸಿಮೆಂಟ್ ಕಾಂಕ್ರೀಟ್ ಮಾಡಲಾಗಿದೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಅಗತ್ಯತೆಗೆ ಅನುಗುಣವಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದರು.
ತಾಪಂ ಮಾಜಿ ಅಧ್ಯಕ್ಷ ಕೆಂಚೇಗೌಡ, ಮಾಜಿ ಸದಸ್ಯ ಬೀರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ಸಗೀರ್ ಅಹಮದ್ ನೂರುಲ್ಲಾ, ಗ್ರಾಪಂ ಸದಸ್ಯರಾದ ರಮೇಶ್, ಬಿಂದು ದೇವೇಗೌಡ, ರೂಪ ಚನ್ನಕೇಶವ, ರಾಮಾಂಜಿನಪ್ಪ, ಮುರುಳಿ, ಎನ್.ಎನ್. ಮಂಜುನಾಥ್, ಎಸ್‌ಎಫ್‌ಸಿಎಸ್ ಅಧ್ಯಕ್ಷ ನಾರಾಯಣಪ್ಪ, ನಿರ್ದೇಶಕ ಎನ್.ಡಿ.ರಮೇಶ್, ಎನ್.ಶ್ರೀನಿವಾಸ್, ದೊಡ್ಮನೆ ರಮೇಶ್, ಮುಖಂಡರಾದ ಚೊಕ್ಕಸಂದ್ರ ದೇವರಾಜು, ಮೋಹನ್,
ಗುತ್ತಿಗೆದಾರ ವಿನಯ್ ಇದ್ದರು.