More

    ಗೈರು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ

    ಹಿರೇಕೆರೂರ: ವೇಳೆಗೆ ಸರಿಯಾಗಿ ಬಾರದ ಹಾಗೂ ಸಭೆಗೆ ಗೈರಾದ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ ಸಂಬಂಧಿಸಿದ ಮಂತ್ರಿಗಳಿಗೆ ಪತ್ರ ಬರೆದು ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಬಿ.ಸಿ. ಪಾಟೀಲ ಎಚ್ಚರಿಕೆ ನೀಡಿದರು.

    ಪಟ್ಟಣದ ತಾಪಂ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಬಿ.ಸಿ. ಪಾಟೀಲ, ಸಭೆಗೆ ಗೈರಾದ ಆಯಾ ಇಲಾಖೆಗಳ ಅಧಿಕಾರಿಗಳ ವಿರುದ್ಧ ತಾಪಂ ಇಒಗೆ ಶಿಸ್ತು ಕ್ರಮ ತಗೆದುಕೊಳ್ಳುವಂತೆ ಸೂಚಿಸಿದರು.

    ತಡವಾಗಿ ಬಂದ ಕೃಷಿ, ಕೆ.ಎಸ್.ಆರ್.ಟಿ.ಸಿ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ, ಸರ್ವೆ, ಹೆಸ್ಕಾಂ ಅಧಿಕಾರಿಗಳನ್ನು ಸಭೆಯಲ್ಲಿ ನಿಲ್ಲಿಸಿ ತರಾಟೆಗೆ ತಗೆದುಕೊಂಡ ಪಾಟೀಲ, ಇವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗಳ ಮಂತ್ರಿಗಳಿಗೆ ಪತ್ರ ಬರೆಯಲು ತಿಳಿಸಿದರು.

    ಧಾರವಾಡದಲ್ಲಿ ಜರುಗುತ್ತಿರುವ ಕೃಷಿ ಮೇಳದ ಕುರಿತು ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಮಾಹಿತಿ ಇಲ್ಲ, ಈ ಬಗ್ಗೆ ತಾಲೂಕಿನಲ್ಲಿ ಪ್ರಚಾರವನ್ನೂ ಮಾಡಿಲ್ಲ. ತಾಲೂಕಿನಿಂದ ಕೃಷಿ ಮೇಳಕ್ಕೆ ಕಳುಹಿಸಿದ 50 ರೈತರನ್ನು ಯಾರಿಗೂ ತಿಳಿಸದೆ ತಾವೆ ಆಯ್ಕೆ ಮಾಡಿ ಕಳುಹಿಸಿದ್ದೀರಿ. ಇದು ಸರಿಯೇ? ಎಂದು ಕೃಷಿ ಅಧಿಕಾರಿಗಳನ್ನು ಶಿವರಾಜ ಹರಿಜನ ಪ್ರಶ್ನಿಸಿದರು. ಇದಕ್ಕೆ ಉಳಿದ ಸದಸ್ಯರು ಕೂಡ ಧ್ವನಿಗೂಡಿಸಿದರು. ಮಧ್ಯ ಪ್ರವೇಶಿಸಿದ ಶಾಸಕ ಬಿ.ಸಿ.ಪಾಟೀಲ, ಎಲ್ಲ ತಾಪಂ, ಜಿಪಂ ಸದಸ್ಯರಿಗೆ ತಿಳಿಸಬೇಕು. ಮುಂದೆ ಹೀಗಾಗದಂತೆ ನೋಡಿಕೊಳ್ಳಿ ಎಂದರು.

    ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಈ ತಾಲೂಕಿಗೆ ಒಳ್ಳೆಯ ಫಲಿತಾಂಶ ಬರಲು ಎಲ್ಲ ಪೂರ್ವಭಾವಿ ತಯಾರಿ ನಡೆಸಬೇಕು ಎಂದು ಸೂಚಿಸಿದರು.

    ವಿವಿಧ ಇಲಾಖೆಗಳ ಕುರಿತು ಪ್ರಗತಿ ಪರೀಶಿಲನೆ ನಡೆಸಲಾಯಿತು.

    ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ತಾಪಂ ಅಧ್ಯಕ್ಷ ರಾಜು ಬಣಕಾರ, ಉಪಾಧ್ಯಕ್ಷೆ ಹನುಮವ್ವ ಜಡಿಯಣ್ಣನವರ, ಜಿಪಂ ಸದಸ್ಯರಾದ ಶಿವರಾಜ ಹರಿಜನ, ಸುಮಿತ್ರಾ ಪಾಟೀಲ, ಮಹದೇವಕ್ಕ ಗೋಪಕ್ಕಳಿ, ಪ್ರಕಾಶ ಬನ್ನಿಕೋಡ, ಎನ್.ಎಂ. ಈಟೇರ, ತಹಸೀಲ್ದಾರ್ ರಿಯಾಜುದ್ದಿನ್ ಭಾಗವಾನ್, ತಾಪಂ ಇಒ ಶ್ರೀನಿವಾಸ ಎಚ್.ಜಿ., ರಟ್ಟಿಹಳ್ಳಿ ಇಒ ಮೊಹನಕುಮಾರ ಹಾಗೂ ಅಧಿಕಾರಿಗಳು ಇದ್ದರು.

    ಪಡಿತರ ಅಕ್ಕಿ ಸದ್ಬಳಕೆಯಾಗಲಿ: ಪಡಿತರ ಚೀಟಿಯಲ್ಲಿ ವಿತರಿಸಲಾದ ಆಹಾರ ಧಾನ್ಯಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ. ಈ ಅಕ್ಕಿಯನ್ನು ಖರೀದಿಸುವ ವ್ಯಾಪಾರಸ್ಥರ ಮೇಲೆ ನಿಗಾವಹಿಸಿ ಶಿಸ್ತು ಕ್ರಮಕೈಗೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಎಲ್ಲ ಬಿಪಿಎಲ್ ಪಡಿತರ ಚೀಟಿದಾರರಿಗೆ 1 ಲೀಟರ್ ಸೀಮೆ ಎಣ್ಣೆ ವಿತರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ನೇರವಾಗಿ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗೆ ಬಂದು ಸೀಮೆ ಎಣ್ಣೆ ಪಡೆಯುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಶಾಸಕರು ಸೂಚಿಸಿದರು.

    ವೈಯಕ್ತಿಕ ಬಹುಮಾನ ಘೊಷಣೆ: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 95ರಷ್ಟು ಅಂಕ ಪಡೆದು ತೇರ್ಗಡೆಯಾದ ತಾಲೂಕಿನ ಸರ್ಕಾರಿ ಹಾಗೂ ಖಾಸಗಿ ಶಾಲೆ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ತಲಾ 5 ಸಾವಿರ ರೂ. ಬಹುಮಾನ ನೀಡುವುದಾಗಿ ಶಾಸಕ ಬಿ.ಸಿ. ಪಾಟೀಲ ಸಭೆಯಲ್ಲಿ ಘೊಷಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts