ಕೆಲವು ಅಸಾಮಾನ್ಯ ಬೆಳವಣಿಗೆಗಳು ಘಟಿಸತೊಡಗಿವೆ. ಅನಾರೋಗ್ಯದ ನೆಪವೊಡ್ಡಿ ಬಿಎನ್ಪಿ ನಾಯಕಿ ಖಲೀದಾ ಜಿಯಾ ಏಕಾಏಕಿ ಲಂಡನ್ಗೆ ತೆರಳಿದ್ದಾರೆ. ಅವರು ಪ್ರಯಾಣಿಸಿದ್ದು ಕತಾರ್ನ ಸುಲ್ತಾನ ಒದಗಿಸಿದ ವಿಮಾನದಲ್ಲಿ! ಅನಾರೋಗ್ಯ ಒಂದು ನೆಪವಷ್ಟೇ, ಅವರ ಪ್ರಯಾಣದ ಉದ್ದೇಶ ರಾಜಕೀಯ ವ್ಯೂಹ ರಚಿಸಲು ಎಂದು ಹೇಳಲಾಗುತ್ತಿದೆ.
ಪದ್ಮಾ ನದಿಯಲ್ಲಿ 2024ರ ಆಗಸ್ಟ್ 5ರ ನಂತರದ ಐದು ತಿಂಗಳುಗಳಲ್ಲಿ ಅದೆಷ್ಟು ನೀರು ಹರಿದುಹೋಗಿದೆ! ಸೇನಾ ದಂಡನಾಯಕ ಜನರಲ್ ಝುಮಾನ್ರ ಸಹಕಾರದೊಂದಿಗೆ ಮಧ್ಯಂತರ/ಉಸ್ತುವಾರಿ ಸರ್ಕಾರದ ಮುಖ್ಯ ಸಲಹೆಗಾರ ಅಂದರೆ ಅಧಿಕಾರದ ವ್ಯಾಪ್ತಿಯ ದೃಷ್ಟಿಯಲ್ಲಿ ಪ್ರಧಾನಮಂತ್ರಿಯ ಸ್ಥಾನ ವಹಿಸಿಕೊಂಡ ಮಹಮದ್ ಯೂನುಸ್ ಅನತಿಕಾಲದಲ್ಲೇ ಮೂಲಭೂತವಾದಿ ಜಮಾತ್-ಎ-ಇಸ್ಲಾಮಿಯ ಪ್ರಭಾವದಲ್ಲಿ ಸರಿಸುಮಾರು ಪೂರ್ಣವಾಗಿ ಸಿಲುಕಿಹೋದರು. ಪರಿಣಾಮವಾಗಿ ದೇಶದಲ್ಲಿ ಇರಾನ್ ಮಾದರಿಯ ಇಸ್ಲಾಮಿಕ್ ಮೂಲಭೂತವಾದಿ ಆಡಳಿತದ ಸ್ಥಾಪನೆಯತ್ತ ಅವರು ಹೆಜ್ಜೆ ಇಡತೊಡಗಿದರು. ಆ ಹಾದಿಯಲ್ಲಿ ಅವರಿಗೆ ಮುಳ್ಳಾಗಿ ಕಂಡದ್ದು ಜ. ಝುಮಾನ್ ಅವರೇ. ಜಮಾತ್ ಮತ್ತದರ ಪೋಷಕ ಪಾಕಿಸ್ತಾನದ ಐಎಸ್ಐ ಸಹಕಾರದಿಂದ ತಾವು ಸ್ಥಾಪಿಸಬಯಸಿರುವ ವ್ಯವಸ್ಥೆಯಲ್ಲಿ ಆಂತರಿಕ ರಾಜಕಾರಣದಲ್ಲಿ ಸೇನೆಯ ಪ್ರಭಾವ ಇಲ್ಲವೆನ್ನುವ ಮಟ್ಟಿಗೆ ಕಡಿಮೆಯಾಗಬೇಕೆಂದು ಯೂನುಸ್ರಿಗೆ ಮನವರಿಕೆಯಾಯಿತು. ಇದಕ್ಕೂ ಅವರು ಪರಿಹಾರ ಕಂಡುಕೊಂಡದ್ದು ಇರಾನ್ನಲ್ಲಿನ ವ್ಯವಸ್ಥೆಯಲ್ಲೇ- ದೇಶದ ಸೇನೆಯ ಕಾರ್ಯವ್ಯಾಪ್ತಿಯನ್ನು ಗಡಿಗಳಿಗಷ್ಟೇ ಸೀಮಿತಗೊಳಿಸುವುದು ಮತ್ತು ದೇಶದೊಳಗೆ ತಮ್ಮ ಮೂಲಭೂತವಾದಿ ವ್ಯವಸ್ಥೆಯ ರಕ್ಷಣೆಗೆ ‘ಇಸ್ಲಾಮಿಕ್ ರೆವಲ್ಯೂಷನರಿ ಆರ್ವಿು’ (ಐಆರ್ಎ) ಅನ್ನು ಕಟ್ಟಿಕೊಳ್ಳುವುದು. ನೊಬೆಲ್ ಪ್ರಶಸ್ತಿ ಪುರಸ್ಕೃತರ ಲೆಕ್ಕಾಚಾರವೇನೋ ಭರ್ಜರಿಯಾದದ್ದೇ. ಆದರೆ ಬಾಂಗ್ಲಾದೇಶದ ವಸ್ತುಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದರಲ್ಲಿ ಅವರು ದಾರುಣವಾಗಿ ವಿಫಲರಾಗಿರುವುದೇ ದುರಂತ.
ಬಾಂಗ್ಲಾದೇಶದ ಇದುವರೆಗಿನ ಐವತ್ತಮೂರು ವರ್ಷಗಳ ಇತಿಹಾಸದಲ್ಲಿ ಹದಿಮೂರು ವರ್ಷಗಳು ನೇರವಾಗಿ, ಒಂಬತ್ತು ವರ್ಷಗಳು ಪರೋಕ್ಷವಾಗಿ, ಉಳಿದೆಲ್ಲ ಕಾಲದಲ್ಲಿ ಚುನಾಯಿತ ಸರ್ಕಾರಗಳು ತನ್ನ ಬೆಂಬಲ ಹಾಗೂ ಸರ್ಕಾರವಿಲ್ಲದೆ ಒಂದು ದಿನವೂ ನಿಲ್ಲಲಾಗುವುದಿಲ್ಲ ಎಂಬ ಸ್ಥಿತಿಯನ್ನು ನಿರ್ವಿುಸಿಕೊಂಡೇ ಬಂದಿರುವ, ಇಬ್ಬರು ರಾಷ್ಟ್ರಾಧ್ಯಕ್ಷರನ್ನು ಕೊಂದಿರುವ, ಒಬ್ಬರು ಪ್ರಧಾನಮಂತ್ರಿಯನ್ನು (ಜೀವಸಹಿತ) ಹೊರಗೆ ಕಳಿಸಿರುವ ಬಾಂಗ್ಲಾದೇಶಿ ಸೇನೆ ತನ್ನನ್ನೀಗ ಇನ್ನೇನು ಮುರಿದುಬೀಳಲಿರುವ ಅಮೆರಿಕದ ಡೆಮೋಕ್ರಾಟಿಕ್ ಸರ್ಕಾರದ ಮತ್ತು 1971ರಲ್ಲಿ ಪಾಕಿಸ್ತಾನದ ಪರವಾಗಿ ನಿಂತಿದ್ದ ಜಮಾತ್ನ ವಯಸ್ಕ ಕೈಗೊಂಬೆಯೊಂದು ಮೂಲೆಗುಂಪಾಗಿಸುವುದನ್ನು ಒಪ್ಪಿಕೊಳ್ಳುತ್ತದೆಯೇ? ಅದರಲ್ಲೂ ತಮ್ಮ ಬೆಂಬಲ ಹಾಗೂ ಸಹಕಾರದಿಂದಲೇ ಅಧಿಕಾರ ಸ್ಥಾನ ಹಿಡಿದು ಕೂತ ಯೂನುಸ್ ಈಗ ಮೇಲೆ ಹತ್ತಿಬಂದ ಏಣಿಯನ್ನೇ ಒದೆಯಲು ಹೊರಟಿರುವುದನ್ನು ಜ. ಝುಮಾನ್ ಸಹಿಸುತ್ತಾರೆಯೇ? ಅಲ್ಲದೆ ಯೂನುಸ್ ಸರ್ಕಾರದ ಹರಕತ್ಗಳಿಂದಾಗಿ ಭಾರತದೊಂದಿಗಿನ ಸಂಬಂಧಗಳು ಸೂಕ್ಷ್ಮವಾಗುತ್ತಿರುವ ಈ ದಿನಗಳಲ್ಲಿ ಗಡಿಯಲ್ಲಿ ತಮ್ಮ ಸೇನೆ ಭಾರತೀಯ ಸೇನೆಯೊಂದಿಗೆ ಸಣ್ಣಪ್ರಮಾಣದ ತಿಕ್ಕಾಟದಲ್ಲಿ ಸದಾ ತೊಡಗಿರಬೇಕಾಗುತ್ತದೆಂದೂ, ತಮ್ಮ ಸಮಯ ಹಾಗೂ ಶಕ್ತಿ ಪೂರ್ಣವಾಗಿ ಅದರಲ್ಲಿ ವ್ಯರ್ಥವಾಗಿ ಹೋಗುತ್ತದೆಂದೂ ಝುಮಾನ್ರಿಗೆ ಗೊತ್ತು. ಪರಿಸ್ಥಿತಿ ಒಂದಲ್ಲ ಒಂದು ದಿನ ಕೈಮೀರಿ ಭಾರತದೊಂದಿಗೆ ನೇರ ಯುದ್ಧವೇನಾದರೂ ಆರಂಭವಾಗಿಬಿಟ್ಟರೆ ಅದರಲ್ಲಿ ತಮ್ಮ ಸೇನೆ ಕ್ಷಿಪ್ರಕಾಲದಲ್ಲಿ ಮಣ್ಣುಮುಕ್ಕುವುದು ನಿಶ್ಚಿತ, ಆಗ ಅದನ್ನೇ ನೆಪವಾಗಿಸಿಕೊಂಡು ತಮ್ಮನ್ನು ಬಂಧಿಸಲು, ಇಸ್ಲಾಮಿಕ್ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಪಡಿಸಲು ಯೂನುಸ್ ಹಿಂಜರಿಯಲಾರರು ಎಂದೂ ಅವರಿಗೆ ಗೊತ್ತಿದೆ. ಹೀಗಾಗಿ ತಮ್ಮ ಹುನ್ನಾರಗಳನ್ನು ನಿರಾತಂಕವಾಗಿ ಜಾರಿಗೊಳಿಸಲು ಅವರೆಂದೂ ಯೂನುಸ್ ಮತ್ತು ಜಮಾತ್ಗೆ ಅವಕಾಶ ನೀಡಲಾರರು.
ಮೊದಲಿಗೆ ಯೂನುಸ್ ವಿರುದ್ಧದ ಪತ್ರಕರ್ತರನ್ನು ಬಂಧಿಸಲು ತಾವು ತಯಾರಿಲ್ಲ ಎಂದು ತೋರಿಸಿಕೊಂಡು, ನಂತರ ಯೂನುಸ್ ಅವರ ಜತೆ ಮಾತಾಡಲೂ ತಾವು ತಯಾರಿಲ್ಲ ಎಂದೂ ಹೇಳಿ ತಮ್ಮ ಅಸಂತೋಷವನ್ನು ಹೊರಹಾಕಿದ ಝುಮಾನ್, ತಾವು ಸ್ಥಾಪಿಸಹೊರಟಿರುವ ಐಆರ್ಎಗೆ ಪಾಕಿಸ್ತಾನಿ ಕಮ್ಯಾಂಡೋಗಳಿಂದ ತರಬೇತಿ ನೀಡುವ ಯೂನುಸ್ರ ಯೋಜನೆಯನ್ನು ಡಿಸೆಂಬರ್ 29ರಂದು ಸಾರ್ವಜನಿಕವಾಗಿ ಧಿಕ್ಕರಿಸಿ ಉಸ್ತುವಾರಿ ಸರ್ಕಾರದ ನೇತಾರನ ವಿರುದ್ಧದ ತಮ್ಮ ತಿಕ್ಕಾಟದ ಹಾದಿಯಲ್ಲಿ ಒಂದು ದೊಡ್ಡ ಹೆಜ್ಜೆ ಮುಂದಿಟ್ಟರು. ಬಾಂಗ್ಲಾದೇಶದ ಜನಪ್ರಿಯ ಇಂಗ್ಲಿಷ್ ಪತ್ರಿಕೆ ‘ಡೈಲಿ ಸ್ಟಾರ್’ ವರದಿ ಮಾಡಿದ ಪ್ರಕಾರ, ‘ಪಾಕ್ ಸೇನೆ ಬರುತ್ತಿಲ್ಲ, ಬಾಂಗ್ಲಾ ಸೇನೆಗೆ ಪಾಕ್ ಸೇನೆಯಿಂದ ತರಬೇತಿಯ ಅಗತ್ಯವಿಲ್ಲ’ ಎಂದು ಝುಮಾನ್ ಸ್ಪಷ್ಟವಾಗಿ ಹೇಳಿದ್ದಾರೆ. ಆ ಮೂಲಕ ಅವರು ಬಾಂಗ್ಲಾ ಸೇನೆಗೆ ತರಬೇತಿ ನೀಡುವ ನೆಪದಲ್ಲಿ ಪಾಕ್ ಕಮ್ಯಾಂಡೋಗಳನ್ನು ಕರೆಸಿಕೊಂಡು ಅವರಿಂದ ತಮ್ಮ ಐಆರ್ಎಗೆ ತರಬೇತಿ ಕೊಡಿಸುವ ಯೂನುಸ್ರ ಹಂಚಿಕೆಯನ್ನೂ ದೇಶದ ಗಮನಕ್ಕೆ ತಂದಿದ್ದಾರೆ. ಮುಂದುವರಿದು ಅವರು ಭಾರತ ತಮ್ಮ ದೇಶಕ್ಕೆ ಬಹಳ ಮುಖ್ಯ ಎಂದು ಜನವರಿ 1ರಂದು ಉದಾಹರಣೆಗಳ ಮೂಲಕ ಹೇಳಿದರು. ಜತೆಗೆ, ಪರಸ್ಪರ ಸಹಕಾರ ಎರಡೂ ದೇಶಗಳಿಗೆ ಅತ್ಯಗತ್ಯ ಎಂದೂ ಹೇಳಿದರು. ಇಲ್ಲಿ ಎರಡು ವಿಷಯಗಳು ನಮಗೆ ಮುಖ್ಯ. ಒಂದು- ಝುಮಾನ್ರ ಅಭಿಪ್ರಾಯಗಳು ಶೇಖ್ ಹಸೀನಾರ ಅಭಿಪ್ರಾಯಗಳ ಪಡಿಯಚ್ಚು, ಎರಡು- ಅದನ್ನವರು ಹೇಳಿದ್ದು ಶೇಖ್ ಹಸೀನಾರ ಅವಾಮಿ ಲೀಗ್ ಪರವಾದ ಬಂಗಾಲಿ ಸುದ್ದಿಸಂಸ್ಥೆ ‘ಪೊ›ಥೊಮ್ ಆಲೋ’ಗೆ ನೀಡಿದ ಸಂದರ್ಶನದಲ್ಲಿ!. ಅಲ್ಲಿಗೆ ಯೂನುಸ್ ಮತ್ತು ಝುಮಾನ್ ನಡುವೆ ‘ಏನೋ ದೊಡ್ಡದಾಗಿಯೇ ಸರಿಯಿಲ್ಲ’ ಎನ್ನವುದು ಜನಜನಿತವಾದಂತಾಯಿತು. ಜತೆಗೆ ಯೂನುಸ್ ಮತ್ತವರ ಸುತ್ತಮುತ್ತಲೂ ತುಂಬಿಕೊಂಡಿರುವ ಜಮಾತಿಗಳ ಭಾರತ-ವಿರೋಧಿ ನೀತಿಗಳಿಗೆ ಸೇನಾ ದಂಡನಾಯಕರ ಬೆಂಬಲವಿಲ್ಲ ಎನ್ನುವುದೂ ಸ್ಪಷ್ಟವಾಯಿತು. ಮರುದಿನವೇ ಅಂದರೆ ಜನವರಿ 2ರಂದು ಪತ್ರಕರ್ತ ಸಲಾಹ್ಯುುದ್ದೀನ್ ಶೋಯೆಬ್ ಚೌಧರಿ ಹೇಳಿದ್ದು ‘ಜನವರಿ 15ರೊಳಗೆ ಯೂನುಸ್ ಅನಾರೋಗ್ಯದ ನೆಪವೊಡ್ಡಿ ದೇಶದಿಂದ ಓಡಿಹೋಗುತ್ತಾರೆ’ ಎಂದು. ಸೇನೆಯ ಬೆಂಬಲವಿಲ್ಲದೆ ಅಧಿಕಾರದಲ್ಲಿ ಮುಂದುವರಿಯಲು ಯೂನುಸ್ರಿಗೆ ಸಾಧ್ಯವಾಗದು ಎಂಬ ವಾಸ್ತವದ ಆಧಾರದ ಮೇಲೆ ಚೌಧರಿ ಹೀಗೆ ರ್ತಸಿದರೂ ಹಾಗೇನೂ ಆಗುವುದಿಲ್ಲ ಅನಿಸುತ್ತದೆ. ಯೂನುಸ್ ಸುಲಭವಾಗಿ ಸೋಲೊಪ್ಪಿಕೊಂಡು ಓಡಿಹೋಗಲಾರರು, ಮೂಲಭೂತವಾದಿಗಳ ಒಂದು ವರ್ಗದ ಬೆಂಬಲ ತಮಗೆ ಇರುವವರೆಗೂ ತಾವು ಅಧಿಕಾರದಲ್ಲಿ ಮುಂದುವರಿಯಬಹುದು ಎಂಬ ಹುಸಿನಂಬಿಕೆಯಲ್ಲಿ ಅವರಿರುವಂತಿದೆ.
ಕೆಲವು ಅಸಾಮಾನ್ಯ ಬೆಳವಣಿಗೆಗಳು ಘಟಿಸತೊಡಗಿವೆ. ಅನಾರೋಗ್ಯದ ನೆಪವೊಡ್ಡಿ ಬಿಎನ್ಪಿ ನಾಯಕಿ ಖಲೀದಾ ಜಿಯಾ ಏಕಾಏಕಿ ಲಂಡನ್ಗೆ ತೆರಳಿದ್ದಾರೆ. ಅವರು ಪ್ರಯಾಣಿಸಿದ್ದು ಕತಾರ್ನ ಸುಲ್ತಾನ ಒದಗಿಸಿದ ವಿಮಾನದಲ್ಲಿ! ಅನಾರೋಗ್ಯ ಒಂದು ನೆಪವಷ್ಟೇ, ಅವರ ಪ್ರಯಾಣದ ಉದ್ದೇಶ ರಾಜಕೀಯ ವ್ಯೂಹ ರಚಿಸಲು ಎಂದು ಹೇಳಲಾಗುತ್ತಿದೆ. ಅವರ ಮಗ ಹಾಗೂ ಬಿಎನ್ಪಿಯ ಉಸ್ತುವಾರಿ ಅಧ್ಯಕ್ಷ ತಾರಿಖ್ ರಹಮಾನ್ ಇರುವುದು ಲಂಡನ್ನಲ್ಲಿ ಎನ್ನುವುದು ಗಮನಿಸಬೇಕಾದ ಅಂಶ. ಜತೆಗೆ, ಯೂನುಸ್ರನ್ನು ಓಡಿಸಲು, ಮೂಲಭೂತವಾದಿ ವ್ಯವಸ್ಥೆಯ ಸ್ಥಾಪನೆಯನ್ನು ತಡೆಯಲು ತಾವು ಹಸೀನಾರ ಜತೆ ಕೈಜೋಡಿಸುವ ಅಗತ್ಯವಿದೆ ಎಂದು ಖಲೀದಾ ಲೆಕ್ಕಹಾಕಿರುವ ಸುದ್ದಿಗಳಿವೆ. ಅವರಿಬ್ಬರ ನಡುವೆ ಬದ್ಧವೈರವಿದೆ, ನಿಜ. ಆದರೆ 1991ರಲ್ಲಿ ಸೇನಾ ಸರ್ವಾಧಿಕಾರಿ ಜ. ಮಹಮದ್ ಎರ್ಷಾದ್ರನ್ನು ತಾವಿಬ್ಬರೂ ಜತೆಗೂಡಿ ಕೆಳಗಿಳಿಸಿದ್ದರ ನೆನಪು ಅವರಿಗಿದೆ. ರಾಜಕಾರಣದಲ್ಲಿ ಯಾವಾಗ ಯಾರು ಯಾರ ಮಗ್ಗುಲಿಗೆ ಸರಿಯುತ್ತಾರೆಂದು ಹೇಳಲಾಗುವುದಿಲ್ಲ. ಒಟ್ಟಿನಲ್ಲಿ ಬಾಂಗ್ಲಾದೇಶದ ಇಬ್ಬರು ಪ್ರಭಾವಿ ರಾಜಕಾರಣಿಗಳು ಒಟ್ಟಾಗುವುದು ಯೂನುಸ್ರಿಗೆ ಶುಭಸಂಕೇತವೇನಲ್ಲ.
ಇಂತಹ ಸನ್ನಿವೇಶದಲ್ಲಿ ಯೂನುಸ್ ತಮ್ಮ ದೊಡ್ಡ ಬೆಂಬಲದ ಮೂಲವನ್ನು ಕಳೆದುಕೊಳ್ಳಲಿರುವುದು ಅವರ ತಲೆಯ ಮೇಲೆ ತೂಗುಕತ್ತಿಯಾಗಿರುವುದರತ್ತ ಹೊರಳೋಣ. ತಾವು ಅಧಿಕಾರಕ್ಕೆ ಬಂದರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಯಲು ಕ್ರಮ ಕೈಗೊಳ್ಳುವುದಾಗಿ ಟ್ರಂಪ್ ತಮ್ಮ ದೀಪಾವಳಿ ಶುಭಸಂದೇಶದಲ್ಲಿ ಹೇಳಿಯಾಗಿದೆ. ಇದರರ್ಥ ಅವರು ಯೂನುಸ್ರನ್ನು ಕೆಳಗಿಳಿಸಿ ಹಸೀನಾರನ್ನು ಮತ್ತೆ ಪ್ರತಿಷ್ಠಾಪಿಸುತ್ತಾರೆ, ಅದಕ್ಕಾಗಿ ಅಮೆರಿಕನ್ ಸೇನೆಯನ್ನು ಬಳಸುತ್ತಾರೆ ಎಂದಲ್ಲ. ಅವರು ಗಮನ ನೀಡುವುದು ಯೂನುಸ್ ಸರ್ಕಾರದ ಧನಮೂಲಗಳನ್ನು ಬಂದ್ ಮಾಡುವತ್ತ. ಮೇಲೆ ಉಲ್ಲೇಖಿಸಿರುವ ಮೂರು ಫೌಂಡೇಶನ್ಗಳ ಧನದುರ್ವ್ಯವಹಾರಗಳತ್ತ ಟ್ರಂಪ್ ಸರ್ಕಾರದ ಕಣ್ಣು ಬೀಳಲಿದೆ ಎಂಬ ಸೂಚನೆ ದಟ್ಟವಾಗಿದೆ ಮತ್ತು ಅದು ಸೊರೋಸ್, ಕ್ಲಿಂಟನ್, ಒಬಾಮರಿಗೂ ಗೊತ್ತಾಗಿದೆ. ಬದಲಾದ ಸನ್ನಿವೇಶದಲ್ಲಿ ಯೂನುಸ್ರನ್ನು ಬೆಂಬಲಿಸುತ್ತಲೇ ಹೋಗುವುದು ತಮಗೇ ಹಾನಿಕಾರಕವಾಗುತ್ತದೆ ಎಂದೂ ಅವರಿಗೆ ಅರಿವಾಗಿದೆ.
ಬದಲಾದ ಸನ್ನಿವೇಶದಲ್ಲಿ ಯೂನುಸ್ ಅತಿಬುದ್ಧಿವಂತಿಕೆ ತೋರಹೋಗಿ ಬೆಂಬಲಕ್ಕಾಗಿ ಪಾಕಿಸ್ತಾನದತ್ತ ತಿರುಗಿದರು. ತಮ್ಮ ಕ್ಷೇಮಕ್ಕಾಗಿ ಸ್ಥಾಪಿಸಹೊರಟ ‘ಇಸ್ಲಾಮಿಕ್ ರೆವಲ್ಯೂಷನರಿ ಆರ್ವಿು’ (ಐಆರ್ಎ)ಗೆ ಸೇನಾಸಾಮಗ್ರಿಗಳನ್ನು ಆ ದೇಶದಿಂದ ರಹಸ್ಯವಾಗಿ ತರಿಸಿಕೊಳ್ಳಲು ಆರಂಭಿಸಿದ್ದಲ್ಲದೆ ಐಆರ್ಎಗೆ ತರಬೇತಿ ನೀಡಲು ಪಾಕಿಸ್ತಾನಿ ಸೇನೆಯನ್ನೇ ಕೋರಿದರು. ಜತೆಗೆ, ಅಮೆರಿಕದಿಂದ ಭಯೋತ್ಪಾದಕ ಎಂದು ನಾಮಾಂಕಿತನಾಗಿರುವ, ಇಬ್ಬರು ಅಮೆರಿಕನ್ನರ ಜೀವಹಾನಿಗೆ ಕಾರಣನಾಗಿರುವ ಸೈಯದ್ ಜಿಯಾ-ಉಲ್-ಹಕ್ ಎಂಬ ಮಾಜಿ ಬಾಂಗ್ಲಾ ಸೇನಾಧಿಕಾರಿ ಮತ್ತು ಅಲ್-ಖಯೀದಾ ಸದಸ್ಯನನ್ನು ಬಂಧನದಿಂದ ಬಿಡುಗಡೆಗೊಳಿಸಲು ಯೂನುಸ್ ಹೊರಟಿದ್ದಾರೆ. ಟ್ರಂಪ್ರಲ್ಲಿ ಅಳಿದುಳಿದಿರಬಹುದಾಗಿದ್ದ ಸಹಾನುಭೂತಿಯನ್ನು ಪೂರ್ಣವಾಗಿ ಕಳೆದುಕೊಂಡ ನಡೆಗಳಿವು. ತಮ್ಮ ಮೊದಲ ಅವಧಿಯಲ್ಲಿ ಟ್ರಂಪ್ ಇಸ್ಲಾಮಿಕ್ ಭಯೋತ್ಪಾದನೆ ಮತ್ತು ಪಾಕಿಸ್ತಾನದದ ವಿರುದ್ಧ ತೆಗೆದುಕೊಂಡ ಕಠಿಣ ಕ್ರಮಗಳನ್ನು ಯೂನುಸ್ ನೆನಪಿಸಿಕೊಳ್ಳಬೇಕಾಗಿತ್ತು. ತಮ್ಮ ಎರಡನೆಯ ಅವಧಿಯಲ್ಲಿಯೂ ಟ್ರಂಪ್ ಪಾಕಿಸ್ತಾನದ ಬಗ್ಗೆ ಇನ್ನೂ ಹೆಚ್ಚಿನ ಕಠಿಣ ಕ್ರಮಗಳನ್ನು ಕೈಗೊಳ್ಳುವ ಸೂಚನೆ ನೀಡಿದ್ದಾರೆ. ಆ ಕ್ರಮಗಳ ಪರಿಣಾಮ ಸಹಜವಾಗಿಯೇ ಯೂನುಸ್ರಿಗೂ ವಿಸ್ತರಣೆಯಾಗುತ್ತದೆ. ಈ ನಡುವೆ ಯೂನುಸ್ರ ಎದೆಯನ್ನು ಧಸಕ್ಕೆನ್ನಿಸುವ ಎರಡು ವಿಷಯಗಳು ವಾಷಿಂಗ್ಟನ್ನಿಂದ ಬಂದಿವೆ.
ಜನವರಿ 20ರಂದು ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ ಮತ್ತು ಮೀಕ್ ವಾಲ್ಝ್ ಅವರನ್ನು ತಮ್ಮ ರಾಷ್ಟ್ರೀಯ ಸುರಕ್ಷಾ ಸಲಹೆಗಾರ (ಎನ್ಎಸ್ಎ) ಆಗಿ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವುದು ನಿಮಗೆ ಗೊತ್ತು. ಅಮೆರಿಕದ ವಿದೇಶ ಮತ್ತು ರಕ್ಷಣಾ ನೀತಿಗಳನ್ನು ಕುರಿತಂತೆ ಎನ್ಎಸ್ಎ ಬಹಳ ಪ್ರಭಾವಶಾಲಿ ಪದವಿ. ಬಹುತೇಕ ಸಮಯಗಳಲ್ಲಿ ಅದು ವಿದೇಶಾಂಗ ಹಾಗೂ ರಕ್ಷಣಾ ಕಾರ್ಯದರ್ಶಿಗಳಿಗಿಂತಲೂ ಹೆಚ್ಚಿನದಾಗಿರುತ್ತದೆ. ಬೈಡೆನ್ ಆಡಳಿತದ ಅವಧಿಯಲ್ಲಿ ರಾಷ್ಟ್ರೀಯ ಸುರಕ್ಷಾ ಸಮಿತಿಯಲ್ಲಿ ನೇಮಕವಾಗಿರುವ ಎಲ್ಲ ಬೇಹುಗಾರಿಕಾ ಅಧಿಕಾರಿಗಳು ಜನವರಿ 20ರಂದು ‘ಉಚಠಠಿಛ್ಟಿ್ಞ ಖಜಿಞಛಿ 12.01 ಕM’ ಒಳಗೆ ರಾಜೀನಾಮೆ ನೀಡಿ ಹೊರಹೋಗಬೇಕೆಂದು ಹೊಸ ಎನ್ಎಸ್ಎ ವಾಲ್ಝ್ ಆದೇಶಿಸಿದ್ದಾರೆ! ಅಂದರೆ ಬಾಂಗ್ಲಾದೇಶದಲ್ಲಿ (ಬೇರೆಡೆಯೂ ಸಹ) ಕುಟಿಲ ಕಾರಸ್ಥಾನಗಳನ್ನು ನಡೆಸಲು ಬೈಡೆನ್ ಆಡಳಿತ ಮತ್ತು ಅದರ ಹಿಂದೆ ಇದ್ದ ‘ಡೀಪ್ ಸ್ಟೇಟ್’ ನೇಮಿಸಿಕೊಂಡಿದ್ದ ಎಲ್ಲ ಬೇಹುಗಾರರ ಆಟಗಳು ಆ ಗಳಿಗೆಯಿಂದ ಬಂದ್! ಇನ್ನು ಯೂನುಸ್ ಪರವಾಗಿ ಢಾಕಾದಲ್ಲಿ, ವಾಷಿಂಗ್ಟನ್ನಲ್ಲಿ, ಇಸ್ಲಾಮಾಬಾದ್ನಲ್ಲಿ, ಅಖಕಾರಾದಲ್ಲಿ ಕೆಲಸ ಮಾಡುವವರು ಯಾರು? ಇನ್ನು ಸಿಐಎ, ಎಫ್ಬಿಐ ಸೇರಿದಂತೆ ಅಮೆರಿಕದ ಹದಿನೇಳು ಬೇಹುಗಾರಿಕಾ ಇಲಾಖೆಗಳ ನೇತಾರರಾಗಿ ಟ್ರಂಪ್ ನೇಮಿಸಿಕೊಂಡಿರುವುದು ಅಮೆರಿಕನ್ ಹಿಂದೂ ಹಾಗೂ ಇಸ್ಕಾನ್ ಪರವಾಗಿರುವ ತುಳಸಿ ಗ್ಯಾಬಾರ್ಡ್ ಅವರನ್ನು. ಚಿನ್ಮೊಯ್ ಕೃಷ್ಣದಾಸ್ ಬ್ರಹ್ಮಚಾರಿ ಅವರನ್ನು ಯೂನುಸ್ ಸರ್ಕಾರ ಹೇಗೆ ನಡೆಸಿಕೊಳ್ಳುತ್ತಿದೆ ಎಂದು ನೋಡಿರುವವರಿಗೆ ತುಳಸಿ ಗ್ಯಾಬಾರ್ಡ್ ಈ ಕುರಿತಾಗಿ ಯಾವ ನಿಲುವು ತಳೆಯಬಹುದು ಎನ್ನುವುದನ್ನು ಊಹಿಸಿಕೊಳ್ಳುವುದು ಕಷ್ಟವಲ್ಲ.
ಅಭೂತಪೂರ್ವವೆನಿಸುವಂತೆ ಜನವರಿ 20ರಿಂದ ಅಮೆರಿಕದ ಕಾರ್ಯಾಂಗವಾದ ಅಧ್ಯಕ್ಷರು ಮತ್ತು ಶಾಸಕಾಂಗವಾದ ಕಾಂಗ್ರೆಸ್ನ ಉಭಯ ಸದನಗಳು ರಿಪಬ್ಲಿಕನ್ ಪಕ್ಷದ ಕೈಯಲ್ಲಿರುತ್ತವೆ. ಇದೂ ಯೂನುಸ್ಗೆ ಅಪಶಕುನ. ಅದರ ಸೂಚನೆ ಹೊರಬಂದಿದೆ. ಫೆಬ್ರವರಿ 5-6ರಂದು ಕಾಂಗ್ರೆಸ್ನಲ್ಲಿ ವಾರ್ಷಿಕವಾಗಿ ನಡೆಸುವ ‘ನ್ಯಾಷನಲ್ ಪ್ರೇಯರ್ ಬ್ರೆಕ್ಫಾಸ್ಟ್ ಮೀಟಿಂಗ್’ಗೆ ಬಿಎನ್ಪಿಯ ವರಿಷ್ಠ ನಾಯಕರಾದ ಉಸ್ತುವಾರಿ ಅಧ್ಯಕ್ಷ ರಾರಿಖ್ ರಹಮಾನ್, ಮಹಾ ಕಾರ್ಯದರ್ಶಿ ಮಿರ್ಜಾ ಫಕ್ರುಲ್ ಇಸ್ಲಾಂ ಮತ್ತು ಪಕ್ಷದ ಸ್ತಂಭ ಸಮಿತಿಯ ಸದಸ್ಯ ಆಮೀರ್ ಖಝುೂಂ ಚೌಧರಿಯವರನ್ನು ಆಹ್ವಾನಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ರಿಪಬ್ಲಿಕನ್ನರೂ ಸೇರುವುದಾದರೂ ಇದನ್ನು ನಡೆಸುವುದು ಡೆಮೋಕ್ರಾಟಿಕ್ ಪಕ್ಷ. ಇದಕ್ಕೆ ಯೂನುಸ್ರಿಗೆ ಅಥವಾ ಅವರ ಹತ್ತಿರದವರಿಗೆ ಆಹ್ವಾನ ಬಂದ ಸುದ್ದಿ ಇದುವರೆಗೆ ಇಲ್ಲ! ಅಂದರೆ ಡೆಮೋಕ್ರಾಟಿಕ್ ಪಕ್ಷವೂ ಯೂನುಸ್ರನ್ನು ಕೈಬಿಡುತ್ತಿದೆಯೇ?
ಪತ್ರಕರ್ತ ಸಲಾಹ್-ಉದ್-ದೀನ್ ಚೌಧರಿ ಅವರ ಭವಿಷ್ಯವಾಣಿಯಂತೆ ಯೂನುಸ್ ಜನವರಿ 15ರೊಳಗೆ ದೇಶ ಬಿಟ್ಟು ಓಡಿಹೋಗದಿದ್ದರೂ ಫೆಬ್ರವರಿ 15ರ ಹೊತ್ತಿಗೆ ಅದಾಗಬಹುದು. ಆಗ ಶೇಖ್ ಹಸೀನಾ ಮತ್ತೆ ಸ್ವದೇಶಕ್ಕೆ ಹಿಂತಿರುಗಬಹುದು. ಅವರು ಕಾನೂನಿನ ಪ್ರಕಾರ ಈಗಲೂ ಪ್ರಧಾನಮಂತ್ರಿಯೇ. ಆ ಸ್ಥಾನಕ್ಕೆ ಅವರಿನ್ನೂ ರಾಜೀನಾಮೆ ಕೊಟ್ಟಿಲ್ಲ.
ಬಾಂಗ್ಲಾದೇಶ ಕುರಿತ ಸರಣಿ ಇಲ್ಲಿಗೆ ಮುಕ್ತಾಯ. ಆ ದೇಶದೊಂದಿಗೆ ಪಾಕಿಸ್ತಾನ ಮತ್ತು ಮ್ಯಾನ್ಮಾರ್ಗಳಲ್ಲಿ ಘಟಿಸುತ್ತಿರುವ ಬೆಳವಣಿಗೆಗಳು ಭಾರತದ ಸಾಮರಿಕ ಹಿತಾಸಕ್ತಿಗಳ ಮೇಲೆ ಬೀರಬಹುದಾದ ಪರಿಣಾಮಗಳು ಮತ್ತು ಭಾರತಕ್ಕೆ ದಕ್ಕಬಹುದಾದ ಪ್ರಾದೇಶಿಕ ಲಾಭಗಳ ಕುರಿತಾಗಿ ಪ್ರತ್ಯೇಕ ಲೇಖನದಲ್ಲಿ ವಿಶ್ಲೇಷಿಸೋಣ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)
ಗೌತಮ್ ಗಂಭೀರ್ ಬಳಿಕ ಸಂಕಷ್ಟದಲ್ಲಿ ಸಹಾಯಕ ಸಿಬ್ಬಂದಿ; BCCI ನಿರ್ಧಾರದ ಕುರಿತು ಹಿರಿಯ ಅಧಿಕಾರಿಯ ಹೇಳಿಕೆ ವೈರಲ್