ಬೆಂಗಳೂರು: ರಾಜ್ಯ ಬಿಜೆಪಿ ಸಂಘಟನೆಯ ಚುಕ್ಕಾಣಿ ಹೊತ್ತವರು ಬದಲಾಗುತ್ತಲೇ ಸಂಘಟನಾತ್ಮಕ ವಿಚಾರದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಆಪ್ತರನ್ನು ಗುರಿಯಾಗಿಸುವ, ಕಡೆಗಣಿಸುವ ಕಾರ್ಯ ನಡೆಯುತ್ತಿದೆ ಎಂಬ ಅಸಮಾಧಾನ ಪಕ್ಷದಲ್ಲಿ ಬಲವಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷರಾದ ನಂತರದಲ್ಲಿ ಮೇಲ್ಮಟ್ಟದಲ್ಲಿ ಕೆಲ ಬದಲಾವಣೆಗಳಾಗಿದ್ದು, ಪ್ರಮುಖವಾಗಿ ಪ್ರಧಾನ ಕಾರ್ಯದರ್ಶಿಯಾಗಿರುವ ನಿರ್ಮಲ್ಕುಮಾರ್ ಸುರಾನಾ ಜತೆಗೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ಕುಮಾರ್ ಸೇರಿಕೊಂಡು ಕ್ರಿಯಾಶೀಲ ಕಾರ್ಯಕರ್ತರನ್ನು ಕಡೆಗಣಿಸುತ್ತಿ ದ್ದಾರೆ. ಇಲ್ಲಸಲ್ಲದ ನಿಬಂಧನೆ ಹೇರಿ ಪದಾಧಿಕಾರಿಗಳ ಹುದ್ದೆ ನಿರಾಕರಿಸುವುದರ ಜತೆಗೆ ಈ ಹಿಂದೆ ಪಕ್ಷಕ್ಕೆ ಮುಜುಗರ ಉಂಟುಮಾಡಿದವರಿಗೇ ಮಣೆ ಹಾಕುತ್ತಿರುವ ಇಬ್ಬರನ್ನೂ ಹುದ್ದೆಯಿಂದ ವಜಾ ಮಾಡಿಸಬೇಕು ಎಂದು ಅನೇಕರು ಯಡಿಯೂರಪ್ಪ ಬಳಿ ಪಟ್ಟು ಹಿಡಿದಿದ್ದಾರೆ.
ಬದಲಾದ ಶೈಲಿ: ನಳಿನ್ಕುಮಾರ್ ಕಟೀಲ್ ರಾಜ್ಯ ಬಿಜೆಪಿ ಅಧ್ಯಕ್ಷರಾದಾಗಿನಿಂದ ಪಕ್ಷದ ಕಾರ್ಯಶೈಲಿಯಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದೆ. ಮೊದಲಿಗೆ ಯಡಿಯೂರಪ್ಪ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ನಿರ್ಮಲ್ಕುಮಾರ್ ಸುರಾನಾಗೆ ಮತ್ತೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲಾಯಿತು. ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಅಡುಗೆ ಮಾಡುವವರಿಂದ ಆರಂಭಿಸಿ ಕಚೇರಿ ಸಿಬ್ಬಂದಿವರೆಗೆ ಯಡಿಯೂರಪ್ಪ ಕುರಿತು ಮೃದು ಧೋರಣೆ ಇರುವವರನ್ನು ಬದಲಾವಣೆ ಮಾಡಲಾಯಿತು. ಮಾಧ್ಯಮಗಳಿಗೆ ಪಕ್ಷದ ಮಾಹಿತಿ ಸೋರಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಹೊರಿಸಿ ಎಲ್ಲರನ್ನೂ ಬದಲಿಸಿರುವುದು ವಿಶೇಷ. ಎರಡನೆ ಹಂತದಲ್ಲಿ ಜಿಲ್ಲಾ ಮಟ್ಟದ ಪದಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದ್ದು, ಅಲ್ಲೂ ಇದೇ ರೀತಿಯ ವಿಚಿತ್ರ ವರ್ತನೆ ತೋರಲಾಗುತ್ತಿದೆ. ಅನಗತ್ಯ ನಿಬಂಧನೆಗಳನ್ನು ವಿಧಿಸಲಾಗುತ್ತಿದೆ.
ಶಿವಮೊಗ್ಗ ಜಿಲ್ಲಾ ಪದಾಧಿಕಾರಿಗಳ ನೇಮಕ ವಿಚಾರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಜತೆಗೆ ಸ್ವತಃ ಜಿಲ್ಲಾ ಅಧ್ಯಕ್ಷ ರುದ್ರೇಗೌಡರನ್ನೂ ಕಡೆಗಣಿಸಲಾಗಿದೆ. ತುಮಕೂರು, ಬೆಂಗಳೂರು ಗ್ರಾಮಾಂತರ, ಕಲಬುರಗಿ, ದಾವಣಗೆರೆ, ಹಾವೇರಿ, ಕೋಲಾರದಲ್ಲೂ ಇದೇ ರೀತಿ ಮಾಡಲಾಗುತ್ತಿದೆ. ವಯಸ್ಸು ಹೆಚ್ಚಾಗಿರುವ ಕಾರಣ ನೀಡಿ ಅನೇಕರನ್ನು ಪದಾಧಿಕಾರಿ ಮಾಡಲು ಕಡೆಗಣಿಸುತ್ತಿದ್ದಾರೆ ಎಂದು ಅರುಣ್ಕುಮಾರ್ ವಿರುದ್ಧ ಆರೋಪ ಮಾಡಲಾಗುತ್ತಿದೆ. ಇದೇ ವಿಷಯಕ್ಕೆ ಪಕ್ಷದ ಕಚೇರಿಯಲ್ಲಿಯೇ ಜೋರು ಗಲಾಟೆಗಳಾಗಿವೆ ಎಂದು ಹೇಳಲಾಗುತ್ತಿದೆ.
ಯಡಿಯೂರಪ್ಪ ಅಸಮಾಧಾನ
ಅರುಣ್ಕುಮಾರ್ ಹಾಗೂ ನಿರ್ಮಲ್ಕುಮಾರ್ ಸುರಾನ್ ನಡವಳಿಕೆಗೆ ಸಿಎಂ ಯಡಿಯೂರಪ್ಪ ಸಹ ಬೇಸರ ವ್ಯಕ್ತಪಡಿಸಿದ್ದು, ಒಮ್ಮೆ ಅರುಣ್ಕುಮಾರ್ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ. ಈ ರೀತಿ ಪಕ್ಷ ಸಂಘಟನೆ ಮಾಡುವುದಲ್ಲ, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಇಬ್ಬರನ್ನೂ ಹುದ್ದೆಯಿಂದ ಬದಲಿಸಿದರಷ್ಟೇ ಸಂಘಟನೆ ಸೂಕ್ತವಾಗಿ ನಡೆಯುತ್ತದೆ ಎಂದು ಬಹುತೇಕ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ಹೇಳಿವೆ.
ವಿಜಯೇಂದ್ರ ಟಾರ್ಗೆಟ್
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರರಿಗೆ ವರುಣಾದಿಂದ ಇನ್ನೇನು ಟಿಕೆಟ್ ಘೊಷಣೆಯಾಗಬೇಕು ಎನ್ನುವ ಹೊಸ್ತಿಲಲ್ಲೇ ಯಡಿಯೂರಪ್ಪ ಮೇಲೆ ಒತ್ತಡ ಹೇರಿ ರದ್ದುಪಡಿಸಲಾಗಿತ್ತು. ನಂತರ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲಾಗಿತ್ತು. ಹಳೇ ಮೈಸೂರು ಭಾಗದಲ್ಲಿ ವಿಜಯೇಂದ್ರಗೆ ವಿಶೇಷ ವರ್ಚಸ್ಸಿದೆ ಎಂಬುದು ಪದೇಪದೆ ಸಾಬೀತಾಗುತ್ತಿದ್ದರೂ ಸೌಜನ್ಯಕ್ಕೂ ವಿಜಯೇಂದ್ರ ಸಲಹೆ ಕೇಳದೆ ಅವರ ಬೆಂಬಲಿಗರು ಎಂಬ ಕಾರಣಕ್ಕೆ ಅನೇಕರಿಗೆ ಪದಾಧಿಕಾರಿ ಸ್ಥಾನ ನಿರಾಕರಿಸಲಾಗುತ್ತಿದೆ. ರಾಜ್ಯ ಯುವ ಮೋರ್ಚಾಕ್ಕೆ ವಿಜಯೇಂದ್ರ ಅಧ್ಯಕ್ಷರಾಗಬೇಕು ಎಂದು ಕೆಲವರು ಇತ್ತೀಚೆಗೆ ಅರುಣ್ಕುಮಾರ್ರನ್ನು ಭೇಟಿಯಾದಾಗ, ಯುವ ಮೋರ್ಚಾದಲ್ಲಿ ಕೆಲಸ ಮಾಡಲು 35 ವರ್ಷ ಮೀರಿರಬಾರದು ಎಂದು ಹೇಳಿದ್ದಾರೆ ಎನ್ನಲಾಗಿದೆ. ಆ ರೀತಿಯ ನಿಯಮ ಬಿಜೆಪಿ ಸಂವಿಧಾನದಲ್ಲಿ ಇದೆಯಾದರೂ ಸದ್ಯ ಯುವ ಮೋರ್ಚಾ ಅಧ್ಯಕ್ಷರಾಗಿರುವ ಸಂಸದ ಪ್ರತಾಪ್ ಸಿಂಹವರೆಗೂ ಇಲ್ಲಿಯವರೆಗೆ ಈ ನಿಯಮ ಪಾಲನೆಯಾಗಿಲ್ಲ. ವಿಜಯೇಂದ್ರ ಅಧ್ಯಕ್ಷರಾಗಿಬಿಡುತ್ತಾರೆ ಎಂಬ ಕಾರಣಕ್ಕೆ ಈ ನಿಯಮವನ್ನು ಉಲ್ಲೇಖಿಸಲಾಗುತ್ತಿದೆ ಎಂಬ ಅಸಮಾಧಾನವಿದೆ.
ಮುರಳೀಧರ ರಾವ್ ಕೋಪ
ಕಳೆದ 4-5 ವರ್ಷಗಳಿಂದ ರಾಜ್ಯ ಬಿಜೆಪಿ ಉಸ್ತುವಾರಿ ಹೊತ್ತಿ ರುವ ಪಿ.ಮುರಳೀಧರ ರಾವ್ ಮಾತನ್ನೂ ಕೇಳದ ಈ ತಂಡ ಅವರಿಗೂ ಅವಮಾನ ಮಾಡಿದೆ. ಹಾಗಾಗಿಯೇ ಅವರು ಇತ್ತೀಚೆಗೆ ರಾಜ್ಯದ ಕಡೆಗೆ ಆಗಮಿಸುವುದನ್ನೇ ಕಡಿಮೆ ಮಾಡಿದ್ದಾರೆ. ಬಿಎಸ್ವೈ ಕಡೆಗಣನೆ ಹೀಗೆಯೇ ಮುಂದುವರಿದರೆ 2013ರಲ್ಲಿ ಆದಂತಹ ಸ್ಥಿತಿಯೇ ಎದುರಾಗುತ್ತದೆ. ಎಲ್ಲ ಕ್ಷೇತ್ರಗಳಲ್ಲಿ ಬಿಎಸ್ವೈ ಬೆಂಬಲಿಗರು, ಇನ್ನಿತರರು ಎಂದು ಪ್ರತ್ಯೇಕಿಸದೆ ಸಬಲ ರಾದವರನ್ನು ಪದಾಧಿಕಾರಿಗಳಾಗಿ ಮಾಡಿದರೆ ಪಕ್ಷ ಉಳಿಯುತ್ತದೆಂದು ಹಿರಿಯ ಕಾರ್ಯಕರ್ತರೊಬ್ಬರು ಬೇಸರ ಹೊರಹಾಕಿದ್ದಾರೆ.
ರುದ್ರೇಶ್ ಕೆಲಸಕ್ಕೂ ಬೆಲೆಯಿಲ್ಲ
ರಾಮನಗರದಲ್ಲಿ ಪ್ರಭಾವಿ ನಾಯಕ ಎನ್ನಲಾಗುವ ಯೋಗೇಶ್ವರ್ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೂ 2013ರಲ್ಲಿ ಪಕ್ಷಕ್ಕೆ ಸಿಕ್ಕಿದ್ದು ಕೇವಲ 63 ಸಾವಿರ ಮತ. ಇದೀಗ ಜಿಲ್ಲಾಧ್ಯಕ್ಷ ಎಂ.ಆರ್.ರುದ್ರೇಶ್ ಪರಿಶ್ರಮದಿಂದಾಗಿ 2 ಲಕ್ಷಕ್ಕೂ ಹೆಚ್ಚು ಮತಗಳು ಲಭಿಸಿವೆ. ಡಿಕೆಶಿ ಹಾಗೂ ಎಚ್ಡಿಕೆ ಅವರಂತಹ ಘಟಾನುಘಟಿಗಳ ವಿರುದ್ಧವೇ ಸಂಘಟನಾ ಚತುರತೆಯಿಂದ ಯಶಸ್ವಿಯಾಗಿರುವ ರುದ್ರೇಶ್ರನ್ನೂ ಅರುಣ್ಕುಮಾರ್ ಹಾಗೂ ಸುರಾನಾ ಕಡೆಗಣಿಸುತ್ತಿದ್ದಾರೆ. ಈ ಹಿಂದೆ ಪಕ್ಷದ ವಿರುದ್ಧ ಕೆಲಸ ಮಾಡಿದವರು, ಚುನಾವಣೆ ವೇಳೆ ಕೈ ಕೊಟ್ಟು ಮುಜುಗರ ಉಂಟು ಮಾಡಿದವರನ್ನೇ ಇದೀಗ ಪದಾಧಿ ಕಾರಿ ಮಾಡಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.