ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

ವಿಜಯಪುರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಒಕ್ಕೂಟದ ರಾಜ್ಯ ಸಮಿತಿ ಸದಸ್ಯ ಅಶೋಕ ವಾಲಿಕಾರ ಮಾತನಾಡಿ, ಅಂಗವಿಕಲರ ಹಕ್ಕುಗಳ ಕಾಯ್ದೆ -2016 ಯನ್ನು ಸಂಪೂರ್ಣ ಅನುಷ್ಠಾನಗೊಳಿಸಬೇಕು. ಅಂಗವಿಕಲ ಹೆಣ್ಣುಮಕ್ಕಳಿಗೆ ಸರ್ಕಾರದ ಯೋಜನೆಗಳಲ್ಲಿ ಪ್ರಥಮ ಆದ್ಯತೆ ನೀಡಬೇಕು. ವಿವಿಧ ಇಲಾಖೆಯಡಿ ಗುತ್ತಿಗೆದಾರರಾಗಿ ಸೇವೆ ಸಲ್ಲಿಸುತ್ತಿರುವ ಅಂಗವಿಕಲ ನೌಕರರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸಮಿತಿ ಸದಸ್ಯ ವಿನೋದ ಎಂ.ಖೇಡ ಮಾತನಾಡಿ, ಅಂಗವಿಕಲರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕಡ್ಡಾಯವಾಗಿ ಮೀಸಲಾತಿ ಕಲ್ಪಿಸಿಕೊಡಬೇಕು. ಸುಪ್ರೀಂ ಕೋರ್ಟ್ ಆದೇಶದನ್ವಯ ಎಲ್ಲ ಕಚೇರಿಗಳಲ್ಲಿ ರ‍್ಯಾಂಪ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸಮಿತಿ ಸದಸ್ಯ ಭೀಮನಗೌಡ ಬಿ. ಪಾಟೀಲ (ಸಾಸನೂರ) ಮಾತನಾಡಿ, ಅಂಗವಿಕಲ ಪೋಷಕರಿಗೆ ಮತ್ತು ಅಂಗವಿಕಲ ಮಕ್ಕಳ ಪೋಷಕರಿಗೆ ಸರ್ಕಾರದ ಯೋಜನೆಯಲ್ಲಿ ಆದ್ಯತೆ ನೀಡಬೇಕು. ಬೆನ್ನು ಹುರಿ ಅಪಘಾತಕ್ಕೀಡಾದ ಅಂಗವಿಕಲರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಸರಿಯಾಗಿ ಸ್ಪೇಷಲ್ ಕಿಟ್​ಗಳನ್ನು ವಿತರಿಸಬೇಕು ಎಂದು ತಿಳಿಸಿದರು.

ರಾಜ್ಯ ಸಮಿತಿ ಸದಸ್ಯ ಮಲ್ಲಿಕಾರ್ಜುನ ಉಮರಾಣಿ, ಶಶಿ ಅಥರ್ಗಾ, ನಿಮಿಷಾಚಾರ್ಯ, ಅಂಬಣ್ಣ ತಿ.ಗುನ್ನಾಪೂರ, ಎ.ಎ.ಹಕೀಂ, ಶ್ರೀರಾಮ ನಾಯಕ, ಮಹೇಶ ಮುಧೋಳ, ಪರಶುರಾಮ ಗುನ್ನಾಪೂರ, ಸುರೇಶ ಚವಾಣ್, ಶಿವಪ್ಪ ಪಟ್ನದ, ರೂಪಾ ಕರ್ಚೆ, ಸಂತೋಷ ಬಮ್ಮನಳ್ಳಿ, ಪ್ರಶಾಂತ ಗೆಣ್ಣೂರ, ತುಳಜಾ ಕನಸೆ, ಕಸ್ತೂರಿ ಬೂದಿಹಾಳ, ಶಂಕ್ರೆಮ್ಮ ಸಿ.ಕೋರಿ, ಮಾದೇವಿ ಮಾನೆ, ರಾಜು ಬುಯ್ಯಾರ, ಅರುಣ ಗುಜ್ಜರ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.