ಉಡುಪಿಯಲ್ಲಿ ತ್ವರಿತ ಅಂಗವೈಕಲ್ಯ ಪತ್ತೆ ಕೇಂದ್ರ

ಉಡುಪಿ: ಅಂಗವೈಕಲ್ಯ ತ್ವರಿತ ಪತ್ತೆ ಹಚ್ಚುವ ಕೇಂದ್ರವನ್ನು ಉಡುಪಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಶೀಘ್ರದಲ್ಲಿ ತೆರೆಯಲು ನಿರ್ಧರಿಸಲಾಗಿದೆ ಎಂದು ಅಂಗವಿಕಲರ ಅಧಿನಿಯಮದ ರಾಜ್ಯ ಆಯುಕ್ತ ಬಸವರಾಜ್ ತಿಳಿಸಿದ್ದಾರೆ.

ಮಕ್ಕಳಲ್ಲಿನ ವಿವಿಧ ರೀತಿಯ ಅಂಗವೈಕಲ್ಯ ಪತ್ತೆ ಹಚ್ಚಲು ಪೋಷಕರು ಹಲವು ವೈದ್ಯರನ್ನು ಸಂದರ್ಶಿಸಬೇಕಾಗಿದೆ. ಸೂಕ್ತ ಚಿಕಿತ್ಸೆ ಕೊಡಿಸಲು ಸಹ ಬಹಳ ಕಡೆ ತೆರಳಬೇಕಾಗಿದೆ. ಇದನ್ನು ತಪ್ಪಿಸುವ ಸಲುವಾಗಿ ಒಂದೇ ಕಡೆಯಲ್ಲಿ ಎಲ್ಲ ವಿಭಾಗಗಳ ತಜ್ಞ ವೈದ್ಯರನ್ನು ಒಳಗೊಂಡಂತೆ ಕೇಂದ್ರ ಸ್ಥಾಪಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೇಂದ್ರದಲ್ಲಿ ಮಕ್ಕಳ ತಜ್ಞರು, ಮೂಳೆ ತಜ್ಞರು, ವಾಕ್ ಶ್ರವಣ ದೋಷ ಪತ್ತೆ ತಜ್ಞರು, ಫಿಸಿಯೋಥೆರಪಿ ತಜ್ಞರು, ಮನಃಶಾಸ್ತ್ರಜ್ಞರು ಇರುತ್ತಾರೆ. ಕೇಂದ್ರಕ್ಕೆ ಬರುವ ಮಗುವಿನ ಅಂಗವೈಕಲ್ಯ ಪತ್ತೆ ಹಚ್ಚಿ ಮಗುವಿಗೆ ಅಗತ್ಯ ಚಿಕಿತ್ಸೆ ಮತ್ತು ತರಬೇತಿ ಮತ್ತು ಪೋಷಕರಿಗೆ ಸಲಹೆ ನೀಡಲಾಗುವುದು ಎಂದರು.

ಅಂಗವಿಕಲತೆ ಮಾನದಂಡ ಬದಲು: ಜಿಲ್ಲೆಯಲ್ಲಿ 19,920 ಅಂಗವಿಕಲರಿದ್ದಾರೆ. ಪ್ರಸ್ತುತ ಅಂಗವೈಕಲ್ಯ ಗುರುತಿಸುವ ಮಾನದಂಡ ಬದಲಾಗಿರುವುದರಿಂದ 25,000 ಮಂದಿ ಇರಬಹುದು. ಪ್ರತಿ ಇಲಾಖೆಯಲ್ಲಿ ಅಂಗವಿಕಲರಿಗಾಗಿ ಕಾರ್ಯಕ್ರಮಗಳಿದ್ದು, ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಈ ಕುರಿತಂತೆ ಇಂದು ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಬಸವರಾಜ್ ಹೇಳಿದರು.

ರಾಜ್ಯ ಅಂಗವಿಕಲರ ಅಧಿನಿಯಮದ ಸಹಾಯಕ ಆಯುಕ್ತ ಪದ್ಮನಾಭ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಅಧಿಕಾರಿ ನಿರಂಜನ ಭಟ್ ಉಪಸ್ಥಿತರಿದ್ದರು.

ಅಂಗವಿಕಲರಿಗೆ ಸವಲತ್ತು ಕ್ರಮಕ್ಕೆ ಸೂಚನೆ: ಅಂಗವಿಕಲರಿಗೆ ಲಭ್ಯವಿರುವ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಒದಗಿಸಿ ಸಬಲರನ್ನಾಗಿ ಮಾಡುವಲ್ಲಿ ಇಲಾಖೆಗಳು ಪರಸ್ಪರ ಸಮನ್ವಯದಿಂದ, ವ್ಯವಸ್ಥಿತ ರೀತಿಯಿಂದ ಕಾರ್ಯನಿರ್ವಹಿಸಬೇಕು ಎಂದು ಅಂಗವಿಕಲರ ಅಧಿನಿಯಮದ ರಾಜ್ಯ ಆಯುಕ್ತ ಬಸವರಾಜ್ ಸೂಚಿಸಿದ್ದಾರೆ.

ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆ ಆದಾಯದಲ್ಲಿ ಶೇ.5ರಷ್ಟನ್ನು ಅಂಗವಿಕಲರ ಅಭಿವೃದ್ಧಿಗಾಗಿ ಮೀಸಲಿಡಬೇಕು ಎಂಬ ನಿಯಮವಿದ್ದು, ಕಡ್ಡಾಯ ಪಾಲನೆಯಾಗಬೇಕು. ಹೆಚ್ಚು ವೃತ್ತಿ ತರಬೇತಿ ಕಾರ್ಯಕ್ರಮ ಆಯೋಜಿಸಿ ಸ್ವಾವಲಂಬಿಗಳನ್ನಾಗಿ ಮಾಡಬೇಕು. ಅಂಗವಿಕಲ ಮಕ್ಕಳಿಗೆ ವಿದ್ಯಾರ್ಥಿವೇತನ, ಪೋಷಣಾ ಭತ್ಯೆ, ಜತೆಗೆ ಮನೆಯಿಂದ ಶಾಲೆಗೆ ತೆರಳಲು ಅಗತ್ಯ ವಾಹನ ಸೌಲಭ್ಯ ಒದಗಿಸಬೇಕು. ಇದಕ್ಕಾಗಿ ಅಂಗವಿಕಲರ ನಿಧಿಯನ್ನು ಬಳಸಬೇಕು ಎಂದರು.

ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ಬಿ. ರೂಪೇಶ್, ಎಎಸ್ಪಿ ಕುಮಾರಚಂದ್ರ, ಕುಂದಾಪುರ ಉಪ ವಿಭಾಗಾಧಿಕಾರಿ ಮಧುಕೇಶ್ವರ್ ಮತ್ತಿತರರಿದ್ದರು. ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿ ನಿರಂಜನ ಭಟ್ ಸ್ವಾಗತಿಸಿದರು.

ಜಿಲ್ಲೆಯ ಎಲ್ಲ ಇಲಾಖಾಧಿಕಾರಿಗಳಿಗೆ ಅಂಗವಿಕಲರ ಅಭಿವೃದ್ಧಿಗೆ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಕುರಿತು ಪ್ರತ್ಯೇಕ ಸಭೆ ನಡೆಸಿ, ಸೂಕ್ತ ನಿರ್ದೇಶನ ನೀಡಲಾಗುವುದು.
– ಹೆಪ್ಸಿಬಾ ರಾಣಿ ಕೊರ್ಲಪಾಟಿ, ಉಡುಪಿ ಜಿಲ್ಲಾಧಿಕಾರಿ