ಆಪ್​ ‘ಖುಷಿ’ಗೆ ತಣ್ಣೀರೆರಚಿದ ಕೇಂದ್ರ;’ಡರ್ಟಿ ಪಾಲಿಟಿಕ್ಸ್‌’ ಎಂದು ಆಕ್ರೋಶ

ನವದೆಹಲಿ: ಆಸ್ಟ್ರಿಯಾದಲ್ಲಿ ನಡೆಯುವ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರಿಗೆ ಅನುಮತಿಯನ್ನು ನಿರಾಕರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಆಪ್‌ ಕಿಡಿಕಾರಿದ್ದು, ನರೇಂದ್ರ ಮೋದಿ ನೇತೃತ್ವದ ಕೇಂದ್ರವು ಡರ್ಟಿ ಪಾಲಿಟಿಕ್ಸ್‌ ಮಾಡುತ್ತಿದೆ ಎಂದು ಆರೋಪಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಮನೀಶ್‌ ಸಿಸೋಡಿಯಾ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ದೆಹಲಿ ಸರ್ಕಾರದ ಸಾಧನೆಗಳನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲು ಕೇಂದ್ರ ಸರ್ಕಾರ ಅವಕಾಶ ನೀಡುತ್ತಿಲ್ಲ. ದೆಹಲಿ ಶಾಲೆಗಳಲ್ಲಿ ಜಾರಿಗೆ ತಂದಿರುವ ‘ಖುಷಿ ಕಿ ಪಾಠಶಾಲಾ’ (khushi ki paatshaala) ಪಠ್ಯಕ್ರಮದ ಕುರಿತ ಸಂದೇಶವನ್ನು ವಿಶ್ವದಾದ್ಯಂತ ಹರಡಲು ಮೋದಿ ಜಿ ಬಯಸುತ್ತಿಲ್ಲ. ಅದಕ್ಕಾಗಿಯೇ ಆಸ್ಟ್ರಿಯಾದಲ್ಲಿ ‘ಸಂತೋಷದ ಪಠ್ಯಕ್ರಮ’ ಕುರಿತು ಮಾತನಾಡಬೇಕಿದ್ದ ಕಾರ್ಯಕ್ರಮಕ್ಕೆ ತೆರಳಲು ನನಗೆ ಅನುಮತಿಯನ್ನು ನಿರಾಕರಿಸಿದೆ. ಇದರಿಂದಾಗಿ ನನ್ನ ಯೋಜನೆಯನ್ನು ಕೈಬಿಡಬೇಕಾಗಿದೆ ಎಂದು ಕಿಡಿಕಾರಿದ್ದಾರೆ.

ಮನೀಶ್‌ ಸಿಸೋಡಿಯಾ ಅವರು 3 ದಿನಗಳ ಆಸ್ಟ್ರಿಯಾ ಪ್ರವಾಸ ಕೈಗೊಂಡು ‘ಶಿಕ್ಷಣದಲ್ಲಿ ಖುಷಿ’ ಕುರಿತಾದ ಚರ್ಚೆಯಲ್ಲಿ ಪಾಲ್ಗೊಳ್ಳಬೇಕಿತ್ತು ಮತ್ತು ಹಲವಾರು ಸಂದರ್ಶನಗಳನ್ನು ನೀಡಬೇಕಿತ್ತು. ಆದರೆ, ಆಸ್ಟ್ರಿಯಾ ಪ್ರವಾಸಕ್ಕೆ ಅನುಮತಿಯನ್ನು ಕೇಂದ್ರ ನಿರಾಕರಿಸಿದ್ದು, ಎಎಪಿ ನಾಯಕರು ಕೆರಳುವಂತೆ ಮಾಡಿದೆ.

ಸಿಸೋಡಿಯಾ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ವಿದೇಶಗಳಲ್ಲಿ ಆಪ್‌ ನಾಯಕರು ಪಾಲ್ಗೊಳ್ಳಲು ಅನುಮತಿ ನೀಡದಿರುವುದನ್ನು ಕೇಂದ್ರ ಸರ್ಕಾರ ಅಭ್ಯಾಸವನ್ನಾಗಿಸಿಕೊಂಡಿದೆ. ಇದಕ್ಕೂ ಮುನ್ನ ದೆಹಲಿ ಸಚಿವ ಸತ್ಯೇಂದ್ರ ಜೈನ್‌ ಕೂಡ ಮೊಹಲ್ಲಾ ಕ್ಲಿನಿಕ್‌ಗಳ ಬಗ್ಗೆ ಮಾತನಾಡಬೇಕಿದ್ದ ಆಸ್ಟ್ರೇಲಿಯಾದ ಕಾರ್ಯಕ್ರಮಕ್ಕೆ ತೆರಳಲು ಅನುಮತಿ ನಿರಾಕರಿಸಿತ್ತು. ಈ ಮೂಲಕ ಕೇಂದ್ರವು ಕೊಳಕು ರಾಜಕೀಯ ಮಾಡುತ್ತಿದೆ ಎಂದು ದೂಷಿಸಿದ್ದಾರೆ. (ಏಜೆನ್ಸೀಸ್)