ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿಕೊಂಡ ಸಿನಿಮಾ ಎಂಬ ಖ್ಯಾತಿ 2009ರಲ್ಲಿ ರಿಲೀಸ್ ಆದ ಜೇಮ್ಸ್ ಕ್ಯಾಮರಾನ್ ನಿರ್ದೇಶನದ “ಅವತಾರ್’ಗೆ ಸಲ್ಲುತ್ತದೆ. 15 ವರ್ಷಗಳ ಹಿಂದೆಯೇ 24 ಸಾವಿರ ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್ ಕಂಡ ಆ ಸಿನಿಮಾ ದಾಖಲೆಯ ಹತ್ತಿರ ಬೇರೆ ಯಾವ ಚಿತ್ರವೂ ಸುಳಿದಿಲ್ಲ. ಇನ್ನು 2022ರಲ್ಲಿ “ಅವತಾರ್’ ಸೀಕ್ವಲ್ “ದ ವೇ ಆಫ್ ವಾಟರ್’ ಬಿಡುಗಡೆಯಾಯಿತು. ಅದು ಸಹ ಸುಮಾರು 20 ಸಾವಿರ ಕೋಟಿ ರೂ. ಗಳಿಕೆ ಮಾಡಿಕೊಂಡಿತ್ತು. ಆ ಸಿನಿಮಾ ವೇಳೆಯೇ ನಿರ್ದೇಶಕ ಜೇಮ್ಸ್ ಕ್ಯಾಮರಾನ್ ಇನ್ನೂ ಮೂರು ಭಾಗಗಳು ರಿಲೀಸ್ ಆಗಲಿವೆ ಎಂದಿದ್ದರು. ಅದರಲ್ಲಿ “ಅವತಾರ್ 3′ ಮುಂದಿನ ವರ್ಷ ತೆರೆಗೆ ಬರಲಿದ್ದು, ಅದರ ಶೀರ್ಷಿಕೆಯನ್ನು ಚಿತ್ರತಂಡ ಘೋಷಿಸಿದೆ.
“ಅವತಾರ್’ ಟ್ರೀಕ್ವೆಲ್ಗೆ “ಫೈರ್ ಆ್ಯಂಡ್ ಆ್ಯಶ್’ ಎಂದು ನಾಮಕರಣ ಮಾಡಲಾಗಿದೆ. ಎಲ್ಲವೂ ಅಂದುಕೊಂಡಂತಾದರೆ “ಅವತಾರ್ 3′ 2025ರ ಡಿ. 9ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಮೊದಲ ಎರಡು ಭಾಗಗಳಲ್ಲಿ ನಟಿಸಿದ್ದ ಸ್ಯಾಮ್ ವರ್ದಿಂಗ್ಟನ್, ಜೋ ಸಲ್ಡಾನ್ಹಾ, ಸಿಗೌರ್ನಿ ವೀವರ್, ಸ್ಟೀನ್ ಲ್ಯಾಂಗ್ ಜತೆಗೆ “ಟೈಟಾನಿಕ್’ ಸುಂದರಿ ಕೇಟ್ ವಿನ್ಸ್ಲೆಟ್, ಕ್ಲಿಫ್ ಕರ್ಟಿಸ್, ಭಾರತ ಮೂಲದ ದಿಲೀಪ್ ರಾವ್, ಮ್ಯಾಟ್ ಗೆರಾಲ್ಡ್ ಸೇರಿ ಹಲವರು ಮುಂದಿನ ಭಾಗಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ.
ಮೂರರಲ್ಲಿದೆ ಮಹಾ ಟ್ವಿಸ್ಟ್!
“ಅವತಾರ್’ ಸರಣಿ ಮತ್ತು ಟ್ರೀಕ್ವೆಲ್ ಬಗ್ಗೆ ನಿರ್ದೇಶಕ ಜೇಮ್ಸ್ ಕ್ಯಾಮರಾನ್, “ಭೂಮಿಯನ್ನು ಉಳಿಸಿಕೊಳ್ಳಲು ಮನುಷ್ಯರು ಮತ್ತು ಪೆಂಡೋರಾಗಾಗಿ ಅವತಾರ್ಗಳು (ನಾವಿಗಳು) ಹೋರಾಡುತ್ತಿರುವ ಮಧ್ಯದಲ್ಲಿ ಈ ಚಿತ್ರದಲ್ಲಿ ಒಂದು ಪರಿವರ್ತನೆಯಾಗಲಿದೆ. ಪೆಂಡೋರಾದ ಬೇರೆ ಬೇರೆ ಜನಾಂಗಗಳನ್ನು ಪರಿಚಯ ಮಾಡಲಿದ್ದೇವೆ. ನಾಯಕ ಸಲ್ಲಿ ಕುಟುಂಬದಲ್ಲೂ ಹೊಸ ವಿಷಯಗಳು ನಡೆಯಲಿವೆ. ಒಂದು ಹೊಸ ಪಾತ್ರವನ್ನು ಪರಿಚಯಿಸಲಿದ್ದೇವೆ. ಅದು ಮುಂದಿನ ಕಥೆಯ ಬಹು ಮುಖ್ಯ ಭಾಗವಾಗಲಿದೆ. ನಾವೀಗ ಐದು ಭಾಗಗಳ ಕಥೆಯ ಮಧ್ಯದಲ್ಲಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ.