ಸಿನಿಮಾ ಸಮಾನತೆ ಸೃಷ್ಟಿಸುವಂತಿರಬೇಕು

ಮೈಸೂರು : ನೀವು ಮಾಡುವ ಸಿನಿಮಾಗಳು ಸಾಮಾಜಿಕ ನ್ಯಾಯ, ಸಮಾನತೆ ಸೃಷ್ಟಿಸುವಂತಿರಬೇಕು. ಬಹುಮಾನ, ಚಪ್ಪಾಳೆಗಾಗಿ ಯೋಚಿಸದೆ ಪ್ರತಿ ಸಿನಿಮಾ ನಿಮ್ಮನ್ನು ಹೇಗೆ ದಾಟಿಸಿತು ಎಂಬ ಕುರಿತು ಯೋಚಿಸಬೇಕು ಎಂದು ನಿರ್ದೇಶಕ ಹಾಗೂ ನಿರ್ಮಾಪಕ ಬಿ.ಸುರೇಶ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ಬೋಗಾದಿಯ ಅಮೃತ ವಿಶ್ವ ವಿದ್ಯಾಪೀಠಂ ವತಿಯಿಂದ ಕಾಲೇಜಿನ ಸುಧಾಮಣಿ ಹಾಲ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಸಿನೆರಮಾ ರಾಷ್ಟ್ರಮಟ್ಟದ ಕಿರುಚಿತ್ರ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನೀವು ತಯಾರಿಸುವ ಸಿನಿಮಾಗಳು ಸಮಾಜ ಕಟ್ಟುವ ಹೂರಣವನ್ನು ಒಳಗೊಂಡಿರಬೇಕು. ಪ್ರತಿ ಸಿನಿಮಾ ನಿಮಗೆ ಹೊಸ ಅನುಭವವನ್ನು ನೀಡುತ್ತದೆ. ಅದರಲ್ಲಿ ತಪ್ಪುಗಳು ಇದ್ದರೆ ಸರಿಪಡಿಸಿಕೊಳ್ಳಬೇಕು. ನೀವು ಕಾಣುವ ಕನಸನ್ನು ಬೆಳೆಸುವ ತೋಟದಲ್ಲಿ ಎಲ್ಲ ಬಗೆಯ, ಬಣ್ಣದ ಹೂ ಅರಳಬೇಕು. ಆಗ ನಿಮ್ಮಲ್ಲಿ ಬಹುತ್ವದ ಆಲೋಚನೆ ಬೆಳೆಯುತ್ತದೆ. ಎಲ್ಲರನ್ನೂ ಒಳಗೊಳ್ಳುವ ಬಹುತ್ವ ಪ್ರಜ್ಞೆಯಿಂದ ಸಮಾಜ ಆರೋಗ್ಯಕರವಾಗುತ್ತದೆ. ಯಾರನ್ನೂ ಅನುಕರಿಸಬೇಡಿ. ನಿಮ್ಮ ಆಲೋಚನೆ, ಸೃಜನಶೀಲತೆ, ಸ್ವಂತಿಕೆಗೆ ಪ್ರಾಮುಖ್ಯತೆ ನೀಡಿ ಎಂದರು.

ಜನಾಭಿಪ್ರಾಯ ರೂಪಿಸುವಲ್ಲಿ ಮತ್ತು ಸರ್ಕಾರದ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡುವಲ್ಲಿ ಸಿನಿಮಾ ಪಾತ್ರ ದೊಡ್ಡದು ಎಂದು 1994-95ರ ಸಂದರ್ಭದಲ್ಲಿ ಯುನೈಟೆಡ್ ನೇಷನ್ ವತಿಯಿಂದ ಸಿನಿಮಾ ಕಲಿಕೆಗಾಗಿ ಕೋಟ್ಯಂತರ ರೂ. ವಿನಿಯೋಗಿಸಲಾಯಿತು. ಸಿನಿಮಾ ತಯಾರಿಕೆ ಹಿನ್ನೆಲೆ ದೇಶದಲ್ಲೂ ಅನೇಕ ವಿ.ವಿ. ಸ್ಥಾಪನೆಗೊಂಡವು. ಇದರ ಪರಿಣಾಮವಾಗಿ ಪ್ರಸ್ತುತ ಕರ್ನಾಟಕದಲ್ಲಿಯೂ ಸಿನಿಮಾ ಕಲಿಸಲು 100 ಕಾಲೇಜುಗಳಿವೆ ಎಂದರು.

ನಾವು ಓದುತ್ತಿದ್ದಾಗ ಭಾರತದಲ್ಲಿ ಪೂನಾ ಹಾಗೂ ಸತ್ಯಜಿತ್ ರೇ ಫಿಲ್ಮ್ ಇನ್‌ಸ್ಟಿಟ್ಯೂಟ್ ಮಾತ್ರ ಇದ್ದವು. ಸಿನಿಮಾ ಕಲಿಯುವ ಆಸೆ ಇದ್ದವರು ಚೆನ್ನೈ ಮತ್ತು ವಿದೇಶಕ್ಕೆ ಹೋಗಬೇಕಿತ್ತು. ಈಗ ಇದೇ ನೆಲದಲ್ಲಿ, ಭಾಷೆಯಲ್ಲಿ ಸಿನಿಮಾ ಕಲಿಯಲು ಸಾಕಷ್ಟು ಅವಕಾಶಗಳಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಭಾರತದ ದೃಶ್ಯಮಾಧ್ಯಮ ಮಾರುಕಟ್ಟೆ 60 ಲಕ್ಷ ಕೋಟಿ ರೂ.ಗೆ ಹೆಚ್ಚಾಗಿದೆ. ಕರ್ನಾಟಕದಲ್ಲೇ ದೂರದರ್ಶನ ವಹಿವಾಟು ಮೊತ್ತ ವರ್ಷಕ್ಕೆ 1,800 ಕೋಟಿ ರೂ. ಆಗಿದೆ. ಸಿನಿಮಾ ಉದ್ಯಮ ಬೆಳೆದಿದೆ. ಈ ಶಿಕ್ಷಣದಲ್ಲಿ ಪಾಸಾದ ಪ್ರತಿಯೊಬ್ಬರೂ ಉದ್ಯೋಗಕ್ಕಾಗಿ ಅಲೆಯುವಂತಿಲ್ಲ. ಉದ್ಯೋಗವೇ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ತಿಳಿಸಿದರು.

54 ತಂಡಗಳು ಭಾಗಿ: ದೃಶ್ಯ ಸಂವಹನ ವಿಭಾಗದ ಮುಖ್ಯಸ್ಥೆ ರಮ್ಯಾ ಕೆ.ಪ್ರಸಾದ್ ಮಾತನಾಡಿ, ಕಿರುಚಿತ್ರ ಸ್ಪರ್ಧೆಯಲ್ಲಿ 54 ತಂಡಗಳು ಭಾಗಿಯಾಗಿವೆ. ರಾಜ್ಯ ಹಾಗೂ ದೇಶದ ನಾನಾ ಕಡೆಯಿಂದ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಅವರ ಪ್ರತಿಭೆ ಅನಾವರಣಕ್ಕೆ ಇದು ಸೂಕ್ತ ವೇದಿಕೆಯಾಗಿದ್ದು, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆ ಮತ್ತು ತಳಸಮುದಾಯಗಳೆಡೆಗಿನ ಸ್ಪಂದನೆಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಬಿ.ಸುರೇಶ್ ಅವರೊಡನೆ ವಿದ್ಯಾರ್ಥಿಗಳು ಸಂವಾದ ನಡೆಸಿದರು.


ಅಮೃತ ವಿಶ್ವ ವಿದ್ಯಾಪೀಠಂ ವತಿಯಿಂದ ಏರ್ಪಡಿಸಿದ್ದ ಸಿನೆರಮಾ ರಾಷ್ಟ್ರಮಟ್ಟದ ಕಿರುಚಿತ್ರ ಸ್ಪರ್ಧೆಯ ಸಮಾರೋಪ ಕಾರ್ಯಕ್ರಮದಲ್ಲಿ ಚಲನಚಿತ್ರ ನಟಿ ಐಂದ್ರಿತಾ ರೈ ವಿಜೇತರಿಗೆ ಬಹುಮಾನ ವಿತರಿಸಿದರು.
ಅಮೃತ ಪ್ರಶಸ್ತಿ ವಿಜೇತರು
ಅತ್ಯುತ್ತಮ 3 ಕಿರುಚಿತ್ರ: ಪರ-ದೇಶಿ (ನಿರ್ದೇಶನ- ಹರಿಗೋಬಿಂದ್ ಪಚತ್)- ಪ್ರ, ಕೆಹ್ ದುನ್ ಶುಕ್ರಿಯಾ (ಝಬಿನ್ ಪೌಲ್)- ದ್ವಿ., ಯೂ ಆರ್ ಇಂಪಾರ‌್ಟೆಂಟ್ (ಹೇಮಂತ)- ತೃ.
ವಿಶೇಷ ವಿಭಾಗ : ಉತ್ತಮ ಸಂಕಲನ- ಪ್ರಥ್ವಿರಾಜ್, ಉತ್ತಮ ನಿರ್ದೇಶಕ- ಝಬಿನ್ ಪೌಲ್, ಸಿನಿಮಾಟೋಗ್ರಫಿ – ಹರಿಗೋಬಿಂದ್ ಪಚತ್, ಉತ್ತಮ ಪ್ರದರ್ಶನ – ಬಿ.ಎಸ್.ಸಿದ್ಧಾರ್ಥ.
ಛಾಯಾಗ್ರಹಣ- ಎಂ.ಶಶಾಂಕ್ (ಪ್ರ.), ಎಸ್.ಅಖಿಲೇಶ್ (ದ್ವಿ.), ಎಂ.ಕೆ.ಇಮ್ರಾನ್ (ತೃ.)

Leave a Reply

Your email address will not be published. Required fields are marked *