ಹಿರೀಸಾವೆ: ಹೋಬಳಿಯ ನರಿಹಳ್ಳಿ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿ ಸನ್ನಿಧಿಯಲ್ಲಿ ಕಡೇ ಕಾರ್ತಿಕ ಮಾಸದ ಪ್ರಯುಕ್ತ ದೀಪೋತ್ಸವ ಶುಕ್ರವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ದೇಗುಲವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಬಾಳೆಕಂದು ಕಟ್ಟಿ ತಳಿರು-ತೋರಣಗಳಿಂದ ಅಲಂಕರಿಸಲಾಗಿತ್ತು. ಅಲ್ಲದೆ ದೀಪದ ಕಂಬ ಹಾಗೂ ಆವರಣದಲ್ಲಿ ಸಾವಿರಾರು ದೀಪಗಳಿಗೆ ಎಣ್ಣೆ ಮತ್ತು ಬತ್ತಿ ಹಾಕಿ ಸಿದ್ಧಪಡಿಸಲಾಗಿತ್ತು.
ಎಲ್ಲೆಡೆ ಕಡೇ ಕಾರ್ತಿಕ ಮಾಸದ ದೀಪೋತ್ಸವವು ಸೋಮವಾರದ ಆಚರಣೆಯಾದರೆ ಈ ಗ್ರಾಮದಲ್ಲಿ ಅಮಾವಾಸ್ಯೆ ನಂತರದ ಶುಕ್ರವಾರದಂದು ದೀಪೋತ್ಸವ ಆಚರಿಸುವುದು ವಾಡಿಕೆ ಹಾಗೂ ಸಂಪ್ರದಾಯವಾಗಿದೆ. ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿ ಅಮ್ಮನವರ ಬಹಳ ಪ್ರಿಯವಾದ ದಿನವೆಂದರೆ ಶುಕ್ರವಾರ. ಇದೇ ಕಾರಣದಿಂದಲೇ ಗೃಹ ಪ್ರವೇಶ, ವಾಹನ ಪೂಜೆ, ಮಕ್ಕಳ ನಾಮಕರಣ, ಗ್ರಾಮದೇವತೆಗಳ ಹಬ್ಬ-ಹುಣ್ಣಿಮೆ, ಹರಿದಿನಗಳು ಹಾಗೂ ಇತರ ಯಾವುದೇ ಶುಭ ಕಾರ್ಯಗಳಿದ್ದರೂ ಈ ಗ್ರಾಮದ ಜನತೆ ಶುಕ್ರವಾರದ ದಿನವನ್ನೇ ಆಯ್ಕೆ ಮಾಡಿಕೊಂಡು ಆಚರಿಸುವುದು ಈ ಗ್ರಾಮದ ವಿಶೇಷವಾಗಿದೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ನರಿಹಳ್ಳಿ ಗ್ರಾಮಸ್ಥರಿಂದ ದೀಪೋತ್ಸವ ಹಮ್ಮಿಕೊಳ್ಳಲಾಗಿತ್ತು, ಶ್ರೀ ಲಕ್ಷ್ಮೀದೇವಿಯ ವಿಗ್ರಹ ಮೂರ್ತಿಯನ್ನು ಒಡವೆ-ವಸ್ತ್ರ ಹಾಗೂ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿ ಚಿಕ್ಕ ದೇಗುಲದ ಬಳಿಯಿಂದ ಮೆರವಣಿಗೆಯಲ್ಲಿ ಕರೆತರಲಾಯಿತು.
ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತರು ಹೂ, ಹಣ್ಣು-ಕಾಯಿ ಸಲ್ಲಿಸಿ ಗಂಧ ಕರ್ಪೂರ ಬೆಳಗಿಸಿ ದೇವಿಯ ದರ್ಶನ ಪಡೆದು ಪುನೀತರಾದರು. ಜತೆಗೆ ಹೆಣ್ಣುಮಕ್ಕಳು ಶ್ರೀ ಲಕ್ಷ್ಮೀದೇವಿಗೆ ತಂಬಿಟ್ಟಿನ ಆರತಿ ಬೆಳಗಿಸಿದರು.
ಸಂಜೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೀಪೋತ್ಸವಕ್ಕೆ ಚಾಲನೆ ದೊರೆಯಿತು. ಇದಕ್ಕೂ ಮೊದಲು ಜರುಗಿದ ಸೋಮನ ಕುಣಿತ ನೋಡುಗರ ಗಮನ ಸೆಳೆಯಿತು. ಬಳಿಕ ಹೆಣ್ಣುಮಕ್ಕಳು ಸಾವಿರಾರು ದೀಪಗಳನ್ನು ಬೆಳಗಿಸಿದರು. ದೇವಿಗೆ ಮಹಾ ಮಂಗಳಾರತಿ ನಡೆದ ಬಳಿಕ ಪ್ರಸಾದ ವಿನಿಯೋಗ ನಡೆಯಿತು.
ದಿಡಗ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ಆರ್.ರತ್ನರಾಜ್ ಪೂಜಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಎನ್.ಆರ್.ಶಿವಕುಮಾರ್, ಬಾಬು, ಜಗದೀಶ್ ಹಾಗೂ ಇತರರು ಇದ್ದರು.