More

  ಮಳಲಿ ಮಠದಲ್ಲಿ ದೀಪೋತ್ಸವ

  ಮಲಯಾಚಲದ ಸಿರಿಸೊಬಗಿನ ಸಹ್ಯಾದ್ರಿ ತಪ್ಪಲಿನಲ್ಲಿ ಸಾವಿರಾರು ವರ್ಷಗಳಿಂದ ಶೋಭಿಸುತ್ತಿರುವ ಶ್ರೀಮದ್ ರಂಭಾಪುರಿ ಖಾಸಾ ಶಾಖಾ ಮಹಾಸಂಸ್ಥಾನ ಮಳಲಿ ಮಠದಲ್ಲಿ ದೀಪೋತ್ಸವದ ಸಡಗರ. ಜತೆಗೆ ಶ್ರೀಗುರು ಪಟ್ಟಾಧಿಕಾರದ ರಜತ ಮಹೋತ್ಸವವು ಭಕ್ತರ ಸಂಭ್ರಮವನ್ನು ದ್ವಿಗುಣಗೊಳಿಸಿದೆ.

  | ಪ್ರಶಾಂತ ರಿಪ್ಪನ್​ಪೇಟೆ

  ಸಮಾಜದಲ್ಲಿ ಧರ್ಮಸಂಸ್ಕಾರವನ್ನು ಉದ್ದೀಪನಗೊಳಿಸಿ ಉತ್ತಮ ಸಮಾಜ ನಿರ್ವಣಗೊಳಿಸಲು ಹಲವು ಮಠ-ಮಂದಿರಗಳು ನಿರಂತರ ಶ್ರಮಿಸುತ್ತಿವೆ. ಆ ನಿಟ್ಟಿನಲ್ಲಿ ಮಲೆನಾಡು ಪ್ರಾಂತ್ಯದಲ್ಲಿರುವ ಮಳಲಿ ಸಂಸ್ಥಾನ ಮಠವು ಪ್ರಮುಖವಾಗಿದೆ. ಪಂಚಪೀಠಗಳ ಸಾವಿರಾರು ಶಾಖಾಮಠಗಳು ಎಲ್ಲ ಪ್ರಾಂತ್ಯಗಳಲ್ಲೂ ಇವೆ. ಅಂತೆಯೇ ಶ್ರೀಜಗದ್ಗುರು ರಂಭಾಪುರಿ ವೀರಸಿಂಹಾಸನ ಪೀಠದ ಸಾವಿರಾರು ಶಾಖಾಮಠಗಳಲ್ಲಿ ಮಳಲಿ ಸಂಸ್ಥಾನವು ಖಾಸಾ ಶಾಖಾಮಠವಾಗಿದ್ದು, ಪೀಠ ಮತ್ತು ಮಲೆನಾಡಿನ ಶಿಷ್ಯರ ನಡುವೆ ಸೇತುವಾಗಿ ಕಾರ್ಯನಿರ್ವಹಿಸುತ್ತಿದೆ.

  ಮಲೆನಾಡಿನ ಭಕ್ತರ ಧರ್ಮಸಂಸ್ಕಾರದ ಕೇಂದ್ರವಾಗಿ ಕಂಗೊಳಿಸುತ್ತಿರುವ ಶ್ರೀಮಠದ ಆದಿಗುರು ನಾಗಾರ್ಜುನ ಶಿವಾಚಾರ್ಯರು ಅವತಾರವಾದ ಕಾರ್ತೀಕ ಚತುರ್ದಶಿಯಂದು ಶ್ರೀಮಠದಲ್ಲಿ ದೀಪೋತ್ಸವ ಆಚರಿಸಲಾಗುತ್ತದೆ. ಜತೆಗೆ ಲಿಂಗೈಕ್ಯ ಶ್ರೀಗುರು ನಾಗಾರ್ಜುನ ಶಿವಾಚಾರ್ಯರ ಕರಕಮಲ ಸಂಜಾತರಾಗಿ ಕಳೆದ 25 ವರ್ಷಗಳಿಂದ ಶ್ರೀಮಠವನ್ನು ಮುನ್ನಡೆಸುತ್ತಿರುವ ಶ್ರೀ ಷ.ಬ್ರ. ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಗಳ ಪಟ್ಟಾಧಿಕಾರದ ರಜತ ಮಹೋತ್ಸವವನ್ನು ಆಯೋಜಿಸಲಾಗಿದ್ದು, ಇದೇ ನವೆಂಬರ್ 26ಕ್ಕೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

  ಶ್ರೀಗುರು ನಾಗಾರ್ಜುನ ಶಿವಾಚಾರ್ಯರು ನೆರೆಯ ಆಂಧ್ರಪ್ರದೇಶದ ನಾಗಾರ್ಜುನ ಕೊಂಡದಲ್ಲಿ ತಪಸ್ಸು ಮಾಡಿ ಅಲ್ಲಿಂದ ಭದ್ರಾತೀರದಲ್ಲಿರುವ ಶ್ರೀರಂಭಾಪುರಿ ಪೀಠಕ್ಕೆ ಬಂದು ಶ್ರೀಜಗದ್ಗುರು ರೇವಣಸಿದ್ದರಿಂದ ಆದೇಶಾನುಗ್ರಹ ಪಡೆದು, ಸಹ್ಯಾದ್ರಿ ತಪ್ಪಲಿನಲ್ಲಿ ಶ್ರೀಮಠವನ್ನು ಸಂಸ್ಥಾಪಿಸಿದ್ದಾರೆ.

  ಸಾಧನಾಪಥ: 1998 ಫೆ.10ರಂದು ಶ್ರೀಮಠದ ಪಟ್ಟಾಧ್ಯಕ್ಷರಾಗಿ ನೇಮಕಗೊಂಡು ಕಳೆದ 25 ವರ್ಷಗಳಲ್ಲಿ ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಿರುವ ಶ್ರೀ ಷ.ಬ್ರ. ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಜನ್ಮತಃ ಬಯಲುಸೀಮೆಯವರಾದರೂ ಮಲೆನಾಡಿನ ಕೃಷಿ ಪದ್ಧತಿಯನ್ನು ಅಧ್ಯಯನ ಮಾಡಿ ಪ್ರಗತಿಪರ ಕೃಷಿಕರಾಗಿದ್ದಾರೆ. ಶ್ರೀಮಠದ ಅಡಿಕೆ ತೋಟವನ್ನು ಪ್ರಯೋಗಾತ್ಮಕವಾಗಿ ಅಭಿವೃದ್ಧಿಗೊಳಿಸಿದ್ದು, ಪೃಥ್ವಿತತ್ತ ್ವದ ಹಸಿರು ಧ್ವಜವನ್ನು ಮುಗಿಲೆತ್ತರದಲ್ಲಿ ರಾರಾಜಿಸುವಂತೆ ಮಾಡಿದ್ದಾರೆ.

  ಶ್ರೀರಂಭಾಪುರಿ ಜಗದ್ಗುರುಗಳನ್ನು ಮಾದರಿಯಾಗಿ ಇರಿಸಿಕೊಂಡು, ಮಳಲಿ ಶ್ರೀಗಳು ಕೈಗೊಂಡ ಎಲ್ಲ ಕಾರ್ಯಗಳು ಪೀಠದ ಛಾಯೆಯನ್ನೇ ಪ್ರತಿಬಿಂಬಿಸುತ್ತಿವೆ. ಲಿಂಗೈಕ್ಯ ಗುರುಗಳ ಗದ್ದುಗೆಗಳ ಶಿಲಾಮಂಟಪ, ಹೆದ್ದಾರಿಯಲ್ಲಿರುವ ಮಠದ ಮಹಾದ್ವಾರ, ಶ್ರೀಜಗದ್ಗುರು ರೇಣುಕಾಚಾರ್ಯ ಮಂದಿರ, ಶ್ರೀಸೋಮೇಶ್ವರ ದೇವಾಲಯ, ಪುರಾತನ ಶ್ರೀಮಠವನ್ನು ಮೂಲಸ್ವರೂಪದಲ್ಲಿ ಜೀಣೋದ್ಧಾರ ಮಾಡಿದ್ದಾರೆ.

  ಶ್ರೀಗಳು ನಡೆದು ಬಂದ ಹಾದಿ: ಸುದೀರ್ಘ ಪರಂಪರೆಯುಳ್ಳ ಪ್ರತಿಷ್ಠಿತ ಮಳಲಿ ಮಠದ ಪಟ್ಟಾಧ್ಯಕ್ಷರಾದ ಷ.ಬ್ರ.ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಗಳ ಜನ್ಮಸ್ಥಳ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕೇಶ್ವಾಪುರ. ಶ್ರೀಗಳು ಬಾಲ್ಯದಲ್ಲಿಯೇ ಅಧ್ಯಾತ್ಮದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರ ಪರಿಣಾಮ ಕಿರಿಯ ವಯಸ್ಸಿನಲ್ಲೇ ಶ್ರೀಗುರು ಸಂಗಮೇಶ್ವರ ಬೃಹನ್ಮಠಕ್ಕೆ ಸ್ವಾಮೀಜಿಯಾಗಿ ನೇಮಕಗೊಂಡಿದ್ದರು. ಆ ನಂತರ ಹೆಚ್ಚಿನ ಧಾರ್ವಿುಕ ಶಿಕ್ಷಣವನ್ನು ಅಭ್ಯಾಸ ಮಾಡಲು ಶ್ರೀರಂಭಾಪುರಿ ಪೀಠದ ಶ್ರೀಜಗದ್ಗುರು ರೇಣುಕಾಚಾರ್ಯ ಗುರುಕುಲಕ್ಕೆ ಬಂದು, ಜಗದ್ಗುರುಗಳ ಕೃಪಾಕಾರುಣ್ಯಕ್ಕೆ ಒಳಗಾದ ಪರಿಣಾಮವೇ, ಮಳಲಿ ಮಠದ ಪಟ್ಟಾಧ್ಯಕ್ಷರಾಗಿ ನೇಮಕಗೊಂಡರು. ‘ಸಾಹಿತ್ಯ ಸಂಸ್ಕೃತಿ ಸಂವರ್ಧಿಸಲಿ, ಶಾಂತಿ ಸಮೃದ್ಧಿ ಸರ್ವರಿಗಾಗಲಿ’ ಎಂಬ ಶ್ರೀರಂಭಾಪುರಿ ಜಗದ್ಗುರುಗಳ ಉದ್ಘೋಷದಿಂದ ಪ್ರೇರಿತರಾಗಿ, ‘ಭವ್ಯತೆ ಬದುಕಿನಂಗವಾಗಲಿ, ಇಳೆಯಲಿ ಭಾವೈಕ್ಯ ಬೆಳೆಯಲಿ’ಎಂಬ ಸಾರ್ವಕಾಲಿಕ ಸಂದೇಶ ನೀಡಿದ್ದಾರೆ. ಮೂಲ ಪರಂಪರೆಯ ರಕ್ಷಣೆಯ ಜೊತೆಗೆ ಶ್ರೀಮಠವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಬೆಳೆಸಿದ್ದಾರೆ.

  ವಿವಿಧ ಧಾರ್ವಿುಕ ಕಾರ್ಯಕ್ರಮಗಳು
  ಸ್ವಾಮೀಜಿಗಳ ಜೀವನದಲ್ಲಿ ಪಟ್ಟಾಭಿಷೇಕವಾದ 12 ಮತ್ತು 25ನೇ ವರ್ಷ ಬಹಳ ಪ್ರಮುಖವಾದದ್ದು. ದ್ವಾದಶ ವರ್ಧಂತಿ ಮತ್ತು ರಜತ ಮಹೋತ್ಸವಗಳನ್ನು ಮರುಪಟ್ಟ ಎಂದು ಕರೆಯಲಾಗುತ್ತದೆ. ಪಟ್ಟಾಭಿಷೇಕದಂತೆ ಎಲ್ಲ ಧಾರ್ವಿುಕ ಪ್ರಕ್ರಿಯೆಗಳನ್ನು ಮತ್ತೆ ನೆರವೇರಿಸಲಾಗುತ್ತದೆ. ಅಂತೆಯೇ ನ.26ರಂದು ಬೆಳಗ್ಗೆ ಶ್ರೀಗಳಿಗೆ ಕಂಕಣಧಾರಣೆ, ಹರಿದ್ರಾಲೇಪನ, ಅಭಿಷೇಕದೊಂದಿಗೆ ಮಂಗಳಸ್ನಾನ ನಡೆಯಲಿದೆ. ರಜತ ಮಹೋತ್ಸವದ ಅಂಗವಾಗಿ ಶ್ರೀರಂಭಾಪುರಿ ಜಗದ್ಗುರುಗಳ ಸಾಮೂಹಿಕ ಇಷ್ಟಲಿಂಗ ಮಹಾಪೂಜೆಯನ್ನು ಆಯೋಜಿಸಲಾಗಿದ್ದು, ಶ್ರೀಜಗದ್ಗುರು ರೇಣುಕಾಚಾರ್ಯರಿಗೆ, ಶ್ರೀಗುರು ನಾಗಾರ್ಜುನ ಸ್ವಾಮಿ, ಶ್ರೀ ಸೋಮೇಶ್ವರಸ್ವಾಮಿ ಮತ್ತು ಶಕ್ತಿಮಾತೆ ಚೌಡೇಶ್ವರಿದೇವಿ ಹಾಗೂ ಲಿಂಗೈಕ್ಯ ಗುರುಗಳ ಗದ್ದುಗೆಗೆ ವಿಶೇಷ ಪೂಜೆ ನಡೆಯಲಿದೆ. ಹೋಮ-ಹವನಾದಿಗಳ ನಂತರ ಪರಂಪರೆಯಂತೆ ಆದಿಗುರು ನಾಗಾರ್ಜುನ ಶಿವಾಚಾರ್ಯರ ಪಲ್ಲಕ್ಕಿ ಉತ್ಸವ ಜರುಗುವುದು.

  ಸಂಜೆ ನಡೆಯುವ ಧರ್ಮ ಸಮಾರಂಭದಲ್ಲಿ ಬಾಳೆಹೊನ್ನೂರಿನ ಶ್ರೀರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಸಾನ್ನಿಧ್ಯ ವಹಿಸಲಿದ್ದಾರೆ. ರಜತ ಮಹೋತ್ಸವದ ಅಂಗವಾಗಿ ನಾಡಿನ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ. ಸಮಾರಂಭದ ನಂತರ ಶ್ರೀಗುರು ನಾಗಾರ್ಜುನ ಸ್ವಾಮಿಯ ಕಾರ್ತೀಕ ದೀಪೋತ್ಸವ ವಿಜೃಂಭಣೆಯಿಂದ ನಡೆಯಲಿದೆ.

  ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣೆಗೆ ಇನ್ನೂ ಕೆಲವೇ ಮೀಟರ್​ಗಳು ಬಾಕಿ: ಸ್ಥಳದಲ್ಲಿವೆ 20 ಆಂಬ್ಯುಲೆನ್ಸ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts