ಶ್ರೀ ಶೆಟ್ಟಿಹಳ್ಳಮ್ಮ ದೇವಿಯ ರಥೋತ್ಸವ

ಚನ್ನರಾಯಪಟ್ಟಣ: ತಾಲೂಕಿನ ದಿಂಡಗೂರು ಗ್ರಾಮದೇವತೆ ಶ್ರೀ ಶೆಟ್ಟಿಹಳ್ಳಮ್ಮ ದೇವಿಯ ಹಬ್ಬದ ಪ್ರಯುಕ್ತ ದೇವಿಯ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ಹಬ್ಬದ ಹಿನ್ನೆಲೆಯಲ್ಲಿ ರಥೋತ್ಸವದ ಬೀದಿಯನ್ನು ಸ್ವಚ್ಛಗೊಳಿಸಿ, ರಂಗೋಲಿ ಬಿಡಿಸಲಾಗಿತ್ತು. ಮಾವು, ಬೇವು ಹಾಗೂ ಬಾಳೆಕಂಬಗಳನ್ನು ಕಟ್ಟಿ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಸನ್ನಿಧಿಯಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಸಿಂಗರಿಸಲಾಗಿತ್ತು.
ಬೆಳಗ್ಗೆಯಿಂದ ಪೂಜೆ ಪುನಸ್ಕಾರ ನಡೆದು, ರಥದ ಎದುರಲ್ಲಿ ಬಾಳೆ ಕಂಬವನ್ನು ನೆಟ್ಟು, ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಮಧ್ಯಾಹ್ನ ಶ್ರೀ ಶೆಟ್ಟಿಹಳ್ಳಮ್ಮ ದೇವಿಯ ಅಡ್ಡಪಲ್ಲಕ್ಕಿ ಉತ್ಸವ ಪ್ರಮುಖ ಬೀದಿಗಳಲ್ಲಿ ಸಾಗಿತು. ಹೆಣ್ಣುಮಕ್ಕಳು ಆರತಿ ಹಿಡಿದು ಸಾಗಿದರು. ಭಕ್ತರು ರಥದ ಮುಂದೆ ಜಯಘೋಷಗಳನ್ನು ಕೂಗುತ್ತಾ, ಈಡುಗಾಯಿ ಹಾಕಿ ದೇವಿಗೆ ಪೂಜೆ ಸಲ್ಲಿಸಿದರು.