ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಯಾವ ನಟಿಯ ಸಂಭಾವನೆ ಕೂಡ ಕೋಟಿ ರೂ. ಮುಟ್ಟಿರಲಿಲ್ಲ. 2014ರಲ್ಲಿ ಬಿಡುಗಡೆಯಾದ “ಆರ್ಯನ್’ ಚಿತ್ರಕ್ಕಾಗಿ ನಟಿ ರಮ್ಯಾ 70ರಿಂದ 75 ಲಕ್ಷ ರೂ. ಸಂಭಾವನೆ ಪಡೆದಿದ್ದರು ಎನ್ನಲಾಗಿತ್ತು. ಇದುವರೆಗೂ ಅದೇ ಕನ್ನಡದ ನಟಿಯೊಬ್ಬರು ಪಡೆದ ಅತಿಹೆಚ್ಚು ಸಂಭಾವನೆಯಾಗಿತ್ತು. ಇದೀಗ ಆ ದಾಖಲೆಯನ್ನು ನಟಿ ರಚಿತಾ ರಾಮ್ ಮುರಿದಿದ್ದಾರೆ ಎಂಬ ಸುದ್ದಿ ಸ್ಯಾಂಡಲ್ವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ “ಕಲ್ಟ್’ ಚಿತ್ರಕ್ಕಾಗಿ ರಚಿತಾ 1 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. “ರ್ಯಾಂಬೋ 2′, “ದಾರಿ ತಪ್ಪಿದ ಮಗ’, “ಶಿವ 143′, “ಉಪಾಧ್ಯಕ್ಷ’ ಖ್ಯಾತಿಯ ಅನಿಲ್ ಕುಮಾರ್ ಆ್ಯಕ್ಷನ್- ಕಟ್ ಹೇಳುತ್ತಿರುವ ಚಿತ್ರವಿದು. 2022ರಲ್ಲಿ ರಿಲೀಸ್ ಆದ ಜಯತೀರ್ಥ ನಿರ್ದೇಶನದ ಪ್ಯಾನ್ ಇಂಡಿಯಾ “ಬನಾರಸ್’ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ನಾಯಕನಾಗಿ ಪದಾರ್ಪಣೆ ಮಾಡಿದ ಜೈದ್ ಖಾನ್ ನಟಿಸುತ್ತಿರುವ ಎರಡನೇ ಚಿತ್ರ “ಕಲ್ಟ್’. ಈ ಚಿತ್ರದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಜೈದ್ ಖಾನ್ಗೆ ಇಬ್ಬರು ನಾಯಕಿಯರಿದ್ದು ರಚಿತಾ ರಾಮ್ ಮತ್ತು “ಉಪಾಧ್ಯಕ್ಷ’ ನಟಿ ಮಲೈಕಾ ವಸುಪಾಲ್ ನಟಿಸುತ್ತಿದ್ದಾರೆ.
ಇದೇ ಚಿತ್ರದಲ್ಲಿ ನಟಿಸಲು ರಚಿತಾ ರಾಮ್ ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಿರ್ದೇಶಕ ಅನಿಲ್ ಕುಮಾರ್, “ಕಾಸ್ಟಿಂಗ್ ಬಳಿಕ ಸಂಭಾವನೆ ವಿಷಯಕ್ಕೆ ನಾನು ಹೋಗುವುದಿಲ್ಲ. ನಿರ್ಮಾಣ ಸಂಸ್ಥೆ ಮತ್ತು ಕಲಾವಿದರ ನಡುವಿನ ಹಣಕಾಸಿನ ವಿಷಯದ ಬಗ್ಗೆ ನನಗೆ ಅಷ್ಟು ಮಾಹಿತಿ ಇಲ್ಲ’ ಎನ್ನುತ್ತಾರೆ. ಅಂದಹಾಗೆ, ಸದ್ಯ ಮಲ್ಪೆಯಲ್ಲಿ “ಕಲ್ಟ್’ ಚಿತ್ರದ ಸೆಟ್ ಕೆಲಸಗಳು ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ. ಮತ್ತೊಂದೆಡೆ ಹೆಸರು ಹೇಳಲಿಚ್ಛಿಸದ ರಚಿತಾ ರಾಮ್ ಆಪ್ತರೊಬ್ಬರು, “ಸದ್ಯ ಹರಡಿರುವ ಸುದ್ದಿ ಸತ್ಯ. ಆದರೆ, ಈ ಬಗ್ಗೆ ಖುದ್ದು ರಚಿತಾ ರಾಮ್ ಮಾತನಾಡಿದರೆ ಚಂದ’ ಎನ್ನುತ್ತಾರೆ. “ಕಲ್ಟ್’ ಜತೆಗೆ ರಚಿತಾ, ನಾಗಶೇಖರ್ ನಿರ್ದೇಶಿಸುತ್ತಿರುವ, ಶ್ರೀನಗರ ಕಿಟ್ಟಿ ನಾಯಕನಾಗಿರುವ “ಸಂಜು ವೆಡ್ಸ್ ಗೀತಾ 2′ ಚಿತ್ರದಲ್ಲೂ ನಟಿಸುತ್ತಿದ್ದಾರೆ.
“ಕೂಲಿ’ಯಲ್ಲಿ ಡಿಂಪಲ್ ಕ್ವೀನ್?
ರಜಿನಿಕಾಂತ್ ಮತ್ತು ನಿರ್ದೇಶಕ ಲೋಕೇಶ್ ಕನಗರಾಜ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಸಿನಿಮಾ “ಕೂಲಿ’. ಇದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ರಜಿನಿ ಜತೆ ಉಪೇಂದ್ರ, ನಾಗಾರ್ಜುನ, ಶ್ರುತಿ ಹಾಸನ್, ಸತ್ಯರಾಜ್, ಸೌಬಿನ್ ಶಹೀರ್ ಪ್ರಮುಖ ತಾರಾಗಣದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ವಿಲನ್ ಪಾತ್ರದಲ್ಲಿ ರಚಿತಾ ನಟಿಸಲಿದ್ದಾರೆ ಎಂಬ ಸುದ್ದಿಯೂ ಕೆಲ ದಿನಗಳಿಂದ ಸದ್ದು ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಮೂರ್ನಾಲ್ಕು ಬಾರಿ ರಚಿತಾ ಚೆನ್ನೈಗೆ ಹೋಗಿಬಂದಿದ್ದು, ಈಗಾಗಲೇ ಚಿತ್ರದ ಶೂಟಿಂಗ್ನಲ್ಲೂ ಅವರು ಭಾಗಿಯಾಗಿದ್ದಾರೆ ಎನ್ನಲಾಗಿದೆ.