ದುರ್ಬಲ ಮನಸ್ಸಿನಿಂದ ಕ್ಷೀಣಿಸುವ ಹುಮ್ಮಸ್ಸು, ಆಯಸ್ಸು

blank

DR Anand pandurangi‘ಸರ್ ನಾನು ಕುಡಿಯೋದು ಬಿಟ್ಟು 3 ವರ್ಷ ಆಗಿತ್ತು. ಆದರೆ ಮೊನ್ನೆ ನಮ್ಮ ಟೀಂ ಇಂಡಿಯಾ ವಿಶ್ವ ಕಪ್ ಫೈನಲ್ ಸೋತಾಗ ಮನಸ್ಸಿಗೆ ಬಹಳ ಬೇಸರ ಆಯ್ತು. ಇದೇ ಬೇಸರದಲ್ಲಿ ಮತ್ತೆ ಕುಡಿದೆ. ಕ್ರಿಕೆಟ್ ಅಂದರೆ ನನಗೆ ಪ್ರಾಣ. ಅದೂ ಫೈನಲ್​ವರೆಗೆ ಬಂದು ಸೋಲು ಅನುಭವಿಸಿದಾಗ ನನಗಾದ ಬೇಸರ ಅಷ್ಟಿಷ್ಟಲ್ಲ. ಈಗ ಅದಾದ ನಂತರವೂ ಮತ್ತೆ ಕುಡಿತದ ವ್ಯಸನ ಶುರುವಾಗಿದೆ. ಇದರಿಂದ ಮತ್ತೆ ಕುಟುಂಬದ ನೆಮ್ಮದಿ ಮತ್ತು ಮನಶ್ಶಾಂತಿ ಹಾಳಾಗುತ್ತಿದೆ, ಏನು ಮಾಡಲಿ ಸರ್…?’

ಇವು 32 ವಯಸ್ಸಿನ ಯುವಕ ಮೊನ್ನೆ ಮೊನ್ನೆಯಷ್ಟೇ ಬಂದು ನನ್ನ ಬಳಿ ಹೇಳಿಕೊಂಡ ಮಾತುಗಳು. ಆತನ ಮಾತಿನಲ್ಲಿ ಪಶ್ಚಾತ್ತಾಪದ ಛಾಯೆ ಇತ್ತು. ಜತೆಗೆ ಮತ್ತೆ ಕುಡಿದೆ ಎಂಬ ತಪ್ಪೊಪ್ಪಿಗೆಯುಕ್ತ ಸತ್ಯವೂ ಇತ್ತು. ಮೇಲಾಗಿ ಆತನಿಗೆ ನೆಮ್ಮದಿ ಹಾಳಾಗಿದ್ದರ ಅರಿವೂ ಇತ್ತು. ಇಷ್ಟೆಲ್ಲಾ ಅರಿವು ಇದ್ದರೂ ಈತ ಆ ಕುಡಿತದ ಮೊರೆ ಹೋಗಿದ್ದು ಹೇಗೆ ಮತ್ತು ಏಕೆ? ಎಂದು ಹುಡುಕಿ ಹೊರಟರೆ ಸಿಗುವ ಉತ್ತರ ಮನೋದೌರ್ಬಲ್ಯ. ಹೌದು ಈ ಮನಸ್ಸು ಎಂಬುದರ ಶಕ್ತಿಯೇ ಹಾಗೆ- ಅಪರಿಮಿತ ಮತ್ತು ಅನಂತ. ಆದರೆ ಅದರ ಸದ್ಬಳಕೆ ಮತ್ತು ನಿಗ್ರಹ ಬಲು ಮುಖ್ಯ. ‘ಮನ ಏವ ಕಾರಣಂ ಬಂಧ ಮೋಕ್ಷಯೋ’ ಎಂಬಂತೆ ನಮ್ಮೆಲ್ಲ ಸುಖ-ದುಃಖಕ್ಕೆ, ನೋವು-ನಲಿವಿಗೆ ಈ ಮನಸ್ಸೇ ಕಾರಣ.

ಅದಕ್ಕೆ ನಮ್ಮ ಹಿರಿಯರು ಹಿಂದೆ ‘ನೀ ಮನಸ್ಸು ಮಾಡಿದರೆ ಗುಡ್ಡಾನೆ ಎತ್ತಿ ತಂದು ಇಡುವೆ’ ಎನ್ನುತ್ತಿದ್ದರು. ಸಂಕಲ್ಪ ಮತ್ತು ಧೀ ಶಕ್ತಿಯ ಸಂಗಮವಾದ ಮನಸ್ಸು ಅಷ್ಟೇ ಚಂಚಲವೂ ಹೌದು. ಈಗ ನನ್ನ ಬಳಿ ಬಂದ ಯುವಕನ ಸ್ಥಿತಿ ಹಾಗಾಗಲು ಕಾರಣವೂ ಈ ಚಂಚಲತೆಯೇ. ಇಲ್ಲಿ ನಾವು ಗಮನಿಸಬೇಕಾದ ಒಂದು ಸಂಗತಿ ಎಂದರೆ ಆ ಯುವಕ ಕುಡಿತ ಬಿಟ್ಟಿದ್ದು ಆತನ ಗಟ್ಟಿ ಮನಸ್ಸಿನಿಂದ. ಮತ್ತೆ ದಾಸನಾಗಿದ್ದು ಚಂಚಲ ಮನಸ್ಸಿನಿಂದ. ವ್ಯಕ್ತಿಗೆ ಎರಡೂ ಅವಕಾಶಗಳಿರುತ್ತವೆ. ಒಂದು ದೃಢ ಮನಸ್ಸು, ಇನ್ನೊಂದು ದುರ್ಬಲ ಮನಸ್ಸು. ಇವೆರಡರಲ್ಲಿ ಯಾವುದು ಹಿತಕರ ಎಂಬ ಅರಿವು ನಮಗಿದ್ದಲ್ಲಿ ನೆಮ್ಮದಿಗೆ ಭಂಗ ಬರುವುದಿಲ್ಲ. ವ್ಯಕ್ತಿಯೊಬ್ಬನ ನೆಮ್ಮದಿಗೆ ಧಕ್ಕೆ ಬಂದಲ್ಲಿ ಅದರ ಪರಿಣಾಮ ಇಡೀ ಕುಟುಂಬದ ಮೇಲೆ ಆಗೋದು ಖಚಿತ. ಜತೆ ಜತೆಗೆ ಆತನ ವೃತ್ತಿ ಜೀವನದ ಮೇಲೂ ದುಷ್ಪರಿಣಾಮ ಬೀರುತ್ತದೆ. ಆ ವ್ಯಸನದಿಂದ ವ್ಯಕ್ತಿಯ ಅವಸಾನ ಶುರು ಎಂತಲೇ ಹೇಳಬಹುದು.

ನಮ್ಮ ದೇಶ ನಮ್ಮ ಟೀಂ ಗೆಲ್ಲಬೇಕು, ವಿಶ್ವಕಪ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಳ್ಳಬೇಕು ಎಂಬ ಅಭಿಮಾನ ಎಲ್ಲವೂ ಓಕೆ. ಆದರೆ ಅದಾಗದಿದ್ದಲ್ಲಿ ನಾವೇಕೆ ನಮ್ಮ ಆರೋಗ್ಯ, ದುಡಿಮೆ ಹಾಳು ಮಾಡಿಕೊಳ್ಳಬೇಕು? ಇದೊಂದು ನೆಪವಷ್ಟೇ. ನಮ್ಮ ಮನಸ್ಸು ನಮ್ಮ ಅಂಕಿತದಲ್ಲಿಲ್ಲ ಎಂಬುದನ್ನು ಈ ಸ್ಥಿತಿ ಬಿಂಬಿಸುತ್ತದೆ. ಇಲ್ಲಿ ಇನ್ನೊಂದು ಸಂಗತಿ ಸ್ಪಷ್ಟ ಏನೆಂದರೆ ಆತ ಅಂದು ಟೀಂ ಇಂಡಿಯಾ ಗೆದ್ದಿದ್ದರೂ ಕುಡಿಯುತ್ತಿದ್ದ. ಅದಕ್ಕೆ ಗೆಲುವಿನ ಸಂಭ್ರಮ ಎಂದು ಕಾರಣ ಕೊಡುತ್ತಿದ್ದ. ಮತ್ತೆ ಕುಡಿತ ಆರಂಭಿಸಬೇಕು. ಅದಕ್ಕೊಂದು ಸೂಕ್ತ ಸಂದರ್ಭದ (ಮುಹೂರ್ತ) ಹುಡುಕುವ ಮನಸ್ಸು ಇದ್ದಾಗ ಆ ದೃಢ ನಿರ್ಧಾರವನ್ನು ಬದಲಾಯಿಸೋದು ಕಷ್ಟ ಮತ್ತು

ಆ ನಿಟ್ಟಿನಲ್ಲಿ ಇಚ್ಛಾಶಕ್ತಿ ಬರುವುದೂ ಇಲ್ಲ. ಈಗ ನನ್ನ ಬಳಿ ಬಂದ ಯುವಕ 3 ವರ್ಷಗಳ ಮುಂಚೆ ಕುಡಿತ ಬಿಡಲು ಏನು ಮಾಡಬೇಕು ಎಂಬ ಪರಿಹಾರ ಅರಸಿ ಬಂದಿದ್ದ. ಈಗ ಮತ್ತೆ ಅದರ ದಾಸನಾಗಿ ಮತ್ತದೇ ಪರಿಹಾರ ಕೋರಿ ಬಂದ. ಇದು ಅವನ ಮನೋದೌರ್ಬಲ್ಯದ ಪ್ರತೀಕ. ಈ ಪ್ರಕರಣ ಮುಂದೆ ಇಟ್ಟುಕೊಂಡು ನಾನು ಹೇಳಬೇಕಿರುವುದು ಇಷ್ಟೇ ಅದೇನೆಂದರೆ ಮನಸ್ಸು ಮರ್ಕಟ. ಅದು ಸಮಸ್ತ ಒಳಿತುಕೆಡಕಿಗೆ ಕಾರಣೀಭೂತವಾಗುತ್ತದೆ. ನಾವು ಕೈಗೊಳ್ಳುವ ಪ್ರತಿಯೊಂದು ನಿರ್ಧಾರ, ಮಾಡುವ ಆಲೋಚನೆಗಳ ಹಿಂದೆ ಸಕಾರಣವಿರಬೇಕು. ಅದರ ಪರಿಣಾಮದ ಪ್ರಮಾಣದ ಅರಿವಿರಬೇಕು. ಜತೆಗೆ ಸ್ವಸ್ಥ ಮನಸ್ಸು ಇದ್ದರೆ ಸಮಾಜವೂ ಸ್ವಸ್ಥವಾಗಿರುತ್ತದೆ. ಯಾವುದೇ ವ್ಯಸನಿ ಅದರಿಂದ ಹೊರಬಂದ ಮೇಲೂ ದೌರ್ಬಲ್ಯಯುಕ್ತ ಮನಸ್ಥಿತಿಗೆ ಬಂದರೆ ಹಾಳಾಗೋದು ಆತನ ಜೀವನ ಮತ್ತು ಭವಿಷ್ಯವೇ ಹೊರತು ವ್ಯಸನದ್ದಲ್ಲ. ಇದು ಅರ್ಥವಾದರೆ ವ್ಯಸನವೇ ಅವಸಾನ ಆಗೋದು ಆ ಸೂರ್ಯ ಚಂದಿರರಷ್ಟೇ ಸತ್ಯ.

ಕಣ್ಣಿಗೊಂದು ಸವಾಲ್​: ಜೀನಿಯಸ್​ ಮಾತ್ರ ಈ ಫೋಟೋದಲ್ಲಿರುವ ಸಿಂಹವನ್ನು ಪತ್ತೆಹಚ್ಚಲು ಸಾಧ್ಯ!

Share This Article

Hair care : ಸ್ನಾನ ಮಾಡುವಾಗ ಈ ಟಿಪ್ಸ್ ಪಾಲಿಸಿದರೆ ಕೂದಲು ಉದುರುವುದಿಲ್ಲ..!

Hair care : ಕೂದಲು ಉದುರುವ ಸಮಸ್ಯೆಯಿಂದ ಬಹಳಷ್ಟು ಜನರು ಬಳಲುತ್ತಿದ್ದಾರೆ. ಇಂದಿನ ಆಧುನಿಕ ಜೀವನಶೈಲಿ…

ಗೀಸರ್​​ ಉಪಯೋಗಿಸುವವರು ಎಂದಿಗೂ ಈ ತಪ್ಪುಗಳನ್ನು ಮಾಡ್ಬೇಡಿ! ತಪ್ಪಿದರೆ ನಿಮ್ಮ ಜೀವವೇ ಹೋದಿತು

ಬೆಂಗಳೂರು: ಈಗ ಚಳಿಗಾಲ. ಮೈಕೊರೆಯುವ ಚಳಿಯಿಂದ ತಪ್ಪಿಸಿಕೊಳ್ಳಲು ಒಂದರ ಮೇಲೊಂದು ಬಟ್ಟೆಯನ್ನು ಧರಿಸಿ, ಬೆಚ್ಚಗಿರುವ ಜನರು,…

ಬೆಳಗ್ಗೆ ಹೊತ್ತು ವಾಲ್​ನಟ್ಸ್​​ ಸೇವನೆ ಎಷ್ಟು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ | Walnuts

ಬೆಂಗಳೂರು: ಉತ್ತಮ ಆರೋಗ್ಯಕ್ಕಾಗಿ ಇಂದು ಅನೇಕರು ಹೊಸ ಹೊಸ ರೀತಿಯ ಕಸರತ್ತನ್ನು ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಕೆಲವರು…