More

    ದಿಕ್ಸೂಚಿ- ಕರೊನಾ ಚಕ್ರವ್ಯೂಹ ಭೇದಿಸಬಲ್ಲ ಅಭಿಮನ್ಯು ಯಾರು?

    ಹಿಂದೆಲ್ಲ ಒಂದೊಂದು ಔಷಧ ಸಂಶೋಧನೆಗೆ ಏಳೆಂಟು ವರ್ಷ ಅಥವಾ ಅದಕ್ಕೂ ಹೆಚ್ಚು ಅವಧಿಯೂ ತಗುಲುತ್ತಿತ್ತು. ವೈದ್ಯಕೀಯ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಈಗ ಅವಧಿ ತಗ್ಗಿದೆ. ಈಗ ಕರೊನಾಕ್ಕೆ ಆದಷ್ಟು ಬೇಗ ಲಸಿಕೆ ಕಂಡುಹಿಡಿಯಬೇಕೆಂದು ಬಿರುಸಿನ ಚಟುವಟಿಕೆ ನಡೆಯುತ್ತಿದ್ದು, ಭಾರತವೂ ಮುಂಚೂಣಿಯಲ್ಲಿದೆ.

    ದಿಕ್ಸೂಚಿ- ಕರೊನಾ ಚಕ್ರವ್ಯೂಹ ಭೇದಿಸಬಲ್ಲ ಅಭಿಮನ್ಯು ಯಾರು?‘ಯುದ್ಧ ಮತ್ತು ಪ್ರೇಮದಲ್ಲಿ ಎಲ್ಲವೂ ಸರಿ’ ಎಂಬ ಮಾತು ಬಹು ಪ್ರಚಲಿತ. ಸಾಮಾನ್ಯಾರ್ಥದಲ್ಲಿ ಇದು ಸರಿಯಿರಬಹುದು. ಆದರೆ ಇವೆರಡೂ ವಿಷಯದಲ್ಲಿ ಮಾಡಿದ್ದೆಲ್ಲವೂ ಸರಿ ಎಂಬುದನ್ನು ಸಾಧಿಸಲಿಕ್ಕೆ ಹೋಗಿ ಅನೇಕ ಅನಾಹುತಗಳಾದುದನ್ನು ಇತಿಹಾಸ ದಾಖಲಿಸಿದೆ ಮತ್ತು ವರ್ತಮಾನದಲ್ಲಿಯೂ ಇದನ್ನು ಕಾಣುತ್ತಲೇ ಇದ್ದೇವೆ. ಯುದ್ಧವೆಂದಾಕ್ಷಣ ಹೇಗೆ ಬೇಕಾದರೂ ಸೆಣೆಸಬಹುದು ಎಂದಲ್ಲ. ಮಹಾಭಾರತ ಯುದ್ಧದ ಸಮಯದಲ್ಲಿ ಸಹ ಅನೇಕ ನಿಯಮಗಳನ್ನು ಮಾಡಿಕೊಳ್ಳಲಾಗಿತ್ತು. ಉದಾ: ಸೂರ್ಯಾಸ್ತದ ನಂತರ ಯುದ್ಧ ಮಾಡಬಾರದು; ಮಹಿಳೆಯರು ಮತ್ತು ನಿರಾಯುಧರ ಮೇಲೆ ಶಸ್ತ್ರ ಪ್ರಯೋಗಿಸಬಾರದು ಇತ್ಯಾದಿ. ಹೀಗಿದ್ದರೂ ಅಲ್ಲಿಯೂ ನಿಯಮಗಳನ್ನು ಮೀರಿದ್ದೂ ಉಂಟು. ಇದಕ್ಕೆ ಒಂದು ಉದಾಹರಣೆ- ಅಭಿಮನ್ಯುವಿನದು. ಶ್ರೀಕೃಷ್ಣನ ತಂಗಿಯಾದ ಸುಭದ್ರೆಯ ಮಗನೀತ. ಸುಭದ್ರೆ ಗರ್ಭವತಿಯಾಗಿರುವಾಗಲೇ, ಕೃಷ್ಣನು ಯುದ್ಧದಲ್ಲಿನ ಅಭೇದ್ಯವ್ಯೂಹಗಳ ಬಗ್ಗೆ ವಿವರಣೆ ನೀಡಿದ್ದನಂತೆ. ತಾಯಗರ್ಭದಲ್ಲಿದ್ದ ಅಭಿಮನ್ಯು ಇವೆಲ್ಲವನ್ನು ಕೇಳಿಸಿಕೊಂಡು, ಮುಂದೆ ಬೆಳೆದು ದೊಡ್ಡವನಾದ ಮೇಲೆ ಧನುರ್ವಿದ್ಯಾಪಾರಂಗತನಾಗಿ, ಸಮರವ್ಯೂಹನಿಷ್ಣಾತನಾದನಂತೆ. ಆದರೆ ಚಕ್ರವ್ಯೂಹದ ಪ್ರವೇಶ ವಿದ್ಯೆ ಆತನಿಗೆ ಗೊತ್ತಿತ್ತೇ ವಿನಾ ಅದರಿಂದ ಹೊರಬರುವ ಬಗೆ ಗೊತ್ತಿರಲಿಲ್ಲ. ಕುರುಕ್ಷೇತ್ರ ಯುದ್ಧದಲ್ಲಿ, ಕೌರವ ಸೇನೆಗೆ ಸತತ ಹಿನ್ನಡೆಯಾಗುತ್ತಿರುವಾಗ ಒಮ್ಮೆ ದುರ್ಯೋಧನನ ಚುಚ್ಚುಮಾತಿನಿಂದ ಆಘಾತಗೊಂಡ ದ್ರೋಣರು ಪಾಂಡವರನ್ನು ಹಣಿಯಲೇಬೇಕೆಂದು ಪದ್ಮವ್ಯೂಹ ರಚಿಸುತ್ತಾರೆ.

    ಆ ಪದ್ಮವ್ಯೂಹ ಭೇದಿಸುವ ಕಲೆ ಗೊತ್ತಿದ್ದವರು ನಾಲ್ವರು ಮಾತ್ರ- ಕೃಷ್ಣ, ಅರ್ಜುನ, ಪ್ರದ್ಯುಮ್ನ ಮತ್ತು ಅಭಿಮನ್ಯು. ಕಾರಣಾಂತರಗಳಿಂದ ಉಳಿದ ಮೂವರು ಆಗ ಅಲ್ಲಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಧರ್ಮರಾಜನು ಅಭಿಮನ್ಯುವಿಗೆ ಈ ಜವಾಬ್ದಾರಿ ವಹಿಸುತ್ತಾನೆ. ಅಪ್ರತಿಮ ಧೈರ್ಯಶಾಲಿಯಾದ ಅಭಿಮನ್ಯು ಅಂಜದೆ ಅಳುಕದೆ ಈ ಪಂಥಾಹ್ವಾನ ಸ್ವೀಕರಿಸಿ, ಪದ್ಮವ್ಯೂಹ ಭೇದಿಸಿ ಒಳನುಗ್ಗುತ್ತಾನೆ. ಆತನ ಕಲಿತನಕ್ಕೆ ಕೌರವ ಪಕ್ಷದ ವೀರಾಧಿವೀರರೇ ನಡುಗುತ್ತಾರೆ. ಅಭೇಧ್ಯವಾದ ಕವಚವನ್ನು ಹೊಂದಿರುವ ಅಭಿಮನ್ಯುವನ್ನು ನೇರಯುದ್ಧದಲ್ಲಿ ಮಣಿಸಲಾರದೆಂದರಿತ ದ್ರೋಣರು, ಪರೋಕ್ಷ ಉಪಾಯ ಸೂಚಿಸುತ್ತಾರೆ. ಅದರಂತೆ, ಹಿಂದಿನಿಂದ ಬಂದು ಅಭಿಮನ್ಯುವಿನ ಸಾರಥಿಯನ್ನು ಸಂಹರಿಸಿ ಆತನ ಬಿಲ್ಲನ್ನು ಕತ್ತರಿಸಲಾಗುತ್ತದೆ. ಇಷ್ಟಾದರೂ ಅಳುಕದ ಅಭಿಮನ್ಯು ನೆಲದಿಂದಲೇ ಗದೆಯಿಂದ ಪೌರುಷ ಪ್ರದರ್ಶಿಸುತ್ತಾನೆ. ಆಗ ಕೌರವರನೇಕರು ಸೇರಿಕೊಂಡು ಆತನನ್ನು ಸಾಯಿಸುತ್ತಾರೆ.

    ಯುದ್ಧನಿಯಮ ಅನುಸರಿಸಿದ್ದರೆ ಅಭಿಮನ್ಯು ಸೋಲುವ ಕುಳವಾಗಿದ್ದನೆ? ಕರ್ನಾಟಕದ ಸರ್ವಾಂಗಸುಂದರ ಕಲೆಗಳಲ್ಲೊಂದಾದ ಯಕ್ಷಗಾನದಲ್ಲಿ ‘ವೀರ ಅಭಿಮನ್ಯು’ ಎಂಬ ಪ್ರಸಂಗವನ್ನು ಪ್ರದರ್ಶಿಸಲಾಗುತ್ತದೆ. ಅದರಲ್ಲಿನ ಅಭಿಮನ್ಯು ಪಾತ್ರಧಾರಿಯನ್ನು ನೋಡಿದರೆ ಕುರುಕ್ಷೇತ್ರದ ಆ ಯುದ್ಧವೇ ಕಣ್ಮುಂದೆ ಬಂದಂತಾಗುತ್ತದೆ.

    ಈಚೆಗೆ ಲಡಾಖ್ ಪ್ರದೇಶದಲ್ಲಿ ಚೀನೀ ಸೇನೆಯವರು ಭಾರತೀಯ ಸೈನಿಕರ ಮೇಲೆ ತೋರಿದ ಅಮಾನವೀಯ ನಡವಳಿಕೆ ಕಂಡಾಗ ಯಾಕೋ ಮೇಲಿನ ಪ್ರಸಂಗ ನೆನಪಾಯಿತು. ಮನಮೋಹನ ಸಿಂಗ್ ಮತ್ತು ದೇವೆಗೌಡರು ಪ್ರಧಾನಿಗಳಾಗಿದ್ದಾಗ, ಚೀನಾ ಜತೆ ಮಾಡಿಕೊಂಡ ಒಡಂಬಡಿಕೆ ಪ್ರಕಾರ, ಲಡಾಖ್ ಗಡಿಭಾಗದಲ್ಲಿ ಎರಡೂ ಕಡೆಯವರು ಶಸ್ತ್ರಾಸ್ತ್ರಧಾರಿಗಳಾಗಿರುವಂತಿಲ್ಲ. ಹಾಗೇ, ಗಡಿ ವಿಚಾರವಾಗಿ ಭಿನ್ನಮತ ಏರ್ಪಟ್ಟರೆ ಪರಸ್ಪರ ಮಾತುಕತೆ ಮೂಲಕ ಪರಿಹರಿಸಿಕೊಳ್ಳಬೇಕೆ ವಿನಾ ಘರ್ಷಣೆಗೆ ಆಸ್ಪದ ನೀಡಬಾರದು. ಚೀನಿಯರು ಅಕ್ರಮವಾಗಿ ನಿರ್ವಿುಸಿದ ಶಿಬಿರದ ತೆರವು ವಿಚಾರವಾಗಿ ಕೇಳಲು ಬಂದ ಭಾರತದ ಸೈನಿಕರ ಮೇಲೆ ಮೊಳೆಗಳನ್ನು ಜೋಡಿಸಿದ ಉಕ್ಕಿನ ಬಡಿಗೆಗಳಿಂದ ಹಲ್ಲೆ ನಡೆಸಿದರು. ಶಸ್ತ್ರ ಹಿಡಿದಿರಬಾರದೆಂಬ ನಿಯಮಕ್ಕನುಸಾರವಾಗಿ ಭಾರತದ ಸೈನಿಕರು ನಿರಾಯುಧರಾಗಿದ್ದರು. ಆದರೆ ಚೀನೀ ಸೈನಿಕರು ಮಾಡಿದ್ದು ಇಂಥ ಕೃತ್ಯ. ಹಾಗಂತ ಭಾರತೀಯ ಸೈನಿಕರು ಸುಮ್ಮನುಳಿಯಲಿಲ್ಲ. ಅಕ್ಷರಶಃ ಮಲ್ಲಯುದ್ಧವೇ ನಡೆಯಿತೆಂದು ವರದಿಗಳು ಹೇಳುತ್ತವೆ. ನಮ್ಮ ಕಡೆಯ 20 ಯೋಧರು ಹುತಾತ್ಮರಾದರು. ತನ್ನ ಕಡೆ ಏನಾಯಿತೆಂದು ಚೀನಾ ಈವರೆಗೂ ಬಾಯ್ಬಿಟ್ಟಿಲ್ಲ! ಮೊದಲೇ ಕರೊನಾ ಹಾವಳಿಯಿಂದಾಗಿ ತತ್ತರಿಸಿರುವ ಆ ದೇಶದಲ್ಲಿ ಸೈನಿಕರ ಸಾವುನೋವಿನ ಬಗ್ಗೆ ಹೇಳಿದರೆ ಜನ ಎಲ್ಲಿ ಮತ್ತಷ್ಟು ಅಸಮಾಧಾನಗೊಂಡಾರೋ ಎಂಬ ಭಯದಿಂದ ಕಮ್ಯುನಿಸ್ಟ್ ಆಡಳಿತ ಬಾಯ್ಮುಚ್ಚಿಕೊಂಡಿದೆ ಎಂದು ಅಂತಾರಾಷ್ಟ್ರೀಯ ವಿಶ್ಲೇಷಕರು ಹೇಳುತ್ತಾರೆ. ಈ ಘಟನೆ ನಂತರ ಕಠಿಣ ನಿಲುವು ತಳೆದಿರುವ ಭಾರತ, ಆ ಭಾಗದ ಸೈನಿಕರು ಶಸ್ತ್ರ ಹಿಡಿದಿರಬಾರದೆಂಬ ನಿಯಮದಲ್ಲಿ ಬದಲಾವಣೆ ಮಾಡಿಕೊಂಡಿದೆ. ಯುದ್ಧ ನಿಯಮಗಳನ್ನು ಎರಡೂ ಕಡೆಯವರು ಅನುಸರಿಸಿದರೆ ಮಾತ್ರ ಬೆಲೆ.

    ಈಗ ಕರೊನಾ ವೈರಸ್ ವಿರುದ್ಧ ವಿಶ್ವವೇ ಸಮರ ಸಾರಿದೆ. ಈ ವೈರಿ ಎಲ್ಲಿಂದ ಬಂತು ಗೊತ್ತಿದೆ. ಹೇಗೆ ಬಂತು ಎಂಬುದರ ಸ್ಪಷ್ಟ ಮಾಹಿತಿ ಇಲ್ಲ. ವೈರಸ್ ಮೂಲ ಮತ್ತು ಕಾರಣ ಪತ್ತೆಹಚ್ಚಲು ತಂಡವೊಂದನ್ನು ಚೀನಾಕ್ಕೆ ಕಳಿಸುವುದಾಗಿ ವಿಶ್ವಸಂಸ್ಥೆ ಹೇಳಿದೆ. ಆ ಕ್ರಮದಿಂದ ಈ ಶತಮಾನದ ನಿಗೂಢ ರಹಸ್ಯವೊಂದು ಬಯಲಾಗುವುದೇ? ಕಾದುನೋಡೋಣ. ಆದರೆ ತನ್ನ ಹುಳುಕು ಬಯಲಾಗದಂತಿರಲು ಚೀನಾ ಶತಪ್ರಯತ್ನ ಮಾಡುವುದಂತೂ ಖರೆ.

    ಕುರುಕ್ಷೇತ್ರದಲ್ಲಿ ಕೌರವರು ಅಭಿಮನ್ಯುವಿನ ವಿಷಯದಲ್ಲಿ ಮೋಸದ ದಾರಿ ಹಿಡಿದರು ಅಥವಾ ಚೀನಾ ಲಡಾಖ್​ನಲ್ಲಿ ದುರುಳತನ ಪ್ರದರ್ಶಿಸಿತು ಎಂದಮಾತ್ರಕ್ಕೆ, ಕರೊನಾ ವೈರಸ್ ವಿರುದ್ಧದ ಸಮರದಲ್ಲಿ ತೊಡಗಿರುವ ಜಾಗತಿಕ ದೇಶಗಳು ಅಡ್ಡದಾರಿ ಹಿಡಿಯಲಾಗದು. ಇಲ್ಲಿ ಏನಿದ್ದರೂ ನೇರ ಹೋರಾಟ. ಅಂದರೆ, ಕರೊನಾಕ್ಕೆ ಲಸಿಕೆ ಅಥವಾ ಔಷಧ ಕಂಡುಹಿಡಿದು ಅದರ ಪಿಡುಗು ನಿವಾರಿಸಿಕೊಳ್ಳುವುದು. ವಿವಿಧ ದೇಶಗಳು ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದು, ಕ್ಲಿನಿಕಲ್ ಟ್ರಯಲ್​ಗಳು (ಪ್ರಾಯೋಗಿಕ ಪರೀಕ್ಷೆ) ಕೂಡ ಮುಂದುವರಿದಿವೆ. ಈ ನಡುವೆ, ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಈಚೆಗೆ ನೀಡಿದ ಒಂದು ಹೇಳಿಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ಮತ್ತು ನಿರೀಕ್ಷೆಯನ್ನು ಹುಟ್ಟುಹಾಕಿತು. ಇದೇ ಆಗಸ್ಟ್ 15ರ ವೇಳೆಗೆ ಕರೊನಾ ಲಸಿಕೆಯನ್ನು ಬಳಕೆಗೆ ತರುವ ಇಂಗಿತ ಐಸಿಎಂಆರ್ ಹೇಳಿಕೆಯಲ್ಲಿತ್ತು. ಲಸಿಕೆಯ ಕ್ಲಿನಿಕಲ್ ಟ್ರಯಲ್ ವಿಚಾರದಲ್ಲಿ ತ್ವರಿತವಾಗಿ ಕಾರ್ಯನಿರ್ವಹಿಸುವಂತೆ ಒಂಬತ್ತು ಸಂಸ್ಥೆಗಳಿಗೆ ಸೂಚಿಸಿರುವುದಾಗಿ ಐಸಿಎಂಆರ್ ಹೇಳಿತ್ತು. ಈ ಹೇಳಿಕೆ ಬಗ್ಗೆ ಅನೇಕ ವೈರಾಣು ತಜ್ಞರು ಆಕ್ಷೇಪವನ್ನೂ ಎತ್ತಿದರು. ಕ್ಲಿನಿಕಲ್ ಟ್ರಯಲ್ ಅನೇಕ ಹಂತಗಳ ಪ್ರಕ್ರಿಯೆಯಾಗಿದ್ದು, ಇದಕ್ಕೆ ಒಂದು ನಿರ್ದಿಷ್ಟ ಗಡುವನ್ನು ವಿಧಿಸಲಾಗದು; ಈ ಪ್ರಕ್ರಿಯೆಯಲ್ಲಿ ರಾಜಿ ಸಲ್ಲದು ಎಂದು ಅವರು ಪ್ರತಿಪಾದಿಸಿದರು. ಐಸಿಎಂಆರ್ ಸ್ಪಷ್ಟನೆ ನೀಡಿ, ಕ್ಲಿನಿಕಲ್ ಟ್ರಯಲ್ ನಿಯಮ ಉಲ್ಲಂಘಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ. ಇದರೊಟ್ಟಿಗೆ, ಕೇಂದ್ರ ಆರೋಗ್ಯ ಇಲಾಖೆ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿ, ಐಸಿಎಂಆರ್ ಇಂಗಿತವನ್ನು ಸ್ಪಷ್ಟಪಡಿಸಿದೆ. ‘ಕ್ಲಿನಿಕಲ್ ಟ್ರಯಲ್ ಪ್ರಕ್ರಿಯೆಯನ್ನು ವೇಗಗೊಳಿಸುವುದು ಐಸಿಎಂಆರ್ ಉದ್ದೇಶ. ಕರೊನಾಕ್ಕೆ ದೇಶೀಯವಾಗಿಯೇ ದಾಖಲೆಯ ಅವಧಿಯಲ್ಲಿ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಲಸಿಕೆ ಆದಷ್ಟು ಬೇಗ ಸಾರ್ವತ್ರಿಕ ಬಳಕೆಗೆ ಸಿಗುವಂತಾಗಬೇಕೆಂಬುದು ನಮ್ಮ ಉದ್ದೇಶ. ಸಾಂಪ್ರದಾಯಿಕ ವಿಧಾನಗಳನ್ನೇ ನೆಚ್ಚಿಕೊಂಡು, ಇನ್ನು ಎರಡು ವರ್ಷದ ನಂತರ ಲಸಿಕೆ ಅಭಿವೃದ್ಧಿಪಡಿಸಿದರೆ ಉಪಯೋಗವೇನು ಬಂತು? ಹೀಗಾಗಿಯೇ ಲಸಿಕೆಯ ಪ್ರಾಯೋಗಿಕ ಪರೀಕ್ಷೆಯನ್ನು ತ್ವರಿತವಾಗಿ ನಡೆಸಬೇಕೆಂಬುದು ಇಂಗಿತ. ಇದರಲ್ಲಿ ಸುರಕ್ಷತೆ ಅಥವಾ ದಕ್ಷತೆ ವಿಷಯದಲ್ಲಿ ರಾಜಿ ಪ್ರಶ್ನೆಯೇ ಇಲ್ಲ’ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

    ನಿಜ. ಯಾವುದೇ ಔಷಧ ಸಂಶೋಧನೆಯಲ್ಲಿ ಕ್ಲಿನಿಕಲ್ ಟ್ರಯಲ್ ಎಂಬುದು ಬಹು ಮಹತ್ವದ್ದು. ಇದು ಬಹಳ ಸಂಕೀರ್ಣ ಪ್ರಕ್ರಿಯೆಯೂ ಹೌದು. ಪ್ರಾಣಿಗಳ ಮೇಲಿನ ಪ್ರಯೋಗ ಯಶಸ್ವಿಯಾದ ನಂತರದಲ್ಲಿ ಮಾನವರ ಮೇಲೆ ಔಷಧದ ಪ್ರಾಯೋಗಿಕ ಪರೀಕ್ಷೆ ನಡೆಸಬೇಕಾಗುತ್ತದೆ. ಇದಕ್ಕೆ ನಾಲ್ಕೈದು ಹಂತಗಳಿರುತ್ತವೆ. ಮೊದಲಿಗೆ, ಮಾನವ ದೇಹದ ಮೇಲೆ ಔಷಧದ ಪರಿಣಾಮದ ಬಗ್ಗೆ ಸಂಶೋಧನೆ ನಡೆಯುತ್ತದೆ. ನಂತರದಲ್ಲಿ, ಜನರ ಸಣ್ಣ ಗುಂಪಿನ ಮೇಲೆ ಔಷಧದ ಸುರಕ್ಷತೆ ಅರಿಯುವುದಕ್ಕಾಗಿ ಪ್ರಯೋಗಿಸಲಾಗುತ್ತದೆ. ನಂತರದ ಹಂತದಲ್ಲಿ ಔಷಧದ ಪರಿಣಾಮಕಾರಿತ್ವ ಕಂಡುಕೊಳ್ಳಲು ಮತ್ತಷ್ಟು ಜನರ ಮೇಲೆ ಔಷಧ ಪ್ರಯೋಗಿಸಲಾಗುತ್ತದೆ. ಬಳಿಕ ಮಾರಾಟದ ಹಂತದಲ್ಲೂ ಔಷಧದ ಸುರಕ್ಷತೆ ಕುರಿತು ಅಧ್ಯಯನ ನಡೆಯುತ್ತದೆ. ಇಷ್ಟೆಲ್ಲ ಎಚ್ಚರಿಕೆ ಬಳಿಕವೂ, ಮಾರುಕಟ್ಟೆಗೆ ಬಂದ ಐದಾರು ವರ್ಷಗಳ ಬಳಿಕವೂ ಔಷಧಗಳನ್ನು ವಾಪಸ್ ಪಡೆದ ನಿದರ್ಶನಗಳಿವೆ. ಹೀಗಾಗಿಯೇ ಲಸಿಕೆ ಅಥವಾ ಔಷಧವೊಂದು ಇಂಥ ದಿನದಂದೇ ಮಾರುಕಟ್ಟೆಗೆ ಬರುತ್ತದೆ ಎಂದು ಹೇಳಲಾಗದು. ಹಿಂದೆಲ್ಲ ಒಂದೊಂದು ಔಷಧ ಸಂಶೋಧನೆಗೆ ಏಳೆಂಟು ವರ್ಷ ಅಥವಾ ಅದಕ್ಕೂ ಹೆಚ್ಚು ಅವಧಿಯೂ ತಗುಲುತ್ತಿತ್ತು. ಈಚಿನ ವರ್ಷಗಳಲ್ಲಿ ವೈದ್ಯಕೀಯ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಈ ಅವಧಿ ತಗ್ಗಿದೆ. ಈಗ ಕರೊನಾ ಹಾವಳಿ ವಿಪರೀತವಾಗಿರುವುದರಿಂದಾಗಿ ಆದಷ್ಟು ಬೇಗ ಲಸಿಕೆ ಕಂಡುಹಿಡಿಯಬೇಕೆಂದು ಭಾರತವೂ ಸೇರಿ ಹಲವು ದೇಶಗಳಲ್ಲಿ ಭರಭರನೆ ಚಟುವಟಿಕೆಗಳು ನಡೆಯುತ್ತಿವೆ. ಕೊವಾಕ್ಸಿನ್ ಹೆಸರಿನ ಲಸಿಕೆಯ ಪ್ರಾಯೋಗಿಕ ಪರೀಕ್ಷೆಗೆ ಐಸಿಎಂಆರ್ ದೇಶದ ವಿವಿಧೆಡೆಯ ಒಂಬತ್ತು ಸಂಸ್ಥೆಗಳಿಗೆ ಅನುಮತಿ ನೀಡಿದ್ದು, ಇದರಲ್ಲಿ ಬೆಳಗಾವಿಯ ಒಂದು ಸಂಸ್ಥೆಯೂ ಸೇರಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ, ಲಸಿಕೆ ಸಂಶೋಧನೆ ವಿಷಯದಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಹೇಳಿದ್ದಾರೆ.

    ಇನ್ನು, ಕರೊನಾ ಚಿಕಿತ್ಸೆಗೆ ಜಾಗತಿಕ ಸಮುದಾಯ ಲಸಿಕೆಯನ್ನು ಎದುರುನೋಡುತ್ತಿದ್ದರೆ, ಭಾರತದ ಪುರಾತನ ವೈದ್ಯವಿದ್ಯೆಯಾದ ಆಯುರ್ವೆದದ ಪರಿಣಾಮಕಾರಿತ್ವದ ಬಗ್ಗೆ ಒಂದಷ್ಟು ಭರವಸೆದಾಯಕ ವರದಿಗಳು ಬರುತ್ತಿವೆ. ಅದಾಗಲೇ ಬೇರೆ ಬೇರೆ ಕಾಯಿಲೆಗಳನ್ನು ಹೊಂದಿದ್ದ ಹತ್ತು ಮಂದಿ ಕರೊನಾ ಸೋಂಕಿತರಿಗೆ ಬೆಂಗಳೂರಿನ ಆಯುರ್ವೆದ ವೈದ್ಯ ಡಾ.ಗಿರಿಧರ ಕಜೆ ಮತ್ತು ತಂಡದವರು, ಅಲೊಪಥಿ ಔಷಧದ ಜತೆಗೆ ಆಯುರ್ವೆದ ಔಷಧವನ್ನೂ ನೀಡಿದ್ದು, ಕೆಲವೇ ದಿನಗಳಲ್ಲಿ ಪರಿಣಾಮ ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಈ ಫಲಿತಾಂಶದ ಬಗೆಗಿನ ವರದಿ ಸರ್ಕಾರಕ್ಕೆ ಹೋಗಿದ್ದು, ಮುಂದೆ ಯಾವ ಕ್ರಮ ಕೈಗೊಳ್ಳುತ್ತದೆಂಬುದನ್ನು ಕಾದುನೋಡಬೇಕು. ಇನ್ನು, ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಸಾಮಾನ್ಯ ಕರೊನಾ ಲಕ್ಷಣಗಳುಳ್ಳ ರೋಗಿಗಳಿಗೆ ಈಗಾಗಲೇ ನಡೆಯುತ್ತಿರುವ ಅಲೋಪಥಿ ಔಷಧದ ಜತೆಗೆ ಆಯುರ್ವೆದ ಔಷಧವನ್ನೂ ನೀಡಲಾಗಿದ್ದು, ಈವರೆಗೆ 196 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಆಯುಷ್ ಇಲಾಖೆ ಮಾಹಿತಿ ನೀಡಿದೆ. ಕರೊನಾಕ್ಕೆ ಆಯುರ್ವೆದ ಔಷಧದ ಜಂಟಿ ಕ್ಲಿನಿಕಲ್ ಟ್ರಯಲ್ ಮತ್ತು ಸಂಶೋಧನೆ ನಡೆಸಲು ಭಾರತ ಹಾಗೂ ಅಮೆರಿಕದ ಆಯುರ್ವೆದ ತಜ್ಞರು ಚಿಂತನೆ ನಡೆಸಿರುವುದು ಮತ್ತೊಂದು ಆಶಾದಾಯಕ ಬೆಳವಣಿಗೆ.

    ಕೊನೇ ಮಾತು: ಕರೊನಾ ಮಹಾಮಾರಿ ಜಗತ್ತಿನಲ್ಲಿ ಭಯಭೀತಿಯ ಚಕ್ರವ್ಯೂಹವನ್ನೇ ರಚಿಸಿಬಿಟ್ಟಿದೆ. ಭಾರತವೇ ಮೊದಲು ಈ ವ್ಯೂಹವನ್ನು ಭೇದಿಸುವ ಅಭಿಮನ್ಯುವಾಗಲಿ…ಇದರಿಂದ ಸಕಲ ವಿಶ್ವಕ್ಕೂ ಒಳಿತಾಗಲಿ.

    29 ಶೈಕ್ಷಣಿಕ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ಭಾಗ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts