Friday, 16th November 2018  

Vijayavani

Breaking News

ಮಾತು ಸೋತಾಗ ಉಳಿಯುವುದು ಮೌನ ಮಾತ್ರ…

Saturday, 18.08.2018, 3:05 AM       No Comments

ಕೆಲವೊಮ್ಮೆ ಮಾತಿನಿಂದ ಆಗದ್ದು ಮೌನದಿಂದ ಸಾಧ್ಯವಾಗುತ್ತದೆ. ಮಾತು ಸೋತಾಗಲೂ ಮೌನ ರಾಜ್ಯವಾಳುತ್ತದೆ. ಆದರೆ ಈ ರೀತಿ ಮಾತನ್ನು ಕಿತ್ತುಕೊಂಡು ಮೌನದ ಪ್ರವೇಶವಾಗುವುದಿದೆಯಲ್ಲ, ಅದು ಅಸಹನೀಯ. ಅಟಲರನ್ನು ಕಾಡಿದ್ದು, ಜಾರ್ಜ್ ಫರ್ನಾಂಡಿಸ್​ರನ್ನು ಕಾಡುತ್ತಿರುವುದು ಇದೇ ಮೌನ.

ಆರೋಗ್ಯವೇ ಭಾಗ್ಯ ಎಂಬ ಮಾತು ಸುಮ್ಮನೆ ಬಂದಿದ್ದಲ್ಲ. ಹಣದಿಂದ ಸಿರಿವಂತನಾಗದಿದ್ದರೂ ಆರೋಗ್ಯದಿಂದ ಇದ್ದವನೇ ನಿಜಶ್ರೀಮಂತ ಎಂಬ ಗ್ರಹಿಕೆಯೂ ಇದೆ. ಎಲ್ಲವೂ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನ? ಅನಾರೋಗ್ಯವೆಂಬುದು ಯಾರೂ ಬಯಸದಂಥದು. ಆದರೆ ಅದು ಎಲ್ಲರನ್ನೂ ಹುಡುಕಿಕೊಂಡು ಬರುತ್ತದೆ. ಅದಿಲ್ಲವಾದಲ್ಲಿ ವಾಜಪೇಯಿಯಂಥ ವಾಜಪೇಯಿಯನ್ನೂ ಅದು ಕಾಡಬೇಕಿತ್ತಾ? ಅದೂ ಎಷ್ಟು? ಮಾತನ್ನೇ ಕಸಿಯುವಷ್ಟು! ವಾಜಪೇಯಿ ವಾಕ್ಚಾತುರ್ಯದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾದ್ದು ಏನೂ ಇಲ್ಲ. ಅದು ಹೇಳುವುದಕ್ಕಿಂತ ಕೇಳಬೇಕಾದದ್ದು. ಆದರೆ ಪಾರ್ಶ್ವವಾಯು ಎಂಬ ಮಾರಿ ಇದೆಯಲ್ಲ, 2009ರಲ್ಲಿ ಯಾವಾಗ ಅದು ಅಟಲ್​ರನ್ನು ಅಮರಿಕೊಂಡಿತೋ ಅಂದಿನಿಂದ ಆ ಮೋಡಿಸ್ವರ ಕ್ಷೀಣವಾಗುತ್ತ ಹೋಯಿತು. ವೇದಿಕೆಯಲ್ಲಿ ಮಾತಿಗೆ ನಿಂತರೆ ಹಾವಭಾವ ಮತ್ತು ವಾಗ್ವಿಲಾಸದ ಮೂಲಕ ಜನಮನ ಸೆಳೆಯುತ್ತಿದ್ದ ವಾಜಪೇಯಿ ಎಂಬ ‘ಮಾತಿನ ಮಾಂತ್ರಿಕ’ ಸಂಜ್ಞೆಗೆ ಸೀಮಿತವಾಗಬೇಕಾಯಿತು. ಆ ಬಳಿಕ ಮರೆವಿನ ಸಮಸ್ಯೆಯೂ ಅವರನ್ನು ಕಾಡಿತು. ಈಗ ವಾಜಪೇಯಿ ನಮ್ಮ ಜತೆಗಿಲ್ಲ ಎಂಬುದೊಂದೇ ಸತ್ಯ. ಆದರೂ ಅವರ ಮಾತು ಗಳು ವಿಡಿಯೊ ರೂಪದಲ್ಲಿ ಅನುರಣಿಸುತ್ತಿರುತ್ತವೆಯೆಂಬುದಷ್ಟೆ ಅಲ್ಪ ಸಮಾಧಾನ.

ಇಲ್ಲಿ ಮತ್ತೊಬ್ಬ ನಾಯಕನ ಬಗ್ಗೆಯೂ ಉಲ್ಲೇಖಿಸುವುದು ಸೂಕ್ತವಾಗುತ್ತದೆ. ವಾಜಪೇಯಿ ಪ್ರಧಾನಿಯಾಗಿದ್ದಾಗ ಜಾರ್ಜ್ ಫರ್ನಾಂಡಿಸ್ ಎನ್​ಡಿಎ ಸಂಚಾಲಕರಾಗಿದ್ದರು. ಆಗ ಹಲವು ಪಕ್ಷಗಳ ಆ ಮೈತ್ರಿಕೂಟದ ಮೂಲಕ ಸರ್ಕಾರ ರಚನೆಯಾಗಿತ್ತು. ವಾಜಪೇಯಿ ತಮ್ಮ ಸಮತೋಲಿನ ನಡೆನುಡಿಯಿಂದ, ಎಲ್ಲರನ್ನೂ ಜತೆಗೆ ಕರೆದೊಯ್ಯುವ ಗುಣದಿಂದಾಗಿ ಈ ಕಠಿಣ ಸವಾಲನ್ನು ಯಶಸ್ವಿಯಾಗಿಯೇ ನಿಭಾಯಿಸುತ್ತಿದ್ದರು. ಆದರೂ ಮಿತ್ರಕೂಟದಲ್ಲಿ ಆಗೀಗ ಮುನಿಸು ಬರುವುದು ಸಹಜವೇ ಆಗಿತ್ತು. ಅಂಥ ಸಂದರ್ಭಗಳಲ್ಲಿ ಸಂಧಾನಕಾರನ ಪಾತ್ರವಹಿಸಿ ಪರಿಸ್ಥಿತಿ ತಿಳಿಗೊಳಿಸುತ್ತಿದ್ದವರು ಇದೇ ಜಾರ್ಜ್ ಫರ್ನಾಂಡಿಸ್. ಕಟ್ಟಾ ಬಲಪಂಥೀಯ ವಿಚಾರಧಾರೆಯ ವಾಜಪೇಯಿಗೂ, ಸಮಾಜವಾದದ ಕಟ್ಟಾ ಅನುಯಾಯಿಯಾದ ಜಾರ್ಜ್​ಗೂ ದೋಸ್ತಿ ಬೆಳೆದುದು ಹೇಗೆ ಎಂಬುದು ಕುತೂಹಲದ ಸಂಗತಿ. ಅದಕ್ಕೆ ಮುಖ್ಯ ಕಾರಣ ವಾಜಪೇಯಿಯವರ ವಿಶಾಲ ಮನೋಭಾವ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ವಿಧಿಯಾಟ ಹೇಗಿರುತ್ತದೆ ನೋಡಿ. ವಾಜಪೇಯಿ ಈಗ ವಿಧಿವಶರಾಗಿದ್ದಾರೆ. ಅತ್ತ, ಜಾರ್ಜ್ ಫರ್ನಾಂಡಿಸ್ ಕೂಡ ಅಲ್ಝಿಮೇರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೊರಪ್ರಪಂಚದಲ್ಲಿ ಏನಾಗುತ್ತಿದೆಯೆಂಬುದರ ಅರಿವು ಅವರಿಗಿಲ್ಲ.

ಈ ಜಾರ್ಜ್ ಕಡಿಮೆ ಆಸಾಮಿಯೇನಲ್ಲ. ಒಂದು ಕಾಲದಲ್ಲಿ ಇಂದಿರಾ ಗಾಂಧಿಯಂಥ ಇಂದಿರಾ ಗಾಂಧಿಗೇ ತಲೆನೋವು ತಂದಿಟ್ಟವರು. ತುರ್ತಪರಿಸ್ಥಿತಿ ಸಂದರ್ಭದ ಬರೋಡಾ ಡೈನಮೈಟ್ ಪ್ರಕರಣದಲ್ಲಿ ಅವರನ್ನು ಆರೋಪಿಯಾಗಿಸಿ ಜೈಲಿನಲ್ಲಿಡಲಾಗಿತ್ತು. ಹಾಗಿದ್ದರೂ 1977ರ ಚುನಾವಣೆಯಲ್ಲಿ ಬಿಹಾರದ ಮುಜಫರ್​ಪುರ ಕ್ಷೇತ್ರದಿಂದ 3 ಲಕ್ಷಕ್ಕೂ ಅಧಿಕ ಮತಗಳ ಅಂತರದ ದಾಖಲೆಯ ಗೆಲುವು ಸಾಧಿಸಿದ್ದ ಗಟ್ಟಿಗ ಈ ಜಾರ್ಜ್.

ವಾಜಪೇಯಿ-ಜಾರ್ಜ್ ಜೋಡಿ ಸಂಸತ್ತಿನಲ್ಲಿ ಸತ್ವಪರೀಕ್ಷೆ ಎದುರಿಸಬೇಕಾದ ಸನ್ನಿವೇಶವೂ ಎದುರಾಗಿತ್ತು. ‘ರಕ್ಷಣಾ ಮಂತ್ರಿ ಚೋರ್ ಹೈ’ ‘ಕಾಫಿನ್ ಚೋರ್ ಮುರ್ದಾಬಾದ್’ ಮುಂತಾದ ಟೀಕಾಸ್ತ್ರಗಳನ್ನು ಕೇಳಬೇಕಾಗಿ ಬಂದಿತ್ತು.

1999ರಲ್ಲಿ ನಡೆದ ಕಾರ್ಗಿಲ್ ಸಮರದ ಸಂದರ್ಭದಲ್ಲಿ ಭಾರತದ 500ಕ್ಕಿಂತಲೂ ಅಧಿಕ ಯೋಧರು ಹುತಾತ್ಮರಾದರು. ಈ ಯೋಧರ ಪಾರ್ಥಿವ ಶರೀರಗಳನ್ನು ಅವರ ಸಂಬಂಧಿಗಳಿಗೆ ಗೌರವಪೂರ್ವಕವಾಗಿ ಒಪ್ಪಿಸಲು ಸರ್ಕಾರದ ವತಿಯಿಂದ ಶವಪೆಟ್ಟಿಗೆಗಳನ್ನು ಖರೀದಿಸಲಾಯಿತು. ಏಳು ಕೋಟಿ ರೂ. ವೆಚ್ಚದಲ್ಲಿ 500 ಅಲ್ಯುಮಿನಿಯಂ ಶವಪೆಟ್ಟಿಗೆಗಳು ಹಾಗೂ 3,000 ಶವಹೊದಿಕೆಗಳನ್ನು ಖರೀದಿಸಲು ಅಮೆರಿಕದ ಬ್ಯೂಟ್ರನ್ ಅಂಡ್ ಬೈಝಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಆದರೆ, ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರಕ್ಕಿಂತ ಹೆಚ್ಚಿರುವುದು ನಂತರ ಬೆಳಕಿಗೆ ಬಂತು. ಇನ್ನೊಂದೆಡೆ, ಸಿಎಜಿ ವರದಿ ಕೂಡ ಒಟ್ಟಾರೆ ಈ ಖರೀದಿಯಿಂದ ಸರ್ಕಾರಕ್ಕೆ 89.76 ಲಕ್ಷ ರೂ. ನಷ್ಟವುಂಟಾಗಿದೆ ಎಂದು ಹೇಳಿತು. ಆಗ ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಮರವನ್ನೇ ಸಾರಿತು. ರಕ್ಷಣಾ ಸಚಿವ ಜಾರ್ಜ್ ರಾಜೀನಾಮೆಗೆ ಪಟ್ಟುಹಿಡಿಯಿತು. ‘ನಾನು ನಿರಪರಾಧಿ’ ಎಂಬ ಜಾರ್ಜ್ ವಾದವನ್ನು ಯಾರೂ ಕೇಳಲೂ ತಯಾರಿರಲಿಲ್ಲ.

2004ರ ಚುನಾವಣೆಯಲ್ಲಿ ಎನ್​ಡಿಎ ಸೋಲನನುಭವಿಸಿ ಕಾಂಗ್ರೆಸ್ ನೇತೃತ್ವದ ಯುಪಿಎ-1 ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಕಾರ್ಗಿಲ್ ಶವಪೆಟ್ಟಿಗೆ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿತು. 2009ರ ಆಗಸ್ಟ್​ನಲ್ಲಿ ಸೇನೆಯ ಮೂವರು ಅಧಿಕಾರಿಗಳ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿತು. ಆದರೆ ಜಾರ್ಜ್ ಫರ್ನಾಂಡಿಸ್​ಗೆ

ಕ್ಲೀನ್​ಚಿಟ್ ನೀಡಿತು. ಸಿಬಿಐ ವಿಶೇಷ ನ್ಯಾಯಾಲಯ 2013ರಲ್ಲಿ ಮೂವರೂ ಅಧಿಕಾರಿಗಳನ್ನು ಖುಲಾಸೆಗೊಳಿಸಿತು. 2004ರಲ್ಲಿ ಈ ಹಗರಣ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಸಲಾಗಿತ್ತು. ಶವಪೆಟ್ಟಿಗೆ ಪ್ರಕರಣದಲ್ಲಿ ಜಾರ್ಜ್ ಫರ್ನಾಂಡಿಸ್ ನಿದೋಷಿ ಎಂದು ಸುಪ್ರೀಂ ಕೋರ್ಟ್ 2015ರ ಅಕ್ಟೋಬರ್ 13ರಂದು ತೀರ್ಪಿತ್ತಿತು.

ಜಾರ್ಜ್ ಫರ್ನಾಂಡಿಸ್ ಮೇಲೆ ಆರೋಪ ಬಂದಿದ್ದು ಅದೇ ಮೊದಲೇನಲ್ಲ. 2001ರಲ್ಲಿ ಕುಟುಕು ಕಾರ್ಯಾಚರಣೆ ನಡೆಸಿದ ತೆಹಲ್ಕಾ, ರಕ್ಷಣಾ ವ್ಯವಹಾರ ಸಂಬಂಧ ಇಲಾಖೆಯ ಅಧಿಕಾರಿಗಳು ಹಾಗೂ ಬಿಜೆಪಿ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಮುಂತಾದವರಿಗೆ ಲಂಚ ನೀಡಿದ್ದಾಗಿ ಹೇಳಿಕೊಂಡಿತು. ಜಾರ್ಜ್ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಒತ್ತಾಯ ಶುರುವಾಯಿತು. ಈ ಕುರಿತ ವಿಚಾರಣೆಗೆ ರಚಿಸಲಾದ ನ್ಯಾ.ಫೂಕ್ತನ್ ಸಮಿತಿ ಜಾರ್ಜ್​ರನ್ನು ಆರೋಪಮುಕ್ತಗೊಳಿಸಿತು. ಆದರೆ ಯುಪಿಎ ಸರ್ಕಾರ ಈ ವರದಿಯನ್ನು ಒಪ್ಪಿಕೊಳ್ಳದೆ, ನ್ಯಾ.ಕೆ.ವೆಂಕಟಸ್ವಾಮಿ ಸಮಿತಿಯನ್ನು ರಚಿಸಿತು. ಆ ಸಮಿತಿಯೂ ಜಾರ್ಜ್​ಗೆ ಕ್ಲೀನ್​ಚಿಟ್ ನೀಡಿತು. 2000ರಲ್ಲಿ ಇಸ್ರೇಲ್​ನೊಂದಿಗಿನ ಬರಾಕ್ ಕ್ಷಿಪಣಿ ಖರೀದಿ ವ್ಯವಹಾರದಲ್ಲಿ ಅಕ್ರಮವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಾರ್ಜ್ ಫರ್ನಾಂಡಿಸ್, ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ಸುಶೀಲ್​ಕುಮಾರ್ ಮುಂತಾದವರ ಮೇಲೆ 2006ರಲ್ಲಿ ಸಿಬಿಐ ಎಫ್​ಐರ್ ದಾಖಲಿಸಿತು. ಇಲ್ಲಿಯೂ ಜಾರ್ಜ್ ಆರೋಪಮುಕ್ತರಾದರು. ಇಂಥ ಜಾರ್ಜ್ ಈಗ ಸುತ್ತಮುತ್ತಲ ಪರಿವೆಯ ಅರಿವಿಲ್ಲದೆ ಹಾಸಿಗೆಯ ಮೇಲಿದ್ದಾರೆ.

ಮಾತು ಸೋತಾಗ ಮೌನ ರಾಜ್ಯವಾಳುತ್ತದೆ. ಕೆಲವೊಮ್ಮೆ ಮೌನ ಬೇಕು. ಆದರೆ ಈ ರೀತಿ ಮಾತನ್ನು ಕಿತ್ತುಕೊಂಡು ಮೌನದ ಪ್ರವೇಶವಾಗುವುದಿದೆಯಲ್ಲ, ಅದು ಅಸಹನೀಯ. 2005ರ ಕಾಲಘಟ್ಟದ ನಂತರದಲ್ಲಿಯೂ ವಾಜಪೇಯಿ ಎಂದಿನಂತೆ ತಮ್ಮ ವಾಗ್ಝರಿ ಹರಿಸುವಂತಿದ್ದಿದ್ದರೆ, ಪ್ರಮುಖ ಘಟನೆಗಳ ಕುರಿತು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸುವಂತಿದ್ದಿದ್ದರೆ…? ಇಂಥದೊಂದು ಅಭಿಲಾಷೆಯನ್ನು ಅವರ ಸೋದರ ಸಂಬಂಧಿ ಕೂಡ ಮೊನ್ನೆಯಷ್ಟೆ ವ್ಯಕ್ತಪಡಿಸಿದ್ದರು. ‘ವಾಜಪೇಯಿ ಗುಣಮುಖರಾಗಿ ಬಂದು ಮತ್ತೆ ಭಾಷಣ ಮಾಡುವಂತಾಗಬೇಕು. ಅಕ್ಷರಗಳೊಂದಿಗೆ ಅವರು ಆಡುವ ಆಟ, ಆ ಭಾಷಣದ ವೈಭವವನ್ನು ಮತ್ತೆ ನೋಡಬೇಕು’ ಎಂದು ವಾಜಪೇಯಿ ಸೋದರ ಸಂಬಂಧಿ ಕೀರ್ತಿ ಮಿಶ್ರಾ ಗುರುವಾರ ಬೆಳಗ್ಗೆಯಷ್ಟೆ ಹೇಳಿದ್ದರು. ಜಾರ್ಜ್ ಫರ್ನಾಂಡಿಸ್ ಈಗಲೂ ಚೈತನ್ಯದಿಂದಿದ್ದು, ಸಮಕಾಲೀನ ಆಗುಹೋಗುಗಳಿಗೆ ಸ್ಪಂದಿಸುವಂತಿದ್ದರೆ…. ಇದೆಲ್ಲ ‘ರೆ’ ಪ್ರಪಂಚದ ಮಾತುಗಳು. ವಾಜಪೇಯಿಯವರೇ ಹಿಂದೊಮ್ಮೆ ಹೇಳಿದಂತೆ ಎಲ್ಲವೂ ವಿಧಿಯಾಟ. ನಾವೇನಿದ್ದರೂ ಪಾತ್ರಧಾರಿಗಳಷ್ಟೆ.

***

‘ದೇವರೇ ಯಾವ ಕಾಯಿಲೆಯೂ ನನ್ನ ಹತ್ತಿರ ಸುಳಿಯದಿರಲಿ, ಆಸ್ಪತ್ರೆಗೆ ಹೋಗುವ ಪ್ರಮೇಯ ಬರದಂತೆ ಅನುಗ್ರಹಿಸು…’ ಎಂದೆಲ್ಲ ಶ್ರದ್ಧಾಳುಗಳು ಕೋರುವುದು ಸಾಮಾನ್ಯ. ಆದರೆ ಇಂಥ ಭಾಗ್ಯ ಪಡೆಯುವವರು ಎಲ್ಲೋ ಬೆರಳೆಣಿಕೆಯಷ್ಟು ಜನ. ಉಳಿದವರಿಗೆಲ್ಲ ಜೀವನದಲ್ಲಿ ಇಂಥ ‘ಆರೋಗ್ಯಯಾತ್ರೆ’ ಅನಿವಾರ್ಯ. ಆಸ್ಪತ್ರೆ ಎಂಬುದು ಒಂದು ಬೇರೆಯದೇ ಆದ ಲೋಕ. ಅಲ್ಲಿಗೆ ನಗುತ್ತ ಬರುವವರು ಕಡಿಮೆ. ಹೋಗುವಾಗ ನಗುತ್ತ ತೆರಳಿದರೆ ಅದು ಅವರ ಅದೃಷ್ಟ. ಎಲ್ಲೆಲ್ಲೂ ವಿಷಾದಭಾವ ಹೊತ್ತ ಮುಖಗಳು. ಇಲ್ಲಿ ಮಾತು ಮೌನ ಧರಿಸುತ್ತದೆ. ಮೌನವು ದುಃಖದ ಪರದೆ ಹೊದೆಯುತ್ತದೆ. ಡಾಕ್ಟರು ಏನು ಹೇಳುತ್ತಾರೋ, ರಿಪೋರ್ಟು ಏನು ಬರುತ್ತದೋ ಎಂಬ ಕಳವಳದ ನಿರೀಕ್ಷೆಗಳು…ಯಾರ ಹಣೆಯಲ್ಲಿ ಏನು ಬರೆದಿದೆಯೋ? ರೋಗಿ ಹೇಳುತ್ತಾನೆ-‘ಡಾಕ್ಟರೇ ನೀವೇ ನನಗೆ ದೇವರು’. ವೈದ್ಯ ಪ್ರತಿಕ್ರಿಯಿಸುತ್ತಾನೆ-‘ ನನ್ನ ಕೈಲಾದುದನ್ನು ಮಾಡುತ್ತೇನೆ. ಉಳಿದುದು ದೇವರಿಗೆ ಬಿಟ್ಟಿದ್ದು’. ಇಲ್ಲಿ ಕಾಪಾಡುವ ಕೈ ಯಾವುದು? ವೈದ್ಯನದೋ? ದೇವರದೋ? ಅವರವರ ನಂಬಿಕೆಗೆ ಬಿಟ್ಟಿದ್ದು. ಆದರೆ, ಚಿಕಿತ್ಸೆ ಕಾಲದಲ್ಲಿ ಇತರ ಅಂಶಗಳೂ ಪ್ರಭಾವ ಬೀರುತ್ತವೆ ಎಂಬ ಕಾರಣಕ್ಕೇ ಮ್ಯೂಸಿಕ್ ಥೆರಪಿ, ಪ್ರೇಯರ್ ಥೆರಪಿ ಮುಂತಾದ ಪರಿಕಲ್ಪನೆಗಳು ಅಸ್ತಿತ್ವಕ್ಕೆ ಬಂದಿವೆ. ಈ ವಿಧಾನಗಳ ಫಲಾಫಲ ಬೇರೆಯದೇ ಚರ್ಚಾವಿಷಯ.

ಈಗಿನ ಅನೇಕ ವೈದ್ಯರು ಕಾಯಿಲೆಗಳ ಕುರಿತು ಸರಿಯಾಗಿ ಮಾಹಿತಿ ಕೊಡುವುದಿಲ್ಲ, ಅರೆಬರೆ ಹೇಳಿ ಸುಮ್ಮನಾಗುತ್ತಾರೆ, ಮತ್ತೆ ಮತ್ತೆ ಕೇಳಿದರೆ ಕೋಪಿಸಿಕೊಳ್ಳುತ್ತಾರೆ ಎಂಬುದು ಅನೇಕರ ದೂರು. ಒಂದು ಹಂತ ಮೀರಿ ಹೇಳಿದರೆ ರೋಗಿಗಳು ಇಂಟರ್ನೆಟ್ ಅಲ್ಲಿಇಲ್ಲಿ ಹುಡುಕಾಡಿ ಅರೆಬರೆ ಮಾಹಿತಿ ಪಡೆದು ವೃಥಾ ಕಂಗಾಲಾಗುವುದರಿಂದ ಎಷ್ಟು ಬೇಕೋ ಅಷ್ಟು ಹೇಳುತ್ತೇವೆ; ಅಷ್ಕಕ್ಕೂ ಚಿಕಿತ್ಸೆ ನೀಡುವ ಜವಾಬ್ದಾರಿ ನಮ್ಮದಲ್ಲವೆ ಎಂಬುದು ವೈದ್ಯರ ಸಮರ್ಥನೆ. ಇದಕ್ಕೆ ಅಪವಾದಗಳೂ ಇವೆಯೆನ್ನಿ. ಆತ್ಮೀಯರೊಬ್ಬರ ಚಿಕಿತ್ಸೆಗಾಗಿ ಈಚೆಗೆ ಮಂಗಳೂರಿನ ದೇರಳೆಕಟ್ಟೆಯ ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೆಬಲ್ ಆಸ್ಪತ್ರೆಗೆ ಹೋಗಬೇಕಾಗಿ ಬಂದಿತ್ತು. ಅಲ್ಲಿನ ಇಎನ್​ಟಿ ತಜ್ಞ ಡಾ.ವಾದೀಶ್ ಭಟ್ ಅವರು ರೋಗಿಗಳೊಂದಿಗೆ ವ್ಯವಹರಿಸುವ ರೀತಿ ಕಂಡು ಅಚ್ಚರಿಯಾಯಿತು. ರೋಗಿಗಳು ಮತ್ತು ಸಂಬಂಧಿಕರ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುವ ಪರಿ, ಆಸ್ಪತ್ರೆ ಕಾರಿಡಾರಿನಲ್ಲೇ ರೋಗಿಗಳೊಂದಿಗೆ ಮಾತು, ಅವರ ಸಂಶಯಗಳಿಗೆ ಸಮಾಧಾನ ಹೇಳುವ ರೀತಿ … ಇವೆಲ್ಲ ಗಮನಸೆಳೆಯುವಂತಿತ್ತು. ಇನ್ನು, ಆಸ್ಪತ್ರೆ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಮಂತ ಶೆಟ್ಟಿ ಅವರ ಬಳಿ ರೋಗಿಯೊಬ್ಬರು, ತನ್ನ ಬಳಿ ಹೆಚ್ಚು ಹಣವಿಲ್ಲದ್ದರಿಂದ ಯಾವುದೋ ತಪಾಸಣೆಗೆ ಬಿಲ್​ಗಿಂತ ಕಡಿಮೆ ಹಣ ವಿಧಿಸುವಂತೆ ಮನವಿ ಮಾಡುತ್ತಿದ್ದರು. ‘ಈಗಾಗಲೇ ಸಾಕಷ್ಟು ರಿಯಾಯಿತಿ ನೀಡಿದ್ದೇವೆ. ಆದರೂ ಮತ್ತಷ್ಟು ರಿಯಾಯಿತಿ ಸಾಧ್ಯವಾ ಎಂದು ಪರಿಶೀಲಿಸುತ್ತೇವೆ’ ಎಂಬುದಾಗಿ ಅವರು ಆ ವ್ಯಕ್ತಿಗೆ ಸಮಾಧಾನಪಡಿಸಿದರು. ‘ಇಂಥ ಎಷ್ಟೋ ಜನರು ಬರುತ್ತಾರೆ. ಆದಷ್ಟು ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡಬೇಕೆಂಬುದು ಆಸ್ಪತ್ರೆಯ ಧ್ಯೇಯ’ ಎಂದು ಹೇಮಂತ ಶೆಟ್ಟಿ ನನ್ನೊಂದಿಗೆ ಮಾತನಾಡುತ್ತ ಹೇಳಿದರು. ಅಂದಹಾಗೆ, ಉತ್ತರ ಕನ್ನಡದ ಶಿರಸಿ, ಯಲ್ಲಾಪುರ ಭಾಗದಿಂದ ಈ ಆಸ್ಪತ್ರೆಗೆ ಬರುವರಿಗೆಂದು ನಿತ್ಯ ಮೂರು ಪ್ರತ್ಯೇಕ ಬಸ್​ಗಳನ್ನು ಬಿಡಲಾಗುತ್ತಿದೆ!

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೊನ್ನಿನ ಸ್ವಾತಂತ್ರೊ್ಯೕತ್ಸವ ಭಾಷಣದಲ್ಲಿ ಆಯುಷ್ಮಾನ್ ಭಾರತ ಯೋಜನೆಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ದೇಶದ 10 ಕೋಟಿ ಕುಟುಂಬಗಳ 50 ಕೋಟಿ ಜನರಿಗೆ ಕಡಿಮೆ ದರದಲ್ಲಿ ಚಿಕಿತ್ಸಾ ಸೌಲಭ್ಯ ಒದಗಿಸುವುದು ಈ ಯೋಜನೆಯ ಮುಖ್ಯಾಂಶ. ಆರೋಗ್ಯ ವಿಮೆ ಪರಿಕಲ್ಪನೆ ಇನ್ನೂ ಅಷ್ಟಾಗಿ ಜನಪ್ರಿಯವಾಗಿರದ ಭಾರತದಂಥ ದೇಶದಲ್ಲಿ ಇಂಥ ಸಾರ್ವತ್ರಿಕ ಆರೋಗ್ಯ ಯೋಜನೆಗಳು ಜನರಿಗೆ ಪ್ರಯೋಜನಕಾರಿಯಾಗಬಲ್ಲವು. ಒಂದೇ ಪ್ರಶ್ನೆಯೆಂದರೆ- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಯೋಜನೆಯನ್ನು ಎಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುತ್ತವೆಯೆಂಬುದು. ಸರ್ಕಾರ ಹಾಗೂ ಖಾಸಗಿ ವಲಯಗಳು ಬದ್ಧತೆಯಿಂದ ಕೈಜೋಡಿಸಿದಲ್ಲಿ ಇದು ಅಸಾಧ್ಯವಾದ ಕಾರ್ಯವೇನೂ ಅಲ್ಲ. ಏಕೆಂದರೆ, ವೈದ್ಯಕೀಯ ಪರಿಣತಿಯಲ್ಲಿ ಭಾರತ ಬಹಳ ಮುಂದಿದೆ. ಕೈಗೆಟುಕುವ ದರದಲ್ಲಿ ಜನರಿಗೆ ವೈದ್ಯಕೀಯ ಸವಲತ್ತು ಸಿಗುವಂತೆ ಮಾಡುವುದೇ ಸವಾಲು. ‘ಸರ್ವೆ ಜನಾಃ ಸುಖಿನೋ ಭವಂತು’ ಎಂಬ ನಮ್ಮ ಸನಾತನವಾಣಿ ಸಾಕಾರವಾಗಲೆಂಬುದೇ ಆಶಯ…

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top