Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಮರಾ ಮರಾ ಮರಾ ರಾಮ ರಾಮ ರಾಮ!

Saturday, 31.03.2018, 3:05 AM       No Comments

ನಮ್ಮ ಮೆಟ್ರೋ ಈಗ ಬೆಂಗಳೂರಿನಲ್ಲಿ ಮನೆಮಾತು. ಇಡೀ ಬೆಂಗಳೂರನ್ನು ಸಂರ್ಪಸುವಷ್ಟು ಮೆಟ್ರೋ ರೈಲಿನ ಸಂಪರ್ಕ ಆರಂಭವಾಗಿಲ್ಲವಾದರೂ, ಈ ರೈಲಿನಲ್ಲಿ ಸಂಚರಿಸಿದವರು ಭಲೇ ಭಲೇ ಎನ್ನುತ್ತಿದ್ದಾರೆ. ಕರಾರುವಾಕ್ ಸಮಯಪಾಲನೆ, ಸ್ವಚ್ಛ, ಸುಂದರ ನಿಲ್ದಾಣಗಳು, ಕ್ಯೂಟ್ ರೈಲು ಹೀಗೆ ಮೆಟ್ರೋ ಎಂಬ ಮಾಯಾಂಗನೆ ಎಲ್ಲರನ್ನೂ ಸೆಳೆಯುತ್ತಿದೆ. ಬೆಂಗಳೂರಿನ ಸಂಚಾರ ದಟ್ಟಣೆಗೆ, ವಾಹನಗಳ ಭರಾಟೆಗೆ ಹೋಲಿಸಿದರೆ ಮೆಟ್ರೋ ಇನ್ನೂ ನಾಲ್ಕಾರು ವರ್ಷ ಮುಂಚೆಯೇ ಬರಬೇಕಿತ್ತು ಎಂಬ ಭಾವನೆ ಇರುವುದು ಹೌದಾದರೂ, ಈಗಲಾದರೂ ಬಂತಲ್ಲ ಎಂಬುದು ಇದ್ದುದರಲ್ಲಿ ಸಮಾಧಾನದ ಸಂಗತಿ. ಮೆಟ್ರೋ ಸಂಪರ್ಕ ಇರುವಲ್ಲಿ ದೊಡ್ಡ ಸಂಖ್ಯೆಯ ಜನರು ಈ ವ್ಯವಸ್ಥೆಯನ್ನು ಬಳಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ, ಕಚೇರಿಗೆ ತೆರಳುವ ಮಹಿಳೆಯರಿಗೆ ಮೆಟ್ರೋ ಒಂದು ವರವಾಗಿಯೇ ಒದಗಿದೆ ಎಂದರೆ ಅತಿಶಯೋಕ್ತಿಯಲ್ಲ. ಮಹಿಳೆಯರು ಮೆಟ್ರೋ ಬಳಕೆಗೆ ತೋರುತ್ತಿರುವ ಆಸಕ್ತಿಯನ್ನು ಗಮನಿಸಿಯೇ, ರೈಲಿನ ಮೊದಲೆರಡು ಪ್ರವೇಶದ್ವಾರವನ್ನು ಮಹಿಳೆಯರಿಗಾಗಿಯೇ ಮೀಸಲಿರಿಸಲಾಗಿದೆ ಎಂದರೆ ಲೆಕ್ಕಹಾಕಿ.

ಹಾಗಂತ ಮೆಟ್ರೋ ಕಾರ್ಯರೂಪಕ್ಕೆ ಬರುವುದು ಸುಲಭವಾಗಿತ್ತಾ? ಊಹೂಂ. ಹಣಕಾಸಿನ ಕ್ರೋಡೀಕರಣ ಒಂದಾದರೆ, ಯೋಜನೆಗೆ ಅಗತ್ಯವಾದ ಭೂಮಿ ಸ್ವಾಧೀನ ಇತ್ಯಾದಿ ಬೇರೆ ಸವಾಲುಗಳು. ಇದಲ್ಲದೆ, ಉದ್ದೇಶಿತ ಮಾರ್ಗದಲ್ಲಿ ಹಲವು ಮರಗಳನ್ನು ಕಡಿಯಬೇಕಾದ ಅನಿವಾರ್ಯತೆ. ಆಗ ಎದುರಾದದ್ದು, ಅಭಿವೃದ್ಧಿ ವರ್ಸಸ್ ಪರಿಸರ ಜಿಜ್ಞಾಸೆ. ಒಂದು ಕಾಲದಲ್ಲಿ ಉದ್ಯಾನನಗರಿ, ನಿವೃತ್ತರ ಸ್ವರ್ಗ ಎಂದೆಲ್ಲ ಬಿರುದಾಂಕಿತವಾಗಿದ್ದ ಬೆಂಗಳೂರು ಕ್ರಮೇಣ ಆ ಪಟ್ಟವನ್ನು ಕಳೆದುಕೊಂಡಿದ್ದು ಗೊತ್ತಿರುವಂಥದೇ. ಹಾಗಿರುವಾಗ, ಮೆಟ್ರೋ ಹೆಸರಲ್ಲಿ ಮತ್ತಷ್ಟು ಮರಗಳನ್ನು ಕಡಿದರೆ ಬೆಂಗಳೂರು ಮತ್ತೂ ಬೋಳಾಗುವುದಿಲ್ಲವೇ ಎಂಬುದು ಚರ್ಚೆಯ ವಿಚಾರವಾಗಿತ್ತು. ಹಾಗಂತ ಮೆಟ್ರೋದಂಥ ಯೋಜನೆಯನ್ನು ಕೈಬಿಡಲಾದೀತೆ? ಆ ಸಮಯದಲ್ಲಿ ಕೆಲಮಟ್ಟಿನ ಪರಿಹಾರೋಪಾಯಗಳು ಹೊಳೆದವು. ಅದರಲ್ಲಿ ಒಂದು- ಸಾಧ್ಯವಿದ್ದ ಕಡೆ ಮರಗಳನ್ನು ಸ್ಥಳಾಂತರಿಸುವುದು. ಇದು ಹಸಿರುನಾಶದ ಸಮಸ್ಯೆಗೆ ಪೂರ್ಣ ಪರಿಹಾರವಾಗದಿದ್ದರೂ, ಕಾರ್ಯಸಾಧ್ಯ ಆಲೋಚನೆಯಾಗಿ ಕಂಡಿತು. ಆ ಪ್ರಕಾರ, ಸುಮಾರು 600 ಮರಗಳ ಸ್ಥಳಾಂತರಕ್ಕೆ ಯೋಜನೆ ತಯಾರಾಯಿತು. ಪ್ರತಿ ಮರಕ್ಕೆ ಸುಮಾರು 10, 750 ರೂ. ಖರ್ಚು ಅಂದಾಜಿಸಲಾಯಿತು. ಈ ಪೈಕಿ ಕೆಲ ಮರಗಳ ಸ್ಥಳಾಂತರ ಆಗಿದ್ದರೆ, ಇನ್ನು ಕೆಲವು ಆಗಬೇಕಿದೆ. ಇನ್ನು ಒಂದೆರಡು ಕಡೆ ಹಸಿರು ಉಳಿಸುವ ಸಲುವಾಗಿ ಮೆಟ್ರೋ ಮಾರ್ಗದ ವಿನ್ಯಾಸವನ್ನೇ ಸ್ವಲ್ಪ ಮಾರ್ಪಡಿಸಲಾಯಿತು. ಉದಾಹರಣೆಗೆ- ಜಯನಗರದ ಲಕ್ಷ್ಮಣ ರಾವ್ ಪಾರ್ಕ್​ಗೆ ಮೆಟ್ರೋ ಮಾರ್ಗದಿಂದ ಹಾನಿಯಾಗುತ್ತದೆಂಬ ಸ್ಥಳೀಯರ ಅಹವಾಲಿಗೆ ಸ್ಪಂದಿಸಿ, ವಿನ್ಯಾಸವನ್ನು ಕೊಂಚ ಬದಲಿಸಲಾಯಿತು. ಪಾರ್ಕ್ ಒಳಗೆ ರೈಲು ಮಾರ್ಗ ಹೋಗಿದ್ದರೆ, 150-200 ಮರಗಳು ಬಲಿಯಾಗುತ್ತಿದ್ದವು. ಮಾರ್ಗದ ವಿನ್ಯಾಸವನ್ನು ಪಾರ್ಕ್ ಪಕ್ಕದ ಪಾದಚಾರಿ ಮಾರ್ಗದಿಂದ ಮಾಡಿದ್ದರಿಂದ 50-60 ಮರಗಳನ್ನಷ್ಟೇ ಕಡಿಯಬೇಕಾಗಿ ಬಂತು. ಅಭಿವೃದ್ಧಿ ಅನಿವಾರ್ಯವಾಗಿರುವಾಗ, ಪರಿಸರದ ಬಗ್ಗೆಯೂ ಕೊಂಚ ಕಾಳಜಿ ತೋರಬಹುದು ಎಂಬುದಕ್ಕೆ ಈ ಮಾತು ಹೇಳಬೇಕಾಯಿತು.

ಸಿಕ್ಕಿಂ, ಭಾರತದ ಸಪ್ತ ಸೋದರಿಯರ ಪೈಕಿ ಒಂದು ರಾಜ್ಯ. ಅಲ್ಲಿ ಪಾರಂಪರಿಕವಾಗಿ ಒಂದು ವಿಶಿಷ್ಟ ಸಂಪ್ರದಾಯವಿದೆ. ಅದೆಂದರೆ-ಮರಗಳನ್ನು ದತ್ತು ಪಡೆಯುವುದು. ‘ಗುರುತು ಪರಿಚಯ ಇಲ್ಲದವರ ಜೊತೆ ನಾವು ಸಂಬಂಧ ಬೆಸೆಯುವುದಿಲ್ಲವೆ? ಇದೂ ಹಾಗೆಯೇ. ಮರಗಳೊಂದಿಗೆ ಸಂಬಂಧ ಬೆಳೆಸುವುದು’- ಇದು ಈ ಪರಿಕಲ್ಪನೆಯ ಸಾರಾಂಶ. ಈ ರೂಢಿಯಲ್ಲಿ ಮೂರು ವಿಧಗಳಿವೆ: 1-ಮಿತ್- ವ್ಯಕ್ತಿಯೊಬ್ಬ ಮರವನ್ನು ತನ್ನ ಗೆಳೆಯ ಎಂದು ಘೋಷಿಸುವುದು; 2-ಮಿತಿನಿ-ಮಹಿಳೆಯೊಬ್ಬಳು ಮರವನ್ನು ತನ್ನ ಸೋದರ ಎಂದು ಭಾವಿಸುವುದು; ಮತ್ತು, 3-ಸ್ಮೃತಿ-ಅಗಲಿದ ಸಂಬಂಧಿಯ ನೆನಪಿನಲ್ಲಿ ಮರವನ್ನು ದತ್ತು ಪಡೆಯುವುದು.

ಆ ರಾಜ್ಯದಲ್ಲಿ ಈ ರೂಢಿ ಶತಶತಮಾನಗಳಿಂದ ನಡೆದುಕೊಂಡು ಬಂದಿದೆಯಾದರೂ, ಅಲ್ಲಿನ ಸರ್ಕಾರ ಇದಕ್ಕೆ ಈಗ ಕಾನೂನುಬದ್ಧ ಮಾನ್ಯತೆಯನ್ನೂ ನೀಡಿದೆ. ಕಳೆದ ವರ್ಷ ಮೇ ತಿಂಗಳಲ್ಲಿ, ಸಿಕ್ಕಿಂ ಅರಣ್ಯ ಮರಗಳು (ಬಾಂಧವ್ಯ ಮತ್ತು ಪೂಜ್ಯಭಾವನೆ) ನಿಯಮ, 2017ನ್ನು ಸರ್ಕಾರ ಜಾರಿಗೆ ತಂದಿದೆ. ಈ ಮೂಲಕ ಜನರು ಮರಗಳೊಂದಿಗೆ ಹೊಂದಿರುವ ಭಾವನಾತ್ಮಕ ಸಂಬಂಧಕ್ಕೆ ಕಾನೂನಿನ ಮಾನ್ಯತೆ ಸಿಕ್ಕಂತಾಗಿದೆ. ಮರದತ್ತು ಕುರಿತು ಅಲ್ಲಿನ ಅರಣ್ಯ ಇಲಾಖೆ ಸ್ಪಷ್ಟ ನಿಯಮಗಳನ್ನೂ ರೂಪಿಸಿದೆ. ವ್ಯಕ್ತಿಯೊಬ್ಬ ತನ್ನ ಜಮೀನಿನ ಮರವನ್ನು ಮಾತ್ರ ದತ್ತು ಪಡೆಯಬೇಕೆಂದಿಲ್ಲ, ಇತರ ಜಮೀನಿನದೂ ಆದೀತು. ಆದರೆ ಆ ಜಮೀನಿನ ಮಾಲೀಕನಿಗೆ ಆ ಮರದ ಕಿಮ್ಮತ್ತನ್ನು ನೀಡಬೇಕಾಗುತ್ತದೆ. ಅದೇ ರೀತಿ, ಸಾರ್ವಜನಿಕ ಸ್ಥಳಗಳಲ್ಲಿನ ಮರಗಳನ್ನೂ ದತ್ತು ಪಡೆಯಬಹುದು. ಇದಕ್ಕೆ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಾಗುತ್ತದೆ. ಅರಣ್ಯ ಇಲಾಖೆ ಇದಕ್ಕಾಗಿ ನಿರ್ದಿಷ್ಟ ನಮೂನೆಗಳನ್ನು ಹೊರಡಿಸಿದ್ದು, ಆ ಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಒಪ್ಪಿಗೆ ನಂತರದಲ್ಲಿ ಆ ಮರವನ್ನು ತನ್ನ ಜೀವಿತಾವಧಿವರೆಗೆ ರಕ್ಷಿಸುವ ಹೊಣೆ ದತ್ತು ಪಡೆದ ವ್ಯಕ್ತಿಯದಾಗುತ್ತದೆ.

ಪರಿಸರವೂ ನಮ್ಮ ಸಂಬಂಧಿ ಎಂದು ಭಾವಿಸುವ ಪರಿಕಲ್ಪನೆಯೇ ಎಷ್ಟು ಸುಂದರ ಅಲ್ಲವೆ!

ಹೀಗೆ, ಮಿತಿ, ಮಿತಿನಿ ಅಥವಾ ಸ್ಮೃತಿ ವಿಧಾನದಲ್ಲಿ ದತ್ತು ಪಡೆಯಲಾದ ಮರವನ್ನು ಕಡಿಯುವುದಾಗಲಿ, ಅದಕ್ಕೆ ಹಾನಿ ಮಾಡುವುದಾಗಲಿ ನಿಷಿದ್ಧ. ಒಂದೊಮ್ಮೆ ಮರ ಕಡಿಯುವುದಿದ್ದರೆ ಸರ್ಕಾರದ ಒಪ್ಪಿಗೆ ಪಡೆದುಕೊಳ್ಳಬೇಕಾಗುತ್ತದೆ. ಈ ನಿಯಮ ಉಲ್ಲಂಘಿಸಿದಲ್ಲಿ, ಸಾರ್ವಜನಿಕ ಪ್ರದೇಶದ ಮರವೊಂದಕ್ಕೆ ಅದರ ಮೌಲ್ಯದ 4 ಪಟ್ಟು ಹಾಗೂ ಖಾಸಗಿ ಪ್ರದೇಶದ ಮರಕ್ಕೆ ಅದರ ಕಿಮ್ಮತ್ತಿನ ಎರಡು ಪಟ್ಟು ದಂಡವನ್ನು ವಿಧಿಸಲಾಗುತ್ತದೆ. ಇಂಥದೊಂದು ನಿಯಮದಿಂದಾಗಿ ಕಾಡು ಸಂರಕ್ಷಣೆಯ ಕೆಲಸ ಸುಲಭವಾಗುತ್ತದೆ ಎಂಬುದು ಅರಣ್ಯ ಇಲಾಖೆ ಲೆಕ್ಕಾಚಾರ. ಖುದ್ದು ಅಲ್ಲಿನ ಮುಖ್ಯಮಂತ್ರಿ ಪವನ್ ಕುಮಾರ್ ಚಾಂಗ್ಲಿಂಗ್ ಅವರೇ ಮಿತ್ ಪರಿಕಲ್ಪನೆಯ ಪ್ರಕಾರ ಮರವನ್ನು ದತ್ತು ಪಡೆದಿದ್ದಾರೆ. ಆ ಮರದೊಂದಿಗೆ ಸ್ನೇಹಮಯ ಸಂಬಂಧ ಹೊಂದಿರುವುದಾಗಿ ಅವರು ಖುಷಿಯಿಂದ ಹೇಳಿಕೊಂಡಿದ್ದಾರೆ.

ಈ ಕಾನೂನಿನ ಹಿನ್ನೆಲೆಯಲ್ಲಿ ನೋಡಿದರೆ ಸಿಕ್ಕಿಂನಲ್ಲಿ ಮರ ದತ್ತು ಪ್ರಕ್ರಿಯೆ ಭಾರಿ ಪ್ರಮಾಣದಲ್ಲಿ ಹೆಚ್ಚಬೇಕಿತ್ತು. ಆದರೆ ಹಾಗಾಗಿಲ್ಲ. ಮಜಾ ಎಂದರೆ, ಈ ಕಾನೂನು ಬಂದ ನಂತರದಲ್ಲಿ ಈವರೆಗೆ ಒಂದು ಮರವನ್ನೂ ಇದರಡಿಯಲ್ಲಿ ದತ್ತು ಪಡೆದಿಲ್ಲವಂತೆ. ಜನರ ಈ ನೀರಸ ಪ್ರತಿಕ್ರಿಯೆ ಅರಣ್ಯ ಇಲಾಖೆಗೆ ತಲೆಬಿಸಿ ಉಂಟುಮಾಡಿದೆ. ಅದಕ್ಕಾಗಿ ವನಮಹೋತ್ಸವದಂಥ ಕಾರ್ಯಕ್ರಮದ ಮೂಲಕ ಜನರಲ್ಲಿ ಉತ್ಸಾಹ ಮೂಡಿಸಲು ಯೋಚಿಸಿದೆ.

ಇಲ್ಲಿ ಇನ್ನೊಂದು ಸೂಕ್ಷ್ಮವೂ ಇದೆ. ಬುಡಕಟ್ಟು ಜನರು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳು (ಅರಣ್ಯ ಹಕ್ಕುಗಳ ಮಾನ್ಯತೆ), 2006- ಈ ಕಾನೂನಿನ ಪ್ರಕಾರ, ಪಾರಂಪರಿಕವಾಗಿ ಅರಣ್ಯದಲ್ಲಿ ವಾಸಿಸುವವರು ಮತ್ತು ತಮ್ಮ ಜೀವನೋಪಾಯಕ್ಕಾಗಿ ಅರಣ್ಯವನ್ನು ಅವಲಂಬಿಸಿರುವವರಿಗೆ ಆ ಅರಣ್ಯ ಭೂಮಿಯ ಮೇಲೆ ಹಕ್ಕು ಇರುತ್ತದೆ. ಸಿಕ್ಕಿಂನಂಥ ರಾಜ್ಯದಲ್ಲಿ ಇಂಥ ಜನಸಂಖ್ಯೆ ಸಾಕಷ್ಟು ಇರಬಹುದು ಎಂಬುದು ನಮ್ಮನಿಮ್ಮಂಥವರ ಸಾಮಾನ್ಯ ಗ್ರಹಿಕೆ. ಆದರೆ ಅಲ್ಲಿನ ಸರ್ಕಾರ ಮಾತ್ರ ಇದನ್ನು ಒಪ್ಪುತ್ತಿಲ್ಲ. ರಾಜ್ಯದಲ್ಲಿ ಅರಣ್ಯ ಅವಲಂಬಿತ ಜನರೇ ಇಲ್ಲ. ರಾಜ್ಯದ ಬಹುತೇಕ ಬುಡಕಟ್ಟು ಜನರು ತಮ್ಮ ಹೆಸರಲ್ಲಿ ಭೂಮಿ ಹೊಂದಿದ್ದಾರೆ. ಅವರು ಜೀವನಾಧಾರಕ್ಕಾಗಿ ಅರಣ್ಯವನ್ನು ಅವಲಂಬಿಸಿಲ್ಲ ಎಂಬುದು ಸರ್ಕಾರದ ವಾದ. ಸರ್ಕಾರದ ಈ ಪ್ರತಿಪಾದನೆ ಅದರ ಉದ್ದೇಶದ ಬಗ್ಗೆ ಜನರಲ್ಲಿ ಸಂಶಯಗಳನ್ನು ಮೂಡಿಸಿದೆ. ಹೀಗಾಗಿಯೇ, ಮರ ದತ್ತು ಪಡೆಯುವ ಪಾರಂಪರಿಕ ರೂಢಿಗೆ ಕಾನೂನಿನ ಮಾನ್ಯತೆ ದಕ್ಕಿದ್ದರೂ ಜನರು ಅದನ್ನು ಅಷ್ಟು ಗಂಭೀರವಾಗಿ ಸ್ವೀಕರಿಸಿಲ್ಲ ಎಂಬ ಅನುಮಾನವನ್ನು ಹಲವರು ವ್ಯಕ್ತಪಡಿಸುತ್ತಾರೆ. ಸಿಕ್ಕಿಂನಲ್ಲಿ ಅರಣ್ಯ ಅವಲಂಬಿತ ಜನರಿಲ್ಲ ಎಂಬ ವಾದವನ್ನು ಪರಿಸರವಾದಿಗಳು ಒಪ್ಪುವುದಿಲ್ಲ. ಹೀಗಾಗಿ ಈ ಕಾನೂನು ಮಾನ್ಯತೆಯ ಪರಿಣಾಮ ಏನಾಗುತ್ತದೆಂಬುದನ್ನು ಕಾದುನೋಡಬೇಕಷ್ಟೆ. ಸಿಕ್ಕಿಂ ಮುಖ್ಯಮಂತ್ರಿ ಪ್ರಕಾರ, ಹೀಗೆ ದತ್ತು ಪಡೆದ ಮರಗಳಿಗೆ ಹಾನಿಮಾಡದೆ ಅವುಗಳಿಂದ ಹೂ ಮತ್ತು ಹಣ್ಣುಗಳನ್ನು ಜನರು ಸಂಗ್ರಹಿಸಲು ಅವಕಾಶವಿದೆ.

ಕಾಡನ್ನು ಪೂಜ್ಯಭಾವನೆಯಿಂದ ಕಾಣುವ ಪರಿಪಾಠ ನಮ್ಮ ಕರ್ನಾಟಕದಲ್ಲೂ ಇದೆ. ಉತ್ತರ ಕನ್ನಡ, ಶಿವಮೊಗ್ಗ, ಮಂಗಳೂರು, ಉಡುಪಿ ಮತ್ತು ಕಾಸರಗೋಡು ಮುಂತಾದ ಭಾಗಗಳಲ್ಲಿ ಕಂಡುಬರುವ ದೇವರಕಾಡು ಹಾಗೂ ನಾಗಬನಗಳು ಈ ಪವಿತ್ರ ಭಾವನೆಯ ದ್ಯೋತಕಗಳು. ಇವು ಒಂದು ಬಗೆಯಲ್ಲಿ ಸಂರಕ್ಷಿತ ಕಾಡುಗಳು. ಇಲ್ಲಿ ಅರಣ್ಯ ಕಾಯಲು ಇಲಾಖೆ ಬೇಕಿಲ್ಲ. ಆಯಾ ಊರವರು ಅಥವಾ ಮನೆಯವರೇ ಕಾವಲುಗಾರರಾಗಿರುತ್ತಾರೆ. ಇಂಥ ಕಾಡುಗಳಲ್ಲಿನ ಮರ ಕಡಿಯುವುದು ನಿಷಿದ್ಧ. ಅರಣ್ಯದ ಉಪ ಉತ್ಪನ್ನಗಳನ್ನು ಆ ಪರಿಸರಕ್ಕೆ ಹಾನಿಮಾಡದೆ ಸಂಗ್ರಹಿಸಬಹುದಷ್ಟೆ. ಕೆಲವೆಡೆ ಇದಕ್ಕೂ ಅವಕಾಶವಿಲ್ಲ. ಇಂಥ ಅರಣ್ಯ ಸಣ್ಣ ಜಾಗದಿಂದ ಹಿಡಿದು ಎಕರೆಗಟ್ಟಲೆ ವಿಸ್ತರಿಸಿರುವುದೂ ಇದೆ. ಯಾವ ಕಾನೂನಿನ ನಿರ್ಬಂಧ ಇಲ್ಲದಿದ್ದರೂ, ಯಾರೂ ವನಸಂರಕ್ಷಣೆಯ ಬಗ್ಗೆ ದೊಡ್ಡ ದೊಡ್ಡ ಉಪನ್ಯಾಸ ಕೊಡದಿದ್ದರೂ, ಜಾಗೃತಿ ಕಾರ್ಯ ಮಾಡದಿದ್ದರೂ ನಮ್ಮ ಪೂರ್ವಜರು ಅರಣ್ಯ ಪ್ರದೇಶಗಳ ಬಗ್ಗೆ ಎಷ್ಟು ಕಾಳಜಿ, ಪ್ರೀತಿ ಹೊಂದಿದ್ದರು ಎಂಬುದನ್ನು ನೆನೆದರೇ ರೋಮಾಂಚನವಾಗುತ್ತದೆ. ಹೀಗಿದ್ದರೂ, ಸ್ವಾತಂತ್ರ್ಯ ನಂತರವೂ ಬ್ರಿಟಿಷ್ ಕಾಲದ ಕಾನೂನನ್ನೇ ಅನುಸರಿಸಿದ ಪರಿಣಾಮವಾಗಿ ಅರಣ್ಯ ಸಂರಕ್ಷಣೆಯಲ್ಲಿ ಜನರನ್ನು ಸಹಭಾಗಿಗಳು ಎಂದು ಪರಿಗಣಿಸಲಾಗಿರಲಿಲ್ಲ. 1980ರ ದಶಕದ ನಂತರವಷ್ಟೇ ಇಂಥದೊಂದು ಚಿಂತನೆ ಕುಡಿಯೊಡೆಯಿತು.

ಇಲ್ಲಿ ರಾಮಾಯಣದ ಒಂದು ಪ್ರಸಂಗವನ್ನು ಮೆಲುಕಿಸುವುದು ಸೂಕ್ತ. ಆನಂದರಾಮಾಯಣದಲ್ಲಿ ಬರುವ ಒಂದು ಕಥೆ ಹೀಗಿದೆ: ಮುಂಚೆ ವ್ಯಾಧನಾಗಿದ್ದ ವಾಲ್ಮೀಕಿ ಒಂದು ದಿನ ಕಾಡಿನ ದಾರಿಯಲ್ಲಿ ಸರ್ಪ¤ಗಳನ್ನು ಅಡ್ಡಗಟ್ಟಿ, ‘ನಿಮ್ಮಲ್ಲಿರುವುದನ್ನೆಲ್ಲ ಕೊಟ್ಟುಬಿಡಿ’ ಎಂದು ಹೆದರಿಸುತ್ತಾನೆ. ಆಗ ಸರ್ಪ¤ಗಳು ‘ನಿನ್ನ ಇಚ್ಛೆಯಂತೆ ಆಗಲಿ. ಆದರೆ ಅದಕ್ಕೆ ಮುನ್ನ ನಮ್ಮದೊಂದು ಕೋರಿಕೆಯಿದೆ. ನಿನ್ನ ಕುಟುಂಬದವರು ನಿನ್ನ ದರೋಡೆ, ದೋಚುವಿಕೆಯಲ್ಲಿ ಪಾಲ್ಗೊಂಡಂತೆ ನಿನ್ನ ಪಾಪಪುಣ್ಯದಲ್ಲಿಯೂ ಸಹಭಾಗಿಗಳಾಗುತ್ತಾರಾ ಎಂಬುದನ್ನು ಕೇಳಿಕೊಂಡು ಬಾ’ ಎನ್ನುತ್ತಾರೆ. ಅದರಂತೆ ಆತ ಮನೆಗೆ ಹೋಗಿ ಹೆಂಡತಿ ಮಕ್ಕಳ ಬಳಿ ಕೇಳಿದಾಗ ಅವರು, ‘ನಿನ್ನ ಹಣ ಸಂಪಾದನೆಯಲ್ಲಿ ಮಾತ್ರ ನಾವು ಭಾಗಿಗಳು, ನಿನ್ನ ಪಾಪಪುಣ್ಯ ಏನಿದ್ದರೂ ನಿನಗೆ ಮಾತ್ರವೇ ಹೊರತು ನಮಗಲ್ಲ’ ಎಂದುಬಿಡುತ್ತಾರೆ. ಆಗ ಬೇಡನಿಗೆ ಜ್ಞಾನೋದಯವಾಗುತ್ತದೆ. ಋಷಿಗಳ ಬಳಿ ಪಾಪಮುಕ್ತಿಯ ದಾರಿ ತೋರಲು ವಿನಂತಿಸುತ್ತಾನೆ. ಆಗ ಋಷಿಗಳು, ‘ಸಕಲ ಇಷ್ಟಕಾರಕ ರಾಮಮಂತ್ರವನ್ನು ನಿನಗೆ ಉಪದೇಶಿಸುತ್ತೇವೆ. ಆದರೆ ನೀನು ಅಕಾರ್ಯಗಳಲ್ಲಿ ತೊಡಗಿರುವುದರಿಂದ ಅದಕ್ಕೆ ಅರ್ಹನಲ್ಲ. ಹೀಗಾಗಿ ‘ರಾಮ’ ಎಂಬ ನಾಮವನ್ನು ವ್ಯುತ್ಕ್ರುವಾಗಿ ಉಪದೇಶಿಸುತ್ತೇವೆ’ ಎಂದು ಹೇಳಿ ‘ಮರಾ’ ಎಂದು ಜಪಿಸುವಂತೆ ಸೂಚಿಸುತ್ತಾರೆ. ಹಾಗೆ ‘ಮರಾ ಮರಾ ಮರಾ’ ಎಂದು ಭಕ್ತಿಯಿಂದ ಭಜಿಸತೊಡಗಿ ಮುಂದೆ ಅದು ರಾಮನಾಮವಾಗಿ ಪರಿವರ್ತನೆಯಾಗುತ್ತದೆ. ಈ ಮಂತ್ರದಲ್ಲಿ ತಲ್ಲೀನನಾಗಲು ಆತನ ಮೈಮೇಲೆ ಹುತ್ತವೇ (ವಲ್ಮೀಕ) ಬೆಳೆಯುತ್ತದೆ. ಮುಂದೆ ಅವನೇ ರಾಮಾಯಣ ಬರೆದ ವಾಲ್ಮೀಕಿಯಾಗಿ ಲೋಕಪ್ರಸಿದ್ಧನಾದ.

ಹಾಗೇ, ಇಂದು ನಾವು ‘ಮರ ಮರ ’ ಮಂತ್ರವನ್ನು ಜಪಿಸಬೇಕಾದ ಅಗತ್ಯವಿದೆ. ಮುಂದೆ ಅದು ರಾಮನಾಮವಾಗಿ ನಮ್ಮನ್ನು ಪೊರೆಯಬಲ್ಲದು. ರಾಮಮಂತ್ರ ಒಲಿದ ಮೇಲೆ ಜೀವನಕ್ಕೆ ಇನ್ನೇನು ಬೇಕು ಅಲ್ಲವೆ!

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top