Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಭಾರತವನ್ನು ಹಳದಿ ಕನ್ನಡಕದಿಂದ ನೋಡಬೇಡಿ

Saturday, 07.07.2018, 3:05 AM       No Comments

‘ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗುತ್ತಾರೆ’ ಎಂಬರ್ಥದ ಸೂಕ್ತಿಯನ್ನು ವಿಶ್ವರಂಗಕ್ಕೆ ಕೊಡುಗೆಯಾಗಿ ಕೊಟ್ಟಿದ್ದು ಭಾರತ. ಆದರೆ, ‘ಮಹಿಳೆಯರ ಪಾಲಿಗೆ ಭಾರತ ಅಪಾಯಕಾರಿ’ ಎಂಬರ್ಥದ ವಿದೇಶಿ ಕುಮ್ಮಕ್ಕಿನ ಸಮೀಕ್ಷೆಗಳು ಹೊಮ್ಮುತ್ತಿವೆ. ಇದು ಜಾಗತಿಕವಾಗಿ ಭಾರತದ ಪ್ರತಿಷ್ಠೆಯನ್ನು ಹೊಸಕಿಹಾಕುವ ವಿಫಲಯತ್ನವಲ್ಲದೆ ಮತ್ತೇನಲ್ಲ.

ದು ದಕ್ಷಿಣ ಅಮೆರಿಕದ ತುತ್ತತುದಿಯಲ್ಲಿರುವ, ವಿಶ್ವದ ಅತ್ಯಂತ ದುರ್ಗಮ ಪ್ರದೇಶ ಎಂದೇ ಹೆಸರಾದದ್ದು. ಈ ಹಾರ್ನ್ ಭೂಶಿರದ ಸಹವಾಸ ಮಾಡಲು ಎಂಟೆದೆ ಭಂಟನೂ ಹೆದರಬೇಕು ಹಾಗಿದೆ ಅದು. ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರಗಳು ಸಂಧಿಸುವ ಡ್ರೇಕ್ ಮಾರ್ಗದಲ್ಲಿರುವ ಈ ಜಾಗ ಯಾವಾಗಲೂ ಪ್ರಕ್ಷುಬ್ಧ ಅಲೆಗಳ ಹೊಡೆತದಿಂದ ಅಬ್ಬರಿಸುತ್ತಿರುತ್ತದೆ. ಈ ರಕ್ಕಸ ಅಲೆಗಳಿಗೆ ಭಾರಿ ಗಾಳಿ ಮತ್ತು ಸಾಗರದೊಳಗಡೆಯಿಂದ ತೇಲಿಬರುವ ನೀರ್ಗಲ್ಲುಗಳು ಸಾಥ್ ನೀಡುತ್ತ ಅಲ್ಲಿ ಬಂದವರನ್ನು ಹೆದರಿಸುತ್ತವೆ. ಆದ್ದರಿಂದಲೇ ಇದನ್ನು ‘ಸಮುದ್ರದ ಮೌಂಟ್ ಎವರೆಸ್ಟ್’ ಎಂದೇ ಹೆಸರಿಸಲಾಗಿದೆ. ಆದರೆ ಆ ನಾವಿಕರು ಅಂಜಲಿಲ್ಲ ಅಳುಕಲಿಲ್ಲ.

ಇದು ಒಂದು ನಿದರ್ಶನ ಮಾತ್ರ. ಇಂಥ ಎಷ್ಟೋ ಸವಾಲುಗಳು, ದುರ್ಗಮ ಸನ್ನಿವೇಶಗಳು ಸಮುದ್ರಯಾನಕ್ಕೆ ಹೊರಟ ಆ ತಂಡಕ್ಕೆ ಎದುರಾಗಿದ್ದವು. ಅದು ಒಂದೆರಡು ದಿನಗಳ ಯಾನವಲ್ಲ, ಭರ್ತಿ ಎಂಟು ತಿಂಗಳ ದೂರ ತೀರ ಯಾನ. ಈ ಸಾಗರಯಾತ್ರೆಯ ಹಾದಿ ನೋಡಿ: 4 ಖಂಡಗಳು, ಮೂರು ಸಾಗರಗಳು, ಒಟ್ಟು 21,600 ನಾಟಿಕಲ್ ಮೈಲು ದೂರ. ಇವರನ್ನು ಒಯ್ದ ನೌಕೆಯ ಹೆಸರು ಐಎನ್​ಎಸ್​ವಿ ತಾರಿಣಿ. 56 ಅಡಿ ಉದ್ದದ ಈ ನೌಕೆ ಆರು ನಾವಿಕರನ್ನು ಒಯ್ಯಬಲ್ಲ ಸಾಮರ್ಥ್ಯದ್ದು. ಇದರ ನಿರ್ವಣವಾದದ್ದು ಗೋವಾದ ಅಕ್ವಾರಿಸ್ ಬಂದರಿನಲ್ಲಿ. ಈ ಯಾತ್ರೆ ಶುರುವಾದದ್ದು 2007ರ ಸೆ.10ರಂದು, ಗೋವಾದಿಂದ. ಯಾತ್ರೆ ಸಂಪನ್ನವಾದದ್ದೂ ಗೋವಾದಲ್ಲೇ, 2018ರ ಮೇ 21ರಂದು. ಅಂದಹಾಗೆ, ಈ ಸಾಗರ ಪರಿಕ್ರಮದ ಪರಾಕ್ರಮ ಮೆರೆದವರು ಆರು ಭಾರತೀಯ ನೌಕಾಪಡೆಯ ಮಹಿಳಾಮಣಿಗಳು! ಲೆ.ಕಮಾಂಡರ್ ವಾರ್ತಿಕಾ ಜೋಶಿ ನೇತೃತ್ವದ ತಂಡದ ಇತರ ಸದಸ್ಯರು ಇವರು-ಲೆ.ಕಮಾಂಡರ್​ಗಳಾದ ಪಿ.ಸ್ವಾತಿ ಮತ್ತು ಪ್ರತಿಭಾ ಜಮ್ವಾಲ್, ಲೆಫ್ಟಿನೆಂಟ್​ಗಳಾದ ಬಿ.ಐಶ್ವರ್ಯಾ, ಪಾಯಲ್ ಗುಪ್ತಾ ಮತ್ತು ಎಸ್.ವಿಜಯಾದೇವಿ. ಈ ನಾರಿಯರ ಈ ಸಾಗರಸಾಹಸಕ್ಕೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಭೇಷ್ ಎಂದರು.

ಭಾರತೀಯ ಸೇನೆಯಲ್ಲಿ ಮಹಿಳೆಯರ ಪಾತ್ರ ಕೆಲ ವಿಭಾಗಗಳಿಗೆ ಸೀಮಿತವಾಗಿದೆ. ಈಚೆಗೆ ಈ ನಿರ್ಬಂಧ ತೆರವಾಗುತ್ತಿದೆ. ಪರಿಣಾಮ, ಯುದ್ಧವಿಮಾನದ ಚಾಲಕ ಸೀಟಿನಲ್ಲೂ ಮಹಿಳೆ ಕೂತಿದ್ದಾಳೆ. ಆರು ಮಹಿಳೆಯರು ಈ ಶ್ರೇಯಕ್ಕೆ ಭಾಜನರಾಗಿದ್ದಾರೆ. ನಮ್ಮ ಚಿಕ್ಕಮಗಳೂರಿನ ಮರ್ಲೆ ಗ್ರಾಮದ ಮೇಘನಾ ಶಾನಭೋಗ್ ಇಂಥ ವಿರಳರ ಸಾಲಿಗೆ ಇದೀಗ ಸೇರಿದ್ದಾರೆ. ವಾಯುಪಡೆಯ ಫ್ಲೈಯಿಂಗ್ ಆಫೀಸರ್ ಪದವಿ ಪಡೆದು ಯುದ್ಧವಿಮಾನದ ಫೈಟರ್ ಪೈಲಟ್ ಎಂಬ ಹೆಗ್ಗಳಿಕೆ ಈಕೆಯದು. ‘ಭಾರತೀಯ ಮಹಿಳೆ ತನಗೆ ಹಾಕಿಕೊಂಡಿರುವ ಸೀಮಿತಗೆರೆಯನ್ನು ಮೀರಿ ಆಲೋಚಿಸಿದರೆ ಮಾತ್ರ ತನ್ನ ಸಾಮರ್ಥ್ಯ ಅರಿಯಬಹುದು. ಮಹಿಳೆ ವಿಭಿನ್ನವಾಗಿ ಗುರುತಿಸಿಕೊಳ್ಳಲು ಹೇರಳ ಅವಕಾಶಗಳಿವೆ’ ಎಂಬ ಮೇಘನಾ ಮಾತು ಎಷ್ಟು ನಿಜ ಅಲ್ಲವೆ?

ನಮ್ಮ ಭಾರತದ ಹೆಣ್ಮಕ್ಕಳು ಎಷ್ಟೆಲ್ಲ ರಂಗಗಳಲ್ಲಿ ಸಾಧನೆಯ ಗಾಥೆ ಬರೆಯುತ್ತಿದ್ದಾರಲ್ಲ ಎನಿಸಿ ಖುಷಿಪಡುವಾಗಲೇ ಬಂತು ನೋಡಿ ಒಂದು ಸಮೀಕ್ಷಾ ವರದಿ. ಲಂಡನ್ ಮೂಲದ ಥಾಮ್ಸನ್ ರಾಯ್ಟರ್ಸ್ ಫೌಂಡೇಷನ್ ಈಚೆಗೆ ಮಹಿಳಾ ಸುರಕ್ಷತೆ ಕುರಿತಾಗಿ ಒಂದು ವರದಿಯನ್ನು ಪ್ರಕಟಿಸಿತು. ಆ ವರದಿ ಪ್ರಕಾರ, ಮಹಿಳೆಯರಿಗೆ ಭಾರತ ಅತಿ ಅಪಾಯಕಾರಿ ದೇಶವಂತೆ! ಭಾರತದ ಕುರಿತಂತೆ ಪಾಶ್ಚಿಮಾತ್ಯ ಜನರಲ್ಲಿ ಮತ್ತು ಮಾಧ್ಯಮಗಳಲ್ಲಿ ಇರುವ ಭಾವನೆಗೆ ಈ ವರದಿ ಮತ್ತೊಮ್ಮೆ ಕೈಗನ್ನಡಿ ಹಿಡಿಯಿತೆನ್ನಬಹುದು. ಆರು ಪ್ರಶ್ನೆಗಳನ್ನು ಇಟ್ಟುಕೊಂಡು ವಿಶ್ವದ 548 ಮಂದಿ ‘ಪರಿಣತ’ರನ್ನು ಮಾತನಾಡಿಸಿ ಈ ವರದಿ ಸಿದ್ಧಪಡಿಸಿದ್ದಾಗಿ ಸಂಸ್ಥೆ ಹೇಳಿಕೊಂಡಿದೆ. ಈ ಪೈಕಿ 43 ಮಂದಿ ‘ಪರಿಣತರು’ ಭಾರತದವರಂತೆ. ಆರೋಗ್ಯಸೇವೆ, ಆರ್ಥಿಕ ಸಂಪನ್ಮೂಲ ಮತ್ತು ಪಕ್ಷಪಾತ, ಸಾಂಪ್ರದಾಯಿಕ ಆಚರಣೆಗಳು, ಲೈಂಗಿಕ ದೌರ್ಜನ್ಯ ಮತ್ತು ಮಾನವ ಕಳ್ಳಸಾಗಾಣಿಕೆ ಈ ಆರು ವಿಷಯಗಳ ಕುರಿತು ಈ ಅಭಿಪ್ರಾಯಸಂಗ್ರಹ ನಡೆದಿತ್ತು. ಮಜಾ ನೋಡಿ, ಅಫ್ಘಾನಿಸ್ತಾನ, ಸಿರಿಯಾ, ಸೊಮಾಲಿಯಾ ಮತ್ತು ಸೌದಿ ಅರೇಬಿಯಾದಂತಹ ದೇಶಗಳಿಗಿಂತ ಭಾರತದ ಪರಿಸ್ಥಿತಿ ಕಳಪೆಯಾಗಿದೆ ಎಂದು ಈ ವರದಿಯಲ್ಲಿ ಬಿಂಬಿಸಲಾಗಿದೆ ಅಥವಾ ನಂಬಿಸಲಾಗಿದೆ.

ಹಾಗೇ ಸುಮ್ಮನೆ ಒಮ್ಮೆ ಗಮನಿಸೋಣ. ಅಫ್ಘಾನಿಸ್ತಾನದ ಪರಿಸ್ಥಿತಿ ಹೇಗಿದೆ? ತಾಲಿಬಾನ್ ಉಗ್ರ ಸಂಘಟನೆ ದೇಶದ ಅನೇಕ ಕಡೆಗಳಲ್ಲಿ ಮೇಲುಗೈ ಸಾಧಿಸಿದೆ. ಇಂಥಲ್ಲಿ ಮಹಿಳೆಯರಿಗೆ ಎಷ್ಟು ಸ್ವಾತಂತ್ರ್ಯ ಇದ್ದೀತು ಎಂಬುದನ್ನು ಊಹಿಸಲು ತಜ್ಞರೇನೂ ಬೇಕಾಗಿಲ್ಲ. ಅದೂ ಅಲ್ಲದೆ, ಮಾತೃತ್ವದಲ್ಲಿ ಮರಣ ಪ್ರಮಾಣ ಅತಿ ಹೆಚ್ಚಿನ ಪ್ರಮಾಣದಲ್ಲಿರುವುದು ಈ ದೇಶದಲ್ಲೇ.

ಇನ್ನು ಸೊಮಾಲಿಯಾ. ಈ ಆಫ್ರಿಕನ್ ದೇಶದಲ್ಲಿ ಮಹಿಳೆಯನ್ನು ಅಕ್ಷರಶಃ ಪುರುಷನ ಅಧೀನ ಆಸ್ತಿಯಂತೆ ಕಾಣಲಾಗುತ್ತದೆ. ಇದಲ್ಲದೆ, ಸ್ತ್ರೀ ಜನನಾಂಗ ಛೇದ ಇಲ್ಲಿ ವ್ಯಾಪಕವಾಗಿದೆ. ಒಂದು ಅಂದಾಜಿನ ಪ್ರಕಾರ, 4-11 ವರ್ಷ ವಯೋಮಾನದ ಶೇ.95 ಬಾಲಕಿಯರನ್ನು ಈ ಪ್ರಕ್ರಿಯೆಗೆ ಬಲವಂತವಾಗಿ ಒಳಪಡಿಸಲಾಗುತ್ತದೆ. ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಮರಿಯಮ್ ಖಾಸಿಮ್ ಹೇಳುವ ಪ್ರಕಾರ, ‘ಸೊಮಾಲಿಯಾದಲ್ಲಿ ಸ್ತ್ರೀಯರ ಪರಿಸ್ಥಿತಿ ಶೋಚನೀಯವಾಗಿದೆ, ಅತ್ಯಾಚಾರ, ದೌರ್ಜನ್ಯಗಳು ಮಿತಿಮೀರಿವೆ.’

ಸಿರಿಯಾ ಕಥೆ-ವ್ಯಥೆ ನೋಡಿ. ತೀವ್ರ ಅಂತರ್ಯುದ್ಧಕ್ಕೆ ಸಾಕ್ಷಿಯಾಗಿರುವ ಈ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಗಳು ಮೇರೆ ಮೀರಿವೆ. ಐಸಿಸ್ ಉಗ್ರ ಸಂಘಟನೆಯ ಅತಿರೇಕಗಳು ಜನರನ್ನು ಹಿಂಡುತ್ತಿವೆ.

ಸೌದಿ ಅರೇಬಿಯಾ ಈಚೆಗೆ ಮಹಿಳೆಯರಿಗೆ ವಾಹನ ಚಾಲನಾ ಪರವಾನಿಗೆಯನ್ನು ನೀಡಿದೆ ಎಂಬುದೇನೋ ನಿಜ. ಆದರೆ ಅಲ್ಲಿನ ಮಹಿಳೆಯರ ಮೇಲಿನ ನಿರ್ಬಂಧದ ಪಟ್ಟಿಯೂ ಸಾಕಷ್ಟು ಉದ್ದವಿದೆ. ಮದುವೆ, ಸಂಚಾರ, ಅಧ್ಯಯನ, ದಿರಿಸಿನ ಆಯ್ಕೆ ಇತ್ಯಾದಿ ವಿಚಾರಗಳಲ್ಲಿ ಕುಟುಂಬದ ಪುರುಷನ ಸಮ್ಮತಿ ಅತ್ಯಗತ್ಯ. ಅಂದರೆ ಸ್ತ್ರೀ ತಾನೇತಾನಾಗಿ ನಿರ್ಣಯ ಕೈಗೊಳ್ಳುವ ಅಧಿಕಾರವಿಲ್ಲ. ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ಮತದಾನ ಮಾಡಲು ಅಥವಾ ಚುನಾವಣೆಗೆ ಸ್ಪರ್ಧಿಸಲು (ಮುನಿಸಿಪಲ್ ಹಂತದಲ್ಲಿ) ಅವಕಾಶ ಸಿಕ್ಕಿದ್ದು ಯಾವಾಗ ಗೊತ್ತಾ? 2015ರಲ್ಲಷ್ಟೆ. ಇಷ್ಟೇ ಅಲ್ಲ, ಅಲ್ಲಿ ಅತ್ಯಾಚಾರ ಅಥವಾ ಕೊಲೆ ಸಂತ್ರಸ್ತರ ಕುಟುಂಬ ಸದಸ್ಯರಿಗೆ ‘ಬ್ಲಡ್ ಮನಿ’ (ಒಂದು ರೀತಿಯ ಪರಿಹಾರಧನ. ಇದರಿಂದ ಆರೋಪಿ ಕಾನೂನುಕ್ರಮದಿಂದ ಪಾರಾಗಬಹುದು) ನೀಡುವ ಕಾನೂನು ಅವಕಾಶವೂ ಇದೆ.

ಇನ್ನು, ಭಾರತದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚು ಎಂದು ಥಾಮ್ಸನ್ ರಾಯ್ಟರ್ ವರದಿ ಹೇಳಿದೆಯಲ್ಲ, ಹೋಲಿಕೆಗಾಗಿ ಇತರ ಕೆಲ ದೇಶಗಳಲ್ಲಿನ ಅಂಕಿಅಂಶ ಗಮನಿಸೋಣ. ಭಾರತದಲ್ಲಿ ಪ್ರತಿ 1 ಲಕ್ಷ ಜನಸಂಖ್ಯೆಗೆ ಅತ್ಯಾಚಾರದ ತಲಾ ಪ್ರಮಾಣ 1.8. ಉಳಿದ ದೇಶಗಳನ್ನು ನೋಡಿ: ಜರ್ಮನಿ-9.4, ಬ್ರಿಟನ್-17, ನಾರ್ವೆ-19.2, ಅಮೆರಿಕ-27.4, ಸ್ವೀಡನ್-63.5. ಈ ಸಂಖ್ಯೆಗಳು ಏನನ್ನು ಧ್ವನಿಸುತ್ತವೆ ಹಾಗಾದರೆ? ‘ಭಾರತ ವಿಶ್ವದಲ್ಲಿ ಮಹಿಳೆಯರಿಗೆ ಅತಿ ಅಪಾಯಕಾರಿ ದೇಶ’ ಎಂದೇ?

ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಈ ವರದಿಗೆ ಸರಿಯಾದ ಮಾರುತ್ತರವನ್ನೇ ನೀಡಿದೆ. ಈ ವರದಿ ಕಾಲ್ಪನಿಕವೇ ವಿನಾ ವಾಸ್ತವಿಕ ಡೇಟಾಗಳನ್ನು ಆಧರಿಸಿಲ್ಲ. ಅಲ್ಲದೆ, ವರದಿ ತಯಾರಿಸಲು ದೋಷಪೂರಿತ ವಿಧಾನ ಅನುಸರಿಸಲಾಗಿದೆ ಎಂದು ಸಚಿವಾಲಯ ಹೇಳಿರುವುದು ಸೂಕ್ತವಾಗಿಯೇ ಇದೆ. ಭಾರತದ ಗೌರವ ಕಾಪಾಡುವ ನಿಟ್ಟಿನಲ್ಲಿ ಇಂಥ ಪ್ರತಿಪಾದನೆ ಅಗತ್ಯ ಕೂಡ. ತನ್ನ ಈ ಮಾತಿಗೆ ಸಚಿವಾಲಯ ಅಂಕಿಅಂಶಗಳ ಸಮರ್ಥನೆಯನ್ನೂ ನೀಡಿದೆ. ದೇಶದಲ್ಲಿ ಬಾಲ್ಯವಿವಾಹದಲ್ಲಿ ತೀವ್ರ ಇಳಿಕೆಯಾಗಿದೆ. 15-19ರ ವಯೋಮಾನದಲ್ಲಿನ ಹೆಣ್ಮಕ್ಕಳು ತಾಯಂದಿರಾಗುವ ಅಥವಾ ಗರ್ಭಿಣಿಯರಾಗುವ ಪ್ರಮಾಣ 2005-06ರಲ್ಲಿ ಶೇ.16 ಇದ್ದುದು 2015-16ರ ವೇಳೆಗೆ ಶೇ.7.9ಕ್ಕೆ ಕುಸಿದಿದೆ. 2016ರಲ್ಲಿ 38,947 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದರೆ, 2014 ಮತ್ತು 2015ರಲ್ಲಿ ಕ್ರಮವಾಗಿ 36,735 ಮತ್ತು 34,651 ಪ್ರಕರಣಗಳು ದಾಖಲಾಗಿವೆ. ಜನರಲ್ಲಾದ ಜಾಗೃತಿಯಿಂದಾಗಿ ಮತ್ತು ಪೊಲೀಸ್ ವ್ಯವಸ್ಥೆಯನ್ನು ಸಂರ್ಪಸುವ ಅವಕಾಶದಿಂದಾಗಿ ಇಂಥ ಘಟನೆಗಳ ವರದಿಯಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ಸಚಿವಾಲಯ ಹೇಳಿದೆ.

ಒಂದು ಕಾಲದಲ್ಲಿ ಹಾವಾಡಿಗರ ದೇಶ, ಭಿಕ್ಷುಕರ ದೇಶ ಎಂದೆಲ್ಲ ಪಾಶ್ಚಾತ್ಯ ಮಾಧ್ಯಮಗಳು ಹಾಗೂ ವಿಷಯತಜ್ಞರಿಂದ ಗೇಲಿಗೊಳಗಾಗುತ್ತಿದ್ದ ಭಾರತ ಇಂದು ಜಗತ್ತಿನ ಮುಂಚೂಣಿ ದೇಶಗಳ ಸಾಲಿನಲ್ಲಿ ಬಂದುನಿಂತಿದೆ. ಅದರರ್ಥ ಸಮಸ್ಯೆಗಳು ಇಲ್ಲ ಅಂತಲ್ಲ. ಆದರೆ ಸುಧಾರಣೆಯ ಹಾದಿಯಲ್ಲಿ ಭಾರತದ ನಡೆ ವೇಗವಾಗಿಯೇ ಇದೆ. ಆದರೂ, ಸ್ಥಾಪಿತ ಹಿತಾಸಕ್ತಿಗಳು ಭಾರತದ ಮೇಲೆ ಕೂರಂಬು ಬಿಡಲು ಕಾಯುತ್ತಲೇ ಇರುತ್ತವೆ ಎಂಬುದಕ್ಕೆ ಮತ್ತೊಂದು ಪುರಾವೆ ಇಲ್ಲಿದೆ ನೋಡಿ.

ಕೆಲ ದಿನಗಳ ಹಿಂದೆ ವಿಶ್ವಸಂಸ್ಥೆಯ ಮಾನವ ಹಕ್ಕು ವಿಭಾಗವು ಒಂದು ವರದಿ ನೀಡಿತು. ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಮಾನವಹಕ್ಕು ಉಲ್ಲಂಘನೆ ನಡೆಯುತ್ತಿದೆ ಎಂಬ ಆಕ್ಷೇಪವಿದ್ದ ವರದಿಯದು. ಭಾರತ ಈ ವರದಿಗೆ ತಕ್ಷಣವೇ ತಿರುಗೇಟು ನೀಡಿತು. ಅಲ್ಲದೆ, ವಿಶ್ವಸಂಸ್ಥೆಯಲ್ಲಿ ಸಹ ಈ ವರದಿಗೆ ಉಳಿದ ದೇಶಗಳ ಬೆಂಬಲ ಸಿಗಲಿಲ್ಲ. ಭಾರತದ ಸೇನಾ ಮುಖ್ಯಸ್ಥ ಜ.ಬಿಪಿನ್ ರಾವತ್ ಈ ವರದಿಯನ್ನು ‘ಉದ್ದೇಶಪೂರ್ವಕ’ ಎಂದು ಬಣ್ಣಿಸಿ ತಳ್ಳಿಹಾಕಿದರು. ನಂತರದಲ್ಲಿ ಸೇನೆ ಮಾನವಹಕ್ಕು ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿ ಅಂಕಿಅಂಶಗಳನ್ನೂ ನೀಡಿತು. ಜಮ್ಮು-ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿ 1994ರಿಂದ 2017ರ ಅವಧಿಯಲ್ಲಿ ಸೇನೆ ವಿರುದ್ಧ ಒಟ್ಟು 1,736 ಮಾನವಹಕ್ಕು ಉಲ್ಲಂಘನೆ ಆರೋಪಗಳು ಕೇಳಿಬಂದಿದ್ದವು. ಈ ಪೈಕಿ 66 ಮಾತ್ರ ಸತ್ಯ ಎಂದು ತನಿಖೆಯಲ್ಲಿ ಸಾಬೀತಾಗಿದೆ. ಇದಕ್ಕೆ ಸಂಬಂಧಿಸಿ 150 ಸೈನಿಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಮತ್ತು 49 ಪ್ರಕರಣಗಳಲ್ಲಿ ಪರಿಹಾರ ನೀಡಲಾಗಿದೆ. ಜಮ್ಮು-ಕಾಶ್ಮೀರಕ್ಕೇ ಸಂಬಂಧಿಸಿ ಹೇಳುವುದಾದರೆ, 1,022 ಮಾನವಹಕ್ಕು ಉಲ್ಲಂಘನೆ ಆರೋಪಗಳಲ್ಲಿ 31 ಮಾತ್ರ ಸತ್ಯ ಎಂದು ಕಂಡುಬಂದಿದೆ ಎಂದು ಸೇನೆ ಸ್ಪಷ್ಟಪಡಿಸಿದೆ. ಒಂದೊಮ್ಮೆ ಸೇನೆಯ ಉಪಸ್ಥಿತಿ ಇಲ್ಲದಿದ್ದರೆ ಆ ಕಣಿವೆ ರಾಜ್ಯದ ಗತಿ ಏನಾಗುತ್ತಿತ್ತು? ಎಲ್ಲೋ ಯಾರದೋ ಕುಮ್ಮಕ್ಕಿನಿಂದ ವರದಿ ತಯಾರಿಸುವವರಿಗೆ ಇದೆಲ್ಲ ಹೇಗೆ ಗೊತ್ತಾಗಬೇಕು! ಭಾರತದಲ್ಲಿ ಸಮಸ್ಯೆಗಳು, ನ್ಯೂನತೆಗಳು, ಅಪಸವ್ಯಗಳು ಇವೆ ಎಂದು ಒಪ್ಪಿಕೊಳ್ಳೋಣ. ಅದೇ ಸಂದರ್ಭದಲ್ಲಿ, ಇಂಥ ಕೊರತೆಗಳನ್ನು ತುಂಬುವ ಶಕ್ತಿಯೂ ನಮ್ಮಲ್ಲಿದೆ ಎಂಬುದರ ಮೇಲೆ ಭರವಸೆಯಿಡೋಣ. ಎಲ್ಲಕ್ಕಿಂತ ಮಿಗಿಲಾಗಿ ಆಧ್ಯಾತ್ಮಿಕ ಬೆಳಕಿನ ಬೆಂಬಲ ನಮಗಿದೆ ಎಂಬುದನ್ನು ಮರೆಯದಿರೋಣ. ಏನಂತೀರಿ…

ಕೊನೇ ಮಾತು: ಹಳದಿ ಕನ್ನಡಕದಿಂದ ನೋಡಿದರೆ ಎಲ್ಲವೂ ಹಳದಿ ಆಗಿಯೇ ಕಾಣುತ್ತದೆ. ಅದು ನೋಡುಗರ ದೃಷ್ಟಿದೋಷ. ಕನ್ನಡಕ ತೆಗೆದರೆ ಎಲ್ಲವೂ ನಿಚ್ಚಳ, ಸ್ಪಷ್ಟ.

(ಲೇಖಕರು: ವಿಜಯವಾಣಿ ಡೆಪ್ಯೂಟಿ ಎಡಿಟರ್​)

Leave a Reply

Your email address will not be published. Required fields are marked *

Back To Top