Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಕಾರಣ ಹೇಳದೆ ಹೋದದ್ದು ಸರಿಯೇ?

Saturday, 03.03.2018, 3:05 AM       No Comments

ಸಂಪೂರ್ಣ ಪಾನನಿಷೇಧ ಎಂಬುದು ಒಂದು ಆದರ್ಶ ಪರಿಕಲ್ಪನೆಯಷ್ಟೆ, ವಾಸ್ತವದಲ್ಲಿ ಪೂರ್ಣವಾಗಿ ಜಾರಿ ಅಸಾಧ್ಯ ಎಂದು ಕೆಲವರು ವಾದಿಸುತ್ತಾರೆ. ಬಿಹಾರದಲ್ಲೇನಾದರೂ ಈ ಪ್ರಯತ್ನ ಯಶಸ್ಸು ಕಂಡಲ್ಲಿ, ಅದು ‘ಬಿಹಾರ ಮಾದರಿ’ಯಾಗಿ ದಾಖಲಾಗಬಹುದು.

 ಈ ಸಾವು ನ್ಯಾಯವೇ?

ಅಪ್ರತಿಮ ಚೆಲುವು, ಮನೋಜ್ಞ ಅಭಿನಯದಿಂದ ದಶಕಗಳ ಕಾಲ ಚಿತ್ರರಸಿಕರ ಮನಸೂರೆಗೊಂಡ ನಟಿ ಶ್ರೀದೇವಿ ದಾರುಣ ಅಂತ್ಯ ಕಂಡು ಎಲ್ಲರಿಗೂ ಹೀಗನಿಸಿದ್ದು ಸಹಜವೇ. ಹುಟ್ಟಿದ ಮನುಷ್ಯ ಸಾಯಲೇಬೇಕು. ಅದು ಅನಿವಾರ್ಯ. ‘ಜೀವನವೆಂದರೆ ಸಾವಿಗಾಗಿನ ದೀರ್ಘ ತಯಾರಿ’ ಎಂಬ ಮಾತೇ ಇದೆಯಲ್ಲ. ಆದರೂ, ಶ್ರೀದೇವಿಯಂಥ ಸಿರಿದೇವಿ ತೀರಾ ಹೀಗೆ ನಿಗೂಢವಾಗಿ ಸಾವಿಗೀಡಾಗಬಾರದಿತ್ತು ಎಂದು ಈಗಲೂ ಅನಿಸುತ್ತದೆ.

ದೂರದ ದುಬೈನ ಐಷಾರಾಮಿ ಹೋಟೆಲ್​ನ ಕೋಣೆಯಲ್ಲಿ, ಕಾರಣ ಹೇಳದೆ ಹೋದ ಶ್ರೀದೇವಿ ಸಾವಿಗೆ ಕಾರಣವಾದರೂ ಏನು? ಮೊದಲಿಗೆ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದರು ಎಂದು ಹೇಳಲಾಯಿತು. ನಂತರದಲ್ಲಿ, ಫೊರೆನ್ಸಿಕ್ ವರದಿಯಲ್ಲಿ, ಆಕಸ್ಮಿಕವಾಗಿ ಬಾತ್​ಟಬ್​ನಲ್ಲಿ ಬಿದ್ದು ಮೃತಪಟ್ಟರು ಎಂಬ ವರದಿ ಬಂತು. ಅದೂ ಅಲ್ಲದೆ, ಆಕೆಯ ದೇಹದಲ್ಲಿ ಆಲ್ಕೋಹಾಲ್ ಅಂಶ ಪತ್ತೆಯಾಗಿದೆ ಎಂದೂ ಆ ವರದಿ ಹೇಳಿತು. ಆಗ ಜನರ ಮನಸ್ಸಿನಲ್ಲಿ ಹಲವು ಸಂಶಯಗಳೆದ್ದವು. ಅದರಲ್ಲೂ ಅನೇಕ ಸಿನಿಮಾ ಮಂದಿ ಮದಿರೆದಾಸರಾಗುವ ಸಾಕಷ್ಟು ಉದಾಹರಣೆಗಳಿರುವಾಗ ಜನರಿಗೆ ಸಂದೇಹ ಮೂಡಿದರೆ ಅಚ್ಚರಿಯಿಲ್ಲ. ಇನ್ನು ಮಾಧ್ಯಮಗಳಂತೂ ಪ್ರಕರಣವನ್ನು ಹಿಂಜಿಹಿಂಜಿ ನೋಡತೊಡಗಿದವು. ಕೊನೆಗೂ ಸಾವನ್ನಪ್ಪಿದ್ದು ಹೇಗೆ ಎಂಬ ನಿಖರ ಕಾರಣ ಗೊತ್ತಾಗದೆ ಶ್ರೀದೇವಿ ಕಥೆಯಾದರು. ಈಗ ಆ ಪ್ರಕರಣ ಮುಗಿದ ಅಧ್ಯಾಯ. ಇದೆಲ್ಲ ಏನೇ ಇರಲಿ, ಜನರ ಮನಸ್ಸಿನಲ್ಲಿ ಎಂಥ ಸ್ಥಾನ ಪಡೆದಿದ್ದರು ಎಂಬುದಕ್ಕೆ, ಮುಂಬೈಯಲ್ಲಿ ನಡೆದ ಆಕೆಯ ಅಂತ್ಯಸಂಸ್ಕಾರ ಸಂದರ್ಭದಲ್ಲಿ ಸೇರಿದ ಜನಸ್ತೋಮವೇ ಸಾಕ್ಷಿ. ಕಾಂಜಿವರಂ ಸೀರೆ, ಕುಂಕುಮ ಶೋಭಿತೆ ಶ್ರೀದೇವಿ ಚಿತ್ರ ಬಹುಕಾಲ ಅಚ್ಚೊತ್ತಿ ನಿಲ್ಲಲಿದೆ.

ಶ್ರೀದೇವಿ ದೇಹದಲ್ಲಿ ಆಲ್ಕೋಹಾಲ್ ಅಂಶ ಪತ್ತೆಯಾಗಿದೆ ಎಂಬ ಫೊರೆನ್ಸಿಕ್ ವರದಿ ಬಗ್ಗೆ ಹಲವರು ತಕರಾರೆತ್ತಿದರು. ಆಕೆಯನ್ನು ನಿಕಟವಾಗಿ ಬಲ್ಲ ರಾಜಕಾರಣಿ ಅಮರ್ ಸಿಂಗ್ ಪ್ರಕಾರ, ಶ್ರೀದೇವಿ ಮದ್ಯ ಮುಟ್ಟಿದವರಲ್ಲ. ಆಕೆ ಜತೆ ಹತ್ತಿರದ ಒಡನಾಟವಿದ್ದ ಇನ್ನೂ ಹಲವು ನಟನಟಿಯರು ಕೂಡ ಈ ಕುರಿತು ಸಹಮತ ವ್ಯಕ್ತಪಡಿಸಿದರು. ಹೀಗಾಗಿ ಇನ್ನಿಲ್ಲವಾದ ಆ ನಟಿ ಬಗ್ಗೆ ಈಗ ಹಾಗೆಲ್ಲ ಹೇಳಿ ಸಂಶಯಿಸುವ ಅಗತ್ಯವಿಲ್ಲ. ಶ್ರೀದೇವಿ ಇನ್ನಿಲ್ಲ ಎಂಬುದಷ್ಟೆ ಈ ಕ್ಷಣದ ಸತ್ಯ.

ಈ ನಡುವೆ, ಈಚೆಗೆ ರಾಜಕೀಯ ಸೇರಿ, ಮಕ್ಕಳ್ ನಿಧಿ ಮಯ್ಯಮ್ ಪಕ್ಷ ಕಟ್ಟಿರುವ ಕಮಲ್ ಹಾಸನ್ ಬರೆದ ಲೇಖನವೊಂದು ಗಮನ ಸೆಳೆಯುವಂತಿದೆ. ತಮಿಳುನಾಡಿನಲ್ಲಿ ರಾಜ್ಯ ಸರ್ಕಾರಿ ಸ್ವಾಮ್ಯದ ಮದ್ಯದಂಗಡಿಗಳ (The Tamilnadu State Marketing Cooperation-TASMAC) ಸಂಖ್ಯೆ ಕಡಿಮೆಗೊಳಿಸುವ ಬಗ್ಗೆ ಆ ಲೇಖನದಲ್ಲಿ ಅವರು ಉಲ್ಲೇಖಿಸಿದ್ದಾರೆ. ಹಾಗಂತ ಅವರು ಪಾನನಿಷೇಧ ಕುರಿತು ವಕಾಲತ್ತನ್ನೇನೂ ಮಾಡಿಲ್ಲ. ವಾಸ್ತವದಲ್ಲಿ ಪಾನನಿಷೇಧ ಸಾಧ್ಯವಿಲ್ಲ ಎಂಬುದು ಅವರ ದನಿ. ರಾಜ್ಯದಲ್ಲಿ ಅಂಚೆ ಕಚೇರಿಗಿಂತ ಹೆಚ್ಚು ಸುಲಭದಲ್ಲಿ ಟಾಸ್ಮಾಕ್ ಮದ್ಯದಂಗಡಿಗಳನ್ನು ಕಾಣಬಹುದು ಎಂದು ಅವರು ವ್ಯಂಗ್ಯವಾಡಿದ್ದಾರೆ. ‘ಮದ್ಯಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸುವುದು ಕಷ್ಟ ಎಂದು ನನ್ನ ಭಾವನೆ. ರಾಜ್ಯದ ಎಲ್ಲರೂ ಮದ್ಯ ಬಿಟ್ಟುಬಿಡಿ ಎಂದು ಹೇಳಲಾಗದು. ಹಾಗೇನಾದರೂ ಪೂರ್ಣವಾಗಿ ಮದ್ಯ ತ್ಯಜಿಸಿದಲ್ಲಿ ಜನರು ಕೊಲೆಯಂಥ ವಿಪರೀತಕ್ಕೂ ಮುಂದಾಗಬಹುದು, ಗದ್ದಲ ಉಂಟುಮಾಡಬಹುದು. ಅದೂ ಅಲ್ಲದೆ, ಜೂಜಿನಂತೆ ರಾತ್ರೋರಾತ್ರಿ ಮದ್ಯವನ್ನು ನಿಷೇಧಿಸಲಾಗದು. ಇಂಥದನ್ನು ಮದ್ಯಪ್ರಿಯರ ದೇಹ ಥಟಕ್ಕನೆ ಜೀರ್ಣಿಸಿಕೊಳ್ಳದು. ಆದರೆ ಮದ್ಯ ಸೇವನೆ ಪ್ರಮಾಣವನ್ನು ಖಂಡಿತವಾಗಿ ತಗ್ಗಿಸಬಹುದು. ಒಂದೊಮ್ಮೆ ಪಾನನಿಷೇಧ ಮಾಡಿದರೆ ಅದು ಸಾರಾಯಿ ಮಾಫಿಯಾಕ್ಕೆ ಅವಕಾಶ ಮಾಡಿಕೊಡುತ್ತದೆ’ ಎಂದು ಕಮಲ್ ಹಾಸನ್ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.

ಅಂದಹಾಗೆ, ಹಿಂದಿನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜಯಲಲಿತಾ ಪಾನನಿಷೇಧದ ಭರವಸೆ ನೀಡಿದ್ದರು. ಅದರಂತೆ, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುಕ್ಷಣವೇ 500 ಟಾಸ್ಮಾಕ್ ಮಳಿಗೆಗಳನ್ನು ಮುಚ್ಚುವ ಆದೇಶ ಹೊರಡಿಸಿದರು. ಅವರು ಇದ್ದಿದ್ದರೆ ಸಂಪೂರ್ಣ ಪಾನನಿಷೇಧ ಮಾಡುತ್ತಿದ್ದರೋ ಏನೋ…

ಈ ಸಾರಾಯಿ ಸಹವಾಸವೇ ಹಾಗಿರಬೇಕು ಮಾರಾಯರೆ, ಬಿಟ್ಟೆನೆಂದರೂ ಬಿಡದ ಮಾಯೆ. ‘ನಾನು ಏನು ಮಾಡಲಿ ಹೇಳಿ. ಎಷ್ಟು ದೂಡಿದರೂ ಬಿಡಲಾರೆ ಎಂದು ಹತ್ತಿರ ಬರುವ ಮಾಯಾವಿ ಇದು’ ಎಂಬುದು ಮದ್ಯಪ್ರಿಯರ ಅಂಬೋಣ ಅಥವಾ ಸಮರ್ಥನೆ. ಹೀಗಾಗಿಯೇ, ಸಾಮಾಜಿಕವಾಗಿ ಮದ್ಯಕ್ಕೆ ಮನ್ನಣೆ ಇರದಿದ್ದರೂ, ಮದ್ಯಚಟಗಾರರ ಸಂಖ್ಯೆ ಕಡಿಮೆಯೇನಿಲ್ಲ. ನಮ್ಮ ಸಮಾಜ ಕುಡುಕ ಎಂದು ಹೀಗಳಿಕೆಯ ದೃಷ್ಟಿಯಿಂದಲೇ ನೋಡುತ್ತದೆ. ಆದರೂ, ಬಾಟಲಿ ಖಾಲಿಯಾಗುತ್ತಲೇ ಇರುತ್ತದೆ! ಸರ್ಕಾರಗಳಿಗೆ ಹೇರಳ ಅಬಕಾರಿ ಆದಾಯವೂ ಲಭಿಸುವುದರಿಂದ ಪಾನನಿಷೇಧಕ್ಕೆ ಹಿಂದೆಮುಂದೆ ನೋಡುತ್ತಾರೆ. ಕರ್ನಾಟಕದಲ್ಲಿ ಕೆಲ ದಿನಗಳ ಹಿಂದೆ ಇಂಥದೊಂದು ವಿಚಾರ ಗುಸುಗುಸು ಎದ್ದಾಗ ಖುದ್ದು ಮುಖ್ಯಮಂತ್ರಿಗಳೇ ಪಾನನಿಷೇಧ ಸಾಧ್ಯವಿಲ್ಲ ಎಂದರಲ್ಲ… ಅಷ್ಟೇ ಅಲ್ಲ, ಈ ಬಾರಿಯ ಬಜೆಟ್​ನಲ್ಲಿ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಶೇ.8ರಷ್ಟು ಹೆಚ್ಚಿಸಿದ್ದಾರೆ. ಆದರೆ ಬಿಹಾರದಲ್ಲಿ ಸದ್ಯ ನಡೆಯುತ್ತಿರುವ ಪ್ರಯೋಗ ಈ ನಿಟ್ಟಿನಲ್ಲಿ ಕುತೂಹಲಕರವಾದುದು. ಅದೂ ಅಲ್ಲದೆ, ಈ ಪ್ರಯೋಗದ ಯಶಸ್ಸು ಅಥವಾ ಅಪಯಶಸ್ಸು ಭವಿಷ್ಯದಲ್ಲಿ ಇತರ ರಾಜ್ಯಗಳ ನಿಲುವಿನ ಮೇಲೂ ಪ್ರಭಾವ ಬೀರಿದರೆ ಅಚ್ಚರಿಯಿಲ್ಲ.

ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ, ನಿತೀಶ್​ಕುಮಾರ್ ಅವರು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಪಾನನಿಷೇಧ ಜಾರಿಗೆ ತರುವುದಾಗಿ ಭರವಸೆ ನೀಡಿದ್ದರು. ಅದರಂತೆ, ಅಧಿಕಾರಕ್ಕೇರಿದ ಕೆಲ ದಿನಗಳಲ್ಲಿ ಭಾಗಶಃ ಮದ್ಯ ನಿಷೇಧ ನೀತಿ ತಂದರು. ನಂತರದಲ್ಲಿ, 2016ರ ಏಪ್ರಿಲ್​ನಲ್ಲಿ ಪೂರ್ಣ ಪಾನನಿಷೇಧ ಜಾರಿಯಾಯಿತು. ಆ ಬಳಿಕ ಬಿಹಾರದಲ್ಲಿ ಒಂದು ರೀತಿಯಲ್ಲಿ ಕೋಲಾಹಲವೇ ಏರ್ಪಟ್ಟಿದೆ. ದಿನನಿತ್ಯ ದಾಳಿಗಳು, ಬಂಧನ, ಅಕ್ರಮ ಮದ್ಯ ವಶ ಮುಂತಾದವು ನಡೆಯುತ್ತಲೇ ಇವೆ. ಒಂದು ಅಂಕಿಅಂಶ ನೋಡಿ. ಕಳೆದ 22 ತಿಂಗಳುಗಳ ಅವಧಿಯಲ್ಲಿ ಅಧಿಕಾರಿಗಳು ಸುಮಾರು ರಾಜ್ಯಾದ್ಯಂತ ಆರು ಲಕ್ಷ ದಾಳಿಗಳನ್ನು ನಡೆಸಿದ್ದಾರೆ ಮತ್ತು 1.08 ಲಕ್ಷ ಮಂದಿಯನ್ನು ಬಂಧಿಸಿದ್ದಾರೆ. ಈ ಯಾದಿ ಉಬ್ಬುತ್ತಲೇ ಇದೆ. ಸುಮಾರು 250 ಕೋಟಿ ರೂ. ಮೌಲ್ಯದ 22 ಲಕ್ಷ ಲೀಟರ್​ನಷ್ಟು ಮದ್ಯದ ಬಾಟಲ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಅಂದರೆ, ಒಂದು ದಿನಕ್ಕೆ ಸರಾಸರಿ 900 ದಾಳಿಗಳು ಹಾಗೂ 161 ಮಂದಿ ಬಂಧನ. ಇದು ಹೀಗೇ ನಡೆಯುತ್ತ ಹೋದಲ್ಲಿ ಬಿಹಾರದ ಜೈಲುಗಳು ಮದ್ಯ ಆರೋಪಿಗಳಿಂದಲೇ ತುಂಬಿಹೋದಾವು!

ಹೀಗಾಗಿ ಮದ್ಯನಿಷೇಧದ ಸಾಧಕ-ಬಾಧಕ, ಯಶಸ್ಸು-ವೈಫಲ್ಯದ ಚರ್ಚೆ ಬಿಹಾರದಲ್ಲಿ ಜೋರಾಗಿಯೇ ನಡೆಯುತ್ತಿದೆ. ಆದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತ್ರ ಈ ವಿಷಯದಲ್ಲಿ ಖಡಕ್ ಆಗಿದ್ದು, ಬಿಗಿ ನಿಲುವು ತಾಳಿದ್ದಾರೆ. ಪಾನನಿಷೇಧ ಜಾರಿಗೆ ಬರುವ ವರ್ಷದ ಮುಂಚೆ, ಅಂದರೆ, 2015-16ರಲ್ಲಿ ಬಿಹಾರದ ಅಬಕಾರಿ ಆದಾಯ ಸುಮಾರು 4 ಸಾವಿರ ಕೋಟಿ ರೂ.ಗಳಷ್ಟಿತ್ತು. ಈಗ ಅಷ್ಟು ಹಣವನ್ನು ಸರ್ಕಾರ ಯಾವ ಮೂಲಗಳಿಂದ ಕ್ರೋಡೀಕರಿಸುತ್ತದೆ ಎಂಬುದು ಪ್ರಶ್ನೆ. ಅಷ್ಟು ಹಣ ಕೊರತೆಯಾದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ತುಟಾಗ್ರತೆಯಾಗುತ್ತದೆ. ಆದರೆ ನಿತೀಶ್ ಕುಮಾರ್ ವಾದವೇ ಬೇರೆ. ಇಲ್ಲಿ ಹಣಕಾಸು ಆದಾಯಕ್ಕಿಂತ ಸಾಮಾಜಿಕ ಪರಿಣಾಮ, ಬದಲಾವಣೆ ಮುಖ್ಯ ಎಂಬುದು ಅವರ ವಾದ. ಪಾನನಿಷೇಧದಿಂದಾಗಿ ಎಷ್ಟೋ ಬಡಕುಟುಂಬಗಳ ಆರೋಗ್ಯ ಹಾಗೂ ಆರ್ಥಿಕ ಸ್ಥಿತಿಗತಿ ಸುಧಾರಿಸಿದೆ ಎಂದು ಅವರು ಬೊಟ್ಟುಮಾಡುತ್ತಾರೆ. ಹೀಗೆಂದೇ, ಎಷ್ಟೇ ಟೀಕೆ ಬಂದರೂ ಹೆಜ್ಜೆ ಹಿಂದಿಡಲು ಅವರು ತಯಾರಿಲ್ಲ. ಈಗಂತೂ, ಪಾನನಿಷೇಧ ಮೇಲ್ವಿಚಾರಣೆಗೆಂದೇ ಐಜಿಪಿ ಹುದ್ದೆಯನ್ನೂ ಸೃಷ್ಟಿಸಿದ್ದಾರೆ. ಅಲ್ಲದೆ, ಗುಪ್ತಚರ ದಳವನ್ನು ಬಲಪಡಿಸಲು ಇನ್ನಷ್ಟು ಸಿಬ್ಬಂದಿ ನೇಮಕಾತಿಗೂ ಯೋಜಿಸಿದ್ದಾರೆ. ಅಂದರೆ, ಬಿಹಾರದಲ್ಲಿ ಮದ್ಯದ ಮೇಲೆ ಮುರಕೊಂಡು ಬೀಳುವ ಕಾರ್ಯ ಮತ್ತಷ್ಟು ವೇಗ ಪಡೆಯಲಿದೆ ಎಂದಾಯಿತು.

ನಿತೀಶ್ ಕುಮಾರ್ ಮಾತ್ರವಲ್ಲ, ಸಮಾಜವಿಜ್ಞಾನಿಗಳು ಕೂಡ ಇದೇ ಧಾಟಿಯಲ್ಲಿ ಮಾತನಾಡುತ್ತಾರೆ. ಕುಡಿತದಿಂದ ಆಗುವ ಆರೋಗ್ಯ ಹಾಗೂ ಸಾಮಾಜಿಕ ಹಾನಿಯನ್ನು ಲೆಕ್ಕಿಸಿದರೆ, ಸರ್ಕಾರಕ್ಕೆ ಬರುವ ಆದಾಯ ಅಂಥ ಮಹಾ ಏನಲ್ಲ ಎಂದು ಇವರು ಹೇಳುತ್ತಾರೆ. ಇದು ಒಂದು ಬಗೆಯ ಲೆಕ್ಕವಾದರೆ, ಇನ್ನು ಕುಡಿದು ಮನೆಗೆ ಬರುವ ಪುರುಷ ಹೆಂಡತಿ, ಮಕ್ಕಳಿಗೆ ಹೊಡೆಯುತ್ತಾನಲ್ಲ, ಆಗ ಅವರ ಕಣ್ಣೀರಿನ ನೋವನ್ನು ಲೆಕ್ಕಹಾಕುವುದಕ್ಕೆ ಯಾವುದಾದರೂ ಮಾನದಂಡ ಇದೆಯಾ? ಸರ್ಕಾರ ಒಂದೆಡೆ, ಸಮಾಜ ಕಲ್ಯಾಣದ ಯೋಜನೆಗಳನ್ನು ದಂಡಿಯಾಗಿ ಜಾರಿಮಾಡುತ್ತ, ಅದೇ ವೇಳೆ, ಆಬಕಾರಿ ಆದಾಯವನ್ನೂ ಗುಡ್ಡೆಹಾಕಬೇಕೆನ್ನುವ ಮನೋಭಾವ ಸರಿಯೇ ಎಂಬುದು ಸಮಾಜವಿಜ್ಞಾನಿಗಳ ಪ್ರಶ್ನೆ. ಒಂದೋ ಹಾವು ಸಾಯಬೇಕು ಇಲ್ಲ ಕೋಲು ಮುರಿಯಬೇಕು.

ಮತ್ತೆ, ಬಿಹಾರದ ವಿಚಾರಕ್ಕೇ ಬರುವುದಾದರೆ, ಅಲ್ಲಿ ಪಾನನಿಷೇಧ ಜಾರಿಯಾದ ನಂತರದಲ್ಲಿ ಅಕ್ರಮ ಸಾರಾಯಿ ಮಾರಾಟ ದಂಧೆಯೂ ಚಿಗಿತುಕೊಂಡಿದೆ ಎಂಬುದಕ್ಕೆ ಹಲವು ನಿದರ್ಶನಗಳು ದೊರೆತಿವೆ. ಇಲ್ಲೂ ಒಂದು ಮಜಾ ಇದೆ. ಎಷ್ಟೋ ಮಂದಿ ಸರ್ಕಾರಿ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಯೇ ಮದ್ಯ ಕುಡಿಯುವಾಗ ಅಥವಾ ಮದ್ಯ ಒಯ್ಯುವಾಗ ಸಿಕ್ಕುಬಿದ್ದಿದ್ದಾರೆ! ಮತ್ತೊಂದೆಡೆ, ಕಳ್ಳಭಟ್ಟಿ ಸೇವಿಸಿ ಹಲವು ಜನರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಮದ್ಯಸೇವನೆ ಚಟ ಬಿಡಿಸುವ ಅನೇಕ ಕೇಂದ್ರಗಳು ಬಂದಿದ್ದರೂ, ಈವರೆಗೆ ಇಂಥ ಕೇಂದ್ರಗಳಿಗೆ ಹೋದವರ ಸಂಖ್ಯೆ ಹತ್ತು ಸಾವಿರವನ್ನೂ ದಾಟುವುದಿಲ್ಲ ಎನ್ನುತ್ತವೆ ಅಂಕಿಅಂಶಗಳು.

ಪಾನನಿಷೇಧ ಜಾರಿಯಲ್ಲಿ ಬಿಹಾರಕ್ಕೆ ಇನ್ನೊಂದು ಸಮಸ್ಯೆಯೂ ಇದೆ. ಅದೆಂದರೆ, ಮದ್ಯಕ್ಕೆ ಕಾನೂನು ಸಮ್ಮತಿ ಇರುವ ಉತ್ತರ ಪ್ರದೇಶ, ಜಾರ್ಖಂಡ ಮತ್ತು ಪಶ್ಚಿಮ ಬಂಗಾಳಗಳ ಜತೆ ಅದು ಗಡಿ ಹಂಚಿಕೊಂಡಿದೆ. ಇದು ಸಾಲದೆಂಬಂತೆ, ನೇಪಾಳದೊಂದಿಗೆ 1,751 ಕಿಮೀ ಉದ್ದದ ಗಡಿ ಹೊಂದಿದೆ. ಹೀಗಾಗಿ ಎಲ್ಲ ಕಡೆಯಿಂದಲೂ ಮದ್ಯ ಕಳ್ಳಸಾಗಣೆದಾರರು ಬಿಹಾರಕ್ಕೆ ತಲೆನೋವಾಗಿದ್ದಾರೆ. ಈ ದಂಧೆಯನ್ನು ನಿಯಂತ್ರಿಸಲು ಅಗಾಧ ಪ್ರಮಾಣದ ಸಿಬ್ಬಂದಿ ಬೇಕಾಗುತ್ತಾರೆ. ಇನ್ನೊಂದೆಡೆ, ಆರ್​ಜೆಡಿಯಂಥ ವಿರೋಧ ಪಕ್ಷಗಳು ಸರ್ಕಾರದ ನೀತಿಗೆ ವಿರೋಧ ವ್ಯಕ್ತಪಡಿಸುತ್ತಿವೆ. ಅಂತೂ, ನಿತೀಶ್​ಗೆ ಮದ್ಯನಿಷೇಧದ ದಾರಿಯಲ್ಲಿ ಬೆಟ್ಟದಷ್ಟು ಸವಾಲುಗಳಿವೆ. ಆದರೆ ರಾಜ್ಯದ ಮಹಿಳೆಯರು ಪರವಾಗಿ ನಿಂತಿರುವುದು ನಿತೀಶ್​ಗೆ ಪ್ಲಸ್ ಪಾಯಿಂಟ್.

ಕೆಲವರ ಪ್ರಕಾರ, ಸಂಪೂರ್ಣ ಪಾನನಿಷೇಧ ಎಂಬುದು ಒಂದು ಆದರ್ಶ ಪರಿಕಲ್ಪನೆಯಷ್ಟೆ, ವಾಸ್ತವದಲ್ಲಿ ಪೂರ್ಣವಾಗಿ ಜಾರಿ ಅಸಾಧ್ಯ. ಗುಜರಾತಿನಲ್ಲಿ ಸ್ವಾತಂತ್ರ್ಯ ಬಂದ ಲಾಗಾಯ್ತಿನಿಂದಲೂ ಪಾನನಿಷೇಧ ಜಾರಿಯಲ್ಲಿದೆ. ಆದರೆ ಅಲ್ಲಿ ಅಕ್ರಮವಾಗಿ ಮದ್ಯ ಸಿಗುತ್ತದೆ ಎಂಬುದನ್ನು ಈ ಮಾತಿಗೆ ಸಮರ್ಥನೆಯಾಗಿ ನೀಡಲಾಗುತ್ತದೆ. ಬಿಹಾರದಲ್ಲೇನಾದರೂ ಈ ಪ್ರಯತ್ನ ಯಶಸ್ಸು ಕಂಡಲ್ಲಿ, ‘ಬಿಹಾರ ಮಾದರಿ’ಯಾಗಿ ದಾಖಲಾಗಬಹುದು.

ಕೊನೇ ಮಾತು: ಕೆಲವರಿಗೆ ಸಿರಿವಂತಿಕೆಯ ಮದ, ಇನ್ನು ಕೆಲವರಿಗೆ ತಾನೇ ತಿಳಿವಳಿಕಸ್ಥನೆಂಬ ಅಹಂನ ನಶೆ, ಮತ್ತೆ ಕೆಲವರಿಗೆ ಮದ್ಯದ ಅಮಲು… ಒಟ್ಟಿನಲ್ಲಿ ಇದು ಮುಗಿಯದ ಕಥೆ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top