More

    ಮೋದಿ ಬಂದಾಗ ರಸ್ತೆ ರಿಪೇರಿ ಮಾಡಿದ್ದು ತಪ್ಪಾ?

    ಮೋದಿ ಬಂದಾಗ ರಸ್ತೆ ರಿಪೇರಿ ಮಾಡಿದ್ದು ತಪ್ಪಾ?ಸರ್ಕಾರದ ಕೆಲಸಗಳು, ನಿರ್ಣಯಗಳು ಎಂದರೆ ಜನರಲ್ಲಿ ಅನಾದರ, ಜುಗುಪ್ಸೆ ಮೂಡಿಬಿಟ್ಟಿದೆ. ಇದಕ್ಕೆಂದೇ, ಹಿಂದಿನ ಬ್ರಿಟಿಷರ ಆಳ್ವಿಕೆಯೇ ಇದಕ್ಕಿಂತ ಚೆನ್ನಾಗಿತ್ತು ಎಂದು ಎಷ್ಟೋ ಬಾರಿ ಕೆಲವರು ಗೊಣಗುವುದು. ಆಡಳಿತ ವ್ಯವಸ್ಥೆಯ ಬಗ್ಗೆ ಜನರಲ್ಲಿ ಒಂದು ಬಗೆಯ ನೆಗೆಟಿವ್ ಇಮೇಜ್ ಕೂತುಬಿಟ್ಟಿದೆ. ಇದನ್ನು ಬದಲಿಸದಿದ್ದಲ್ಲಿ ಕಷ್ಟ.

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ಜೂನ್ 20 ಮತ್ತು 21ರಂದು ರಾಜ್ಯಕ್ಕೆ ಭೇಟಿ ನೀಡಿದ್ದರು. ಜೂನ್ 20ರಂದು ಬೆಂಗಳೂರಿನಲ್ಲಿ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು; ಜೂನ್ 21ರಂದು ಮೈಸೂರಿನಲ್ಲಿ ಅರಮನೆ ಆವರಣದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ನೇತೃತ್ವ ವಹಿಸಿ, 45 ನಿಮಿಷಗಳ ಕಾಲ ವಿವಿಧ ಯೋಗಭಂಗಿಗಳನ್ನು ಸುಲಲಿತವಾಗಿ ಪ್ರದರ್ಶಿಸಿ ಎಲ್ಲರನ್ನೂ ಬೆರಗುಗೊಳಿಸಿದರು. ಅವರೊಟ್ಟಿಗೆ ಸಾವಿರಾರು ಜನರು ಯೋಗಾಸನಗಳನ್ನು ಪ್ರದರ್ಶಿಸಿದರು. ಮೋದಿ ಬರುತ್ತಾರೆಂದರೆ ಕೇಳಬೇಕೆ, ಅಭೂತಪೂರ್ವ ಭದ್ರತಾ ವ್ಯವಸ್ಥೆ ಇರಲೇಬೇಕಾಗುತ್ತದೆ. ಅದರಲ್ಲೂ ಭಯೋತ್ಪಾದಕರ ಹಿಟ್ ಲಿಸ್ಟ್​ನಲ್ಲಿ ಇರುವ ಪ್ರಮುಖ ಜಾಗತಿಕ ನಾಯಕರ ಸಾಲಿನಲ್ಲಿ ಮೋದಿ ಹೆಸರು ಸಹ ಮುಂಚೂಣಿಯಲ್ಲಿದೆ. ಹೀಗಾಗಿ, ಪ್ರಧಾನಿಯ ಭದ್ರತೆಯ ಹೊಣೆ ಹೊತ್ತಿರುವ ವಿಶೇಷ ಭದ್ರತಾ ದಳ(ಎಸ್​ಪಿಜಿ)ಯ ಆಣತಿ ಇಲ್ಲದೆ ಇಂಥ ಕಾರ್ಯಕ್ರಮಗಳಲ್ಲಿ ಒಂದು ಹುಲ್ಲುಕಡ್ಡಿಯೂ ಅಲುಗಾಡಲು ಅವಕಾಶವಿಲ್ಲ. ಇದರ ಜತೆಗೆ, ಇನ್ನೊಂದು ಅಂಶ ಗಮನ ಸೆಳೆಯಿತು. ಅದೆಂದರೆ ಎರಡೂ ನಗರಗಳಲ್ಲಿ ಮೋದಿ ಸಂಚರಿಸುವ ರಸ್ತೆಗಳನ್ನು ತರಾತುರಿಯಲ್ಲಿ ಡಾಂಬರೀಕರಣ ಮಾಡಿ ಸುಸಜ್ಜಿತವಾಗಿ ವ್ಯವಸ್ಥೆಗೊಳಿಸಲಾಯಿತು.

    ಬೆಂಗಳೂರಿನ ಮಟ್ಟಿಗೆ ಹೇಳುವುದಾದರೆ, ಪ್ರಧಾನಿ ಸಂಚರಿಸುವ 14 ಕಿ.ಮೀ ರಸ್ತೆಗಳನ್ನು ಗುಂಡಿಮುಕ್ತಗೊಳಿಸಲು ಬಿಬಿಎಂಪಿ 23.5 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣ ಮಾಡಿತ್ತು. ಇದಕ್ಕೂ ಕೆಲ ದಿನ ಹಿಂದೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಬೆಂಗಳೂರಿಗೆ ಬಂದಾಗಲೂ ಕೆಲ ರಸ್ತೆಗಳನ್ನು ಚೆಂದಗೊಳಿಸಲಾಗಿತ್ತು. ಯಾರೇ ಗಣ್ಯರು ಬಂದರೂ ಇಂಥ ಕ್ರಮ ಸಹಜ. ಹೀಗೆ ರಸ್ತೆಗಳನ್ನು ಕ್ಷಿಪ್ರವಾಗಿ ಚೆಂದಗೊಳಿಸಿದ್ದರಿಂದ ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಂಗ್ಯೋಕ್ತಿಗಳು ಸಹ ಹರಿದಾಡಿದವು. ಮೋದಿ ಸಂಚರಿಸುವ ರಸ್ತೆಗಳನ್ನು ಮಾತ್ರ ಚೆಂದಗೊಳಿಸುವ ಉತ್ಸಾಹ ಯಾಕೆ? ಉಳಿದೆಡೆ ರಸ್ತೆ ರಿಪೇರಿಗೆ ಮಳೆ ನೆವ ಹೇಳುವ ನಿಮಗೆ ಈಗ ಮಳೆ ತೊಂದರೆ ಕೊಡಲಿಲ್ಲವೆ? ಬೆಂಗಳೂರಿನಲ್ಲಿ ನೂರಾರು ಕಿಲೋಮೀಟರ್ ರಸ್ತೆ ಇದ್ದು, ಎಲ್ಲವನ್ನೂ ದುರಸ್ತಿ ಮಾಡಿ ಎಂಬ ದನಿಗಳೂ ಕೇಳಿಬಂದವು. ಇಷ್ಟೆಲ್ಲ ನಡೆಯುತ್ತಿರುವಾಗಲೇ, ಬಿಬಿಎಂಪಿ ದುರದೃಷ್ಟವೋ ಏನೋ, ಆಗತಾನೇ ಡಾಂಬರೀಕರಣವಾಗಿದ್ದ ರಸ್ತೆಯೊಂದರಲ್ಲಿ ಹೊಂಡವೊಂದು ಗೋಚರಿಸಿ ಕೋಲಾಹಲವೇ ಎದ್ದಹೋಯಿತು. ಅದು ಮೋದಿ ಸಂಚರಿಸಿದ್ದ ರಸ್ತೆಯೇ ಎಂದು ಸಹ ಹೇಳಲಾಯಿತು. ಇದು ರಾಜ್ಯ ಸರ್ಕಾರಕ್ಕೆ ಮುಜುಗರದ ವಿಷಯವಲ್ಲವೆ? ಹೀಗಾಗಿ ಸರ್ಕಾರ ತನಿಖೆಗೆ ಆದೇಶಿಸಿತು; ದೆಹಲಿಯಿಂದ ಪ್ರಧಾನಿ ಕಚೇರಿ ಕೂಡ ಈ ಬಗ್ಗೆ ವರದಿ ಕೇಳಿತು ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಯಿತು. ಒಟ್ಟಿನಲ್ಲಿ ಒಂದು ರಸ್ತೆಹೊಂಡ ದೊಡ್ಡ ಸಂಚಲನವನ್ನೇ ಉಂಟುಮಾಡಿಬಿಟ್ಟಿತು. ಗಲಿಬಿಲಿಗೊಂಡ ಬಿಬಿಎಂಪಿ ತನಿಖೆ ನಡೆಸಿ ವರದಿಯನ್ನು ಪ್ರಧಾನಮಂತ್ರಿ ಕಚೇರಿಗೆ ಸಹ ಸಲ್ಲಿಸಿತು. ನರೇಂದ್ರ ಮೋದಿ ಅವರ ಸಂಚಾರಕ್ಕೆಂದು ಡಾಂಬರೀಕರಣ ಮಾಡಿದ ರಸ್ತೆಗಳಲ್ಲಿ ಗುಂಡಿ ಬಿದ್ದಿಲ್ಲ. 2021ರ ನವೆಂಬರ್​ನಲ್ಲಿ ಅಭಿವೃದ್ಧಿ ಮಾಡಿದ ಸಂಪರ್ಕ ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಇಲ್ಲಿ ನಿರುಪಯುಕ್ತ ನೀರಿನ ಕೊಳವೆಯಲ್ಲಿ ನೀರು ಬರುತ್ತಿದ್ದರಿಂದ ರಸ್ತೆ ಕಿತ್ತುಬಂದಿತ್ತು. ಮೇ ತಿಂಗಳಲ್ಲಿ ಗುಂಡಿ ಮುಚ್ಚಿದರೂ ಪುನಃ ಗುಂಡಿ ಬಿದ್ದಿದೆ. ಈ ಬಗ್ಗೆ ಮೂವರು ಎಂಜಿನಿಯರ್​ಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಆ ವರದಿಯಲ್ಲಿ ಹೇಳಿತು. ಅಂತೂ, ಅಲ್ಲಿಗೆ ವಿಷಯ ಮುಕ್ತಾಯವಾಯಿತು ಎನ್ನಿ. ಮೈಸೂರಿನಲ್ಲಿ ಸಹ ಇದೇ ರೀತಿಯ ಚರ್ಚೆ ಉದ್ಭವಿಸಿ, ಸಂಸದ ಪ್ರತಾಪ್ ಸಿಂಹ ಅವರು ಪಾಲಿಕೆ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.

    ಗಣ್ಯರು ಬರುತ್ತಾರೆಂದು ರಸ್ತೆ ರಿಪೇರಿ ಮಾಡಿದಲ್ಲಿ ಅಥವಾ ಚೆಂದಗೊಳಿಸಿದಲ್ಲಿ ಅದನ್ನು ತಪ್ಪು ಎನ್ನಲಾಗದು. ಒಂದು ಲೆಕ್ಕದಲ್ಲಿ ಹಾಗೆ ಮಾಡದಿದ್ದರೇ ತಪ್ಪು. ಆದರೆ ವಿಷಯ ಇಷ್ಟು ಸರಳವಲ್ಲ. ಇದು ನಮ್ಮ ಒಟ್ಟಾರೆ ಆಡಳಿತ ವ್ಯವಸ್ಥೆಯ ಕಾರ್ಯವೈಖರಿಗೂ ಕನ್ನಡಿ ಹಿಡಿಯುವಂಥದ್ದಾಗಿರುವುದರಿಂದ ಈ ಚರ್ಚೆ ನಡೆಯುತ್ತಲೇ ಇರುತ್ತದೆ. ಬೆಂಗಳೂರನ್ನೇ ತೆಗೆದುಕೊಂಡರೆ, ರಸ್ತೆಗುಂಡಿ ಹಾಗೂ ಅವ್ಯವಸ್ಥಿತ ರಸ್ತೆಗಳ ವಿಷಯ ಲಾಗಾಯ್ತಿನಿಂದ ಇದ್ದದ್ದೇ. ಎಷ್ಟೋ ಮಂದಿ ರಸ್ತೆಗುಂಡಿಯಿಂದಾಗಿ ಪ್ರಾಣಕಳೆದುಕೊಂಡರೆ ಗಾಯಗೊಂಡವರು ಹಲವರು. ಖುದ್ದು ಹೈಕೋರ್ಟ್ ಈ ವಿಚಾರದಲ್ಲಿ ಅನೇಕ ಬಾರಿ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದೆ; ಬಿಬಿಎಂಪಿ ಉನ್ನತಾಧಿಕಾರಿಗಳನ್ನು ಕೋರ್ಟಿಗೆ ಕರೆಸಿದೆ. ಸಾವಿರಾರು ಕಿಲೋಮೀಟರ್ ವ್ಯಾಪ್ತಿಯ ರಸ್ತೆಗಳನ್ನು ಒಳಗೊಂಡ ಬೆಂಗಳೂರಿನಂತಹ ನಗರದ ರಸ್ತೆಗುಂಡಿಗಳನ್ನೆಲ್ಲ ಒಂದೆರಡು ದಿನಗಳಲ್ಲಿ ಮುಚ್ಚಿಬಿಡಬೇಕು; ರಸ್ತೆಯನ್ನೆಲ್ಲ ಡಾಂಬರೀಕರಣ ಮಾಡಿಬಿಡಬೇಕು ಎಂದು ನಿರೀಕ್ಷಿಸುವುದು ಅವಾಸ್ತವವಾಗುತ್ತದೆ. ಇನ್ನೊಂದೆಡೆ, ಈ ಮಹಾನಗರದಲ್ಲಿ ವಾಹನಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುತ್ತದೆ. ದ್ವಿಚಕ್ರ, ತ್ರಿಚಕ್ರ, ಚತುಷ್ಚಕ್ರ, ಹೀಗೆ ಎಲ್ಲ ಬಗೆಯ ವಾಹನಗಳು ಸೇರಿ ಈಗ ಸುಮಾರು ಒಂದು ಕೋಟಿಯಷ್ಟು ವಾಹನಗಳು ಇಲ್ಲಿವೆ ಎಂದರೆ ರಸ್ತೆ ಮೇಲಿನ ಒತ್ತಡ ಹಾಗೂ ದಟ್ಟಣೆಯನ್ನು ಊಹಿಸಬಹುದು. ಹಾಗಂತ ಅನಿರ್ದಿಷ್ಟ ಕಾಲ ಅವ್ಯವಸ್ಥೆಯನ್ನು ಹಾಗೇಬಿಡುವುದು ಕೂಡ ಅಕ್ಷಮ್ಯ. ಆಯಾ ಕಾಲಕ್ಕೆ ಯಾವ ಕೆಲಸ ಆಗಬೇಕೋ ಅದನ್ನು ಮಾಡಿ ನಗರ ವ್ಯವಸ್ಥೆಯನ್ನು ಚೆನ್ನಾಗಿಡಬೇಕಾದುದು ಸ್ಥಳೀಯಾಡಳಿತಗಳ ಹೊಣೆ. ಈ ವಿಷಯದಲ್ಲಿ ದುಡ್ಡುಕಾಸಿನ ತೊಂದರೆಯೇನಾದರೂ ಇದ್ದಲ್ಲಿ ಅದನ್ನು ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿ ಬಗೆಹರಿಸಿಕೊಳ್ಳಬೇಕೇ ಹೊರತು ಸಬೂಬುಗಳನ್ನು ನೀಡಲಾಗದು; ಅದು ಜನರಿಗೆ ಸಂಬಂಧಿಸಿದ ವಿಷಯವಲ್ಲ. ಕಾಮಗಾರಿಗಳ ವಿಷಯದಲ್ಲಿ ಎಡವಿದರೆ ಏನಾಗುತ್ತದೆ ಎಂಬುದಕ್ಕೆ ಬೆಂಗಳೂರಿನಲ್ಲಿ ಈಗ ನಡೆಯುತ್ತಿರುವ ಒಳಚರಂಡಿ ಕೆಲಸವೇ ಸಾಕ್ಷಿ. ಸಮಯಕ್ಕೆ ಸರಿಯಾಗಿ ಈ ಕಾಮಗಾರಿ ಮುಗಿಯದ್ದರಿಂದ ಈಗ ಮಳೆಗಾಲದಲ್ಲಿ ಎಷ್ಟೋ ರಸ್ತೆಗಳು ರಾಡಿಯೆದ್ದು ಜನರು ಫಜೀತಿಪಡುವಂತಾಗಿದೆ; ಎಷ್ಟೋ ಕಡೆ ಜನರಿಂದ ಪ್ರತಿಭಟನೆಗಳು ಸಹ ನಡೆದಿವೆ. ಹಾಗಂತ, ಉತ್ತಮವಾಗಿರುವ ಫುಟ್​ಪಾತ್ ತೆಗೆದು ಹೊಸದಾಗಿ ನಿರ್ವಿುಸುವ ಸನ್ನಿವೇಶಗಳೂ ಬೆಂಗಳೂರಿನಲ್ಲಿ ಆಗಾಗ ಕಣ್ಣಿಗೆ ಬೀಳುತ್ತಿರುತ್ತದೆ. ಈ ಕರಾಮತ್ತಿನ ಹಿಂದಿನ ಉದ್ದೇಶವೇನೆಂದು ಬಿಡಿಸಿ ಹೇಳಬೇಕಿಲ್ಲ.

    ಸರ್ಕಾರದ ಕೆಲಸಗಳು, ನಿರ್ಣಯಗಳು ಎಂದರೆ ಜನರಲ್ಲಿ ಅನಾದರ, ಜುಗುಪ್ಸೆ ಮೂಡಿಬಿಟ್ಟಿದೆ. ಇದಕ್ಕೆಂದೇ, ಹಿಂದಿನ ಬ್ರಿಟಿಷರ ಆಳ್ವಿಕೆಯೇ ಇದಕ್ಕಿಂತ ಚೆನ್ನಾಗಿತ್ತು ಎಂದು ಎಷ್ಟೋ ಬಾರಿ ಕೆಲವರು ಗೊಣಗುವುದು. ಆಡಳಿತ ವ್ಯವಸ್ಥೆಯ ಬಗ್ಗೆ ಜನರಲ್ಲಿ ಒಂದು ಬಗೆಯ ನೆಗೆಟಿವ್ ಇಮೇಜ್ ಕೂತುಬಿಟ್ಟಿದೆ. ಇದನ್ನು ಬದಲಿಸದಿದ್ದಲ್ಲಿ ಕಷ್ಟ. ಒಂದು ಉದಾಹರಣೆ ನೀಡುವುದಾದರೆ- ಶಾಸಕರ ಸಂಬಳ, ಭತ್ಯೆ ಏರಿಸಿದರೆ ಕೂಡಲೇ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗುತ್ತದೆ. ದೆಹಲಿ ಸರ್ಕಾರ ಈಚೆಗೆ ಶಾಸಕರ ವೇತನ, ಭತ್ಯೆಯನ್ನು ಪರಿಷ್ಕರಿಸಿತು. ಹೊಸ ಪದ್ಧತಿ ಪ್ರಕಾರ, ಪ್ರತಿ ಶಾಸಕರಿಗೆ 90 ಸಾವಿರ ರೂ. ವೇತನ ಸಿಗಲಿದೆ (ಈ ಮೊದಲು 54 ಸಾವಿರ ರೂ. ಇತ್ತು). ಉಳಿದ ಕೆಲ ರಾಜ್ಯಗಳಲ್ಲಿ ಶಾಸಕರ ವೇತನ ಪ್ರಮಾಣ ಹೀಗಿದೆ: ತೆಲಂಗಾಣ-2.5 ಲಕ್ಷರೂ., ಕರ್ನಾಟಕ- 2.05 ಲಕ್ಷ ರೂ., ಉತ್ತರಾಖಂಡ-1.82 ಲಕ್ಷ ರೂ., ಕೇರಳ- 90 ಸಾವಿರ ರೂ.

    ಬದಲಾದ ಕಾಲಘಟ್ಟದಲ್ಲಿ ಸರ್ಕಾರಗಳನ್ನು ಕಾರ್ಪೆರೇಟ್ ಕಂಪನಿಗಳ ರೀತಿಯಲ್ಲಿ ನಿರ್ವಹಿಸಬೇಕು ಎಂದು ಕೆಲವರು ಪ್ರತಿಪಾದಿಸುತ್ತಾರೆ. ಅಂದರೆ, ಕೆಲಸದಲ್ಲಿ ಶಿಸ್ತು, ಕಾರ್ಯದಕ್ಷತೆ, ಉತ್ತರದಾಯಿತ್ವ, ಡೆಡ್​ಲೈನ್​ನಲ್ಲಿ ಕೆಲಸ ಇತ್ಯಾದಿ ವಿಚಾರಗಳಲ್ಲಿ ಹೀಗೆ ಅಪೇಕ್ಷಿಸಲಾಗುತ್ತದೆ. ಈಗ ನಮ್ಮ ಸರ್ಕಾರಗಳಲ್ಲಿ ಇವನ್ನೆಲ್ಲ ದುರ್ಬೀನು ಹಾಕಿಕೊಂಡು ಹುಡುಕಬೇಕಷ್ಟೆ. ಯಾವ ಕೆಲಸಕ್ಕೂ ಉತ್ತರದಾಯಿತ್ವ ಇಲ್ಲ. ಅವರನ್ನು ಕೇಳಿದರೆ ಇವರತ್ತ ಬೊಟ್ಟು. ಇವರನ್ನು ಕೇಳಿದರೆ ಮತ್ತೊಬ್ಬರತ್ತ ಕೈಮಾಡಿದರಾಯಿತು. ಇನ್ನು ಗಡುವಿನಲ್ಲಿ ಕೆಲಸಗಳು ಮುಗಿಯುವುದು ಬಹಳ ಕಡಿಮೆ. ಇದರಿಂದ ಯೋಜನಾವೆಚ್ಚ ಹೆಚ್ಚುವುದಲ್ಲದೆ, ಸಮಯವೂ ವ್ಯರ್ಥವಾಗುತ್ತದೆ. ಯೋಜನೆ ಜಾರಿ ನಿಧಾನವಾದಷ್ಟು ಜನರಿಗೆ ಯೋಜನೆಯ ಫಲ ದೊರಕದೆ ಮೂಲೋದ್ದೇಶ ಈಡೇರುವುದಿಲ್ಲ. ಇನ್ನು, ಶಾಸಕರ ವೇತನ ವಿಷಯಕ್ಕೇ ಬರುವುದಾದರೆ, ಸರ್ಕಾರವನ್ನು ಒಂದು ಕಾರ್ಪೆರೇಟ್ ಕಂಪನಿ ಎಂದು ಪರಿಗಣಿಸಿದರೆ, ಶಾಸಕರನ್ನು ಅಲ್ಲಿನ ವಿವಿಧ ಹಂತಗಳ ಅಧಿಕಾರಿಗಳು ಎಂದು ಭಾವಿಸಿದರೆ, ಇಷ್ಟು ಸಂಬಳ ನೀಡುವುದು ಮಹಾ ದೊಡ್ಡದೇನೂ ಅಲ್ಲ (ಕರ್ನಾಟಕವನ್ನೇ ತೆಗೆದುಕೊಂಡರೆ 224 ವಿಧಾನಸಭಾ ಸದಸ್ಯರು ಮತ್ತು 75 ವಿಧಾನಪರಿಷತ್ ಸದಸ್ಯರು). ಸ್ವಲ್ಪ ಲಘುಧಾಟಿಯಲ್ಲಿ ಹೇಳುವುದಾದರೆ, ಶಾಸಕರಿಗೆ ಆದರಾತಿಥ್ಯಕ್ಕೇ ವೇತನದ ಹಣ ಸಾಕಾಗುವುದಿಲ್ಲ. ಶಾಸಕರ ಕಚೇರಿ ಎಂದರೆ ಜನರಿಂದ ಗಿಜಿಗುಡುತ್ತಿರುತ್ತದೆ. ಬಂದವರಿಗೆ ಕನಿಷ್ಠ ಒಂದು ಚಾ-ಕಾಫಿಯನ್ನಾದರೂ ಕೊಡದಿದ್ದರೆ ಹೇಗೆ? ಶಾಸಕರು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದಲ್ಲಿ ಅವರ ವೇತನ, ಭತ್ಯೆಗೆ ಸಂಬಂಧಿಸಿ ಯಾರೂ ಆಕ್ಷೇಪದ ಬೆರಳು ತೋರಲಾರರು. ಆದರೆ ಎಷ್ಟು ಶಾಸಕರು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಾರೆ ಎಂಬುದು ಮುಖ್ಯ. ಹೀಗಾಗಿಯೇ ಇವರ ವೇತನ ಸವಲತ್ತು ವಿಷಯ ಬಂದಾಗ ಜನರು ಭಿನ್ನ ಧಾಟಿಯಲ್ಲಿ ಮಾತಾಡುವುದು. ಕೆಲ ಶಾಸಕರಿಗೆ ಸರ್ಕಾರಿ ಸಂಬಳ ಎನ್ನುವುದು ನಾಮಮಾತ್ರ. ಅದು ಬೇರೆ ವಿಚಾರ ಎನ್ನಿ!

    ಇನ್ನು, ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲ, ಮುಖ್ಯಮಂತ್ರಿ, ಇನ್ನಿತರ ಗಣ್ಯರ ಸರ್ಕಾರಿ ಕಚೇರಿಗಳ ನವೀಕರಣ ವಿಚಾರ ಸಹ ಆಗಾಗ ಚರ್ಚೆಯಾಗುವುದುಂಟು. ಆರ್​ಟಿಐನಡಿ ಪಡೆದ ಮಾಹಿತಿಯನ್ನು ಯಾರಾದರೂ ಬಹಿರಂಗಪಡಿಸಿ ಮಾಧ್ಯಮಗಳಲ್ಲಿ ಅದು ವರದಿಯಾದಾಗ, ಇಷ್ಟು ಖರ್ಚು ಮಾಡಬೇಕಿತ್ತಾ? ಜನರ ತೆರಿಗೆ ಹಣ ಪೋಲಲ್ಲವಾ ಎಂದು ಕೆಲವರು ತಕರಾರು ಎತ್ತುವುದುಂಟು. ಆದರೆ ಒಂದು ವಿಷಯ ಗಮನಿಸಬೇಕು. ಉನ್ನತ ಹುದ್ದೆಗಳವರ ಕಚೇರಿ ಎಂದರೆ, ದೇಶವಿದೇಶಗಳವರು ಭೇಟಿನೀಡುತ್ತಿರುತ್ತಾರೆ; ವಿವಿಧ ರಂಗಗಳ ಗಣ್ಯರು ಬರುತ್ತಿರುತ್ತಾರೆ. ಅಂಥ ಆಫೀಸ್​ಗಳನ್ನು ಒಪ್ಪಓರಣವಾಗಿ, ಐಷಾರಾಮಿಯಾಗಿ ಇಟ್ಟುಕೊಂಡರೆ ತಪ್ಪೇನು? ಆದರೆ ನವೀಕರಣ ಅಥವಾ ಪುನರ್ ನಿರ್ವಣದ ಹೆಸರಿನಲ್ಲಿ ದುಂದುವೆಚ್ಚ ಆಗಬಾರದಷ್ಟೆ.

    ‘ಉಕ್ಕಿನ ಮನುಷ್ಯ’ಎಂದೇ ಖ್ಯಾತರಾದ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ‘ಭಾರತದ ನಾಗರಿಕ ಸೇವೆಗಳ ಪಿತಾಮಹ’ ಎಂದೂ ಕರೆಯಲಾಗುತ್ತದೆ. 1947ರ ಏಪ್ರಿಲ್ 21ರಂದು ದೆಹಲಿಯ ಮೆಟ್​ಕಾಫ್ ಹೌಸ್​ನಲ್ಲಿ ನಾಗರಿಕ ಸೇವೆಗಳ ಪ್ರೊಬೆಷನರಿಗಳನ್ನು ಉದ್ದೇಶಿಸಿ (ಇದೇ ಕಾರಣಕ್ಕೆ ಪ್ರತಿ ವರ್ಷ ಏಪ್ರಿಲ್ 21ನ್ನು ನಾಗರಿಕ ಸೇವಾ ದಿನವಾಗಿ ಆಚರಿಸಲಾಗುತ್ತದೆ) ಅವರು ಹೇಳಿದ ಮಾತುಗಳು ಆಡಳಿತಗಾರರಿಗೆ ಇಂದಿಗೂ ತೋರುಗಂಬಗಳಾಗಿ ನಿಂತಿವೆ: ‘..ಎಲ್ಲಕ್ಕಿಂತ ಹೆಚ್ಚಾಗಿ ನೀವು ಆಡಳಿತದಲ್ಲಿ ನಿಷ್ಪಕ್ಷಪಾತತನ ಹಾಗೂ ಭ್ರಷ್ಟಾಚಾರರಹಿತ ವ್ಯಕ್ತಿತ್ವವನ್ನು ಕಾಪಾಡಿಕೊಂಡು ಹೋಗಬೇಕಾಗುತ್ತದೆ. ನಾಗರಿಕ ಸೇವಾ ಅಧಿಕಾರಿ ರಾಜಕೀಯದಲ್ಲಿ ತೊಡಗಲೇಬಾರದು. ಮತ್ತು ಕೋಮುಜಗಳದಲ್ಲಿ ಭಾಗಿಯಾಗಬಾರದು. ಈ ಹಾದಿಯಿಂದ ವಿಮುಖವಾದರೆ ಈ ಸಾರ್ವಜನಿಕ ಸೇವೆಯ ಘನತೆ ತಗ್ಗುತ್ತದೆ. ಅತ್ಯುಚ್ಚ ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳದಿದ್ದರೆ ಯಾವುದೇ ಸೇವೆಯು ಆ ಹೆಸರಿನಿಂದ ಕರೆಸಿಕೊಳ್ಳಲು ಅರ್ಹತೆ ಹೊಂದಿರುವುದಿಲ್ಲ. ಯಾವುದೇ ಬಾಹ್ಯ ಪ್ರತಿಫಲದ ಅಪೇಕ್ಷೆ ಇಲ್ಲದೆ ನಿಮ್ಮ ಸೇವೆಯನ್ನು ನಿರ್ಭೀತಿಯಿಂದ ನಿರ್ವಹಿಸಿ. ನೀವು ಭಾರತೀಯ ಆಡಳಿತ ಸೇವೆಯ ಪಥನಿರ್ವಪಕರು. ನೀವು ನಿಮ್ಮ ಸಾಮರ್ಥ್ಯ ಹಾಗೂ ವ್ಯಕ್ತಿತ್ವದ ಹೊಳಪಿನಿಂದ ನಿರ್ವಿುಸುವ ಅಡಿಪಾಯದ ಮೇಲೆ ಇದರ ಭವಿಷ್ಯವು ನಿಂತಿರುತ್ತದೆ.’ ಎಂಥ ಮಾತುಗಳು! ಅದಕ್ಕೇ ಅವರು ಸರ್ದಾರ್ ಪಟೇಲ್!

    ಕೊನೇ ಮಾತು: ಅಧಿಕಾರಿಗಳು ವ್ಯವಸ್ಥೆಯನ್ನು ಸುಧಾರಿಸದಿದ್ದರೂ ಪರವಾಗಿಲ್ಲ, ಇರುವ ವ್ಯವಸ್ಥೆಯನ್ನು ಹಾಳುಮಾಡದಿದ್ದರೆ ಅದೇ ದೊಡ್ಡ ಉಪಕಾರ!

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts