Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಹೋರಾಟದ ಹಾದಿ ಹೀಗೂ ಇರಬಹುದು…

Saturday, 17.03.2018, 3:03 AM       No Comments

| ನಾಗರಾಜ ಇಳೆಗುಂಡಿ

ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಸಮಸ್ಯೆಗಳೂ ಅಷ್ಟೇ ವೈವಿಧ್ಯಮಯ. ಹೀಗಾಗಿ ನಿರಂತರವಾಗಿ ಪ್ರತಿಭಟನೆ, ಹೋರಾಟ ಇತ್ಯಾದಿಗಳು ನಡೆಯುತ್ತಲೇ ಇರುತ್ತವೆ. ಮಹಾರಾಷ್ಟ್ರ ರೈತರ ಹೋರಾಟ ಈ ನಿಟ್ಟಿನಲ್ಲಿ ಒಂದು ಮಾದರಿಯಾಗಬಹುದು. ಇಲ್ಲಿ ರೈತರು ಹಾಗೂ ಸರ್ಕಾರ ಎರಡೂ ಕಡೆಗಳಿಂದ ವಿವೇಚನೆಯ ಮಾತು-ಕೃತಿ ಹೊಮ್ಮಿದ್ದು ವಿಶೇಷ.

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ದಿನಾಂಕ ಯಾವುದೇ ದಿನ ಘೋಷಣೆಯಾಗಬಹುದು ಎಂಬ ವಾತಾವರಣವಿದೆ. ಆದರೆ ರಾಜಕೀಯ ಪಕ್ಷಗಳ ನಡುವೆ ಜಿದ್ದಾಜಿದ್ದಿ ಮಾತಿನ ತುರುಸು ಶುರುವಾಗಿ ಹಲವು ದಿನಗಳೇ ಆಗಿಹೋದವು. ಅವರ ಬಗ್ಗೆ ಇವರು, ಇವರ ಬಗ್ಗೆ ಅವರು ಬಳಸುವ ಪದಗಳು, ಟೀಕಾಸ್ತ್ರಗಳನ್ನು ಕೇಳಿ ಕೇಳಿ ಕಿವಿ ತಮಟೆ ಹರಿಯುತ್ತಿದೆ. ಮಾತು ತನ್ನ ಎಲ್ಲ ಅವತಾರಗಳನ್ನೂ ಪ್ರದರ್ಶಿಸುತ್ತ ವಿಜೃಂಭಿಸುತ್ತಿದ್ದರೆ ಮೌನ ಅದೆಲ್ಲೋ ಮೂಲೆಯಲ್ಲಿ ಮುದುರಿ ಕೂತಂತೆ ಭಾಸವಾಗುತ್ತಿದೆ. ‘ಮಾತು ಬೆಳ್ಳಿ ಮೌನ ಬಂಗಾರ’ ಎಂಬ ಗಾದೆಮಾತು ಯಾರಿಗೂ ನೆನಪಿರುವಂತೆ ತೋರುತ್ತಿಲ್ಲ. ಚುನಾವಣಾ ಕಣ ಎಂದಮೇಲೆ ಒಂದು ಹಂತದ ಮಾತಿನ ಚಕಮಕಿ, ಕಾಲೆಳೆಯುವಿಕೆ, ವ್ಯಂಗ್ಯ ಇವೆಲ್ಲ ಇರಲೇಬೇಕು ಬಿಡಿ. ಇಲ್ಲವಾದರೆ ಕಣ ರಂಗೇರುವುದು ಹೇಗೆ? ಆದರೆ ಅತಿಯಾದರೆ ಕಷ್ಟ ಅಲ್ಲವೆ? ಇನ್ನೊಂದೆಡೆ, ಚುನಾವಣಾ ನೀತಿಸಂಹಿತೆ ಜಾರಿಯಾಗುವುದರ ಒಳಗಾಗಿ ಮತದಾರರಿಗೆ ‘ಕೊಡುಗೆ’ ನೀಡುವ ಉಮೇದು ಕೂಡ ಅಲ್ಲಲ್ಲಿ ಕಂಡುಬರುತ್ತಿದೆ. ಮತ್ತೊಂದೆಡೆ, ಎಲ್ಲ ಪಕ್ಷಗಳ ವತಿಯಿಂದಲೂ ರ್ಯಾಲಿಗಳು, ಸಭೆಗಳು ಭರ್ಜರಿಯಾಗಿ ಆಯೋಜನೆಯಾಗುತ್ತಿವೆ. ಅದರಲ್ಲೂ ಬೆಂಗಳೂರಿನಂಥ ನಗರದಲ್ಲಿ ಒಂದು ಸಾರ್ವಜನಿಕ ಸಭೆ ಅಥವಾ ಪ್ರತಿಭಟನೆ ಆಯೋಜನೆಯಾದರೆ, ಜನಜೀವನದ ಮೇಲೆ, ವಿಶೇಷವಾಗಿ ಸಂಚಾರ ವ್ಯವಸ್ಥೆಯ ಮೇಲೆ ಎಷ್ಟು ಪರಿಣಾಮವಾಗುತ್ತದೆ ಎಂಬುದು ಆ ಟ್ರಾಫಿಕ್ ಬಿಸಿ ಅನುಭವಿಸಿದವರಿಗೇ ಗೊತ್ತು. ಶಾಲೆಗೋ, ಕಚೇರಿಗೋ ಹೊರಟವರು ತಾಸುಗಟ್ಟಲೆ ರಸ್ತೆಯಲ್ಲಿ ನಿಂತಿರುವುದು ಹಿಂಸೆಯೇ ತಾನೆ? ಇಲ್ಲಿ ಇಷ್ಟೆಲ್ಲ ಗದ್ದಲಗೌಜಿಗಳು ನಡೆದಿರುವಾಗ, ಅತ್ತ ಮಹಾರಾಷ್ಟ್ರದಲ್ಲಿ ನಡೆದ ವಿದ್ಯಮಾನವೊಂದು ಗಮನ ಸೆಳೆಯುವಂತಿದೆ. ಅಲ್ಲಿ ಅಬ್ಬರವಿರಲಿಲ್ಲ, ಘೋಷಣೆಗಳ ವೀರಾವೇಶವಿರಲಿಲ್ಲ; ಸಾವಿರಾರು ಜನರು ಶಾಂತಿಯುತವಾಗಿ ಬಂದರು; ತಮ್ಮ ಬೇಡಿಕೆ ಏನೆಂಬುದನ್ನು ಶಾಂತರೀತಿಯಿಂದಲೇ ಹೇಳಿದರು; ಆಡಳಿತಗಾರರ ಮನವೊಲಿಸಿದರು; ಸ್ವಸ್ಥಳಕ್ಕೆ ವಾಪಸ್ ತೆರಳಿದರು.

ಮಹಾರಾಷ್ಟ್ರದ ರೈತರು ಈ ಮೂಲಕ ಹೋರಾಟದ ಹೊಸ ಮಾದರಿಯೊಂದನ್ನು ದೇಶದ ಮುಂದೆ ತೆರೆದಿಟ್ಟಿದ್ದಾರೆಯೇ? ಆ ಹೋರಾಟದ ಸ್ವರೂಪ, ಸರ್ಕಾರ ಅದಕ್ಕೆ ಸ್ಪಂದಿಸಿದ ಪರಿ ನೋಡಿದರೆ ಹೀಗೆ ಭಾವಿಸಲು ಕಾರಣಗಳಿವೆ. ಈ ಶಾಂತಿಯುತ ಹೋರಾಟದ ವಿನ್ಯಾಸ ಹೇಗಿತ್ತು ನೋಡಿ: ನಾಸಿಕ್ ಭಾಗದ ಕಲ್ವಾನ್, ಸರಗಣ ಮತ್ತು ದಿಂಡೋರಿ, ಪಾಲ್ಘರ್ ಪ್ರದೇಶದ ತಲಸಾರಿ, ಮೊಖಾಡಾ, ಮತ್ತು ಜ್ವಾಹರ್, ಥಾಣೆ ಪ್ರದೇಶದ ಶಹಾಪುರ್, ಮುರಾಬಾದ್ ಮತ್ತು ಜಲಗಾಂವದ ಕೆಲ ಭಾಗಗಳ ರೈತರು ಸೇರಿಕೊಂಡು ನಡೆಸಿದ ಹೋರಾಟ ಅದು. ಬುಡಕಟ್ಟು ಜನರು, ಭೂರಹಿತರು ಹಾಗೂ ಕೃಷಿ ಕಾರ್ವಿುಕರು, ರೈತರು ಈ ಹೋರಾಟದ ಸಹಭಾಗಿಗಳಾಗಿದ್ದರು. ಸುಮಾರು 25-30 ಸಾವಿರ ರೈತರು ನಾಸಿಕ್​ನಿಂದ ಮುಂಬೈವರೆಗೆ 180 ಕಿಲೋಮೀಟರ್​ಗಳಷ್ಟು ಅಂತರವನ್ನು ಬರಿಗಾಲಲ್ಲೆ ಕ್ರಮಿಸಿದರು. ಆ ದೀರ್ಘ ಪಯಣದ ನಡುವೆ ದಾರಿಯಲ್ಲಿ ಯಾರಿಗೂ ಏನೇನೂ ತೊಂದರೆಯಾಗದಂತೆ ನಿಗಾ ವಹಿಸಿದರು. ಮುಂಬೈಯಂಥ ಮಹಾನಗರಿಯಲ್ಲಿ ಕೂಡ ಇಷ್ಟು ದೊಡ್ಡ ಸಂಖ್ಯೆಯ ಜನ ಕಾಲ್ನಡಿಗೆಯಲ್ಲಿ ಬಂದರೂ ಸಂಚಾರಕ್ಕಾಗಲೀ, ಜನರ ದೈನಂದಿನ ಜೀವನಕ್ಕಾಗಲೀ ಒಂಚೂರೂ ತೊಂದರೆಯಾಗಲಿಲ್ಲ. ಬೆಳಗ್ಗೆ ನಂತರ ನಗರ ಪ್ರವೇಶಿಸಿದರೆ ಜನಜೀವನಕ್ಕೆ ಸಮಸ್ಯೆಯಾಗುತ್ತದೆಂದು ರಾತ್ರಿ ನಗರದ ಹೊರಗೆ ಬೀಡುಬಿಟ್ಟು, ಬೆಳಗ್ಗೆ 5 ಗಂಟೆಯೊಳಗೇ ನಗರ ಪ್ರವೇಶಿಸಿದರು. ಈ ಪ್ರತಿಭಟನೆ ಸಂದರ್ಭದಲ್ಲಿ ಸ್ವಲ್ಪ ಏನಾದರೂ ಅಹಿತಕರ ಘಟನೆ ನಡೆದರೂ ಅದು ಮಹಾರಾಷ್ಟ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರಬಹುದಿತ್ತು. ಹೀಗಾಗಿಯೇ ಸರ್ಕಾರ ಕೂಡ ಮುನ್ನೆಚ್ಚರಿಕೆ ಜತೆ ತಾಳ್ಮೆ ವಹಿಸಿತ್ತು. ರೈತರ ಮೆರವಣಿಗೆಯ ನಡುವೆ ಅಲ್ಲಲ್ಲಿ ಪೊಲೀಸ್ ಗುಪ್ತಚರದಳದವರು ಸೇರಿಕೊಂಡು, ಎಲ್ಲೂ ಸಮಸ್ಯೆಯಾಗದಂತೆ ನೋಡಿಕೊಂಡರು ಎಂದು ಮೂಲಗಳು ಹೇಳುತ್ತವೆ. ರೈತರ ಈ ಕಾಳಜಿಗೆ ಮನಸೋತ ಮುಂಬೈ ಜನರು ತಾವೇ ಮುಂದಾಗಿ ಆವರಿಗೆ ಆಹಾರ, ನೀರು, ಮಜ್ಜಿಗೆ ನೀಡಿ ಸತ್ಕರಿಸಿದರು.

ಹಾಗೆನೋಡಿದರೆ ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ನಾಸಿಕ್​ನಲ್ಲಿ ಹೋರಾಟ ನಡೆಯುತ್ತಲೇ ಇದೆ. ಆದರೆ ರೈತರು ಖುದ್ದಾಗಿ ರಾಜ್ಯದ ಆಡಳಿತ ಶಕ್ತಿಕೇಂದ್ರಕ್ಕೆ ಬಂದಿದ್ದು ಈ ಸಲದ ವಿಶೇಷ. ಅದೂ ಅಲ್ಲದೆ, ವಿದರ್ಭ ಪ್ರದೇಶವಂತೂ ರೈತರ ಆತ್ಮಹತ್ಯೆಗಳಿಂದಾಗಿಯೇ ಸದಾ ಸುದ್ದಿಯಲ್ಲಿರುತ್ತದೆ. ಮಹಾರಾಷ್ಟ್ರ ಸರ್ಕಾರ ಕಳೆದ ವರ್ಷವೇ ರೈತರ ಒಂದೂವರೆ ಲಕ್ಷ ರೂ.ವರೆಗಿನ ಸಾಲಮನ್ನಾಕ್ಕೆ ಸಮ್ಮತಿಸಿತ್ತು. ಆದರೆ ಇದರ ಜಾರಿಯಲ್ಲಿ ಕೆಲ ಸಮಸ್ಯೆಗಳುಂಟಾಗಿದ್ದವು. ಒಟ್ಟು 42.6 ಲಕ್ಷ ರೈತರ ಪೈಕಿ 35.5 ಲಕ್ಷ ರೈತರಿಗೆ ಈ ಸಾಲಮನ್ನಾ ಪ್ರಯೋಜನ ದಕ್ಕಿದ್ದರೆ, ಉಳಿದವರಿಗೆ ಸಿಕ್ಕಿರಲಿಲ್ಲ. ಅದೂ ಅಲ್ಲದೆ, ಒಂದೂವರೆ ಲಕ್ಷ ರೂ. ಬದಲು 40 ಸಾವಿರ ರೂ.ವರೆಗೆ ಮಾತ್ರ ಮನ್ನಾ ಆದ ಬಗ್ಗೆಯೂ ದೂರುಗಳಿದ್ದವು. ಈಗ ಅದನ್ನೆಲ್ಲ ಸರಿಪಡಿಸುವ ಭರವಸೆಯನ್ನು ಸರ್ಕಾರ ನೀಡಿದೆ.

ರೈತರ ಹೋರಾಟ ಎಂದಾಕ್ಷಣ ಸಾಲಮನ್ನಾವೇ ಮುಖ್ಯವಾಗಿರುತ್ತದೆ ಎಂಬುದು ಸಾಮಾನ್ಯ ಗ್ರಹಿಕೆ. ಆದರೆ ಮಹಾರಾಷ್ಟ್ರ ಹೋರಾಟ ಕೇವಲ ಸಾಲಮನ್ನಾ ಬೇಡಿಕೆಗೆ ಸೀಮಿತವಾಗಿರಲಿಲ್ಲ ಎಂಬುದನ್ನು ಗಮನಿಸಬೇಕು. ಈ ಪ್ರತಿಭಟನೆ ಒಟ್ಟಾರೆ ಕೃಷಿರಂಗದ ಜ್ವಲಂತ ವಿಷಯಗಳನ್ನು ಒಡಲಲ್ಲಿ ಇರಿಸಿಕೊಂಡಿತ್ತು. ನದಿ ಜೋಡಣೆ ಯೋಜನೆ, ಜಲ ಸಂರಕ್ಷಣಾ ಯೋಜನೆಗಳ ಜಾರಿ, ಅರಣ್ಯ ಹಕ್ಕು ಕಾಯ್ದೆ (ಎಫ್​ಆರ್​ಎ)ಯ ಸಮರ್ಪಕ ಜಾರಿ, ಸ್ವಾಮಿನಾಥನ್ ವರದಿ ಅನುಷ್ಠಾನ ಈ ಮುಂತಾದವು ಬೇಡಿಕೆಗಳಲ್ಲಿ ಸೇರಿದ್ದವು.

2006ರಲ್ಲಿ ಜಾರಿಗೆ ಬಂದ ಅರಣ್ಯ ಹಕ್ಕು ಕಾಯ್ದೆಯು, ಪಾರಂಪರಿಕ ಅರಣ್ಯವಾಸಿಗಳ ಹಕ್ಕುಗಳಿಗೆ ಕಾನೂನು ಮನ್ನಣೆ ನೀಡುವ ಹಾಗೂ ಅರಣ್ಯ ಸಂರಕ್ಷಣೆಯಲ್ಲಿ ಸ್ಥಳೀಯರನ್ನೂ ಒಳಗೊಳ್ಳುವ ಅಂಶಗಳನ್ನು ಹೊಂದಿದೆ. ಆದರೆ ಈ ಕಾಯ್ದೆ ಅಮಲಿಗೆ ಬಂದು ಹನ್ನೆರಡು ವರ್ಷಗಳೇ ಆದರೂ, ಬಹುತೇಕ ರಾಜ್ಯಗಳಲ್ಲಿ ಇದರ ಜಾರಿಗೆ ನಿರಾಸಕ್ತಿಯಿರುವುದನ್ನು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳು ಎತ್ತಿತೋರಿಸುತ್ತವೆ; ಈವರೆಗೆ ಕೇವಲ ಶೇ.46ರಷ್ಟು ಸಮುದಾಯ ಅರಣ್ಯ ಹಕ್ಕುಪತ್ರಗಳನ್ನು ನೀಡಲಾಗಿದೆಯಂತೆ. ಮಧ್ಯಪ್ರದೇಶ (ಶೇ.69) ಹಾಗೂ ಜಾರ್ಖಂಡ್ (ಶೇ.52) ಈ ನಿಟ್ಟಿನಲ್ಲಿ ಉಳಿದ ರಾಜ್ಯಗಳಿಗಿಂತ ಮುಂದಿವೆ. ರಾಜ್ಯದಲ್ಲಿ ಆರು ತಿಂಗಳ ಅವಧಿಯಲ್ಲಿ ಅರಣ್ಯ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು

ರೈತರೊಂದಿಗಿನ ಮಾತುಕತೆ ಸಂದರ್ಭದಲ್ಲಿ ವಾಗ್ದಾನ ಮಾಡಿದರು. ‘ಕೃಷಿಗೆ ಬಳಸಿರುವ ಅರಣ್ಯವನ್ನು ಬುಡಕಟ್ಟು ಜನರು ಹಾಗೂ ರೈತರಿಗೆ ನೀಡುವ ಸಂಬಂಧ ಸಮಿತಿ ರಚಿಸಲು ಒಪ್ಪಿದ್ದೇವೆ’ ಎಂದು ಅವರು ಹೇಳಿದರು. ಇದಲ್ಲದೆ, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಸಾಲಮನ್ನಾ, ಹಾಗೂ 31 ಜಲ ಸಂರಕ್ಷಣಾ ಯೋಜನೆಗಳ ಅನುಷ್ಠಾನ ಮುಂತಾದವಕ್ಕೂ ಸರ್ಕಾರ ಸಮ್ಮತಿಸಿತು. ಇದರಿಂದ ಸಂತುಷ್ಟಗೊಂಡ ರೈತರು ಸ್ವಸ್ಥಳಕ್ಕೆ ವಾಪಸಾದರು. ರೈತರ ಪ್ರಯಾಣಕ್ಕೆ ಮಹಾರಾಷ್ಟ್ರ ಸರ್ಕಾರವೇ ಎರಡು ವಿಶೇಷ ರೈಲುಗಳ ವ್ಯವಸ್ಥೆಯನ್ನೂ ಮಾಡಿತು.

ಈ ಹೋರಾಟದ ವಿಚಾರದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿವೇಕಪೂರ್ಣ ನಡೆಗಳನ್ನೇ ಇರಿಸಿದರು ಎನ್ನಬೇಕು. ಈ ಸಂದರ್ಭದಲ್ಲಿ ಎಲ್ಲಿಯಾದರೂ ಸಣ್ಣ ಎಡವಟ್ಟು ಘಟಿಸಿದರೂ ಅದು ಭುಗಿಲೇಳಬಹುದಿತ್ತು ಮತ್ತು ದೇಶವ್ಯಾಪಿ ವಿವಾದವಾಗಿ ಬದಲಾಗಿಬಿಡಬಹುದಿತ್ತು. ಅಂಥದಕ್ಕೆ ರೈತರೂ ಅವಕಾಶ ನೀಡಲಿಲ್ಲ, ಸರ್ಕಾರವೂ ಸಮಸ್ಯೆಯಾಗಲು ಆಸ್ಪದ ನೀಡಲಿಲ್ಲ. ಅಧಿಕ ಸಂಖ್ಯೆಯ ಜನರು ಹೋರಾಟ ಅಥವಾ ಪ್ರತಿಭಟನೆಗೆ ಜಮಾಯಿಸಿದಾಗ ಅಧಿಕಾರಸ್ಥರು ತೆಗೆದುಕೊಳ್ಳುವ ಒಂದೊಂದು ನಿರ್ಣಯವೂ ಬಹುಮುಖ್ಯವಾಗುತ್ತದೆ. ಒಂದು ಚಿಕ್ಕ ಎಡವಟ್ಟೂ ದೊಡ್ಡ ಅನಾಹುತಕ್ಕೆ ಕಾರಣವಾಗಬಲ್ಲದು. ಈ ಮಾತಿಗೆ ಒಂದೆರಡು ಸಮರ್ಥನೆಗಳನ್ನು ನೀಡಬಹುದು. ಅದು 1981-82ರ ಅವಧಿ. ರಾಜ್ಯದಲ್ಲಿ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರವಿತ್ತು. ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಮಲಪ್ರಭಾ ನೀರು ಕೊಡದಿದ್ದರೂ, ಕರ ವಿಧಿಸುತ್ತಿದ್ದುದನ್ನು ರೈತರು ವಿರೋಧಿಸತೊಡಗಿದರು. ಒಮ್ಮೆ ನರಗುಂದದಲ್ಲಿ ರೈತರು ದೊಡ್ಡ ಸಂಖ್ಯೆಯಲ್ಲಿ ಸೇರಿ ಅಧಿಕಾರಿಗಳಿಗೆ ಮನವಿ ನೀಡಿದಾಗ ಸರಿಯಾದ ಸ್ಪಂದನೆ ದೊರೆಯಲಿಲ್ಲ. ಇದೇ ನಿಮಿತ್ತವಾಗಿ ಗದ್ದಲ ಶುರುವಾಗಿ ಪೊಲೀಸರಿಂದ ಲಾಠಿ ಚಾರ್ಜ್ ಮತ್ತು ಗೋಲಿಬಾರ್ ಸಹ ನಡೆದುಹೋಯಿತು. ಮೂವರು ರೈತರು ಸಾವನ್ನಪ್ಪಿದರು. ರೈತರ ಮೇಲೆ ಗುಂಡು ಹಾರಿಸಿದ ಸರ್ಕಾರ ಎಂಬ ಅಪಖ್ಯಾತಿ ತಗುಲಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ಬರುವಲ್ಲಿ ನರಗುಂದ ಘಟನೆಯೂ ಒಂದು ಪ್ರಮುಖ ಕಾರಣವಾದದ್ದು ಈಗ ಇತಿಹಾಸ. ಹಾವೇರಿಯಲ್ಲಿ ಬಿತ್ತನೆ ಬೀಜಕ್ಕೆ ಆಗ್ರಹಿಸುತ್ತಿದ್ದ ರೈತರ ಮೇಲೆ ಗೋಲಿಬಾರ್ ನಡೆದ ಘಟನೆ ಬಿಜೆಪಿ ಸರ್ಕಾರ ಇದ್ದಾಗ ನಡೆದಿತ್ತು. ಆಗ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಆಡಳಿತದ ಯಾವುದೇ ಹಂತದಲ್ಲಿ ತಪ್ಪು ನಡೆದರೂ ಕೆಟ್ಟ ಹೆಸರು ಬರುವುದು ಮಾತ್ರ ಆಡಳಿತಾರೂಢ ಸರ್ಕಾರಗಳಿಗೆ.

ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಸಮಸ್ಯೆಗಳೂ ಅಷ್ಟೇ ವೈವಿಧ್ಯಮಯ. ಹೀಗಾಗಿ ನಿರಂತರವಾಗಿ ಪ್ರತಿಭಟನೆ, ಹೋರಾಟ ಇತ್ಯಾದಿಗಳು ನಡೆಯುತ್ತಲೇ ಇರುತ್ತವೆ. ಇಂಥ ಎಷ್ಟೋ ಸಂದರ್ಭದಲ್ಲಿ, ಅಹಿತಕರ ಘಟನೆಗಳಾದದ್ದೂ ಇದೆ. ಮಹಾರಾಷ್ಟ್ರ ರೈತರ ಹೋರಾಟ ಈ ನಿಟ್ಟಿನಲ್ಲಿ ಒಂದು ಮಾದರಿಯಾಗಿ ನಿಲ್ಲಬಹುದು. ಈ ಪ್ರಸಂಗದಲ್ಲಿ ರೈತರು ಹಾಗೂ ಸರ್ಕಾರ ಎರಡೂ ಕಡೆಗಳಿಂದ ವಿವೇಚನೆಯ ಮಾತು-ಕೃತಿ ಹೊಮ್ಮಿದ್ದು ವಿಶೇಷ.

ಹಾಗಂತ ಈ ಹೋರಾಟ ವಿವಾದಾತೀತವೇನಾಗಿರಲಿಲ್ಲ. ಕೆಲ ವಲಯಗಳಿಂದ ಟೀಕೆಗಳೂ ವ್ಯಕ್ತವಾದವು. ರೈತ ಕಾರ್ವಿುಕರು ಲೆನಿನ್ ಭಾವಚಿತ್ರವಿರುವ ಭಿತ್ತಿಪತ್ರಗಳನ್ನು ಹಿಡಿದುಕೊಂಡಿದ್ದರ ಬಗ್ಗೆ ಕೆಲವರು ಅಸಹನೆ ತೋರಿಸಿದರೆ, ಈ ಪ್ರತಿಭಟನೆಗೆ ಚೀನಾದ ಮಾವೋ ಹೋರಾಟವನ್ನು ನೆನಪಿಸುವ ‘ಲಾಂಗ್ ಮಾರ್ಚ್’ ಹೆಸರನ್ನು ಇಟ್ಟಿದ್ದಕ್ಕೆ ಇನ್ನು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಂದಹಾಗೆ ಈ ಪ್ರತಿಭಟನೆಯನ್ನು ಆಯೋಜಿಸಿದ್ದು ಸಿಪಿಐಎಂ ಪಕ್ಷದ ಅಂಗಸಂಸ್ಥೆಯಾದ ಅಖಿಲ ಭಾರತೀಯ ಕಿಸಾನ್ ಸಭಾ ಎಂಬುದೂ ನಿಜ. ಆದರೆ ಈ ಕಾರಣಗಳಿಗಾಗಷ್ಟೇ ಇಡೀ ಹೋರಾಟವನ್ನೇ ಟೀಕೆಗೆ ಒಳಪಡಿಸುವುದು ಸರಿಯಾದ ಧೋರಣೆಯಾಗಲಾರದು. ಹೋರಾಟದ ಉದ್ದೇಶ, ನಡೆದ ರೀತಿ ಹಾಗೂ ಪರಿಣಾಮ ಏನೆಂಬುದನ್ನು ಗಮನಿಸಬೇಕು.

ಕೊನೇ ಮಾತು: ರೈತರ ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯವಾಗಿ ಬೇಕಾದದ್ದು ಅವರ ಅಹವಾಲು ಕೇಳುವ ತೆರೆದ ಹೃದಯ ಮತ್ತು ಸ್ಪಂದಿಸುವ ಗುಣ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top