ಮೋದಿ ಪಾಕಿಸ್ತಾನದ ಮೇಲೆ ಸಮರ ಸಾರುತ್ತಾರಾ?

‘ನಾ ಕಂಡ ದೇವರು ಈ ನಮ್ಮ ಯೋಧರು/ಮತ್ತೆ ಹುಟ್ಟಿ ಬನ್ನಿ ಈ ಭರತ ಭೂಮಿಗೆ’

‘ಗುಲಾಬಿಯ ದಿನ ಹರಿಯಿತು ರಕ್ತ/ಮಾತುರಿದು ಮೌನವಾಯಿತು ಕಪು್ಪ’

‘ಅವರು ಭಯೋತ್ಪಾದಕರಲ್ಲ ಹೇಡಿಗಳು, ಅವರಿಗೆ ನಮ್ಮ ಸೈನಿಕರ ಹೆಗಲನ್ನು ಮುಟ್ಟುವ ಧೈರ್ಯವೂ ಇಲ್ಲ’

‘ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ನೀಡುವುದು ಟ್ವೀಟ್​ಗಳಲ್ಲ, ಸಂತಾಪದ ನುಡಿಗಳಲ್ಲ, ಉಗ್ರರ ರಕ್ತ, ಪ್ರತೀಕಾರದ ರಕ್ತ’

-ಮೊನ್ನೆ ಕಾಶ್ಮೀರದ ಪುಲ್ವಾಮಾದ ಅವಂತಿಪೊರದಲ್ಲಿ ವಾಹನಗಳಲ್ಲಿ ಸಾಗುತ್ತಿದ್ದ ಸಿಆರ್​ಪಿಎಫ್ ಯೋಧರ ವಾಹನಗಳ ಮೇಲೆ ಜೈಷೆ ಮೊಹಮ್ಮದ್ ಸಂಘಟನೆಯ ಉಗ್ರರು ಆತ್ಮಾಹುತಿ ದಾಳಿ ನಡೆಸಿ 40ಕ್ಕೂ ಅಧಿಕ ಯೋಧರು ಹುತಾತ್ಮರಾಗುವಂತಾಯಿತಲ್ಲ, ಆ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ವಾಟ್ಸಪ್, ಫೇಸ್​ಬುಕ್ ಮುಂತಾದ ಸಾಮಾಜಿಕ ತಾಣಗಳಲ್ಲಿ ಜನರಿಂದ ವ್ಯಕ್ತವಾದ ಸಂತಾಪ-ವಿಷಾದ-ಆಕ್ರೋಶ ಮುಂತಾದ ಭಾವನೆಗಳ ಕೆಲ ಸ್ಯಾಂಪಲ್​ಗಳಿವು. ಅಷ್ಟೇ ಅಲ್ಲ, ಅನೇಕ ಮಂದಿ ವಾಟ್ಸಪ್ ಡಿಪಿಯಲ್ಲಿ ತಮ್ಮ ಫೋಟೋ ಬದಲು ಸೈನಿಕರು, ಅಮರ್ ಜವಾನ್ ಸ್ಮಾರಕ ಚಿತ್ರ ಹಾಕುವ ಮೂಲಕ ಭಾರತೀಯ ಸೇನೆ ಜತೆಗೆ ತಾವಿದ್ದೇವೆ ಎಂಬ ಸಂದೇಶವನ್ನು ಸಾರಿದರು. ಹಿಂದೆ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮನಾದ ಸೈನಿಕನ ಪತ್ನಿ ಹೇಳಿದ್ದಳು- ‘ನನ್ನ ಕೈಗೆ ಬಂದೂಕು ಕೊಡಿ, ನಾನು ಹೋಗಿ ಉಗ್ರರನ್ನು ಹೊಡೆದುಹಾಕುತ್ತೇನೆ’. ಯಾರಿಗೆ ತಾನೆ ಸಿಟ್ಟು ರಟ್ಟೆಗೆ ಬರುವುದಿಲ್ಲ ಹೇಳಿ? ದೇಶ ಕಾಯುತ್ತ ಕುಟುಂಬವನ್ನೂ ಸಲಹಲೆಂದು ಎಲ್ಲೋ ದೂರದ ಸ್ಥಳಕ್ಕೆ, ಕನಿಷ್ಠ ಸವಲತ್ತೂ ಇಲ್ಲದ ತಾಣಕ್ಕೆ ಕಳಿಸಿದ ಗಂಡ ಉಗ್ರರ ಹುಚ್ಚಾಟಕ್ಕೆ ಇದ್ದಕ್ಕಿದ್ದಂತೆ ಇನ್ನಿಲ್ಲವಾಗಿಬಿಡುವ ಆ ದುಃಖವನ್ನು ಭರಿಸುವುದಾದರೂ ಹೇಗೆ? ಮನೆಗೆ ಬರುತ್ತೇನೆಂದು ಪತ್ರ ಬರೆದ ಮಗನ ಶವ ಬಂದರೆ ಯಾವ ತಾಯಿಯ ಎದೆಯೊಡೆಯದಿದ್ದೀತು? ಸರ್ಕಾರ ಪರಿಹಾರ ನೀಡುತ್ತದೆ, ಖರೆ. ಅದು ಬೇಕು. ಅದೂ ನಿಜ. ಆದರೆ ಎದೆಯುರಿಯನ್ನು ನಂದಿಸಲು ಸಾಧ್ಯವೇ? ಅವಂತಿಪೊರ ದಾಳಿ ನಡೆದು, ನಮ್ಮ ಅನೇಕ ಸೈನಿಕರು ಹುತಾತ್ಮರಾದರೆಂಬ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಇಡೀ ದೇಶದಲ್ಲಿ ದುಃಖ, ವಿಷಾದದ ವಾತಾವರಣ ಕವಿಯಿತು. ಅದರ ಬೆನ್ನಹಿಂದೇ ವ್ಯಕ್ತವಾಗಿದ್ದು ಆಕ್ರೋಶ. ಜನರ ಈ ಭಾವನೆಯನ್ನು ಸರಿಯಾಗಿಯೇ ಗ್ರಹಿಸಿದ ಪ್ರಧಾನಿ ನರೇಂದ್ರ ಮೋದಿಯವರು ಸಹ, ಪುಲ್ವಾಮಾ ದುರಂತದಿಂದ ದೇಶವಾಸಿಗಳ ರಕ್ತ ಕುದಿಯುತ್ತಿದೆ

ಎಂದರು. ಸೈನಿಕರ ಸಾವಿಗೆ ಸಂತಾಪ ಸೂಚಿಸುವ ಜತೆಗೇ ಪಾಕಿಸ್ತಾನಕ್ಕೆ ಕಟುವಾದ ಎಚ್ಚರಿಕೆಯನ್ನೂ ನೀಡಿದರು. ಪಾಕಿಸ್ತಾನ ಇಂಥ ಎಷ್ಟೇ ಪ್ರಯತ್ನಗಳನ್ನು ಮಾಡಿದರೂ ಭಾರತವನ್ನು ದುರ್ಬಲಗೊಳಿಸುವುದು ಅಶಕ್ಯ. ಇಂಥ ದುಸ್ಸಾಹಸಕ್ಕೆ ಆ ದೇಶ ದುಬಾರಿ ಬೆಲೆಯನ್ನೇ ತೆರಬೇಕಾಗುತ್ತದೆ ಎಂದು ದೃಢಧ್ವನಿಯಲ್ಲಿ ಹೇಳಿದರು. ಪ್ರಧಾನಿ ಮೋದಿಯವರು ಗೃಹ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರು ಮುಂತಾದವರ ಜತೆಗೆ ಉನ್ನತ ಮಟ್ಟದ ಸಭೆ ನಡೆಸಿ, ರ್ಚಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿ ಯಾವ ಕ್ರಮ ಕೈಗೊಳ್ಳಬಹುದು? ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಯುತ್ತಾ? ಮುಂತಾದ ಲೆಕ್ಕಾಚಾರಗಳೂ ಈಗ ನಡೆಯುತ್ತಿವೆ.

ಈ ಸಲ ಎಂದಲ್ಲ, ಪ್ರತಿ ಸಾರಿ ಪಾಕ್​ಪ್ರೇರಿತ ಭಯೋತ್ಪಾದಕ ದಾಳಿಗಳಾದಾಗಲೂ ಇಂಥದೊಂದು ಭಾವನೆ ದೇಶದ ತುಂಬೆಲ್ಲ ಹರಿದಾಡುತ್ತದೆ. ನಮ್ಮ ಸೈನ್ಯ ಸಶಕ್ತವಾಗಿದೆ; ಸೈನಿಕರೂ ವೀರಕಲಿಗಳು. ಪ್ರಧಾನಿ ಹೂಂ ಎಂದರೆ ಸಾಕು ನೇರಯುದ್ಧದಲ್ಲಿ ಪಾಕಿಸ್ತಾನವನ್ನು ಪುಡಿಗಟ್ಟುತ್ತಾರೆಂಬುದರಲ್ಲಿ ಸಂಶಯಕ್ಕೆ ಆಸ್ಪದವೇ ಇಲ್ಲ. ಆದರೂ ಭಾರತ ಯಾಕೆ ಪಾಕ್ ವಿರುದ್ಧ ನೇರಯುದ್ಧ ಮಾಡಿ ಅದರ ಪುಂಡಾಟಕ್ಕೆ ಕೊನೆಹಾಡುವುದಿಲ್ಲ? ಮಾತುಕತೆ ಮಾತುಕತೆ ಎಂದು ಚರ್ಚೆ ಮಾಡುತ್ತ ಕೂತರೆ ಸಮಸ್ಯೆ ಬಗೆಹರಿಯುತ್ತದೆಯೇ? ಸಂಧಾನಕ್ಕೆ ಬಗ್ಗದ ದೇಶಕ್ಕೆ ಅದಕ್ಕೆ ಅರ್ಥವಾಗುವ ಭಾಷೆಯಲ್ಲೇ ಉತ್ತರ ಕೊಡಬೇಕು. ಹಾಗಾದಲ್ಲಿ ಮಾತ್ರ ಈ ಸಮಸ್ಯೆಗೆ ಪರಿಹಾರ ದೊರಕುತ್ತದೆ- ಇದು ದೇಶದ ಜನರ ಮನ್ ಕಿ ಬಾತ್. ಹಾಗಾದರೆ ಪ್ರಧಾನಿ, ಗೃಹ ಸಚಿವ ಮುಂತಾಗಿ ಪ್ರಮುಖ ಹುದ್ದೆಗಳಲ್ಲಿರುವವರಿಗೆ ಈ ವಿಚಾರ ಗೊತ್ತಿಲ್ಲವೆ? ಜನರ ಮನದಾಳವನ್ನು ಅವರು ನೋಡುವುದಿಲ್ಲವೆ? ಅವರಿಗೂ ಗೊತ್ತಿಲ್ಲ ಎಂದಲ್ಲ. ಆದರೆ ಅದು ಅಷ್ಟು ಸುಲಭವೆ? ಈ ವಿಚಾರ ಅವಲೋಕಿಸುವ ಮುನ್ನ ಮೋದಿ ಸರ್ಕಾರ ಬಂದಮೇಲೆ ಪಾಕ್ ವಿಚಾರದಲ್ಲಿ ಯಾವ ಬಗೆಯ ನೀತಿ ಅನುಸರಿಸುತ್ತಿದೆ ಎಂಬುದನ್ನು ನೋಡೋಣ.

ಮೋದಿಯವರು ತಮ್ಮ ಪ್ರಮಾಣವಚನ ಕಾರ್ಯಕ್ರಮಕ್ಕೆ ಸಾರ್ಕ್ ದೇಶಗಳ ನಾಯಕರನ್ನು ಆಹ್ವಾನಿಸಿದರು. ಪಾಕ್ ಪ್ರಧಾನಿಯೂ ಇದರಲ್ಲಿ ಸೇರಿದ್ದರು ಎಂದು ಬೇರೆ

ಹೇಳಬೇಕಿಲ್ಲ. ಅಷ್ಟೇ ಅಲ್ಲ, ಅಚ್ಚರಿಯ ರೀತಿಯಲ್ಲಿ, ಅಫ್ಘಾನಿಸ್ತಾನದಿಂದ ವಾಪಸಾಗುವಾಗ ಪಾಕ್ ಪ್ರಧಾನಿ ನವಾಜ್ ಷರೀಫರ ಮೊಮ್ಮಗಳ ಮದುವೆಗೂ ಹಾಜರಿ ಹಾಕಿದರು. ಮೇಲ್ನೋಟಕ್ಕೆ ಹೀಗೆ ಕಂಡರೂ, ವಾಸ್ತವದಲ್ಲಿ ರಾಜತಾಂತ್ರಿಕ ಮತ್ತು ಸೇನಾ ಕ್ರಮಗಳ ಮೂಲಕ ಪ್ರಧಾನಿ ಮೋದಿ ಪಾಕ್ ವಿಷಯದಲ್ಲಿ ಖಡಕ್ಕಾಗಿಯೇ ವ್ಯವಹರಿಸುತ್ತಿರುವುದನ್ನು ನೋಡಬಹುದು. ಮೊದಲಿಗೆ ಅವರು ಅವಕಾಶ ಸಿಕ್ಕಾಗಲೆಲ್ಲ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನದ ಭಯೋತ್ಪಾದನಾಸ್ನೇಹಿ ಮುಖವನ್ನು ಅನಾವರಣಗೊಳಿಸುತ್ತ, ಅದನ್ನೊಂದು ಉಗ್ರಪೋಷಕ ದೇಶ ಎಂಬುದನ್ನು ಮನದಟ್ಟು ಮಾಡಿಕೊಡುವಲ್ಲಿ ಯಶಸ್ವಿಯಾದರು. ಹೀಗಾಗಿ ಚೀನಾದಂಥ ಬೆರಳೆಣಿಕೆ ಸ್ನೇಹಿತರನ್ನು ಹೊರತುಪಡಿಸಿ ಉಳಿದವರ ಕಣ್ಣಲ್ಲಿ ಪಾಕ್ ಖಳನಾಯಕನಾಗುವಂತಾಯಿತು. ಇನ್ನು, ಅತ್ತ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದದ್ದು ಪಾಕ್ ವಿಷಯದಲ್ಲಿ ಭಾರತದ ನಿಲುವಿಗೆ ಪೂರಕವಾಗುವಂತಾಯಿತು. ಉಗ್ರನಿಗ್ರಹಕ್ಕೆಂದು ನೀಡಲಾಗುವ ಹಣವನ್ನು ಟ್ರಂಪ್ ಕಡಿತಗೊಳಿಸಿರುವುದು ಪಾಕಿಸ್ತಾನಕ್ಕೆ ಭಾರಿ ನಷ್ಟವೇ ಸರಿ. ಅತ್ತ ಅಮೆರಿಕದಿಂದ ಹಣಪಡೆದು, ಅದನ್ನು ಭಾರತವಿರೋಧಿ ಕೃತ್ಯಗಳಿಗೆ ಬಳಸುವ ಅದರ ಕಳ್ಳಾಟಕ್ಕೆ ತುಸುವಾದರೂ ಕಡಿವಾಣ ಬಿದ್ದಿದೆ. ಇದಲ್ಲದೆ, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್​ನಂಥ

ಪಾಕ್​ಸ್ನೇಹಿ ದೇಶಗಳನ್ನು ಭಾರತದತ್ತ ಸೆಳೆದಿರುವುದು ಮೋದಿಯವರ ಮತ್ತೊಂದು ಸಾಧನೆ. ಹೀಗೆ ರಾಜತಾಂತ್ರಿಕವಾಗಿ ಪಾಕಿಸ್ತಾನಕ್ಕೆ ಏಟಿನ ಮೇಲೆ ಏಟು ನೀಡುವುದರಲ್ಲಿ ಭಾರತ ಯಶಸ್ವಿಯಾಗುತ್ತಿದೆ. ಕೆಲವೊಮ್ಮೆ ಕಠಿಣ ಕ್ರಮಕ್ಕೂ ಸರ್ಕಾರ ಹಿಂದೆಗೆಯಲಿಲ್ಲ. ಒಂದು ಉದಾಹರಣೆ ನೀಡುವುದಾದರೆ, ತನ್ನ ಸಲಹೆಯನ್ನು ನಿರ್ಲಕ್ಷಿಸಿ ಕಾಶ್ಮೀರದ ಹುರಿಯತ್ ನಾಯಕರನ್ನು ಭೇಟಿಮಾಡಿದ ಪಾಕ್ ರಾಯಭಾರಿ ಅಬ್ದುಲ್ ಬಾಸಿತ್ ಅಧಿಕಪ್ರಸಂಗತನಕ್ಕೆ ಪ್ರತಿಯಾಗಿ, 2014ರ ಆಗಸ್ಟ್ 25ರಂದು ನಿಗದಿಯಾಗಿದ್ದ ಎರಡೂ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆಯನ್ನು ಭಾರತ ರದ್ದುಪಡಿಸಿತು. ಪಾಕಿಸ್ತಾನಕ್ಕೆ ನಿಜಕ್ಕೂ ಇದೊಂದು ಬಿಗ್ ಷಾಕ್.

ಇನ್ನು, ಸೇನೆಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವಲ್ಲಿಯೂ ಕೇಂದ್ರ ಸರ್ಕಾರ ಉದಾರತನ ತೋರಿರುವುದು ಗಮನಕ್ಕೆ ಬರುವಂತಿದೆ. ಗಡಿಯಲ್ಲಿ ನಿರಂತರವಾಗಿ ಕದನವಿರಾಮ ಉಲ್ಲಂಘಿಸಿ ಶೆಲ್ ದಾಳಿ ನಡೆಸುವುದು ಪಾಕ್​ಸೇನೆಯ ಚಾಳಿಯೇ ಆಗಿಹೋಗಿದೆ. ಈ ಕಿಡಿಗೇಡಿತನಕ್ಕೆ ಕಡಿವಾಣ ಹಾಕಲೆಂದು ಸೇನೆಗ ಮುಕ್ತಹಸ್ತದ ಅಧಿಕಾರವನ್ನು ಸರ್ಕಾರ ನೀಡಿತು. ನಾವು ಮೊದಲ ಗುಂಡು ಹಾರಿಸುವುದಿಲ್ಲ. ಆದರೆ ನಮ್ಮತ್ತ ಯಾರಾದರೂ ಮೊದಲು ಗುಂಡುಹಾರಿಸಿದರೆ ನಾವು ಸುಮ್ಮನಿರುವುದಿಲ್ಲ. ಪ್ರತಿಯಾಗಿ ಎಷ್ಟು ಗುಂಡು ಹಾರಿಸುತ್ತೇವೆಂದು ಲೆಕ್ಕ ಇಡುವುದಿಲ್ಲ ಎಂದು ಹೇಳುವ ಮೂಲಕ, ಖುದ್ದು ಗೃಹ ಸಚಿವ ರಾಜನಾಥ್ ಸಿಂಗ್ ಸೇನೆಗೆ ಉತ್ಸಾಹ ತುಂಬಿದರು. ಪರಿಣಾಮವಾಗಿ ಪಾಕ್​ಸೇನೆಯ ಪುಂಡಾಟಗಳಿಗೆ ನಮ್ಮ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಲೇ ಇದೆ. ಇನ್ನು, ಕಾಶ್ಮೀರದಲ್ಲಿ ಉಗ್ರನಿಗ್ರಹ ಕಾರ್ಯಾಚರಣೆಗೆ ಸಂಬಂಧಿಸಿದಂತೆಯೂ ಸೇನೆಗೆ ಕೇಂದ್ರ ಸರ್ಕಾರ ಹೆಚ್ಚಿನ ಸ್ವಾತಂತ್ರ್ಯ ನೀಡಿದೆ. ಇದರ ಪರಿಣಾಮವೆಂಬಂತೆ, ‘ಆಪರೇಷನ್ ಆಲ್​ಔಟ್’ ಎಂಬ ಯೋಜನೆ ರೂಪಿಸಿಕೊಂಡ ಸೇನೆ, ಕಣಿವೆ ರಾಜ್ಯದಿಂದ ಉಗ್ರರನ್ನು ಸಂಪೂರ್ಣವಾಗಿ ನಿಮೂಲನೆ ಮಾಡಬೇಕೆಂದು ಶ್ರಮಿಸುತ್ತಿದೆ. ಎಷ್ಟರಮಟ್ಟಿಗೆಂದರೆ, ಉಗ್ರರಿದ್ದಾರೆಂದು ಸುಳಿವು ಸಿಕ್ಕರೆ ಸಾಕು, ಇಡೀ ಹಳ್ಳಿಹಳ್ಳಿಯನ್ನೇ ಇಂಚಿಂಚೂ ಜಾಲಾಡಿ ಹುಡುಕಿ ಹೊಡೆಯುವಂಥ ಕಾರ್ಯತಂತ್ರವನ್ನು ಸೇನೆ ಅನುಸರಿಸುತ್ತಿದೆ. ಹೀಗಾಗಿ ಕಳೆದ ವರ್ಷ ದಾಖಲೆ ಸಂಖ್ಯೆಯ ಭಯೋತ್ಪಾದಕರ ಹತ್ಯೆಯಾಗಿದೆ.

ಈಗ ಮೂಲಪ್ರಶ್ನೆಗೆ ಬರೋಣ. ಹಾಗಾದರೆ ಭಾರತವು ಪಾಕ್ ಮೇಲೆ ನೇರಯುದ್ಧ ಸಾರಿ ಆ ದೇಶದ ಹುಟ್ಟಡಗಿಸಲು ಸಾಧ್ಯವಿಲ್ಲವೆ? ಖಂಡಿತ ಸಾಧ್ಯವಿದೆ. ಆದರೆ ಈ ಹಾದಿಯಲ್ಲಿ ಕೆಲ ಅಡೆತಡೆಗಳೂ ಇವೆ. ‘ಮೊದಲನೆಯದಾಗಿ, ಉಗ್ರದಾಳಿಯಲ್ಲಿ ಪಾಕಿಸ್ತಾನದ ಅಂದರೆ ಅಲ್ಲಿನ ಸರ್ಕಾರದ ಕೈವಾಡವಿದೆ ಎಂಬುದಕ್ಕೆ ನಾವು ಸಾಕ್ಷ್ಯಗಳನ್ನು ನೀಡಬೇಕಾಗುತ್ತದೆ. ಪಾಕಿಸ್ತಾನವು ಉಗ್ರರ ಸ್ವರ್ಗ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆದರೂ, ದಾಳಿಯಲ್ಲಿ ಅದರ ಕೈವಾಡ ಸಾಬೀತಿನ ಪುರಾವೆಗಳು ಸಿಗುತ್ತವೆಯೇ ಎಂಬುದು ಅಂತಾರಾಷ್ಟ್ರೀಯ ರಾಜತಾಂತ್ರಿಕ ಮಟ್ಟದಲ್ಲಿ ಮುಖ್ಯವಾಗುತ್ತದೆ. ಯುದ್ಧವನ್ನು ಆರಂಭಿಸುವುದು ಸುಲಭ. ಆದರೆ ಒಮ್ಮೆ ಸಮರ ಆರಂಭವಾದರೆ ಮುಂದೇನಾಗುತ್ತದೆಂಬುದು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಇದೂ ಅಲ್ಲದೆ, ಎರಡೂ ದೇಶಗಳ ನಡುವೆ ಯುದ್ಧ ವಾತಾವರಣ ನಿರ್ವಣವಾದಲ್ಲಿ ಆರ್ಥಿಕವಾಗಿಯೂ ಹೊಡೆತವುಂಟಾಗುತ್ತದೆ. ಹೊರಗಿನ ಹೂಡಿಕೆದಾರರು ಇಲ್ಲಿ ಹೂಡಿಕೆಗೆ ಹಿಂದೇಟು ಹಾಕುತ್ತಾರೆ’ ಎಂದು ವಿಷಯದ ಮತ್ತೊಂದು ಮಗ್ಗುಲನ್ನು ತೆರೆದಿಡುತ್ತಾರೆ ಮಾಜಿ ರಾಯಭಾರಿ, ಅಂತಾರಾಷ್ಟ್ರೀಯ ವ್ಯವಹಾರಗಳ ತಜ್ಞ ಎನ್.ಪಾರ್ಥಸಾರಥಿ.

ಇದಲ್ಲದೆ, ಪಾಕಿಸ್ತಾನದ ಬಳಿಯೂ ಅಣ್ವಸ್ತ್ರಗಳಿರುವುದು ಭಾರತಕ್ಕೆ ಇನ್ನೊಂದು ತೊಡಕು. ಯುದ್ಧ ಶುರುವಾದರೆ ಆ ದೇಶ ಅಣ್ವಸ್ತ್ರ ಬಳಸಲಾರದು ಎಂಬುದಕ್ಕೆ ನಂಬಿಕೆಯಿಲ್ಲ. ಹೀಗಾದಲ್ಲಿ ನಮಗೂ ನಷ್ಟವಾಗುತ್ತದೆ. ಇಲ್ಲಿ ಸರ್ಜಿಕಲ್ ದಾಳಿಯ ಉಲ್ಲೇಖ ಸೂಕ್ತ. ಉರಿ ಸೇನಾನೆಲೆ ಮೇಲೆ ಪಾಕ್ ಉಗ್ರರು ದಾಳಿ ನಡೆಸಿ 17 ಸೈನಿಕರನ್ನು ಸಾಯಿಸಿದ್ದರು. ಇದು ಭಾರತದ

ಸೇನಾಪ್ರತಿಷ್ಠೆಗೂ ಸವಾಲಾಗಿತ್ತು. ಅದಾದ ಕೆಲ ದಿನಗಳಲ್ಲಿ, ಪಾಕ್ ಆಕ್ರಮಿತ ಪ್ರದೇಶದಲ್ಲಿನ ಕೆಲ ಉಗ್ರ ಶಿಬಿರಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿ ಪುಡಿಗಟ್ಟುವ ಮೂಲಕ ನಮ್ಮ ಸೇನೆ ಸೇಡು ತೀರಿಸಿಕೊಂಡಿತ್ತು. ಉರಿ ದಾಳಿ ಹಿಂದೆ ಪಿಒಕೆ ಪಾತ್ರಧಾರಿಗಳು ಇದ್ದರೆಂಬುದಕ್ಕೆ ಭಾರತ ಬಲವಾದ ಪುರಾವೆಗಳನ್ನು ಕಲೆಹಾಕಿತ್ತು. ಮೋದಿ ಸರ್ಕಾರ ಈ ಕಾರ್ಯಾರಚರಣೆಯ ಸಾಕ್ಷ್ಯಗಳನ್ನು ಅಂತಾರಾಷ್ಟ್ರೀಯ ಸಮುದಾಯದೊಂದಿಗೂ ಹಂಚಿಕೊಂಡಿತು. ಹಾಗಾಗಿಯೇ, ಯಾವ ರಾಷ್ಟ್ರಗಳೂ ಆಕ್ಷೇಪವೆತ್ತದೆ ಭಾರತದ ಬೆಂಬಲಕ್ಕೆ ನಿಂತವು. ವಿಡಿಯೋ ದೃಶ್ಯಾವಳಿಗಳು, ಕಾರ್ಯಾಚರಣೆ ಚಿತ್ರಗಳು, ಕಾರ್ಯಾಚರಣೆ ವಿವರ, ಅದಕ್ಕಾಗಿ ಬಳಸಲಾದ ತಂತ್ರಜ್ಞಾನ, ಶಸ್ತ್ರಾಸ್ತ್ರಗಳ ಮಾಹಿತಿಯನ್ನು ಭಾರತ ಹಂಚಿಕೊಂಡಿತ್ತು. ಪಾಪ, ಪಾಕ್ ಸ್ಥಿತಿ ಇಂಗುತಿಂದ ಮಂಗನಂತಾಗಿತ್ತು.

ಹಾಗಾದರೆ, ಪಾಕಿಸ್ತಾನದ ಹುಚ್ಚಾಟಗಳನ್ನು ಭಾರತ ಸಹಿಸಿಕೊಂಡೇ ಹೋಗಬೇಕಾ? ಇನ್ನೂ ನಮ್ಮ ಎಷ್ಟು ಸೈನಿಕರ ಬಲಿದಾನವಾಗಬೇಕು? ಇದಕ್ಕೆಲ್ಲ ಪೂರ್ಣವಿರಾಮ ಬೇಡವಾ? ‘ರಾಜತಾಂತ್ರಿಕವಾಗಿ ಪಾಕಿಸ್ತಾನವನ್ನು ಏಕಾಂಗಿಯಾಗಿಸುವ ಯತ್ನವನ್ನು ಭಾರತ ಇನ್ನಷ್ಟು ಮುಂದುವರಿಸಬೇಕು. ಹಣಸಹಾಯ ನಿಂತರೆ ಆ ದೇಶದ ಶಕ್ತಿ ಕಡಿಮೆಯಾದಂತೆ. ಈ ನಿಟ್ಟಿನಲ್ಲಿ ಭಾರತ ಈಗಾಗಲೇ ತಕ್ಕಮಟ್ಟಿನ ಯಶಸ್ಸು ಗಳಿಸಿದೆ. ಈ ಯತ್ನ ಇನ್ನಷ್ಟು ಬಲವಾಗಬೇಕು. ಜತೆಗೆ, ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಣಯವನ್ನು ಸರ್ಕಾರ ಕೈಗೊಳ್ಳಬೇಕಾಗುತ್ತದೆ. ಆದರೆ ಅದು ಯಾವ ಕ್ರಮ ಎಂಬುದನ್ನು ಬಹಿರಂಗವಾಗಿ ಹೇಳುವ ಅಗತ್ಯವಿಲ್ಲ. ಏಕೆಂದರೆ, ಕೆಲ ಕ್ರಮಗಳು ರಹಸ್ಯವಾಗಿಯೇ ಇರಬೇಕಾಗುತ್ತದೆ’ ಎಂದು ಎನ್.ಪಾರ್ಥಸಾರಥಿ ಅಭಿಪ್ರಾಯಪಡುತ್ತಾರೆ. ಪ್ರಧಾನಿ ಮೋದಿಯವರು ಈಗ ಏನು ಮಾಡಬಹುದು? ಪಾಕ್​ವಿರೋಧಿ ರಾಜತಾಂತ್ರಿಕ ಕಾರ್ಯತಂತ್ರವನ್ನು ಇನ್ನಷ್ಟು ಬಲಗೊಳಿಸುತ್ತಾರಾ? ಉಗ್ರನಿಗ್ರಹ ಕಾರ್ಯಾಚರಣೆ ತೀವ್ರಗೊಳಿಸಲು ಸೇನೆಗೆ ಹೇಳುತ್ತಾರಾ? ಅಥವಾ ಪಾಕಿಸ್ತಾನಕ್ಕೆ ಮರ್ವಘಾತ ನೀಡುವ ಏಟುಗಳನ್ನು ನೀಡಿಬಿಡುತ್ತಾರಾ? ಭಾರತ ಸುಮ್ಮನಂತೂ ಇರುವುದಿಲ್ಲ ಎಂಬುದು ನಿಜ. ಅದಕ್ಕೆ ಸಾಕ್ಷಿ ಎಂಬಂತೆ, ಪಾಕ್​ಗೆ ನೀಡಲಾಗಿದ್ದ ಅತ್ಯಾಪ್ತ ದೇಶ ಸ್ಥಾನಮಾನವನ್ನು ಭಾರತ ವಾಪಸ್ ಪಡೆದಿದೆ. ಇದರಿಂದ ಆ ದೇಶದೊಂದಿಗಿನ ವಾಣಿಜ್ಯ ವ್ಯವಹಾರದ ಮೇಲೆ ಪರಿಣಾಮವಾಗುತ್ತದೆ. ಪಾಕ್ ಮೇಲೆ ಸಮರ ಸಾರಿ ಅದರ ಹೆಡೆಮುರಿಕಟ್ಟಿ ಎಂಬ ದೇಶವಾಸಿಗಳ ಭಾವನೆಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ ಏನು? ಮೋದಿ ಮನದಲ್ಲಿ ಏನಿದೆ ಎಂಬುದರ ಮೇಲೆ ಕಾಮ್ ಕಿ ಬಾತ್ ನಿರ್ಧಾರವಾಗುತ್ತದೆ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)