Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲ… ಕೃಷ್ಣಾ ಎನಬಾರದೆ?

Saturday, 22.09.2018, 3:03 AM       No Comments

| ನಾಗರಾಜ ಇಳೆಗುಂಡಿ

ವೈದ್ಯರು ಹೇಳುವ ಪ್ರಕಾರ, ಯಾವುದೇ ರೋಗಿಯಲ್ಲಿ ಸಕಾರಾತ್ಮಕ ಮನೋಭಾವ ತುಂಬ ಮುಖ್ಯ. ಆಗ ಚಿಕಿತ್ಸೆಯ ಪರಿಣಾಮ ಚೆನ್ನಾಗಿರುತ್ತದೆ. ರೋಗಿ ದುರ್ಬಲನಾದಷ್ಟು ರೋಗನಿರೋಧಕ ಶಕ್ತಿ ಕಮ್ಮಿಯಾಗುತ್ತದೆ. ಕಾಯಿಲೆ ದೇಹದ ಒಳನುಸುಳುವುದಕ್ಕೆ ಇದರಿಂದ ಆಸ್ಪದವಾಗುತ್ತದೆ.

ಬಾಂಗ್ಲಾದೇಶದ ಢಾಕಾದ ಟಸ್ಕಿನ್ ಅಲಿ (31 ವರ್ಷ) ಕಂಪ್ಯೂಟರ್ ಇಂಜಿನಿಯರಿಂಗ್ ಪದವೀಧರ. ಗಿಟಾರ್ ನುಡಿಸುವುದರಲ್ಲೂ ಪ್ರಾವೀಣ್ಯ ಗಳಿಸಿದ್ದ. ಹಲವೆಡೆ ಕಛೇರಿಗಳನ್ನು ನೀಡುತ್ತಿದ್ದ. ಆದರೆ ಎಂಟು ತಿಂಗಳುಗಳಿಂದ ಗಿಟಾರ್ ನುಡಿಸಲಾಗದೆ ನೊಂದಿದ್ದ. ಮೊಬೈಲ್ ಬಳಸಲೂ ಕಷ್ಟವಾಗಿತ್ತು. ಅಲ್ಲಿನ ವೈದ್ಯರ ಬಳಿ ಹೋದಾಗ, ಇದು ಡಿಸ್ಟೋನಿಯಾ ಕಾಯಿಲೆ ಎಂದು ಹೇಳಿ, ಇದಕ್ಕೆ ಚಿಕಿತ್ಸೆ ಇಲ್ಲ ಎಂದು ಕೈಚೆಲ್ಲಿದ್ದರು. ಅದಾಗಲೇ ಗಿಟಾರ್ ನುಡಿಸಲಾಗದೆ ಬೇಸರಗೊಂಡಿದ್ದ ಅಲಿ ಈಗ ಮತ್ತಷ್ಟು ಕುಸಿದ. ಅಷ್ಟರಲ್ಲಿ, ಇದೇ ರೀತಿ ಡಿಸ್ಟೋನಿಯಾ ಕಾಯಿಲೆಗೆ ತುತ್ತಾಗಿದ್ದ ಅಭಿಷೇಕ್ ಪ್ರಸಾದ್ ಎಂಬ ಗಿಟಾರ್ ವಾದಕ ಬೆಂಗಳೂರಿನ ಮಹಾವೀರ ಜೈನ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ ಪಡೆದ ಸುದ್ದಿ ಗೊತ್ತಾಯಿತು. ತಾನೂ ಇಲ್ಲಿ ಚಿಕಿತ್ಸೆ ಪಡೆಯಬೇಕೆಂದು ಬಂದ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿತು. ಅಂದಹಾಗೆ ಆಪರೇಷನ್ ಮಾಡುವಾಗ ಆತನನ್ನು ಎಚ್ಚರದಲ್ಲೇ ಇರಿಸಲಾಗಿತ್ತು ಮತ್ತು ಆತ ಆಗೀಗ ಗಿಟಾರ್ ನುಡಿಸುತ್ತಲೂ ಇದ್ದ. ವೈದ್ಯರ ಪರಿಣತಿಯ ಜತೆಗೆ ಗಿಟಾರ್ ನಾದವೂ ಆತನ ಆರೋಗ್ಯದ ಮೇಲೆ ಪರಿಣಾಮ ಬೀರಿರಬಹುದಾ! ಅಥವಾ ತಾನು ಮತ್ತೆ ಗಿಟಾರ್ ನುಡಿಸಲೇಬೇಕು ಎಂಬ ಅದಮ್ಯ ಆಸೆ ಆತನ ಆರೋಗ್ಯಕ್ಕೆ ಕೆಲಮಟ್ಟಿಗೆ ‘ಔಷಧ’ವಾಗಿ ಪರಿಣಮಿಸಿತಾ?

***

ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ ವೈದ್ಯರು ಕೆಲ ವರ್ಷಗಳ ಹಿಂದೆ ಒಂದು ಪ್ರಯೋಗ ನಡೆಸಿದ್ದರು. ಮಾನಸಿಕ ತೊಂದರೆ ಇರುವ ಮಕ್ಕಳ ಮೇಲೆ ಸಂಗೀತ ಚಿಕಿತ್ಸೆ (ಮ್ಯೂಸಿಕ್ ಥೆರಪಿ) ಏನಾದರೂ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ ಎಂಬುದನ್ನು ಪರೀಕ್ಷಿಸುವುದು ಅವರ ಉದ್ದೇಶವಾಗಿತ್ತು. ಅಧ್ಯಯನದ ಕೊನೆಗೆ ಅವರು ಹೀಗೆ ಅಭಿಪ್ರಾಯಪಟ್ಟರು: ‘ಮಾನಸಿಕ ತೊಂದರೆಯುಳ್ಳ ಮಕ್ಕಳ ಸುತ್ತ ಚಿಕಿತ್ಸಾ ವಾತಾವರಣವನ್ನು ನಿರ್ವಹಿಸಲು ಸಂಗೀತ ಚಿಕಿತ್ಸೆಯು ಪ್ರಾಯೋಗಿಕ, ಕಾರ್ಯಸಾಧ್ಯ ಮತ್ತು ಸಹಾಯಕಾರಿ ಎಂಬುದು ದೃಢಪಟ್ಟಿದೆ. ಭಾರತೀಯ ಸಂಗೀತವು ವಿಶಿಷ್ಟವಾದುದು ಮತ್ತು ಸಾಂಸ್ಕೃತಿಕ ಮಹತ್ವವುಳ್ಳದು. ರೋಗಿಗಳ ಮೇಲೆ ಸಂಗೀತದ ಪರಿಣಾಮ ಅರಿಯಲು ಮತ್ತು ಸಾಬೀತುಪಡಿಸಲು ವಿಪುಲ ಅವಕಾಶಗಳಿವೆ. ಮಾನಸಿಕ ಅನಾರೋಗ್ಯವುಳ್ಳ ಮಕ್ಕಳಿಗೆ ಇನ್ನೂ ಹೆಚ್ಚು ತೀವ್ರತೆಯ ಮತ್ತು ಸುಧಾರಿತ ಸಂಗೀತ ಚಿಕಿತ್ಸೆಯನ್ನು ನೀಡಬಹುದಾಗಿದೆ.’

ಇದೇ ನಿಮ್ಹಾನ್ಸ್​ನ ತಜ್ಞವೈದ್ಯರು ಓಂಕಾರದ ಪರಿಣಾಮಗಳ ಕುರಿತು ಅರಿಯಲು ಅಧ್ಯಯನ ಕೈಗೊಂಡಿದ್ದರು. ಅವರ ಪ್ರಕಾರ, ಕನಿಷ್ಠ 15 ಸೆಕೆಂಡ್ ಕಾಲ ‘ಓಂಕಾರ’ ಮಾಡಿದರೆ ಅದರಿಂದ ಮಿದುಳಿನ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಹಾಗಾದರೆ, ಬೇರೆ ಶಬ್ದವನ್ನು ಹೀಗೆ ಉಚ್ಚರಿಸಿದರೆ ಇದೇ ರೀತಿಯ ಪರಿಣಾಮ ಸಾಧ್ಯವೇ? ಇಲ್ಲ ಎಂಬುದು ಅವರ ಉತ್ತರವಾಗಿತ್ತು. ಅಂದರೆ ‘ಓಂ’ಗೆ ವಿಶಿಷ್ಟ ಶಕ್ತಿ ಇದೆ ಎಂದಾಯಿತು.

ಔಷಧ ಚಿಕಿತ್ಸೆ ಜತೆಗೆ ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಸಂಗೀತ ಚಿಕಿತ್ಸೆ ಕೂಡ ಅಲ್ಲಲ್ಲಿ ಚಾಲ್ತಿಯಲ್ಲಿದೆ. ಅಮೆರಿಕನ್ ಮ್ಯೂಸಿಕ್ ಥೆರಪಿ ಅಸೋಸಿಯೇಷನ್ ಈ ಚಿಕಿತ್ಸಾಕ್ರಮವನ್ನು ಹೀಗೆ ವ್ಯಾಖ್ಯಾನಿಸುತ್ತದೆ: ‘ಸಂಗೀತ ಚಿಕಿತ್ಸೆ’ ಎಂಬುದು ಚಿಕಿತ್ಸಾಕ್ರಮ ಅಥವಾ ತಂತ್ರವೊಂದರ ವ್ಯಾಪ್ತಿಯೊಳಗೆ ವ್ಯಕ್ತಿಗತ ಗುರಿಗಳನ್ನು ನೆರವೇರಿಸಿಕೊಳ್ಳಲೆಂದು ಸಂಗೀತಕಲೆಯನ್ನು ಪ್ರಾಯೋಗಿಕವಾಗಿ ಮತ್ತು ಸಾಕ್ಷ್ಯಾಧಾರ ಸಮೇತವಾಗಿ ಬಳಸಿಕೊಳ್ಳುವ ಒಂದು ವಿಧಾನವಾಗಿದೆ; ಅನುಮೋದಿತ ಸಂಗೀತ ಚಿಕಿತ್ಸಾ ವಿಷಯಕ್ರಮವನ್ನು ಸಂಪೂರ್ಣಗೊಳಿಸಿರುವ ಪ್ರಮಾಣಿತ ವೃತ್ತಿಪ್ರವೀಣರೊಬ್ಬರು ಇಂಥ ಚಿಕಿತ್ಸಾಕ್ರಮಗಳಿಗೆ ಮುಂದಾಗುತ್ತಾರೆ.

ಸಂಗೀತ ಚಿಕಿತ್ಸೆಯು ಪ್ರಮಾಣೀಕೃತ ಆರೋಗ್ಯ-ಪ್ರದಾನ ಕೌಶಲವಾಗಿದ್ದು, ಆಯಾ ವ್ಯಕ್ತಿಗಳ ಶಾರೀರಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಅರಿವಿಗೆ ಸಂಬಂಧಿಸಿದ ಅಗತ್ಯಗಳ ಕುರಿತು ಗಮನ ಹರಿಸಲೆಂದು ಚಿಕಿತ್ಸಾಕ್ರಮದ ವ್ಯಾಪ್ತಿಯಲ್ಲಿ ಸಂಗೀತವನ್ನು ಬಳಸುವುದು ಇದರ ವೈಶಿಷ್ಟ್ಯವಾಗಿರುತ್ತದೆ. ಆಯಾ ವ್ಯಕ್ತಿಯ ಶಕ್ತಿ-ಸಾಮರ್ಥ್ಯಗಳು ಮತ್ತು ಅವಶ್ಯಕತೆಗಳ ಮೌಲ್ಯಮಾಪನ ಮಾಡಿದ ನಂತರ, ಸಂಗೀತಸೃಷ್ಟಿ, ಗಾಯನ, ಸಂಗೀತದ ಆಲಿಕೆಗೆ ಮುಂದಾಗುವುದು ಸೇರಿದಂತೆ ಸೂಚಿತ ಚಿಕಿತ್ಸೆಯನ್ನು ತಜ್ಞ ಸಂಗೀತಚಿಕಿತ್ಸಕರು ಒದಗಿಸುತ್ತಾರೆ. ಇಂಥದೊಂದು ಸಾಂಗೀತಕ ಹಸ್ತಕ್ಷೇಪ ಅಥವಾ ಸಹಭಾಗಿತ್ವದ ಮೂಲಕ, ಸದರಿ ವ್ಯಕ್ತಿಯ ಸಾಮರ್ಥ್ಯಗಳಿಗೆ ಮತ್ತಷ್ಟು ಬಲಬಂದು, ಅವರ ಜೀವನದ ಇನ್ನಿತರ ಕ್ಷೇತ್ರಗಳಿಗೂ ಅದು ವರ್ಗಾಯಿಸಲ್ಪಡುತ್ತದೆ. ಸರ್ವಾಂಗೀಣ ಶಾರೀರಿಕ ಸ್ವಾಸ್ಥ್ಯದ ಪುನಃಸ್ಥಾಪನೆ, ನೀಡಲಾಗುತ್ತಿರುವ ಚಿಕಿತ್ಸೆಯಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುವಂತಾಗುವಲ್ಲಿ ಜನರ ಪ್ರೇರಕಶಕ್ತಿಯನ್ನು ವರ್ಧಿಸುವುದು, ಚಿಕಿತ್ಸೆ ಪಡೆಯುತ್ತಿರುವವರು ಮತ್ತು ಅವರ ಕುಟುಂಬಿಕರಿಗೆ ಭಾವನಾತ್ಮಕ ಒತ್ತಾಸೆ ನೀಡುವುದು ಮತ್ತು ಅವರ ಭಾವನೆಗಳ ಅಭಿವ್ಯಕ್ತಿಗೊಂದು ವೇದಿಕೆ ಕಲ್ಪಿಸುವುದು ಇತ್ಯಾದಿಯಾಗಿ ಈ ಕ್ರಮದ ಪರಿಣಾಮಕಾರತ್ವವು ವಿಸ್ತರಿಸಿದೆ’.

***

ಕುರುಕ್ಷೇತ್ರದ ರಣಾಂಗಣದ ನಡುವೆ ಹೋಗಿ ನಿಂತ ಅರ್ಜುನ, ಸುತ್ತ ನೆರೆದ ಬಂಧುಬಾಂಧವರನ್ನು ನೋಡಿ, ‘ಯುದ್ಧಮಾಡಲಾರೆ’ ಎಂದು ವಿಷಾದಯೋಗ ಆವರಿಸಿ ಕೂತಿದ್ದ. ನಂತರದಲ್ಲಿ ಸ್ವಯಂ ಶ್ರೀಕೃಷ್ಣ ಪರಮಾತ್ಮನೇ ಗೀತೆಯನ್ನು ಬೋಧಿಸಿ ಅರ್ಜುನನನ್ನು ಯುದ್ಧಸನ್ನದ್ಧನನ್ನಾಗಿಸಬೇಕಾಯಿತು. ಅಂದರೆ, ಕರ್ತವ್ಯಕ್ಕೆ ಆತನನ್ನು ಸಜ್ಜುಗೊಳಿಸಿದ್ದು. ಆ ಬಳಿಕ ನಡೆದದ್ದು ಏನೆಂಬುದು ಎಲ್ಲರಿಗೂ ಗೊತ್ತೇ ಇದೆ. ಬದುಕೆಂಬ ಸಮರಾಂಗಣದಲ್ಲಿಯೂ ನಾವು ಹೀಗೆ ಕೆಲವೊಮ್ಮೆ ಕುಸಿಯುತ್ತೇವೆ, ಮುಂದೇನೆಂಬ ದಾರಿಕಾಣದೆ ತೊಳಲಾಡುತ್ತೇವೆ, ನಿರಾಶೆಯ ಮಡುವಿನಲ್ಲಿ ಬೀಳುತ್ತೇವೆ. ಅಂಥ ಸಂದರ್ಭದಲ್ಲಿ ಭಗವದ್ಗೀತೆ ಕೈಹಿಡಿದು ನಡೆಸಬಲ್ಲದು. ಎಷ್ಟೆಂದರೂ ಅದು ಭಗವಂತನ ವಾಣಿಯಲ್ಲವೆ? ಅಲ್ಲಿ ಭರವಸೆಯಿದೆ, ಅನುಗ್ರಹವಿದೆ, ಆಶಾವಾದವಿದೆ, ತನ್ನನ್ನು ನಂಬಿದರೆ ಕೈಬಿಡೆನೆಂದು ಸ್ವಯಂ ನಾರಾಯಣನೇ ಘೋಷಿಸುತ್ತಾನೆ. ಹೀಗಾಗಿ ಆಸ್ತಿಕರಿಗೆ ಅದು ಭರವಸೆಯ ಗೀತೆ. ಭಗವಂತನನ್ನು ‘ಭವರೋಗ ವೈದ್ಯ’ ಎಂದೂ ಕರೆಯುತ್ತಾರೆ. ಅಂದರೆ, ಈ ಲೌಕಿಕ ಪ್ರಪಂಚದಿಂದ ನಮ್ಮನ್ನು ಪಾರುಮಾಡುವವನು. ಆ ಮೂಲಕ ನಮ್ಮನ್ನು ತನ್ನ ಮಡಿಲ ಮಗುವಾಗಿಸಿ ಪೊರೆಯುವವನು. ಇಂಥ ಗೀತೆ ಕಾಯಿಲೆಗೂ ಮದ್ದಾಗಬಲ್ಲದೆ? ಹೌದು ಎನ್ನುತ್ತಾರೆ ತಜ್ಞರು.

ಹೈದರಾಬಾದ್​ನ ಉಸ್ಮಾನಿಯಾ ಜನರಲ್ ಹಾಸ್ಪಿಟಲ್ ಹಾಗೂ ವಿದೇಶದ ಕೆಲ ವೈದ್ಯಕೀಯ ಸಂಸ್ಥೆಗಳು ನಡೆಸಿದ ಅಧ್ಯಯನದ ಪ್ರಕಾರ, ಮಧುಮೇಹವನ್ನು ನಿಯಂತ್ರಿಸಲು ಭಗವದ್ಗೀತೆ ಅತ್ಯುತ್ತಮ ಮದ್ದಾಗಬಲ್ಲದು. ಅದು ಹೇಗೆ? ನಮಗೆಲ್ಲ ಗೊತ್ತಿರುವ ಪ್ರಕಾರ, ಗೀತೆ ಯಾವುದೇ ಧರ್ಮಕ್ಕೆ ಸೀಮಿತವಾದುದಲ್ಲ. ಅದು ಮಾನವರೆಲ್ಲರನ್ನೂ ಉದ್ದೇಶಿಸಿ ನುಡಿದದ್ದು. ಅಲ್ಲಿ ಕೇವಲ ಧರ್ಮ, ದೇವರು ಇಲ್ಲ. ಅದು ಇಡಿಯ ಬದುಕಿಗೆ ಬೆಳಕಿಂಡಿ. ಬದುಕನ್ನು ಹೇಗೆ ಸ್ವೀಕರಿಸಬೇಕು, ಬದುಕಿನ ಸಿದ್ಧಾಂತ ಏನಿರಬೇಕು, ಕಷ್ಟನಷ್ಟಗಳನ್ನು ಎದುರಿಸುವ ಬಗೆ, ಕರ್ತವ್ಯದ ಸ್ವರೂಪ ಮುಂತಾಗಿ ಜೀವನದ ಎಲ್ಲ ಆಯಾಮಗಳನ್ನು ಅಲ್ಲಿ ಭಗವಂತ ವಿವೇಚಿಸಿದ್ದಾನೆ, ದಾರಿಯನ್ನು ತೋರಿದ್ದಾನೆ. ಭಗವದ್ಗೀತೆಯನ್ನು ಸುಟ್ಟುಹಾಕಿ ಎಂದು ಕೆಲವರು ಹೇಳಬಹುದು. ಆದರೆ ಗೀತೆಯಿಂದ ಬೆಳಕು ಪಡೆದ-ಪಡೆಯುತ್ತಿರುವ ಅಸಂಖ್ಯ ಜನರಿದ್ದಾರೆ ಎಂಬುದನ್ನು ಅಲ್ಲಗಳೆಯಲಾಗದಲ್ಲ.

ಮಧುಮೇಹ ಎಂಬುದು ಕಾಯಿಲೆ ಎಂಬುದಕ್ಕಿಂತ ಹೆಚ್ಚಾಗಿ ಜೀವನಶೈಲಿ ಸಂಬಂಧಿತ ಆರೋಗ್ಯ ತೊಂದರೆ. ಅಂದರೆ ಇಲ್ಲಿ ಜೀವನಶೈಲಿ ಬದಲಾವಣೆ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಭಗವದ್ಗೀತೆಯ ಬೋಧನೆಗಳು ಪ್ರಯೋಜನಕಾರಿ ಎಂಬುದು ತಜ್ಞರ ಅಂಬೋಣ. ‘ಭಗವದ್ಗೀತೆಯು ಕೇವಲ ಧಾರ್ವಿುಕ ಅಥವಾ ತತ್ತ್ವಜ್ಞಾನದ ಗ್ರಂಥವಲ್ಲ. ಅದರಲ್ಲಿನ 700 ಕ್ಕೂ ಅಧಿಕ ಶ್ಲೋಕಗಳು ಬದುಕಿನ ಎಲ್ಲ ಆಯಾಮಗಳ ಬಗ್ಗೆಯೂ ಒಳನೋಟ ನೀಡುತ್ತವೆ ಮತ್ತು ಅದು ಸಾರ್ವತ್ರಿಕವಾದುದು. ಮಧುಮೇಹ ಇದೆ ಎಂಬುದು ಗೊತ್ತಾದಾಗ ವ್ಯಕ್ತಿ ಸಹಜವಾಗಿ ದುಃಖಕ್ಕೆ ಒಳಗಾಗುತ್ತಾನೆ ಮತ್ತು ಜೀವನದಲ್ಲಿ ತನಗೆ ಅತಿಪ್ರಿಯವಾದ ಕೆಲ ಸಂಗತಿಗಳಿಂದ ದೂರವಾಗಬೇಕಾದ ವ್ಯಥೆಯೂ ಅವನನ್ನು ಕಾಡಬಹುದು. ಇಂಥ ಸಂದರ್ಭದಲ್ಲಿ ಔಷಧದ ಜತೆಗೆ ಮನೋಸಂಯಮ, ಜೀವನಶೈಲಿ ಬದಲಾವಣೆಯೂ ಮುಖ್ಯವಾಗುತ್ತದೆ. ಇಂಥ ಸನ್ನಿವೇಶದಲ್ಲಿ ಗೀತೆ ನೆರವಿಗೆ ಬರುತ್ತದೆ’ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಹಾಗಾದರೆ ಸಂಗೀತಕ್ಕೆ, ಅಧ್ಯಾತ್ಮಕ್ಕೆ, ಧಾರ್ವಿುಕ ಉಪದೇಶಗಳಿಗೆ ಅಷ್ಟೆಲ್ಲ ಶಕ್ತಿಯಿದೆಯೇ? ರೋಗಿ ಮೊಗದಲ್ಲಿ ನಗು ಅರಳಿಸುವ ಮಾಂತ್ರಿಕಶಕ್ತಿ ಇವಕ್ಕಿದೆಯೇ? ಇದೆ ಎಂಬುದಕ್ಕೆ ವೈಜ್ಞಾನಿಕ ಸಂಶೋಧನೆಗಳು ಸಾಕ್ಷಿಯಾಗುತ್ತಿವೆ. ಮಾರಣಾಂತಿಕ ಕಾಯಿಲೆಯಿಂದ ನರಳುತ್ತಿರುವವರನ್ನು ಸಹ ಅವಧೂತರು, ಆಧ್ಯಾತ್ಮಿಕ ಮಹಾಪುರುಷರು ತಮ್ಮ ತಪಶ್ಶಕ್ತಿಯಿಂದ ಗುಣಪಡಿಸಿದ ಎಷ್ಟೋ ನಿದರ್ಶನಗಳು ನಮಗೆ ಸಿಗುತ್ತವೆ. ಇಷ್ಟೆಲ್ಲ ಇದೆ ಎಂದಾದರೆ, ಪರ್ಯಾಯ ಕ್ರ್ರುಗಳಿಂದಲೇ ಗುಣಹೊಂದುವುದಾದರೆ ವೈದ್ಯಕೀಯ ರಂಗದಲ್ಲಿ ಇಷ್ಟೆಲ್ಲ ಸಂಶೋಧನೆಗಳು, ಆವಿಷ್ಕಾರಗಳು ಏಕೆ ನಡೆಯಬೇಕು? ಇಷ್ಟೆಲ್ಲ ಹೈಟೆಕ್ ಆಸ್ಪತ್ರೆಗಳು, ಯಂತ್ರಗಳು ಏಕೆ ಬೇಕು? ಎಂದು ಕೆಲವರು ಕೇಳಿಯಾರು. ಚಿಕಿತ್ಸೆ ಇಲ್ಲದೆ ಗುಣವಾಗದು. ಆದರೆ ಚಿಕಿತ್ಸೆ ಫಲಪ್ರದವಾಗಬೇಕಾದರೆ ರೋಗಿಯ ಮನಸ್ಥಿತಿ ಕೂಡ ಮುಖ್ಯವಾಗುತ್ತದೆ. ಇಂಥ ಸಕಾರಾತ್ಮಕ ಮನೋಭಾವ ಮೂಡಿಸುವಲ್ಲಿ, ತೀವ್ರವೇದನೆಯ ಕಾಯಿಲೆ ಬಂದರೂ ಅದನ್ನು ಹೇಗೆ ಎದುರಿಸಬೇಕು ಎಂಬ ನಿಟ್ಟಿನಲ್ಲಿ ಅಧ್ಯಾತ್ಮ ನಮ್ಮ ಕೈಹಿಡಿಯಬಲ್ಲದು. ವೈದ್ಯರು ಹೇಳುವ ಪ್ರಕಾರ, ಯಾವುದೇ ರೋಗಿಯಲ್ಲಿ ಸಕಾರಾತ್ಮಕ ಮನೋಭಾವ ತುಂಬ ಮುಖ್ಯ. ಆಗ ಚಿಕಿತ್ಸೆಯ ಪರಿಣಾಮ ಚೆನ್ನಾಗಿರುತ್ತದೆ. ರೋಗಿ ದುರ್ಬಲನಾದಷ್ಟು ರೋಗನಿರೋಧಕ ಶಕ್ತಿ ಕಮ್ಮಿಯಾಗುತ್ತದೆ. ಕಾಯಿಲೆ ದೇಹದ ಒಳನುಸುಳುವುದಕ್ಕೆ ಇದರಿಂದ ಆಸ್ಪದವಾಗುತ್ತದೆ. ನನ್ನ ಪರಿಚಯದ ಪ್ರಾಣಿಕ್ ಹೀಲರ್ ಒಬ್ಬರು ಒಮ್ಮೆ ಒಂದು ಮಾತು ಹೇಳಿದ್ದು ನೆನಪಿಗೆ ಬರುತ್ತಿದೆ. ಅವರ ಪ್ರಕಾರ- ಪ್ರಾಣಿಕ್ ಹೀಲಿಂಗ್​ನಿಂದ ತನ್ನ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ವ್ಯಕ್ತಿಯೊಬ್ಬ ಗಟ್ಟಿಮನಸ್ಸು ಮಾಡಿ ಕೂತುಬಿಟ್ಟರೆ ಆಗ ಚಿಕಿತ್ಸೆಯಿಂದ ವಿಶೇಷ ಪ್ರಯೋಜನವಾಗದು. ಮನಸ್ಸಿಗಿರುವ ಶಕ್ತಿ ಅಂಥದ್ದು! ಇದೇ ಮನಸ್ಸು ತಾನು ಎಂಥ ತೀವ್ರ ಕಾಯಿಲೆಯನ್ನಾದರೂ ಎದುರಿಸಬಲ್ಲೆ, ನಗುನಗುತ್ತ ಇರಬಲ್ಲೆ ಎಂದು ದೃಢನಿಶ್ಚಯ ಮಾಡಿಬಿಟ್ಟರೆ ಆ ನಗುವನ್ನು ಕಸಿಯಲು ವಿಧಿಯಿಂದಲೂ ಅಸಾಧ್ಯವೇನೋ!

ಈ ವಾದವನ್ನು ಮಣಿಪಾಲ್ ಆಸ್ಪತ್ರೆ ಸಮೂಹದ ಮುಖ್ಯಸ್ಥ ಡಾ.ಸುದರ್ಶನ ಬಲ್ಲಾಳ್ ಒಪ್ಪುತ್ತಾರೆ. ‘ರೋಗಿ ಗುಣಮುಖನಾಗುವಲ್ಲಿ ನಂಬಿಕೆ ಬಹಳ ಮುಖ್ಯವಾದುದು. ಅದು ದೇವರ ಮೇಲಿರಬಹುದು, ನಂಬಿದ ಗುರುವಿನ ಮೇಲಿರಬಹುದು ಅಥವಾ ಚಿಕಿತ್ಸೆ ನೀಡುವ ವೈದ್ಯರ ಮೇಲಿರಬಹುದು. ಎಷ್ಟೋ ಜನರು ಚಿಕಿತ್ಸಾ ಸ್ಥಳದಲ್ಲಿ ತಮ್ಮ ಆರಾಧ್ಯದೇವರು ಅಥವಾ ಗುರುವಿನ ಚಿತ್ರ ಇಡಲು ಹೇಳುತ್ತಾರೆ. ಖಂಡಿತವಾಗಿಯೂ ಇದರಿಂದ ಪರಿಣಾಮವಿದೆ. ಯಾವುದನ್ನೂ ನಂಬದವರಿಗೆ, ಸಂಶಯಪಡುವವರಿಗೆ ಮತ್ತು ‘ಅಯ್ಯೋ ನನಗೆ ಹೀಗಾಯಿತಲ್ಲ, ಇನ್ನು ನನ್ನ ಕಥೆ ಮುಗೀತು’ ಇತ್ಯಾದಿಯಾಗಿ ಹೆದರುವವರಿಗೆ ಹೋಲಿಸಿದರೆ ನಂಬಿಕೆ ಇರುವವರು ವಾಸಿಯಾಗುವ ಪ್ರಮಾಣ ಅಧಿಕ ಎಂಬುದನ್ನು ನನ್ನ ಅನುಭವದಿಂದ ಹೇಳಬಲ್ಲೆ. ರೋಗಿಗಳು ಮಾತ್ರವಲ್ಲ, ನಾವು ಎಷ್ಟೋ ವೈದ್ಯರು ಕೂಡ ದೇವರನ್ನು ಪ್ರಾರ್ಥಿಸಿಯೇ ಚಿಕಿತ್ಸೆಗೆ ಮುಂದಾಗುತ್ತೇವೆ. ರೋಗಿಯಲ್ಲಿ ಇರುವ ಇಂಥ ನಂಬಿಕೆ ಮತ್ತು ವೈದ್ಯನ ಪರಿಣತಿ ಸೇರಿದಾಗ ಅದರಿಂದಾಗುವ ಪರಿಣಾಮ ಹೆಚ್ಚು’ ಎಂದು ಅವರು ಹೇಳುತ್ತಾರೆ. ಯೋಗ, ಪ್ರಾಣಾಯಾಮದಿಂದ ಸಕಾರಾತ್ಮಕ ಪರಿಣಾಮ ಗ್ಯಾರಂಟಿ ಎನ್ನುತ್ತಾರೆ ಅವರು.

‘ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲ…’ ಎಂಬ ದಾಸವಾಣಿಯನ್ನು ಜೀವನದಲ್ಲಿ ಹೀಗೂ ಅನ್ವಯಿಸಿಕೊಳ್ಳಬಹುದೇನೊ!

ಕೊನೇ ಮಾತು: ಮಂತ್ರದಿಂದ ಮಾವಿನಕಾಯಿ ಉದುರುತ್ತದೆಯಾ ಎಂಬುದು ಹಳೆಯ ಜಿಜ್ಞಾಸೆ. ಇದಕ್ಕೆ ಉತ್ತರ ಅವರವರ ಭಾವಕ್ಕೆ ಬಿಟ್ಟಿದ್ದು.

Leave a Reply

Your email address will not be published. Required fields are marked *

Back To Top