Friday, 16th November 2018  

Vijayavani

Breaking News

ಜಂಗಲ್​ರಾಜ್ ಬಿಹಾರ ಮಂಗಳರಾಜ್ಯದ ಮಾದರಿಯಾದೀತೆ…

Saturday, 16.06.2018, 3:05 AM       No Comments

ಪಾನನಿಷೇಧ ನಂತರ ಬಿಹಾರದಲ್ಲಿ ಒಂದುರೀತಿಯಲ್ಲಿ ಅಲ್ಲೋಲಕಲ್ಲೋಲವೇ ಆಗುತ್ತಿದೆ. ಅಕ್ರಮ ಮದ್ಯ ಸಂಗ್ರಹ, ಮಾರಾಟದ ಆರೋಪದ ಮೇಲೆ ನಿತ್ಯವೂ ಹಲವರ ಬಂಧನವಾಗುತ್ತಿದೆ. ಸರ್ಕಾರದ ಕಠಿಣ ನೀತಿಗೆ ಟೀಕೆಗಳೂ ಬರುತ್ತಿವೆ. ಆದರೆ ಪಾನನಿಷೇಧದಿಂದ ಸಕಾರಾತ್ಮಕ ಪರಿಣಾಮವಾಗಿದೆಯೆಂಬುದಕ್ಕೆ ಸಮರ್ಥನೆ ದೊರೆತಿದೆ.

ನಮ್ಮ ವಿಜಯವಾಣಿ ಪತ್ರಿ್ರೆಯಲ್ಲಿ ಈ ವಾರ ಒಂದು ವರದಿ ಪ್ರಕಟವಾಗಿತ್ತು. ರಾಜ್ಯದಲ್ಲಿ ಬಾರ್ ಲೈಸೆನ್ಸ್​ಗಳ ನವೀಕರಣದಲ್ಲಿ ಒಂದೊಂದಕ್ಕೂ 50 ಸಾವಿರದಿಂದ ಒಂದು ಲಕ್ಷ ರೂ.ವರೆೆಗೆ ಲಂಚ ವ್ಯವಹಾರ ನಡೆಯುತ್ತದೆಂಬುದನ್ನು ತೆರೆದಿಡುವ ವರದಿ ಅದು. ರಾಜ್ಯದಲ್ಲಿ 10,297 ಮದ್ಯದಂಗಡಿಗಳಿದ್ದು ಪ್ರತಿ ವರ್ಷ ಜುಲೈ ತಿಂಗಳಲ್ಲಿ ಅವು ಪರವಾನಿಗೆ ನವೀಕರಿಸಿಕೊಳ್ಳುವುದು ಕಡ್ಡಾಯ. ಪತ್ರಿಕಾ ವರದಿಯಲ್ಲಿ ಅಂದಾಜಿಸಿದ ಪ್ರಕಾರ ಹೀಗೆ ಕೈಬದಲಾಗುವ ಮೊತ್ತ ಸುಮಾರು 100 ಕೋಟಿ ರೂ.ಗಳು!

ಆ ವರದಿ ಪ್ರಕಟವಾದ ಮರುದಿನ ಮತ್ತೊಂದು ವರದಿ ಬಂತು. ಬಾರ್ ಲೈಸೆನ್ಸ್ ನವೀಕರಣದಲ್ಲಿ ನಡೆಯುವ ಲಂಚಾವತಾರವನ್ನು ನಿಗ್ರಹಿಸಲು

ಆನ್​ಲೈನ್ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಅಬಕಾರಿ ಇಲಾಖೆ ಆಯುಕ್ತ ಮನೀಶ್ ಮೌದ್ಗಿಲ್ ಹೇಳಿದ್ದರ ಮಾಹಿತಿ ಆ ವರದಿಯಲ್ಲಿತ್ತು. ಅಂತೂ ಎಲ್ಲೆಲ್ಲಿ ಏನೇನು ವ್ಯವಹಾರಗಳಾಗುತ್ತವೋ! ಅದರಲ್ಲೂ ಈ ಮದ್ಯ ಇದೆಯಲ್ಲ, ಇದರ ವ್ಯವಹಾರ ಎಲ್ಲೋ ನಡೆಯುತ್ತದೆ, ದುಡ್ಡು ಯಾರ್ಯಾರಿಗೋ ಸೇರುತ್ತದೆ. ಅತ್ತ ಇದಕ್ಕೆಲ್ಲ ಏನೂ ಸಂಬಂಧವಿಲ್ಲದ ಎಷ್ಟೋ ಮನೆಗಳ ದೀಪ ಆರುತ್ತದೆ. ಒಮ್ಮೆ ಆರಿದ ದೀಪವನ್ನು ಮತ್ತೆ ಹೊತ್ತಿಸುವುದು ಸುಲಭವೆ?

ಬಿಹಾರದಲ್ಲಿನ ಈಚಿನ ಒಂದು ಸಮೀಕ್ಷಾ ಮಾಹಿತಿಯ ಹಿನ್ನೆಲೆಯಲ್ಲಿ ಈ ಮೇಲಿನ ಸಂಗತಿ ಸಾಂರ್ದಭಿಕವಾಗಿ ನೆನಪಾಯಿತು. ಬಿಹಾರದಲ್ಲಿ 2016ರ ಏಪ್ರಿಲ್​ನಲ್ಲಿ ಪಾನನಿಷೇಧವನ್ನು ಜಾರಿಗೆ ತರಲಾಯಿತು. ಬಿಹಾರ ಅಬಕಾರಿ (ತಿದ್ದುಪಡಿ) ಕಾಯ್ದೆ, 2016ನ್ನು ಅನುಮೋದಿಸುವ ಮೂಲಕ ಅಲ್ಲಿನ ಸರ್ಕಾರ ಈ ನೂತನ ಕಾಯ್ದೆಯನ್ನು ಅಮಲಿಗೆ ತಂದಿತು. ಎರಡು ವರ್ಷ ಕಳೆದ ಬಳಿಕವೂ ಪಾನನಿಷೇಧ ಸರಿಯೋ ತಪ್ಪೋ ಎಂಬ ಚರ್ಚೆಗಳು ನಿಂತಿಲ್ಲ. ಜತೆಗೆ, ಈ ನೀತಿಯಿಂದಾದ ಪರಿಣಾಮವೇನು ಎಂಬ ಪ್ರಶ್ನೆಯೂ ಇದ್ದೇ ಇದೆ. ಅಂದಹಾಗೆ, ಅಲ್ಲಿ ಪಾನನಿಷೇಧ ಜಾರಿಗೆ ಬರಲು ಮುಖ್ಯ ಕಾರಣವಾದದ್ದು ಹಿಂದಿನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿನ ಬೆಳವಣಿಗೆಗಳು. ಜೆಡಿಯು ನಾಯಕ ನಿತೀಶ್​ಕುಮಾರ್ ಭಾಗವಹಿಸಿದ ಅನೇಕ ಸಭೆಗಳಲ್ಲಿ ಮಹಿಳೆಯರಿಂದ ಒಂದು ಸಾಮಾನ್ಯ ಬೇಡಿಕೆ ಬರುತ್ತಿತ್ತು. ಅದೆಂದರೆ-ರಾಜ್ಯದಲ್ಲಿ ಮದ್ಯ ನಿಷೇಧಿಸಿ ಎಂದು. ಮನೆಯ ಆದಾಯವೆಲ್ಲ ಮದ್ಯಕ್ಕೇ ವ್ಯಯವಾಗುತ್ತಿದೆ. ಇದಲ್ಲದೆ ಮನೆಯಲ್ಲಿ ನಿತ್ಯ ಜಗಳರಂಪಾಟ ಬೇರೆ. ಹೀಗಾಗಿ ಮದ್ಯ ಸಿಗದಂತೆ ಮಾಡಿ ಎಂಬುದು ಈ ಸ್ತ್ರೀಯರ ಅಳಲಾಗಿತ್ತು. ನಿತೀಶ್​ಕುಮಾರ್ ಅದ್ಯಾವುದೋ ಹುಕ್ಕಿಯಲ್ಲಿ ಹೂಂ ಎಂದುಬಿಟ್ಟರು. ಚುನಾವಣೆಯಲ್ಲಿ ನಿತೀಶ್ ಆರಿಸಿಬಂದರು. ಮುಖ್ಯಮಂತ್ರಿಯೂ ಆದರು. ಹಾಗಂತ ಅವರು ಚುನಾವಣಾಪೂರ್ವದಲ್ಲಿ ಮಹಿಳೆಯರಿಗೆ ಕೊಟ್ಟ ವಾಗ್ದಾನವನ್ನು ಮರೆಯಲಿಲ್ಲ. ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಪಾನನಿಷೇಧ ನೀತಿ ಜಾರಿಗೆ ತಂದರು. ಹೀಗೆ ಪೂರ್ಣ ಪಾನನಿಷೇಧ ಇರುವ ಇತರ ರಾಜ್ಯಗಳು- ಗುಜರಾತ್, ನಾಗಾಲ್ಯಾಂಡ್ ಮತ್ತು ಲಕ್ಷದ್ವೀಪ.

ನಂತರದಲ್ಲಿ ಬಿಹಾರದಲ್ಲಿ ಒಂದುರೀತಿಯಲ್ಲಿ ಅಲ್ಲೋಲಕಲ್ಲೋಲವೇ ಆಗುತ್ತಿದೆ. ಅಕ್ರಮ ಮದ್ಯ ಸಂಗ್ರಹ, ಮಾರಾಟದ ಆರೋಪದ ಮೇಲೆ ನಿತ್ಯವೂ ಹಲವರ ಬಂಧನವಾಗುತ್ತಿದೆ. ಇದರಲ್ಲಿ ಮಹಿಳೆಯರು, ಮಕ್ಕಳೂ ಸೇರಿದ್ದಾರೆ. ಆದರೆ ಸಿಎಂ ನಿತೀಶ್ ಮಾತ್ರ ಅಲುಗಾಡಲಿಲ್ಲ, ನೀತಿಯಲ್ಲಿ ಸಡಿಲತೆ ತರಲಿಲ್ಲ. ಹಾಗಾದರೆ ಇದರಿಂದ ಬಿಹಾರಕ್ಕೆ ಪ್ರಯೋಜನವೇನಾದರೂ ಆಯಿತೆ? ಅಪರಾಧ ಪ್ರಮಾಣ ಕಡಿಮೆಯಾಗಿದೆ ಎಂದು ಸರ್ಕಾರ ಅಂಕಿಅಂಶ ಕೊಟ್ಟಿತು. ಆದರೆ ಸರ್ಕಾರ ಸಕಾರಾತ್ಮಕ ನೋಟ ನೀಡದೆ ಬೇರೆ ರೀತಿ ವರದಿ ನೀಡಲು ಸಾಧ್ಯವೇ ಎಂದು ಸಂದೇಹವಾದಿಗಳು ಪ್ರಶ್ನಿಸಿದರು. ಅದೂ ಅಲ್ಲದೆ, ಬಿಹಾರದಲ್ಲಿ ಮದ್ಯನಿಷೇಧವಿದ್ದರೂ ಮದ್ಯವ್ಯಸನಿಗಳು ಅಕ್ಕಪಕ್ಕದ ರಾಜ್ಯಗಳಿಗೆ ಹೋಗುತ್ತಿದ್ದಾರೆ, ಇದರಿಂದ ಏನು ಪರಿಣಾಮವಾಯಿತು ಎಂದೂ ಕೆಲವರು ತಕರಾರು ಎತ್ತಿದರು.

ಈಚೆಗೆ ಸರ್ಕಾರದ ವತಿಯಿಂದ ನಡೆದ ಸಮೀಕ್ಷಾ ವರದಿಗಳು ಸಹ ಪಾನನಿಷೇಧದ ಸಕಾರಾತ್ಮಕ ಪರಿಣಾಮಗಳನ್ನೇ ಎತ್ತಿತೋರಿವೆ. ಪಟನಾದ ಡೆವಲಪ್​ವೆುಂಟ್ ಮ್ಯಾನೇಜ್​ವೆುಂಟ್ ಸ್ಟಡಿಸ್(ಡಿಎಂಐ) ಅಧ್ಯಯನದ ಪ್ರಕಾರ, ಪಾನನಿಷೇಧದಿಂದಾಗಿ ಬಿಹಾರದಲ್ಲಿ ಹಾಲು, ಜೇನುತುಪ್ಪ ಬಳಕೆ ಹೆಚ್ಚಿದೆ ಮತ್ತು ಅಪರಾಧ ಪ್ರಮಾಣ ಇಳಿಮುಖವಾಗಿದೆ. 2016-17ಕ್ಕೆ ಹೋಲಿಸಿದರೆ ಈ ವರ್ಷ ಹಾಲಿನ ಖರೀದಿ ಪ್ರಮಾಣ ಶೇ.17ರಷ್ಟು ಹೆಚ್ಚಿದೆ. ಜೇನುತುಪ್ಪದ ಖರೀದಿ ಪ್ರಮಾಣ ಶೇ.380 ಮತ್ತು ಬೆಣ್ಣೆ ಖರೀದಿ ಶೇ.200 ಹೆಚ್ಚಳ ಕಂಡಿದೆ ಎನ್ನುತ್ತವೆ ಅಂಕಿಅಂಶಗಳು.

ಬಿಹಾರದಲ್ಲಿ ಪಾನನಿಷೇಧ ಘೋಷಣೆ ಮಾಡಿದಾಗ ಅಲ್ಲಿ ಸುಮಾರು 44 ಲಕ್ಷ ಮದ್ಯವ್ಯಸನಿಗಳಿದ್ದರು ಎಂದು ಅಂದಾಜಿಸಲಾಗಿದೆ. ಇದು 2011ರ ಆಲ್ಕೋಹಾಲ್ ಸೇವನೆ ಅಂಕಿಅಂಶ ಆಧರಿಸಿದ ಲೆಕ್ಕ. ಈ ಸಂಖ್ಯೆಯಲ್ಲಿ ಸ್ವಲ್ಪ ಆಚೀಚೆ ಇರುತ್ತದೆ. ಒಬ್ಬ ಆಲ್ಕೋಹಾಲ್​ಪ್ರಿಯ ತಿಂಗಳಿಗೆ ಕನಿಷ್ಠ 1 ಸಾವಿರ ರೂ. ವ್ಯಯಿಸುತ್ತಾನೆ ಎಂದಿಟ್ಟುಕೊಂಡರೂ ಒಟ್ಟಾರೆಯಾಗಿ 440 ಕೋಟಿ ರೂ. ಆಗುತ್ತದೆ. ವರ್ಷಕ್ಕೆ 5,280 ಕೋಟಿ ರೂ.ಗಳಾಗುತ್ತವೆ ಎಂದು ಡಿಎಂಐ ಸಂಸ್ಥೆ ಲೆಕ್ಕಹಾಕಿದೆ. ಇದು ಭರ್ಜರಿ ಉಳಿತಾಯವೇ ಆಯಿತಲ್ಲವೆ!

ಮದ್ಯದ ಮೇಲೆ ಖರ್ಚುಮಾಡುತ್ತಿದ್ದ ಹಣವನ್ನು ಜನರು ಈಗ ಗ್ರಾಹಕ ಸಾಮಗ್ರಿಗಳ ಖರೀದಿಗೆ ಬಳಸುತ್ತಿದ್ದಾರೆ ಎಂದೂ ವರದಿ ಬೊಟ್ಟುಮಾಡಿದೆ. ಅಂದರೆ ಜನರ ಖರೀದಿ ಶಕ್ತಿ ಹೆಚ್ಚಿದೆ ಎಂಬುದನ್ನು ಈ ಅಧ್ಯಯನ ಹೇಳುತ್ತದೆ. ಈ ಮಾತಿಗೆ ಕೆಲ ಸಮರ್ಥನೆಗಳೂ ಇವೆ. ಚತುಷ್ಚಕ್ರ ವಾಹನಗಳ ಮಾರಾಟ ಶೇ.30, ಟ್ರಾಕ್ಟರ್ ಮಾರಾಟ ಶೇ. 29 ಮತ್ತು ದ್ವಿಚಕ್ರವಾಹನಗಳ ಮಾರಾಟ ಶೇ.32 ಹೆಚ್ಚಳ ಕಂಡಿದೆ. ಮನೆಮುರಿಯುವ ಮದ್ಯ ಮನೆಗೆ ವಸ್ತು ಸೇರಲು ಕಾರಣವಾಗುತ್ತಿರುವುದು ಇಲ್ಲಿನ ಚೋದ್ಯ.

ಪಟನಾದ ಏಷ್ಯನ್ ಡೆವಲಪ್​ವೆುಂಟ್ ರೀಸರ್ಚ್ ಇನ್​ಸ್ಟಿಟ್ಯೂಟ್ ನಡೆಸಿದ ಅಧ್ಯಯನದಲ್ಲಿ, ಹಣಕ್ಕಾಗಿ ಅಪಹರಣ ಪ್ರಕರಣಗಳಲ್ಲಿ ಶೇ.66, ಕೊಲೆ ಪ್ರಕರಣಗಳಲ್ಲಿ ಶೇ.28 ಮತ್ತು ದರೋಡೆಯಲ್ಲಿ ಶೇ. 22ರಷ್ಟು ಇಳಿಕೆ ಕಂಡುಬಂದಿದೆ. ಇದು ಪಾನನಿಷೇಧದ ನೇರ ಪರಿಣಾಮ ಎಂಬುದು ಸಂಸ್ಥೆಯ ಅಂಬೋಣ.

ಪಾನನಿಷೇಧದಿಂದ ಸರ್ಕಾರಕ್ಕೆ ವರಮಾನ ಕಡಿಮೆಯಾದರೂ ಪರೋಕ್ಷವಾಗಿ ಜನರ ಹಣ ಜನರಲ್ಲೇ ಉಳಿಯುತ್ತಿದೆ. ಇದಕ್ಕೇನೆನ್ನುತ್ತೀರಿ ಎಂಬುದು ಪಾನನಿಷೇಧ ಪರವಿರುವವರ ಸವಾಲು.

ಬಿಹಾರ ಸರ್ಕಾರದ ಈಚಿನ ಆರ್ಥಿಕ ಸಮೀಕ್ಷೆ ಕೂಡ ಈ ಎರಡು ವರದಿಗಳನ್ನು ಉಲ್ಲೇಖಿಸಿ, ಪಾನನಿಷೇಧದ ಸಕಾರಾತ್ಮಕ ಪರಿಣಾಮಗಳನ್ನು ಎತ್ತಿಹೇಳಿದೆ. ಮದ್ಯಕ್ಕೆ ವ್ಯಯಿಸುತ್ತಿದ್ದ ಹಣ ಉಳಿದಿದ್ದರಿಂದ ಜನ ಈಗ ಅದನ್ನು ಉತ್ತಮ ವಸ್ತುಗಳ ಖರೀದಿಗೆ ಮತ್ತು ಉತ್ತಮ ಬದುಕಿನ ನಿಟ್ಟಿನಲ್ಲಿ ಖರ್ಚುಮಾಡುತ್ತಿದ್ದಾರೆ’ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.

ಒಂದು ಕಾಲದಲ್ಲಿ ಜಂಗಲ್​ರಾಜ್ ಎಂದು ಕುಖ್ಯಾತವಾಗಿದ್ದ ಬಿಹಾರ ಈಗ ಪಾನನಿಷೇಧಕ್ಕೆ ಉಳಿದ ರಾಜ್ಯಗಳಿಗೆ ಮಾದರಿಯಾದೀತೆ? ಕಾದುನೋಡೋಣ.

***

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಈಚೆಗೆ ನಾಗಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾವರ್ಗದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರಸಂಗ ದೇಶದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದು ಗೊತ್ತಿರುವಂಥದೇ. ಮುಖರ್ಜಿ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ತಿಳಿದಾಗ ಹೆಚ್ಚು ದಿಗಿಲುಗೊಂಡಿದ್ದು ಕಾಂಗ್ರೆಸ್ ಪಕ್ಷ,. ಪಕ್ಕಾ ಸೈದ್ಧಾಂತಿಕ ವಿರೋಧಿಯಾದ ಸಂಘಟನೆಯ ಕಾರ್ಯಕ್ರಮದಲ್ಲಿ ಇವರೇನು ಮಾತಾಡುವುದು ಎಂಬುದು ಕಾಂಗ್ರೆಸ್ ನಾಯಕರ ಭಾವನೆಯಾಗಿತ್ತು. ಅದೂ ಅಲ್ಲದೆ, ಮುಖರ್ಜಿ ಮಾತಿನಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ನೆಗೆಟಿವ್ ಆಗಬಲ್ಲಂಥ ಏನಾದರೂ ಘಟಿಸಿಬಿಟ್ಟರೆ ಎಂಬ ಹೆದರಿಕೆಯೂ ಕಾಂಗ್ರೆಸ್ ನಾಯಕರಿಗೆ ಇದ್ದಿದ್ದಲ್ಲಿ ಅದೇನು ಅಚ್ಚರಿಯಲ್ಲ. ಏಕೆ ಗೊತ್ತಾ? ಇದೇ ಮುಖರ್ಜಿಗೆ ಅರ್ಹತೆ ಹೊರತಾಗಿಯೂ ಎರಡು ಬಾರಿ ಪ್ರಧಾನಿ ಹುದ್ದೆ ಕೈತಪ್ಪಿತ್ತು. ಕಾಂಗ್ರೆಸ್ ಅಧಿನಾಯಕರು ಮನಸ್ಸು ಮಾಡಿದ್ದರೆ ಅದು ಸಾಧ್ಯವಾಗುತ್ತಿತ್ತು. ಈ ಪಟ್ಟಭಂಗಕ್ಕಾಗಿ ಮುಖರ್ಜಿ ಒಳಮನಸ್ಸಿನಲ್ಲಿ ಕುದಿತವಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅವರ ಆರೆಸ್ಸೆಸ್ ಕಾರ್ಯಕ್ರಮದ ಭಾಗವಹಿಸುವಿಕೆ ಏನಾದರೂ ಅಪಾಯ ತಂದೀತು ಎಂಬುದು ಕೈ ನಾಯಕರ ಭಯವಾಗಿತ್ತು. ಆದರೆ ಆ ತರಹದ್ದೇನೂ ಆಗಲಿಲ್ಲವೆನ್ನಿ. ರಾಷ್ಟ್ರ, ರಾಷ್ಟ್ರೀಯತೆ ಮತ್ತು ರಾಷ್ಟ್ರಭಕ್ತಿ ಈ ಮೂರು ವಿಚಾರಗಳ ಸುತ್ತಲೇ ಮುಖರ್ಜಿ ಮಾತು ಕೇಂದ್ರೀಕೃತವಾಗಿತ್ತು.

ಪ್ರಣಬ್ ಮುಖರ್ಜಿ ಬಲಪಂಥೀಯ ವಾದಕ್ಕೆ ಬಲತುಂಬಬಲ್ಲಂಥ ಮಾತನಾಡಬಹುದು ಎಂಬ ಸಂಶಯ ಕಾಂಗ್ರೆಸ್ ನಾಯಕರೂ ಸೇರಿದಂತೆ ಇತರ ಕೆಲವರಲ್ಲೂ ಇದ್ದುದಕ್ಕೆ ಮತ್ತೂ ಒಂದು ಕಾರಣವಿತ್ತು. ಕಂಚಿ ಮಠಕ್ಕೆ ಸೇರಿದ ಕಾಂಚೀಪುರಂ ವರದರಾಜ ಪೆರುಮಾಳ್ ದೇಗುಲದ ಮ್ಯಾನೇಜರ್ ಶಂಕರರಾಮನ್ ಕೊಲೆ ಪ್ರಕರಣದಲ್ಲಿ ಕಂಚಿ ಕಾಮಕೋಟಿ ಮಠದ ಪೀಠಾಧಿಪತಿ ಶ್ರೀ ಜಯೇಂದ್ರ ಸರಸ್ವತೀ ಸ್ವಾಮೀಜಿ ಮತ್ತು ಕಿರಿಯ ಸ್ವಾಮೀಜಿ ಶ್ರೀ ವಿಜಯೇಂದ್ರ ಸರಸ್ವತೀ ಅವರನ್ನು 2004ರ ನವೆಂಬರ್ 11ರಂದು ತಮಿಳುನಾಡು ಪೊಲೀಸರು ಬಂಧಿಸಿದರು. ಅಂದಿನ ಮುಖ್ಯಮಂತ್ರಿ ಜಯಲಲಿತಾ ಆದೇಶದ ಮೇರೆಗೆ ಈ ಬಂಧನ ನಡೆದಿತ್ತು. ಅಂದು ಯಾವ ದಿನ ಗೊತ್ತಾ? ದೀಪಾವಳಿ! ಕಂಚಿ ಶ್ರೀಗಳಂತಹ ಧಾರ್ವಿುಕ ಮುಂದಾಳುವನ್ನು ಬಂಧಿಸಿದ ವಿಚಾರ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿಯೂ ಪ್ರಸ್ತಾಪವಾಯಿತು. ಆಗ ಸಚಿವರಾಗಿದ್ದ ಪ್ರಣಬ್ ಮುಖರ್ಜಿ ಈ ಬಂಧನವನ್ನು ತೀವ್ರವಾಗಿ ಖಂಡಿಸಿದರು. ‘ಭಾರತದ ಜಾತ್ಯತೀತ ಸಿದ್ಧಾಂತವು ಕೇವಲ ಹಿಂದು ಯತಿಗಳಿಗೆ ಸೀಮಿತವಾಗಿದೆಯೇ? ಈದ್ ಹಬ್ಬದ ದಿನದಂದು ಮುಸ್ಲಿಂ ಮೌಲ್ವಿಯನ್ನು ಬಂಧಿಸುವ ಧೈರ್ಯವನ್ನು ಯಾವುದಾದರೂ ಆಡಳಿತ ತೋರಿಸುವುದೇ?’ ಎಂದು ಸಂಪುಟ ಸಭೆಯಲ್ಲೇ ಮುಖರ್ಜಿ ಏರುದನಿಯಲ್ಲಿ ಪ್ರಶ್ನಿಸಿದಾಗ ಎಲ್ಲರೂ ಕಕ್ಕಾಬಿಕ್ಕಿ. ಈ ಪ್ರಸಂಗವನ್ನು ಮುಖರ್ಜಿಯವರು ತಮ್ಮ ಈಚಿನ “The Coalition Years’ ಕೃತಿಯಲ್ಲಿ ದಾಖಲಿಸಿದ್ದಾರೆ. ತನ್ನ ಈ ಅಭಿಪ್ರಾಯಕ್ಕೆ ಪ್ರಧಾನಮಂತ್ರಿಗಳ ವಿಶೇಷ ಸಲಹೆಗಾರರಾಗಿದ್ದ ಎಂ.ಕೆ.ನಾರಾಯಣನ್ ಕೂಡ ಸಹಮತ ವ್ಯಕ್ತಪಡಿಸಿದ್ದರು ಎಂದೂ ಮುಖರ್ಜಿ ಉಲ್ಲೇಖಿಸಿದ್ದಾರೆ. ಇದೀಗ ರಂಜಾನ್ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಏಕಪಕ್ಷೀಯ ಕದನವಿರಾಮ ಘೋಷಿಸಿರುವುದು, ಭಯೋತ್ಪಾದಕರು ಈ ಸಂದರ್ಭದಲ್ಲೇ ಹಲವು ದಾಳಿ ನಡೆಸುತ್ತಿರುವುದು, ಮತ್ತೊಂದೆಡೆ, ಪಾಕಿಸ್ತಾನ ಸೈನಿಕರು ಕದನವಿರಾಮ ಉಲ್ಲಂಘಿಸಿ ಗಡಿಯಲ್ಲಿ ಗುಂಡಿನ ದಾಳಿ ನಡೆಸುತ್ತಿರುವುದು, ಇದು ಸಾಲದೆಂಬಂತೆ ವಿಶ್ವಸಂಸ್ಥೆಯು ಕಾಶ್ಮೀರ ವಿಚಾರದಲ್ಲಿ ಭಾರತದ ಮೇಲೇ ಗೂಬೆಕೂರಿಸುವ ವರದಿ ನೀಡಿರುವುದು ಇವನ್ನೆಲ್ಲ ನೋಡಿದಾಗ ಮೇಲಿನ ಪ್ರಸಂಗ ಸ್ಮರಣೆಗೆ ಬಂತು.

ಕೊನೇ ಮಾತು: ಸಂಘದ ಕಾರ್ಯಕ್ರಮದಲ್ಲಿ ಮುಖರ್ಜಿ ಭಾಗವಹಿಸಿದ್ದಕ್ಕೆ ಮುನಿಸಿಕೊಂಡಿದ್ದ ಕಾಂಗ್ರೆಸ್​ಗೆ ಅವರು ಧ್ವಜವಂದನೆ ಮಾಡುತ್ತಿದ್ದ ಫೋಟೋ ಅಸಲಿಯಲ್ಲ ನಕಲಿ ಎಂದು ತಿಳಿದು ಸ್ವಲ್ಪ ಸಮಾಧಾನವಾಯಿತಂತೆ!

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top